ಶನಿವಾರ, ಏಪ್ರಿಲ್ 4, 2020
19 °C

ಸಿನಿಮಾ ಯಾನ ಮುಂದುವರಿಸಿದ ವೈನಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ಮಹಾನಗರದಲ್ಲಿ ಹುಡುಗರು ಮತ್ತು ಹುಡುಗಿಯರ ಜೀವನ ಹೇಗಿರುತ್ತದೆ, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ಸ್ನೇಹ– ಮೋಜು ಹೇಗಿರಲಿದೆ ಎನ್ನುವುದನ್ನು ನೈಜವಾಗಿ ತೋರಿಸಲು ‘ಬೆಂಗಳೂರು ಬಾಯ್ಸ್’ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ‘ಲಂಡನ್‍ನಲ್ಲಿ ಲಂಬೋದರ’ ಚಿತ್ರ ನಿರ್ದೇಶಿಸಿದ್ದ ರಾಜ್ ಸೂರ್ಯ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಈ ಚಿತ್ರದಲ್ಲಿ ನಾಲ್ವರು ನಾಯಕಿಯರು ಮತ್ತು ನಾಲ್ವರು ನಾಯಕರು ನಟಿಸುತ್ತಿದ್ದು, ಲೀಡ್‌ ರೋಲ್‌ಗೆ ವಿಜಯಲಕ್ಷ್ಮಿ ಸಿಂಗ್‌ ಮತ್ತು ಜೈಗದೀಶ್‌ ದಂಪತಿಯ ಪುತ್ರಿ ವೈನಿಧಿ ಆಯ್ಕೆಯಾಗಿದ್ದಾರೆ. 

ಬಿಗ್‌ಬಾಸ್‌ ರಿಯಾಲಿಟಿ ಶೋ ಖ್ಯಾತಿಯ ಚಂದನ್ ಆಚಾರ್, ‘ಹ್ಯಾಪಿ ಬರ್ತ್ ಡೇ’ ಸಿನಿಮಾ ಖ್ಯಾತಿಯ ಸಚಿನ್ ಚೆಲುವರಾಯ ಸ್ವಾಮಿ, ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ನಟಿಸಿದ್ದ ಶ್ರೀಮಹದೇವ್ ನಾಯಕರಾಗಿ ನಟಿಸಲಿದ್ದಾರೆ. ಇನ್ನೊಬ್ಬ ನಾಯಕ ನಟ ಮತ್ತು ಮೂವರು ನಾಯಕಿಯರಿಗೆ ತಲಾಶ್‌ ನಡೆಸುತ್ತಿದೆ ಚಿತ್ರತಂಡ.

‘‌ನನಗೆ ರಿಯಾಲಿಸ್ಟಿಕ್‌ ಸಿನಿಮಾಗಳೆಂದರೆ ತುಂಬಾ ಇಷ್ಟ’ ಎಂದು ಮಾತಿಗಿಳಿದ ವೈನಿಧಿ, ‘ಯಾನ’ದ ನಂತರ ನನಗೆ ಒಂದೊಳ್ಳೆಯ ಸ್ಕ್ರಿಪ್ಟ್‌ ಬಂದಿದೆ. ಈ ಚಿತ್ರದ ಭಾಗವಾಗಲು ತುಂಬಾ ಉತ್ಸುಕಳಾಗಿದ್ದೇನೆ. ನಾವು ಬಯಸುವಂತಹ ಪಾತ್ರಗಳು ಸಿಗಬೇಕೆಂದರೆ ಎಲ್ಲದಕ್ಕೂ ಕಾಲ ಕೂಡಿಬರಬೇಕು. ಆ ಕಾಲ ಈಗ ಬಂದಿದೆ. ಇದೇ ತಿಂಗಳ ಕೊನೆಯಲ್ಲಿ ಶೂಟಿಂಗ್‌ ಶುರುವಾಗಲಿದೆ’ ಎಂದರು.

‘ನನ್ನ ಮೊದಲ ಸಿನಿಮಾ ‘ಯಾನ’ದಲ್ಲಿ ತುಂಬಾ ಬೋಲ್ಡ್‌ ಮತ್ತು ಅರ್ಬನ್‌ ಹುಡುಗಿಯ ಪಾತ್ರ ನಿಭಾಯಿಸಿದ್ದೆ. ಈಗ ಹೋಮ್ಲಿ, ಸಾಪ್ಟ್‌ ಮತ್ತು ಸ್ವೀಟ್‌ ಪಾತ್ರ ಸಿಕ್ಕಿದೆ. ಪಾತ್ರವೂ ವಿಭಿನ್ನವಾಗಿದೆ. ತುಂಬಾ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ತುಂಬಿಕೊಂಡ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಪಾತ್ರ ನನಗಂತೂ ಸಖತ್‌ ಇಷ್ಟವಾಗಿದೆ’ ಎನ್ನುವ ಮಾತು ಸೇರಿಸಿದರು ವೈನಿಧಿ.

‘ಇದೊಂದು ಪರಿಪೂರ್ಣ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ. ಯುವ ಮನಸುಗಳ ಕೇಂದ್ರಿತವಾಗಿರಲಿದ್ದು, ಇಂದಿನ ಯುವಜನರಿಗೆ ಬೇಗ ಕನೆಕ್ಟ್‌ ಆಗುವ ಸಬ್ಜೆಕ್ಟ್‌ ಇದರಲ್ಲಿದೆ. ಅದೂ ಅಲ್ಲದೇ ಯುವಜನರ ತಂಡ ಈ ಸಿನಿಮಾ ಮಾಡುತ್ತಿದೆ. ಮನರಂಜನೆಯ ಜತೆಗೆ ಮೆಸೆಜ್‌ ಕೂಡ ಇರಲಿದೆ. ಫುಲ್‌ಪ್ಯಾಕ್‌ ಸಿನಿಮಾ ಆಗಲಿದೆ’ ಎನ್ನುವುದು ಅವರ ವಿಶ್ವಾಸದ ಮಾತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು