ಬುಧವಾರ, ಜುಲೈ 6, 2022
23 °C
ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ಚಿತ್ರ ಏ.29ಕ್ಕೆ ತೆರೆಗೆ

ಹರಳು ಮಾಫಿಯಾ ಕಥೆಯ ‘ಮೇಲೊಬ್ಬ ಮಾಯಾವಿ’: ಸಂಚಾರಿ ವಿಜಯ್‌ ಚಿತ್ರ ಏ.29ಕ್ಕೆ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ದಿವಂಗತ ಸಂಚಾರಿ ವಿಜಯ್‌ ನಟನೆಯ ‘ಮೇಲೊಬ್ಬ ಮಾಯಾವಿ’ ಸಿನಿಮಾ ಏ.29ಕ್ಕೆ ತೆರೆಕಾಣಲಿದೆ. ಹರಳು ಮಾಫಿಯಾ ಕಥಾಹಂದರದ ಈ ಚಿತ್ರದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್‌ ಖಳನಾಯಕನಾಗಿ ಬಣ್ಣಹಚ್ಚಿದ್ದಾರೆ.

‘ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲು ದಂಧೆಯ ಕರಾಳಮುಖವನ್ನು ‘ಇರುವೆ’ ಎಂಬ ತಮ್ಮ ಪಾತ್ರದ ಮುಖೇನ ಸಂಚಾರಿ ವಿಜಯ್‌ ಬಿಚ್ಚಿಡಲಿದ್ದಾರೆ. ಆಭರಣ, ಉಂಗುರಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರ ಹುಡುಕಾಟ ಹೇಗಿರುತ್ತದೆ? ಹುಡುಕಾಟದಲ್ಲಿ ಸಂಭವಿಸುವ ಸಾವು-ನೋವುಗಳ ಹಿಂದಿನ ಅಸಲಿ ಸತ್ಯ ಏನು? ಅರಣ್ಯ ಇಲಾಖೆ ಈ ದಂಧೆಯ ವಿಚಾರದಲ್ಲಿ ಸುಮ್ಮನಿರುವುದ್ಯಾಕೆ? ಹರಳು ದಂಧೆ ಪರಿಸರವನ್ನು ಹೇಗೆ ನಾಶಗೊಳಿಸುತ್ತದೆ? ಇಂತಹ ಸಾಕಷ್ಟು ಪ್ರಶ್ನೆಗಳಿಗೆ ‘ಮೇಲೊಬ್ಬ ಮಾಯಾವಿ’ ಉತ್ತರ ನೀಡುತ್ತದೆ’ ಎಂದಿದೆ ಚಿತ್ರತಂಡ.

ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ಈ ಚಿತ್ರದ ನಾಯಕಿಯಾಗಿದ್ದು, ‘ಸಕ್ಕರೆ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್, ಚಕ್ರವರ್ತಿ ಚಂದ್ರಚೂಡ್ ಅವರಿಗೆ ಜೋಡಿಯಾಗಿ ನಟಿಸಿದ್ದು, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಂ.ಕೆ.ಮಠ, ನವೀನ್‌ಕುಮಾರ್, ಲಕ್ಷ್ಮಿ ಅರ್ಪಣ್, ಮುಖೇಶ್ ಹಾಗೂ ಡಾ.ಮನೋನ್ಮಣಿ ಹೀಗೆ ರಂಗಭೂಮಿಯ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಬಿ.ನವೀನ್‌ ಕೃಷ್ಣ ನಿರ್ದೇಶನ ಮಾಡಿರುವ ಈ ಚಿತ್ರವನ್ನು, ‘ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್‌ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು