ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದಲ್ಲಿ 'ಕಸ್ತೂರ್ ಬಾ vs ಗಾಂಧಿ': ಸವಾಲಿನ ಪಾತ್ರದಲ್ಲಿ ಹರಿಪ್ರಿಯಾ, ಕಿಶೋರ್

Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರೆದ ‘ಕಸ್ತೂರ್ ಬಾ ವರ್ಸಸ್‌ ಗಾಂಧಿ’ ಕಾದಂಬರಿ ಆಧರಿಸಿ ನಿರ್ಮಾಣವಾಗಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕಸ್ತೂರ್‌ಬಾ ಪಾತ್ರದಲ್ಲಿ ಬಹುಭಾಷಾ ನಟಿ ಹರಿಪ್ರಿಯಾ ಹಾಗೂ ಗಾಂಧೀಜಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅಭಿನಿಯಿಸಿದ್ದಾರೆ. ಹರಿಪ್ರಿಯಾ ಅವರು ಯುವ, ಮಧ್ಯ ಹಾಗೂ ಇಳಿ ವಯಸ್ಸಿನ ಕಸ್ತೂರ್‌ಬಾ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾರೆ. ಕಿಶೋರ್‌ ಅವರು ಗಾಂಧೀಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಚಿತ್ರಕ್ಕೆ ತಮ್ಮ ಆಯ್ಕೆ ಹಾಗೂ ಸಿನಿಮಾದಲ್ಲಿ ಎದುರಿಸಿದ ಸವಾಲಿನ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದ ಹರಿಪ್ರಿಯಾ ಹೀಗೆಂದರು...

‘ಬರಗೂರು ಅವರು ಒಂದು ದಿನ ‘ಕಸ್ತೂರ್‌ಬಾ ವರ್ಸಸ್‌ ಗಾಂಧಿ’ ಎನ್ನುವ ಕೃತಿಯನ್ನು ತಂದು ನನ್ನ ಕೈಯಲ್ಲಿಟ್ಟರು. ಈ ಕೃತಿ ನನಗೆ ಬಹಳ ಇಷ್ಟವಾಯಿತು. ಕಸ್ತೂರ್‌ಬಾ ಅವರ ಪಾತ್ರ ಎಷ್ಟೊಂದು ಪ್ರಬಲ ಅಲ್ಲವೇ ಎಂದು ಆಗಲೇ ಅನಿಸಿತ್ತು. ಕೃತಿ ಓದಿದ ಬಳಿಕ ನನ್ನ ಅಭಿಪ್ರಾಯವನ್ನು ಬರಗೂರು ಅವರಿಗೆ ತಿಳಿಸಿದೆ. ಆ ಸಂದರ್ಭದಲ್ಲಿ ಅವರು ‘ಈ ಕೃತಿಯನ್ನು ನಾನು ಸಿನಿಮಾ ಮಾಡಬೇಕು ಎಂದಿದ್ದೇನೆ. ನೀವು ಕಸ್ತೂರ್‌ಬಾ ಪಾತ್ರವನ್ನು ಮಾಡುತ್ತೀರಾ?’ ಎಂದು ಕೇಳಿದರು. ನನಗೆ ಆ ಕ್ಷಣವೇ ಖುಷಿಯಾಗಿತ್ತು. ಆ ಪಾತ್ರವನ್ನು ಮಾಡಲು ಮತ್ತಷ್ಟು ಉತ್ಸುಕಳಾಗಿದ್ದೆ. ಇಲ್ಲಿಯವರೆಗೂ ಸವಾಲಿನ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಹೊಸ ಪಾತ್ರಗಳನ್ನೇ ಹುಡುಕುತ್ತಿರುತ್ತೇನೆ. ಆತ್ಮಕಥೆ ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಬರುವುದೇ ಅಪರೂಪ. ಬೇರೆ ಭಾಷೆಗಳಲ್ಲಿ ಇಂಥಹ ಸಿನಿಮಾಗಳು ಹೆಚ್ಚು ಬರುತ್ತಿವೆ. ಜೊತೆಗೆ ನಾನೂ ಆತ್ಮಕಥೆ ಚಿತ್ರಗಳಲ್ಲಿ ಪಾತ್ರ ಮಾಡಿಲ್ಲ. ‘ಬಿಚ್ಚುಗತ್ತಿ’ ಎನ್ನುವ ಇತಿಹಾಸ ಕಥೆ ಆಧರಿತ ಸಿನಿಮಾದಲ್ಲಿ ‘ಸಿದ್ದಾಂಬೆ’ ಎನ್ನುವ ಪಾತ್ರ ಮಾಡಿದ್ದೆ. ಆದರೆ ಇದು ಆತ್ಮಕಥೆ ಆಗಿರಲಿಲ್ಲ. ಭರಮಣ್ಣನ ಕಥೆ ಇದಾಗಿತ್ತು. ಹೀಗಾಗಿ ಬರಗೂರು ಅವರ ಮಾತಿಗೆ ತಕ್ಷಣ ಒಪ್ಪಿಕೊಂಡೆ’.

‘ಕಸ್ತೂರ್‌ಬಾ ಅವರ ದೃಷ್ಟಿಕೋನದಲ್ಲಿ ಗಾಂಧೀಜಿಯನ್ನು ನೋಡುವ ಪಾತ್ರವಿದು.ಗಾಂಧೀಜಿ ಅವರ ಕೆಲಸಗಳು ಜನರಿಗೆ ಗೊತ್ತಿದೆಯೇ ಹೊರತು ಗಾಂಧೀಜಿಯವರಿಗೆ ಕಸ್ತೂರ್‌ಬಾ ಹೇಗೆ ಪ್ರೇರಣೆಯಾಗಿದ್ದರು ಎನ್ನುವುದು ಯಾರಿಗೂ ತಿಳಿದಿಲ್ಲ. ಗಾಂಧಿ ಅವರಿಗೆ ಕಸ್ತೂರ್‌ಬಾ ಅವರು ಎಷ್ಟು ಬೆಂಬಲವಾಗಿದ್ದರು, ಗಾಂಧೀಜಿ ಅವರು ಮಹಾತ್ಮ ಎಂದೆನಿಸಿಕೊಳ್ಳಲು ಕಸ್ತೂರ್‌ಬಾ ಗಾಂಧಿ ಅವರ ತ್ಯಾಗ, ಬೆಂಬಲ ಇವೆಲ್ಲವನ್ನೂ ತೆರೆಯ ಮೇಲೆ ತಂದಿದ್ದೇವೆ.’

<strong><em>ಕಸ್ತೂರ್‌ಬಾ ಗಾಂಧಿಪಾತ್ರದಲ್ಲಿಹರಿಪ್ರಿಯಾ </em></strong>
ಕಸ್ತೂರ್‌ಬಾ ಗಾಂಧಿಪಾತ್ರದಲ್ಲಿಹರಿಪ್ರಿಯಾ

ಸವಾಲಿನ ಪಾತ್ರಗಳ ಆಯ್ಕೆ
‘ಕಾಲೇಜು ಹುಡುಗಿ ಅಥವಾ ಪೊಲೀಸ್‌ ಅಧಿಕಾರಿ ಪಾತ್ರವಾಗಲಿ ಪೌರಾಣಿಕ, ಇತಿಹಾಸ ಅಥವಾ ಕಮರ್ಷಿಯಲ್‌ ಚಿತ್ರಗಳಲ್ಲಿ ಪಾತ್ರಗಳನ್ನು ಮಾಡಲು ನಾನು ಸದಾ ಸಿದ್ಧ. ಈ ಸವಾಲು ನನಗೆ ವೈಯಕ್ತಿಕವಾಗಿ ಖುಷಿ ಹಾಗೂ ತೃಪ್ತಿ ನೀಡುತ್ತದೆ. ಈ ಚಿತ್ರದಲ್ಲಿ ನಾನು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಈ ಮೂರೂ ಪಾತ್ರಗಳೂ ಸವಾಲಿನದ್ದಾಗಿತ್ತು. ಕಾಲ್ಪನಿಕ ಚಿತ್ರಗಳನ್ನು ಮಾಡುವಾಗ ಪಾತ್ರಗಳಿಗೆ ಜೀವ ತುಂಬಲು ಏನಾದರೂ ಸೇರಿಸಬಹುದು. ಆದರೆ ಆತ್ಮಕಥೆಯಲ್ಲಿ ಈ ರೀತಿ ಮಾಡಲು ಅಸಾಧ್ಯ. ಎಚ್ಚರಿಕೆಯಿಂದ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಜೊತೆಗೆ ಗಾಂಧೀಜಿ ಅವರು ಹೇಗೆ ಮಾತನಾಡುತ್ತಾರೆ, ನಡೆಯುತ್ತಾರೆ ಎನ್ನುವುದಕ್ಕೆ ಬಹಳಷ್ಟು ವಿಡಿಯೊ ದಾಖಲೆಗಳಿವೆ. ಆದರೆ ಕಸ್ತೂರ್‌ಬಾ ಅವರ ಫೋಟೊಗಳನ್ನು ಹೊರತುಪಡಿಸಿ ನಮ್ಮ ಬಳಿ ಬೇರೆ ಯಾವುದೇ ದಾಖಲೆಗಳಿಲ್ಲ. ಇರುವ ಫೋಟೊ ಇಟ್ಟುಕೊಂಡೇ ಉಡುಪು, ಲುಕ್‌ ಎಲ್ಲ ಸಿದ್ಧಪಡಿಸಿಕೊಂಡೆವು. ಮೊದಲ ಬಾರಿ ಇಳಿವಯಸ್ಸಿನ ಪಾತ್ರವನ್ನು ಮಾಡಿದ್ದೇನೆ. ಇದು ಸ್ವಲ್ಪ ಸವಾಲೆನಿಸಿತು.’

‘ಈ ಪಾತ್ರಕ್ಕೆ ನಾನು ಸಂಪೂರ್ಣವಾಗಿ ಬರಗೂರು ಅವರ ಮೇಲೆಯೇ ಅವಲಂಬಿತವಾಗಿದ್ದೆ. ಕಸ್ತೂರ್‌ಬಾ ಅವರ ಲುಕ್‌ ಹಾಗೂ ದೃಷ್ಟಿಕೋನದ ಮೇಲೆ ಅವರು ಬಹಳ ಸಂಶೋಧನೆ ಮಾಡಿದ್ದರು. ಅದಕ್ಕೆ ತಕ್ಕ ಹಾಗೆಯೇ ಪಾತ್ರವನ್ನು ಬರೆದಿದ್ದರು. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಅವರಿಬ್ಬರೂ ಹೇಗೆ ಬೆಳೆದರು ಎನ್ನುವುದನ್ನು ಬಹಳ ಅದ್ಭುತವಾಗಿ ಅವರು ಬರೆದಿದ್ದಾರೆ’ ಎಂದರು ಹರಿಪ್ರಿಯಾ.

ವೀರಪ್ಪನ್‌ ಪಾತ್ರಕ್ಕೂ ಸೈ, ಗಾಂಧೀಜಿ ಪಾತ್ರಕ್ಕೂ ಸೈ
ಕಿಶೋರ್‌ ಅವರ ಜೊತೆ ಕನ್ನಡ ಸೇರಿದಂತೆ ಮಲಯಾಳಂ, ತಮಿಳಿನ ಹಲವು ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಆದರೆ ಜೋಡಿಯಾಗಿ ನಟಿಸಿದ್ದು ‘ಅಮೃತಮತಿ’ ಸಿನಿಮಾ ಹಾಗೂ ಇದೀಗ ‘ತಾಯಿ ಕಸ್ತೂರ್‌ ಗಾಂಧಿ’ಯಲ್ಲಿ. ಅವರೊಬ್ಬ ಅತ್ಯದ್ಭುತ ಕಲಾವಿದ. ಅವರು ವೀರಪ್ಪನ್‌ ಪಾತ್ರಕ್ಕೂ ಜೀವ ತುಂಬುತ್ತಾರೆ ಗಾಂಧೀಜಿ ಪಾತ್ರಕ್ಕೂ. ಒಬ್ಬರು ಒಂದು ಪಾತ್ರದಲ್ಲಿ ಮಿಂಚಿದರೆ ಉಳಿದ ಸಿನಿಮಾಗಳಲ್ಲೂ ಅವರು ಆ ಪಾತ್ರಕ್ಕಷ್ಟೇ ಸೀಮಿತವಾಗಿಬಿಡುತ್ತಾರೆ. ಆದರೆ ಕಿಶೋರ್‌ ಅವರು ಎಲ್ಲ ಪಾತ್ರಕ್ಕೂ ಒಗ್ಗುತ್ತಾರೆ. ಅವರು ಮಾಡುವ ಕಠಿಣ ಶ್ರಮವೂ ಹಾಗೆಯೇ ಇರುತ್ತದೆ. ಅವರ ಜೊತೆ ಕೆಲಸ ಮಾಡುವಾಗ ನಮಗೂ ಕಲಿಯಲು ಸಿಗುತ್ತದೆ ಹಾಗೂ ಒಂದು ರೀತಿ ಆರೋಗ್ಯಕರಸ್ಪರ್ಧೆ ಇರುತ್ತದೆ ಎಂದರು ಹರಿಪ್ರಿಯಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT