ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೂರನೇ ಕೃಷ್ಣಪ್ಪ’ ಸಿನಿಮಾ: ಸಂಪತ್‌ಗೆ ಭಾಷೆಯೇ ಸಂಪತ್ತು

Published 16 ಮೇ 2024, 23:30 IST
Last Updated 16 ಮೇ 2024, 23:30 IST
ಅಕ್ಷರ ಗಾತ್ರ

‘ಕನ್ನಡ ಭಾಷೆಯೊಳಗೆ ಇರುವ ಹಲವು ಸ್ಲ್ಯಾಂಗ್‌ಗಳನ್ನು ಬಳಸಿಕೊಂಡು ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಒಳ್ಳೊಳ್ಳೆಯ ಪ್ರಯತ್ನಗಳು ಆಗಿವೆ. ಒಂದು ನಿರ್ದಿಷ್ಟ ಅಂತರದಲ್ಲಿ ಕನ್ನಡದ ಸ್ಲ್ಯಾಂಗ್‌ ಬದಲಾಗುತ್ತಲೇ ಇರುತ್ತದೆ. ಪ್ರತಿ ದ್ರಾವಿಡ ಭಾಷೆಗೂ ಇದೇ ವಿಶೇಷತೆ ಇದೆ. ಭಾಷೆಯ ಜೊತೆಗೆ ಆಹಾರ, ವಸ್ತ್ರ ಸಂಸ್ಕೃತಿಯೂ ಬದಲಾಗುತ್ತದೆ. ಒಂದೇ ಕರ್ನಾಟಕದಲ್ಲಿ ಹಲವು ಕನ್ನಡಗಳನ್ನು ನಾವು ಕಾಣಬಹುದು. ಈ ಭಿನ್ನವಾದ ಕನ್ನಡಗಳಲ್ಲಿ ಒಂದು ಕವಿತೆಯ ಗುಣ ಹೊಂದಿದೆ.

‘ಮೂರನೇ ಕೃಷ್ಣಪ್ಪ’ ಸಿನಿಮಾದಲ್ಲೂ ಆನೇಕಲ್‌ ಭಾಗದ ಕನ್ನಡ ಸ್ಲ್ಯಾಂಗ್‌ ಕಾಣಬಹುದು. ಇಡೀ ಸಿನಿಮಾ ಇದೇ ಸ್ಲ್ಯಾಂಗ್‌ನಲ್ಲಿದೆ. ಆನೇಕಲ್‌ನಿಂದ ಹಿಡಿದು ಗೌರಿಬಿದನೂರುವರೆಗೂ ಹರಡಿರುವ ಈ ಸ್ಲ್ಯಾಂಗ್‌ನಲ್ಲಿ ಒಂಥರಾ ಮಜಾ ಇದೆ. ಆ ಭಾಷೆಯನ್ನು ಸಿನಿಮಾಗಳಲ್ಲಿ ಪ್ರಮುಖವಾಗಿ ಬಳಸಿರಲಿಲ್ಲ’ ಎನ್ನುತ್ತಾರೆ ಸಂಪತ್‌. 

‘ಚಿತ್ರದ ನಿರ್ದೇಶಕ ನವೀನ್‌ ರೆಡ್ಡಿ ಆ ಭಾಷೆಯನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಂಗಾಯಣ ರಘು ಅದ್ಭುತ ಕಲಾವಿದ. ಅವರು ಈ ಸಿನಿಮಾದಲ್ಲಿ ಅತ್ಯದ್ಭುತವಾಗಿ ನಟಿಸಿದ್ದಾರೆ. ನಿರ್ದೇಶಕರಿಗೆ ಆ ಸ್ಲ್ಯಾಂಗ್‌ ಮೇಲೆ ಹಿಡಿತವಿತ್ತು. ಚಿತ್ರದ ಇಡೀ ಸ್ಕ್ರಿಪ್ಟ್‌ ಅದೇ ಸ್ಲ್ಯಾಂಗ್‌ನಲ್ಲಿತ್ತು. ನಾವು ನಿರ್ದೇಶಕರನ್ನು ಕೇಳಿಕೊಂಡು ಡೈಲಾಗ್ಸ್‌ ಹೇಳುತ್ತಿದ್ದೆವು. ಕಲಾವಿದನಿಗೆ ಈ ಮಾದರಿಯ ಭಾಷೆಯ ಲಯವನ್ನು ಹಿಡಿಯುವುದು ಗೊತ್ತಿರಬೇಕು. ನಾಟಕಗಳಲ್ಲಿ ನಾನು ಉತ್ತರ ಕರ್ನಾಟಕ ಭಾಷೆಯನ್ನು ಪ್ರಯೋಗ ಮಾಡಿದ್ದೆ. ಸಾಂಸ್ಕೃತಿಕವಾಗಿ ಭಾಷೆಗಳ ಜೊತೆಗೆ ಒಡನಾಡಿದ ಕಾರಣ ಈ ಸಿನಿಮಾದ ಭಾಷೆ ಕಷ್ಟವೆನಿಸಲಿಲ್ಲ’ ಎಂದು ಸಂಪತ್‌ ಚಿತ್ರೀಕರಣದ ಅನುಭವ ಹಂಚಿಕೊಂಡರು.  

‘ಯಾರೀ ಮೂರನೇ ಕೃಷ್ಣಪ್ಪ’ ಎಂಬ ಪ್ರಶ್ನೆಗೆ, ‘ಆತನೊಬ್ಬ ಪ್ರಾಮಾಣಿಕವಾದ ಮೇಷ್ಟ್ರು. ಊರಿನಲ್ಲಿ ಗಣೇಶನ ದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಯನ್ನು ಬಗೆಹರಿಸಲು ಹೋಗಿ, ತಾನು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾನೆ. ಆತನ ಸುತ್ತ ಚಿತ್ರದ ಕಥೆಯಿದೆ. ಒಂದು ಹಳ್ಳಿಯಲ್ಲಿ ನಡೆಯುವ ಕಥೆ ಇದು. ಬಹಳ ಅದ್ಭುತವಾಗಿ ಸಿನಿಮಾ ಮೂಡಿಬಂದಿದೆ’ ಎನ್ನುತ್ತಾರೆ ಸಂಪತ್‌. 

ಮಾತು ಮುಂದುವರಿಸಿ, ‘2024ರಲ್ಲಿ ಇಲ್ಲಿಯವರೆಗೆ ಒಳ್ಳೆಯ ಸಿನಿಮಾಗಳು ಗೆಲ್ಲಲಿಲ್ಲ. ‘ಮೂರನೇ ಕೃಷ್ಣಪ್ಪ’ ಟ್ರೇಲರ್‌ ನೋಡಿ ಎಲ್ಲರೂ ಹೊಗಳುತ್ತಿದ್ದಾರೆ, ಖುಷಿಪಡುತ್ತಿದ್ದಾರೆ. ಆದರೆ ನನಗೆ ಒಂದೆಡೆ ಭಯವಿದೆ. ಈ ಸಿನಿಮಾದಲ್ಲಿ ನಾನು ಲೀಡ್‌ ರೋಲ್‌ ಮಾಡಿದ್ದೇನೆ. ಜನ ಸಕಾರಾತ್ಮಕವಾಗಿ ಮಾತನಾಡುತ್ತಿದ್ದರೂ ಎಲ್ಲೋ ಒಂದೆಡೆ ಆತಂಕವೂ ಇದೆ. ಒಳ್ಳೆಯ ಸಿನಿಮಾಗಳು ಗೆಲ್ಲದೇ ಇದ್ದಾಗ ಇಂಡಸ್ಟ್ರಿ ಕಥೆ ಏನು ಎನ್ನುವ ಪ್ರಶ್ನೆ ಮೂಡಿದೆ’ ಎಂದು ಸಂಪತ್‌ ಆತಂಕವ್ಯಕ್ತಪಡಿಸುತ್ತಾರೆ. 

‘ಸಿನಿಮಾದಲ್ಲಿನ ತೆರೆ ಅವಧಿ ಬಗ್ಗೆ ನಾನು ತಲೆಕೆಡಿಸಿಕೊಂಡವನಲ್ಲ. ಈ ಅವಧಿ ಚಿಕ್ಕದೇ ಇರಲಿ ಅಥವಾ ದೊಡ್ಡದಿರಲಿ, ಕಲಾವಿದನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆ ಅವಧಿಯನ್ನು ಸಮೃದ್ಧವಾಗಿ ಅಭಿನಯಕ್ಕೆ ಬಳಸಿಕೊಂಡಿದ್ದೇನೆ. ಸದ್ಯಕ್ಕೆ ಸುಧೀರ್‌ ಶಾನುಭೋಗ್‌ ನಿರ್ದೇಶನದ ‘ಧರಣಿ’, ರಂಗನಾಥ್‌ ನಿರ್ದೇಶನದ ‘ಅಟ್ಲಿ’ ಹಾಗೂ ಗುಜರಾತಿಯ ಒಂದು ಬ್ಲಾಕ್‌ಬಸ್ಟರ್‌ ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ನಟಿಸುತ್ತಿದ್ದೇನೆ. ಗುರುರಾಜ್‌ ಎನ್ನುವವರು ಇದನ್ನು ನಿರ್ದೇಶಿಸುತ್ತಿದ್ದಾರೆ’ ಎಂದು ತಮ್ಮ ಮುಂದಿನ ಸಿನಿಪಯಣದ ಮಾಹಿತಿ ನೀಡುತ್ತಾ ಸಂಪತ್‌ ಮಾತಿಗೆ ವಿರಾಮವಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT