ಭಾನುವಾರ, ಅಕ್ಟೋಬರ್ 2, 2022
28 °C

ಸಂಚಾರಿ ವಿಜಯ್ ಜೀವನಗಾಥೆ ‘ಅನಂತವಾಗಿರು’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಕನ್ನಡ ಸಿನಿಮಾ ರಂಗಕ್ಕೆ ಆಸ್ತಿಯಾಗಿದ್ದರು. ಇಂತಹ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡ ನಂತರ ಅವರ ಪರ್ಯಾಯ ನಟನನ್ನು ಹುಡುಕುವ ಕಷ್ಟ ನಮಗೆಲ್ಲ ಎದುರಾಗಲಿದೆ ಎಂದು ನಿರ್ದೇಶಕ ಎಂ.ಎಸ್. ರಮೇಶ್ ಸ್ಮರಿಸಿದರು.

ಡಾ.ಶರಣು ಹುಲ್ಲೂರು ಅವರು ಸಂಪಾದಿಸಿರುವ ಸಂಚಾರಿ ವಿಜಯ್ ಬದುಕಿನ ಕುರಿತಾದ ‘ಅನಂತವಾಗಿರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಣ್ಣ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದವರು ವಿಜಯ್. ಹಾಗಾಗಿ ಅವರು ಪುಸ್ತಕದ ಶೀರ್ಷಿಕೆಯಂತೆ ಅನಂತವಾಗಿಯೇ ಇರುತ್ತಾರೆ ಎಂದರು. ಅತೀ ಕಡಿಮೆ ಅವಧಿ ಇಂಥದ್ದೊಂದು ಪುಸ್ತಕ ಸಾಧ್ಯವಾಗಿದ್ದಕ್ಕೆ ಪುಸ್ತಕದ ಸಂಪಾದಕ ಶರಣು ಹುಲ್ಲೂರು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಚಾರಿ ಥಿಯೇಟರ್ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ವಸುಧೇಂದ್ರ, ನಿರ್ದೇಶಕರಾದ ಬಿ.ಸುರೇಶ್, ಮಂಸೋರೆ, ರಂಗ ನಿರ್ದೇಶಕಿ ಎನ್‍. ಮಂಗಳಾ, ಸಂಚಾರಿ ವಿಜಯ್ ಅವರ ಸಹೋದರರಾದ ವಿರೂಪಾಕ್ಷ ಮತ್ತು ಸಿದ್ದೇಶ್ ಮತ್ತು ಸಂಚಾರಿ ವಿಜಯ್ ಅವರ ಸ್ನೇಹಿತರು ಹಾಗೂ ರಂಗ ಕರ್ಮಿಗಳು ಹಾಜರಿದ್ದರು.
ಸಂಚಾರಿ ಥಿಯೇಟರ್ ಸದಸ್ಯರು ವಿಜಯ್ ಅವರ ನಾಟಕಗಳ ರಂಗಗೀತೆಗಳನ್ನು ಹಾಡಿದರು. ವಿಜಯ್ ಅವರ ಜೀವನದ ಸಂಕ್ಷಿಪ್ತ ರೂಪ ನಾಟಕ ಮತ್ತು ವಿಡಿಯೋ ದೃಶ್ಯ ಪ್ರದರ್ಶನವಾಯಿತು.

ಪುಸ್ತಕದ ಕುರಿತು: ಇದೊಂದು ರೀತಿಯಲ್ಲಿ ಜೀವನ ಚರಿತ್ರೆ ಮಾದರಿಯಲ್ಲೇ ರೂಪುಗೊಂಡಿರುವ ಪುಸ್ತಕ. ಬಾಲ್ಯವನ್ನು ವಿಜಯ್ ಅವರ ಇಬ್ಬರು ಸಹೋದರರು ಕಟ್ಟಿಕೊಟ್ಟಿದ್ದಾರೆ. ಶಾಲೆ, ಕಾಲೇಜು ದಿನಗಳ ನೆನಪುಗಳನ್ನು ಗೆಳೆಯರು ಹೇಳಿಕೊಂಡಿದ್ದಾರೆ. ಕಷ್ಟದ ದಿನಗಳನ್ನು ಮತ್ತು ತಾನು ನಡೆದು ಬಂದ ಹಾದಿಯನ್ನು ಸ್ವತಃ ವಿಜಯ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದನ್ನು ದಾಖಲಿಸಲಾಗಿದೆ. ಬೆಂಗಳೂರಿಗೆ ಬಂದಾಗಿನ ಕೆಲವು ದಿನಗಳ ನೆನಪುಗಳನ್ನು ವಿಜಯ್‍ ಹೇಳಿಕೊಂಡಿದ್ದಾರೆ. ಅದು ದಾಖಲಾಗಿದೆ. ಅಲ್ಲಿಂದ ರಂಗಭೂಮಿಗೆ ಬಂದ ಮೊದಲ ದಿನಗಳನ್ನು ಖ್ಯಾತ ಯುವ ರಂಗ ನಿರ್ದೇಶಕ ಕೆ.ಶ್ರೀನಿವಾಸ್‍ ದಾಖಲಿಸಿದ್ದಾರೆ. ಇವರ ನಿರ್ದೇಶನದ ಮೊದಲ ನಾಟಕದ ಮೂಲಕ ವಿಜಿ ಬಂದವರು. ಆನಂತರ ಹಲವು ನಾಟಕ ತಂಗಳಲ್ಲಿ ಕೆಲಸ ಮಾಡಿದ್ದು ದಾಖಲಾಗಿದೆ. ಸಂಚಾರಿಗೆ ಬಂದ ನಂತರದ ರಂಗ ಒಡನಾಟವನ್ನು ಮಂಗಳಾ ಅವರು ಬರೆದಿದ್ದಾರೆ.

ವಿಜಿ ನಟನೆಯ ಮೊದಲ ಸಿನಿಮಾ ರಂಗಪ್ಪ ಹೋಗ್ಬಿಟ್ನ. ಈ ಸಿನಿಮಾದ ನಿರ್ದೇಶಕ ಎಂ.ಎಲ್ ಪ್ರಸನ್ನ ಆ ಕುರಿತಾಗಿ ಬರೆದಿದ್ದಾರೆ. ವಿಜಯ್ ಅವರ ಸಿನಿಮಾ ಜರ್ನಿಯಲ್ಲಿಯ ಉತ್ತಮ ಸಿನಿಮಾಗಳಾದ ‘ಹರಿವು’ ಕುರಿತು ಮಂಸೋರೆ, ‘ನಾತಿಚರಾಮಿ’ ಕುರಿತು ಸಂಧ್ಯಾರಾಣಿ, ‘ಮೇಲೊಬ್ಬ ಮಾಯಾವಿ’ ಕುರಿತು ನಿರ್ದೇಶಕ ನವೀನ್, ‘ಕೃಷ್ಣ ತುಳಸಿ’ ‘ತಲೆದಂಡ’ ಚಿತ್ರದ ಕುರಿತು ನಿರ್ದೇಶಕರು, ‘ದಾಸ್ವಾಳ’ ಸಿನಿಮಾದ ಬಗ್ಗೆ ನಿರ್ದೇಶಕ ಎಂ.ಎಸ್ ರಮೇಶ್, ‘ನಾನು ಅವನಲ್ಲ ಅವಳು’ ಚಿತ್ರದ ಬಗ್ಗೆ ಲಿಂಗದೇವರು, ‘ಪುಗ್ಸಟ್ಟೆ ಲೈಫ್‍’ ಬಗ್ಗೆ ಅರವಿಂದ್ ಕುಪ್ಳಿಕರ್ ಬರೆದಿದ್ದಾರೆ. ಗೆಳೆಯನ ಒಡನಾಟದ ಕುರಿತು ನಟ ನೀನಾಸಂ ಸತೀಶ್, ಗೆಳೆಯರಾದ ವೀರು ಮಲ್ಲಣ್ಣನವರ, ಪತ್ರಕರ್ತರಾದ ಪದ್ಮಾ ಶಿವಮೊಗ್ಗ ಮತ್ತು ದೇಶಾದ್ರಿ ಅವರು ವಿಜಿಯ ಸಾಮಾಜಿಕ ಕಾರ್ಯದ ಬಗ್ಗೆ ಬರೆದಿದ್ದಾರೆ.

ಮಾಧ್ಯಮಗಳ ಜತೆಗಿನ ಸಂಬಂಧವನ್ನು ಪತ್ರಕರ್ತರಾದ ಹರೀಶ್ ಸೀನಪ್ಪ, ವಿಜಯ್ ಭರಮಸಾಗರ್ ದಾಖಲಿಸಿದ್ದಾರೆ. ಶ್ರೀದೇವಿ ಮಹಾತ್ಮ ಮತ್ತು ವಿಜಯ್ ಕುರಿತಾಗಿ ವಸುಧೇಂದ್ರ ಅವರು ಬರೆದಿದ್ದರೆ, ಉಸಿರು ತಂಡದೊಂದಿಗಿನ ಸಮಾಜಮುಖಿ ಕಾರ್ಯದ ಬಗ್ಗೆ ಕವಿರಾಜ್, ಹರಿವು ಚಿತ್ರದ ಮತ್ತೊಂದು ಅಧ್ಯಾಯವನ್ನು ಆಶಾ ಬೆನಕೊಪ್ಪ ಬರೆದಿದಿದ್ದಾರೆ.

ರಾಷ್ಟ್ರ ಪ್ರಶಸ್ತಿ ಮತ್ತು ವಿಜಿಯ್ ಕುರಿತು ಪುಟ್ಟಸ್ವಾಮಿ ಅವರು, ತೃತೀಯಲಿಂಗಿ ಜತೆಗಿನ ಒಡನಾಟವನ್ನು ಅಕ್ಕೈ ಪದ್ಮಶಾಲಿ, ಸ್ನೇಹಜೀವಿಯ ಕುರಿತಾದ ಶಿವು ಮಾಕಳ್ಳಿ ಹೀಗೆ ಅನೇಕ ಹಿರಿಯ ಬರಹಗಾರರ ಲೇಖನಗಳನ್ನು ಒಳಗೊಂಡಿರುವ ಕೃತಿ ಇದಾಗಿದೆ. ಬೆಂಗಳೂರಿನ ಕಾಯಕ ಪ್ರಕಾಶನದ ಮೂರನೇ ಕೃತಿ ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು