ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಚೇತನ್‌ ಸಂದರ್ಶನ: ಕಲೆ ಕೇವಲ ಮನರಂಜನೆಗಲ್ಲ

Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ದಿವಂಗತ ನಟ ಚಿರಂಜೀವಿ ಸರ್ಜಾ, ‘ಆ ದಿನಗಳು’ ಖ್ಯಾತಿಯ ಚೇತನ್‌ ಅವರು ಅಭಿನಯಿಸಿರುವ ‘ರಣಂ’ ಇಂದು ತೆರೆ ಕಾಣುತ್ತಿದ್ದು, ರೈತರ ಸಮಸ್ಯೆ ಹಾಗೂ ಸಂಕಷ್ಟಗಳ ಸುತ್ತ ಈ ಚಿತ್ರದ ಕಥಾಹಂದರವಿದೆ. ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ಚೇತನ್‌ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು...

***

‘ರಣಂ’ ಚಿತ್ರ ಮೇಲ್ನೋಟಕ್ಕೆ ಸಾಮಾಜಿಕ ಕಳಕಳಿಯ ಸಿನಿಮಾದಂತಿದೆ
ಚಿತ್ರದಲ್ಲಿ ಆ್ಯಕ್ಷನ್‌, ಕಾಮಿಡಿ, ಸಾಮಾಜಿಕ ಕಳಕಳಿ ಇದೆ. ಇದೊಂದು ಸಂಪೂರ್ಣ ಕಮರ್ಷಿಯಲ್‌ ಚಿತ್ರ. ನನ್ನ ಪಾತ್ರಕ್ಕೆ ಬಂದಾಗ, ಹೀರೋಯಿಸಂ ಇಲ್ಲ. ಹಿಂಸಾತ್ಮಕ ರೀತಿಯಲ್ಲಿ ಆತ ಶಕ್ತಿ ಪ್ರದರ್ಶನ ಮಾಡುವುದಿಲ್ಲ. ಇದೊಂದು ಕ್ರಾಂತಿಕಾರಿ ಪಾತ್ರ. ಈ ಪಾತ್ರವೇ ನಿಜ ಜೀವನದ ಹೀರೋ. ಸಿನಿಮಾದಲ್ಲಿ ರಾಜಕೀಯ, ಯುವಕರ ಪ್ರೀತಿ, ಮೋಜು ಮಸ್ತಿ, ಪೊಲೀಸರ ದಬ್ಬಾಳಿಕೆ ಹೀಗೆ ಹಲವು ವಿಷಯಗಳಿವೆ. ರೈತರ ಹಿತಾಸಕ್ತಿಯಿಂದ ದೇಶದಾದ್ಯಂತ ಚಳವಳಿ ನಡೆಯುತ್ತಿದೆ. ಹಿಂದೆಂದೂ ಇಂತಹ ರೈತರ ಹೋರಾಟ ನಡೆದಿಲ್ಲ. ಇಂತಹ ಸಂದರ್ಭದಲ್ಲೇ ರೈತರ ಪರವಾದ, ಅವರ ಸಂಕಷ್ಟಗಳನ್ನು ಹೇಳುವ ‘ರಣಂ’ ಚಿತ್ರವು ಬಿಡುಗಡೆಯಾಗುತ್ತಿದೆ. ಭಾವನಾತ್ಮಕವಾಗಿ ಇದು ರೈತರ ಬಗ್ಗೆಯೇ ಇರುವ ಸಿನಿಮಾ, ಯುವಕರಿಗೂ ಈ ಚಿತ್ರ ಪ್ರಸ್ತುತ.

ನಿಮ್ಮ ವಿಚಾರಧಾರೆಗೂ ಸಿನಿಮಾದ ಕಥೆಗೂ ಸಾಮ್ಯತೆ ಇದೆ ಎಂದೆನಿಸುತ್ತಿದೆ...
ಆ ದಿನಗಳು, ಮೈನಾ ಚಿತ್ರದಲ್ಲಿ ಸಾಮಾಜಿಕ ಕಳಕಳಿ ಅಷ್ಟು ಇರಲಿಲ್ಲ. ಎಲ್ಲ ಸಿನಿಮಾದಲ್ಲೂ ನಾನು ನಿರ್ದೇಶಕರ ಕೈಗೊಂಬೆ. ರಣಂ ಚಿತ್ರದಲ್ಲಿರುವ ವಿಚಾರಗಳು ನನ್ನ ವಿಚಾರಗಳಲ್ಲ. ಆದರೆ ಆ ವಿಚಾರಕ್ಕೆ ನನ್ನ ವಿಚಾರಗಳು ಹತ್ತಿರವಿರಬಹುದು. ನಿರ್ದೇಶಕರಾದ ವಿ.ಸಮುದ್ರ ಅವರ ದೃಷ್ಟಿಕೋನ, ರೈತರ ಬಗೆಗಿನ ಕಳಕಳಿಯನ್ನು, ಸಂಭಾಷಣೆ ಬರೆಯುವವರ ಕ್ರಾಂತಿಕಾರಿ ವಿಚಾರಗಳನ್ನು ನನ್ನ ಪಾತ್ರದ ಮುಖಾಂತರ ಹೊರಹಾಕಿದ್ದಾರೆ. ನನ್ನ ವಿಚಾರಧಾರೆಗೆ ಸಿನಿಮಾದ ಕಥೆ ಹತ್ತಿರವಾಗಿಲ್ಲ ಎಂಬ ಮಾತ್ರಕ್ಕೆ ನಾನು ಪಾತ್ರ ಮಾಡುವುದಿಲ್ಲ ಎಂದರ್ಥವಲ್ಲ. ನಟ ಎಂದಮೇಲೆ ನಾವೆಲ್ಲರೂ ನಿರ್ದೇಶಕರ ಕೈಗೊಂಬೆ. ಪಾತ್ರದಲ್ಲಿರುವ ಕ್ರಾಂತಿ, ಕಿಚ್ಚು, ಧೈರ್ಯ, ಯುಕ್ತಿ, ಹೋರಾಟ ಬದಲಾವಣೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ.

ಚಿತ್ರದಲ್ಲಿ ಯುವಜನತೆಗೆ ನೀಡಿರುವ ಸಂದೇಶ ಏನು?
ಯುವಜನತೆಗೆ ಒಂದು ಉತ್ತಮ ಸಂದೇಶ ಹಾಗೂ ಮನರಂಜನೆ ಈ ಚಿತ್ರದಲ್ಲಿದೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಯೋಚನೆ ಯುವಜನತೆಯಲ್ಲಿದೆ. ಒಮ್ಮೆ ಗದ್ದೆಯಲ್ಲಿ ಕೆಲಸ ಮಾಡಿದರೆ ರೈತರ ಸಂಕಷ್ಟ ಅರ್ಥ ಆಗುವುದಿಲ್ಲ. ಸಮಾಜದಲ್ಲಿ ರೈತರ ಪರವಾಗಿ ನಿಲ್ಲಬೇಕು. ಸರ್ಕಾರವೂ ರೈತರ ಪರವಾಗಿ ಕೆಲಸ ಮಾಡುವಂತೆ ಮಾಡಬೇಕು. ರೈತ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳಬೇಕು.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ
ಚಿತ್ರದಲ್ಲಿ ನಾನು ಕೃಷಿಕನಲ್ಲ. ಆದರೆ ನಾನು ನನ್ನ ರೀತಿಯಲ್ಲಿ ರೈತರಿಗೆ ಸಹಾಯ ಮಾಡುತ್ತೇನೆ. ಬುದ್ಧಿಶಕ್ತಿ, ತಂತ್ರಜ್ಞಾನದ ಶಕ್ತಿಯಿಂದ ರೈತರಿಗೆ ಹೇಗೆ ಸಹಾಯ ಮಾಡುತ್ತೇನೆ ಎನ್ನುವುದು ಕಥೆಯ ಸಾರಾಂಶ. ಇವತ್ತಿನ ದಿನ ಬೀದಿಗಿಳಿದು ಹೋರಾಟ ಒಂದು ಮಾರ್ಗ, ಅಧಿಕಾರ ಪಡೆದು ಬದಲಾವಣೆ ತರುವುದು ಇನ್ನೊಂದು ಮಾರ್ಗ. ಜೊತೆಗೆ ತಂತ್ರಜ್ಞಾನದ ಮುಖಾಂತರ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಒಂದು ವ್ಯವಸ್ಥೆಯೂ ನಮ್ಮ ಪರ ಕಾರ್ಯನಿರ್ವಹಿಸುವಂತೆ ಮಾಡಬಹುದು ಎನ್ನುವುದನ್ನು ನನ್ನ ಪಾತ್ರದ ಮುಖಾಂತರ ನಿರ್ದೇಶಕರು ಜನರಿಗೆ ತಿಳಿಸಿದ್ದಾರೆ.

ಸಿನಿಮಾ ಮುಖಾಂತರ ಸಮಾಜದ ಬದಲಾವಣೆ ಸಾಧ್ಯವೇ?
ಸಿನಿಮಾದಿಂದ ಸಮಾಜದಲ್ಲಿ ಬದಲಾವಣೆ ಆಗುವುದು ಬಹಳ ಕಷ್ಟ. ಜನರ ಯೋಚನೆ ಬದಲಾಗಬಹುದು ಅಷ್ಟೇ. ಕಲೆಯ ಮುಖಾಂತರ ರಚನಾತ್ಮಕ ಬದಲಾವಣೆ ತರಬೇಕು ಎಂದು 16 ವರ್ಷದ ಹಿಂದೆ ಅಮೆರಿಕ ಬಿಟ್ಟುಬಂದೆ. ‘ರಂಗಭೂಮಿಯಿಂದ ಸಾಮಾಜಿಕ ಬದಲಾವಣೆ’ ಎಂಬ ವಿಷಯ ಇಟ್ಟುಕೊಂಡೇ ನಾನು ಡಿಗ್ರಿ ಮಾಡುವಾಗ ಪ್ರಬಂಧ ಮಂಡಿಸಿದ್ದೆ. ಒಳ್ಳೆಯ ಪಾತ್ರ ಮಾಡಿದಾಕ್ಷಣ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಸಿನಿಮಾದೊಳಗೆ ಉತ್ತಮ ಪಾತ್ರದ ಮುಖಾಂತರ ಹಾಗೂ ಸಿನಿಮಾ ರಂಗದ ಹೊರಗೆ ನಿಂತು ಹೋರಾಟ ಮಾಡಿ ಬದಲಾವಣೆ ತರಬೇಕು. ಕಲೆ ಕೇವಲ ಮನರಂಜನೆಗಷ್ಟೇ ಅಲ್ಲ. ಬದಲಾವಣೆಗೋಸ್ಕರ ಕಲೆ ಇರಬೇಕು.

ನಿಮ್ಮ ಮುಂದಿನ ಹೆಜ್ಜೆಗಳು
100 ಕೋಟಿ ಚಿತ್ರವು ಡಬ್ಬಿಂಗ್‌ ಹಂತದಲ್ಲಿದೆ. ಇದರಲ್ಲಿ ವಿಭಿನ್ನ ಪಾತ್ರ ನನ್ನದು. ರಣಂನಲ್ಲಿನ ಪಾತ್ರ ನನ್ನ ನಿಜಜೀವನಕ್ಕೆ ಹತ್ತಿರವಾಗಿದೆ. ಈ ಹೊಸ ಚಿತ್ರದಲ್ಲಿ ಭ್ರಷ್ಟ ಅಧಿಕಾರಿ ಪಾತ್ರ ಮಾಡಿದ್ದೇನೆ. ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದೇನೆ. ಮೂರು ತಿಂಗಳಲ್ಲಿ ಇದು ತೆರೆ ಮೇಲೆ ಬರಲಿದೆ. ಪ್ರಸ್ತುತ ತೆಲುಗು, ಕನ್ನಡದಲ್ಲಿ ‘ಡಿಟಿಎಸ್‌’ ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಂತರರಾಷ್ಟ್ರೀಯ ಡ್ರಗ್‌ ಮಾಫಿಯಾ ಬಗ್ಗೆ ಇರುವ ಸಿನಿಮಾ ಇದು. ಇದೊಂದು ಹೈಬಜೆಟ್‌ ಸಿನಿಮಾ. ವಿದೇಶದಲ್ಲೂ ಇದರ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT