ಮಂಗಳವಾರ, ಅಕ್ಟೋಬರ್ 27, 2020
22 °C

PV Web Exclusive | ಚಂದನವನ ಮರೆತೇ ಹೋದಂತಿದ್ದ ಕನ್ನಡದ ಮನಸ್ಸು-ವಿಜಯ್ ರೆಡ್ಡಿ

ಕೆ.ಎಂ. ಸಂತೋಷ್‌ಕುಮಾರ್‌‌ Updated:

ಅಕ್ಷರ ಗಾತ್ರ : | |

Prajavani

ಅದು 2019ರ ಜುಲೈ 28 ಅಂದರೆ ಭಾನುವಾರ, ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯಿಂದ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಕೇಂದ್ರ ಬಿಂದು ಮತ್ತು ಮುಖ್ಯ ಅತಿಥಿ ಭಾರತೀಯ ಚಿತ್ರರಂಗ ಎಂದೂ ಮರೆಯದ ನಿರ್ದೇಶಕ ವಿಜಯ್‌ ರೆಡ್ಡಿ. 83ರ ಹರೆಯದಲ್ಲಿದ್ದ ರೆಡ್ಡಿ ಅವರು ಪತ್ನಿ ಮತ್ತು ಮಕ್ಕಳು, ಸೊಸೆ, ಮೊಮ್ಮಕ್ಕಳು, ಸ್ನೇಹಿತರು... ಹೀಗೆ ಸಕುಟುಂಬ ಪರಿವಾರ ಸಮೇತರಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಅವರು ಎದ್ದು ನಡೆದಾಡುವಂತಿರಲಿಲ್ಲ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರ ಕಾಲುಗಳಲ್ಲಿ ನಡೆದಾಡುವ ಶಕ್ತಿ ಇರಲಿಲ್ಲ. ವ್ಹೀಲ್‌ಚೇರ್‌ನಲ್ಲಿ ಆಸೀನರಾಗಿದ್ದರು. ಆದರೆ, ಅವರ ಮೊಗದಲ್ಲಿನ ಚೈತನ್ಯ ಮತ್ತು ಆನಂದಕ್ಕೆ ಒಂದಿನಿತೂ ಕೊರತೆ ಇರಲಿಲ್ಲ. ಅಂದಿನ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ಅವರ ಸಂಗಡಿಗರು ರೆಡ್ಡಿಯವರನ್ನು ಸ್ವಾಗತಿಸಿದಾಗ ಅವರ ಕಣ್ಣುಗಳಲ್ಲಿ ಆನಂದ ಭಾಷ್ಪ. ‘ಕನ್ನಡಿಗರು, ಕನ್ನಡ ಚಿತ್ರರಸಿಕರು ನನ್ನನ್ನು ಮರೆತೇ ಹೋಗಿದ್ದಾರೆಂದು ಭಾವಿಸಿದ್ದೆ. ನಿಜಕ್ಕೂ ಇಂದು ನನಗೆ ಆಗುತ್ತಿರುವ ಅತೀವ ಸಂತೋಷ, ಆನಂದ ಅಷ್ಟಿಷ್ಟಲ್ಲ’ ಎಂದು ಭಾವುಕರಾಗಿದ್ದರು.

ಅನಾರೋಗ್ಯಕ್ಕೀಡಾದ ಮೇಲೆ ರೆಡ್ಡಿಯವರು ಚಿತ್ರರಂಗದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಚಿತ್ರರಂಗದವರೂ ಬಹುತೇಕ ಅವರನ್ನು ಮರೆತೇಬಿಟ್ಟಿದ್ದರು ಎನಿಸುತ್ತದೆ. ‘ಮರೆತು ಹೋದ ಮಹನೀಯರ’ನ್ನು ಹುಡುಕಿಕೊಂಡು ಹೋಗಿ ಗೌರವಿಸುವ ಗುಣಸ್ವಭಾವದ ನಾಗತಿಹಳ್ಳಿಯವರು ತಮ್ಮ ಪಾಲಿನ ಮಾನಸಗುರುಗಳಾಗಿದ್ದ ರೆಡ್ಡಿಯವರ ಇರುವಿಕೆ ಪತ್ತೆಹಚ್ಚುವ ಸಾಹಸಕ್ಕೆ ‘ಬೆಳ್ಳಿ ಹೆಜ್ಜೆ’ ನೆಪದಲ್ಲಿ ಕೈಹಾಕಿದ್ದರು. ವಿಜಯ ರೆಡ್ಡಿಯವರನ್ನು ಅವರು ಹುಡುಕಿಕೊಂಡು ಹೋಗಲು ಕಾರಣವೂ ಇದೆ; ಅದೇನೆಂದರೆ ವಿಜಯ ರೆಡ್ಡಿ ನಿರ್ದೇಶನದ ಸಿನಿಮಾಗಳು ಬಿಡುಗಡೆಯಾದಾಗ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಚಿತ್ರಮಂದಿರದಲ್ಲಿ ಗೇಟ್‌ ಕೀಪರ್‌ ಆಗಿದ್ದರಂತೆ! ತೆರೆಯ ಮರೆಯಲ್ಲಿ ನಿಂತುಕೊಂಡು ಅವರ ಸಿನಿಮಾಗಳನ್ನು ಇಣುಕಿ ನೋಡುತ್ತಿದ್ದರಂತೆ. ‘ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನಾನು ರೆಡ್ಡಿಯವರ ನಿರ್ದೇಶನದ ಸಿನಿಮಾಗಳನ್ನು ನೋಡುತ್ತಲೇ ನಿರ್ದೇಶನದ ಆಸೆ ಬೆಳೆಸಿಕೊಂಡವನು. ಚಿತ್ರಮಂದಿರಗಳಲ್ಲಿದ್ದ ನನ್ನಂತಹ ಅನೇಕ ಹುಡುಗರನ್ನು ನಿರ್ದೇಶಕರಾಗಿಸಿದ ಶ್ರೇಯ ರೆಡ್ಡಿಯವರಿಗೆ ಸಲ್ಲುತ್ತದೆ. ಅವರು ಎಂದಿಗೂ ನನ್ನ ಮಾನಸ ಗುರುಗಳು’ ಎಂದು ನಾಗತಿಹಳ್ಳಿ ಹೆಮ್ಮೆಯಿಂದ ಹೇಳಿಕೊಳ್ಳುವುದು ಉಂಟು.

ಇನ್ನು ‘ಬೆಳ್ಳಿ ಹೆಜ್ಜೆಗೆ ರೆಡ್ಡಿಯವರನ್ನು ಕರೆತರಲು ಕೆಲವರನ್ನು ವಿಚಾರಿಸಿದಾಗ ಅವರು ಗತಿಸಿ ಹೋಗಿಯೇ ತುಂಬಾ ವರ್ಷಗಳು ಆಗಿವೆ ಎನ್ನುವ ಉತ್ತರ ಸಿಕ್ಕಿತ್ತು. ಆಗ ದಕ್ಷಿಣ ಭಾರತದ ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳನ್ನು ಸಂಪರ್ಕಿಸಿ, ವಿಚಾರಿಸಿದಾಗ ರೆಡ್ಡಿಯವರು ಬದುಕಿದ್ದಾರೆ, ಚೆನ್ನೈನಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿತು. ಆಗ ಸ್ನೇಹಿತರ ಜತೆಗೆ ಹೋಗಿ ಅವರನ್ನು ಖುದ್ದು ಕಂಡು ‘ಬೆಳ್ಳಿ ಹೆಜ್ಜೆ’ಗೆ ಆಹ್ವಾನಿಸಿದ್ದೆ. ರೆಡ್ಡಿಯವರು ಪ್ರಯಾಣ ಮಾಡಲು ಆಗದಿರುವ ಪರಿಸ್ಥಿತಿ ಕಂಡು ಚೆನ್ನೈನಲ್ಲೇ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮ ಆಯೋಜಿಸುವ ತೀರ್ಮಾನಕ್ಕೆ ಅಕಾಡೆಮಿ ಬಂದಿತ್ತು. ಆದರೆ, ರೆಡ್ಡಿಯವರು ತಮ್ಮ ಅನಾರೋಗ್ಯ ಲೆಕ್ಕಿಸದೇ ಬೆಂಗಳೂರಿಗೇ ಬಂದು ‘ಬೆಳ್ಳಿ ಹೆಜ್ಜೆ’ಯಲ್ಲಿ ಭಾಗವಹಿಸಿದರು’ ಎಂದು ನಾಗತಿಹಳ್ಳಿ ಚಂದ್ರಶೇಖರ್‌ ‘PV Web Exclusive’ ಜತೆಗೆ ನೆನಪುಗಳನ್ನು ಹಂಚಿಕೊಂಡರು.

ಅಂದಿನ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಪ್ರದರ್ಶನವಾದ ರವೀಂದ್ರನಾಥ ಸಿರಿವರ ನಿರ್ದೇಶನದ 28 ನಿಮಿಷಗಳ ಸಾಕ್ಷ್ಯಚಿತ್ರವೂ ವಿಜಯ ರೆಡ್ಡಿ ಅವರ ಚಿತ್ರ ಬದುಕನ್ನು ಚೆಂದವಾಗಿ ಕಟ್ಟಿಕೊಡುವಂತಿತ್ತು. ಅದು ಬರೀ ಗೌರವ ಸಮರ್ಪಣೆಯ ಕಾರ್ಯಕ್ರಮವಾಗಿರಲಿಲ್ಲ. ಭಾವಪೂರ್ಣ, ಅಭಿಮಾನ ಪೂರ್ಣ ಕಾರ್ಯಕ್ರಮದಂತೆಯೂ ಇತ್ತು. ರೆಡ್ಡಿಯವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಸ್ಮರಿಸಲು ಸಾಕ್ಷಿಗುಡ್ಡೆಯಂತೆ ಅಂದಿನ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕರು, ಹಿರಿಯ ನಿರ್ಮಾಪಕರು, ಹಿರಿಯ ನಟ– ನಟಿಯರು, ತಂತ್ರಜ್ಞರು ಸೇರಿದಂತೆ ಇಡೀ ಚಿತ್ರರಂಗದ ಗಣ್ಯರ ದಂಡೇ ಸೇರಿತ್ತು. ಅಂದು ವೇದಿಕೆಯಲ್ಲಿ ಮಾತನಾಡಿದವರೆಲ್ಲರೂ ಆ ಹಿರಿಯ ಚೇತನ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಮನಸಾರೆ ಸ್ಮರಿಸಿದ್ದರು. 

ರೆಡ್ಡಿಯವರ ಸಿನಿಪಯಣ...

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೇಪಲ್ಲಿಯ ಗುರೇಮ್‌ ಎನ್ನುವ ಪುಟ್ಟ ಗ್ರಾಮ. ಈ ಗ್ರಾಮದ ರೈತ ಕುಟುಂಬದಲ್ಲಿ ಹುಟ್ಟಿದವರು ವಿಜಯ್‌ ರೆಡ್ಡಿ. ನಮ್ಮಂತೆಯೇ ನೇಗಿಲು ಹಿಡಿದು ಉತ್ತಿ ಬೆಳೆಯುತ್ತಾನೆಂದುಕೊಂಡಿದ್ದರು ಅವರ ಹೆತ್ತವರು. ಆದರೆ, ರೆಡ್ಡಿಯವರಿಗೆ ಬಾಲ್ಯದಿಂದಲೇ ಅಭಿನಯದ ಕಡೆಗೆ ಸೆಳೆತ. ಶಾಲಾ ದಿನಗಳಲ್ಲಿರುವಾಗಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕಲಾದೇವಿಯ ಆರಾಧಕರಾದರು. ಇದರ ಪರಿಣಾಮ ಸಿನಿಮಾರಂಗದ ಕಡೆಗೆ ಒಲವು ಬೆಳೆಯಿತು. ಒಂದಿಷ್ಟು ಕನಸುಗಳ ಬುತ್ತಿಕಟ್ಟಿಕೊಂಡು 16–17ರ ಹರೆಯದಲ್ಲಿ ಸಿನಿಮಾ ಅವಕಾಶಗಳನ್ನು ಅರಸುತ್ತಾ ಮದರಾಸಿಗೆ ಪಯಣಿಸಿದರು.

ಬದುಕಿನ ಯೋಗಾಯೋಗಾ ಎನ್ನುವಂತೆ ಆಗ ಇವರಿಗೆ ಪರಿಚಿತರ ಮೂಲಕ ಸಿನಿಮಾ ನಿರ್ದೇಶನ ಕಲಿಯುವ ಅವಕಾಶ ಸಿಕ್ಕಿದ್ದು ಅಂದಿನ ಹೆಸರಾಂತ ನಿರ್ದೇಶಕ ಬಿ.ವಿಠ್ಠಲಾಚಾರ್ಯರಲ್ಲಿ. ಆಗ ವಿಠ್ಠಲಾಚಾರ್ಯರು ತಾವು ನಿರ್ದೇಶಿಸುತ್ತಿದ್ದ ‘ಮನೆತುಂಬಿದ ಹೆಣ್ಣು’ ಚಿತ್ರದ ಸಂಕಲನ ಸಹಾಯಕರಾಗಿ ರೆಡ್ಡಿಯವರನ್ನು ನೇಮಿಸಿಕೊಂಡರು. ವಿಜಯ್‌ ಅವರಲ್ಲಿದ್ದ ಸಿನಿಮಾ ಆಸಕ್ತಿ ಮತ್ತು ಕಲಿಕೆಯ ಹಂಬಲ ಕಂಡು, ಸಹ ನಿರ್ದೇಶಕರಾಗಿ ತಮ್ಮೊಂದಿಗೆ ಇರಿಸಿಕೊಂಡರು. ಅದಾಗಲೇ ವಿಠ್ಠಲಾಚಾರ್ಯರ ಬಳಿ ಕನ್ನಡದ ಹೆಸರಾಂತ ನಿರ್ದೇಶಕ ಸಿದ್ದಲಿಂಗಯ್ಯ ಸಹ ಇದ್ದರು. ರೆಡ್ಡಿಯವರಿಗೆ ಸಿದ್ದಲಿಂಗಯ್ಯ ಅವರ ಒಟನಾಟವೂ ಕೂಡ ಸಿಕ್ಕಿತು. ಜತೆಗೆ ಗೀತೆ ರಚನೆಕಾರ ಚಿ.ಉದಯ್‌ ಶಂಕರ್‌ ಅವರ ಗೆಳೆತನವೂ ಲಭಿಸಿತು.

ವಿಜಯ್‌ ಅವರು ತೆಲುಗಿನಲ್ಲಿ ‘ಶ್ರೀಮತಿ’ ಚಿತ್ರ ನಿರ್ದೇಶಿಸಿ ತಮ್ಮ ಅದೃಷ್ಟ ಒರೆಗೆ ಹಚ್ಚಿಕೊಂಡಿದ್ದರೂ ಅವರ ಚಿತ್ತ ಮಾತ್ರ ಹೆಚ್ಚು ನೆಟ್ಟಿದ್ದು ಸ್ಯಾಂಡಲ್‌ವುಡ್‌ನತ್ತಲೇ. 1970ರಲ್ಲಿ ಅವರು ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಈ ಚಿತ್ರ ಕನ್ನಡದ ಸಿನಿಪ್ರಿಯರಿಗೆ ನೀಡಿದ ಖುಷಿಯೂ ಅಷ್ಟಿಷ್ಟಲ್ಲ. ಆ ಕಾಲಕ್ಕೆ ಅದು ಸೂಪರ್‌ ಹಿಟ್‌ ಚಿತ್ರ ಎನಿಸಿಕೊಂಡ ಇತಿಹಾಸವಿದೆ. ಇದರ ಬೆನ್ನಲ್ಲೇ ‘ಮೊದಲ ರಾತ್ರಿ’ ಚಿತ್ರ ನಿರ್ದೇಶಿಸುವ ಅವಕಾಶವೂ ಅವರಿಗೆ ಸಿಕ್ಕಿತು. ನಂತರ ಕನ್ನಡದಲ್ಲಿ ಮೂರನೇ ಚಿತ್ರವಾಗಿ ‘ಕೌಬಾಯ್‌ ಕುಳ್ಳ’ ನಿರ್ದೇಶಿಸಿದರು. ದ್ವಾರಕೀಶ್‌ ಮತ್ತು ಜ್ಯೋತಿಲಕ್ಷ್ಮಿ ಅವರ ನಟನೆಯ ವಿಚಿತ್ರ ಕಾಂಬಿನೇಷನ್ನಿನ ಈ ಚಿತ್ರ ರೆಡ್ಡಿಯವರಿಗೆ ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿತು. ಆಗಲೇ ವಿಜಯ್‌ ರೆಡ್ಡಿಯವರ ಪ್ರತಿಭಾ ಶಕ್ತಿ ಮನಗಾಣಿದ್ದು ಡಾ.ರಾಜ್‌ ಅವರಿಗೆ. ರೆಡ್ಡಿಯವರಿಗೆ ಸಿನಿಮಾ ನಿರ್ದೇಶನದಲ್ಲಿ ಇದ್ದ ಬದ್ಧತೆ ಮತ್ತು ಅರ್ಪಣಾ ಮನೋಭಾವ ಗುರುತಿಸಿದ ರಾಜ್‌, ‘ಗಂಧದ ಗುಡಿ’ (1973) ಚಿತ್ರ ನಿರ್ದೇಶಿಸುವ ಅವಕಾಶ ಕೊಡಿಸಿದರು. ಈ ಚಿತ್ರ ಚಂದನವನದಲ್ಲಿ ಮಾಡಿದ ದಾಖಲೆಯನ್ನು ಎಂದಿಗೂ ಯಾರೂ ಮರೆಯಲಾಗದು. ನಂತರದ್ದು ರಾಜ್ ಮತ್ತು ರೆಡ್ಡಿ ಜೋಡಿಯ‌ ಯಶಸ್ಸಿನ ಜೈತ್ರಯಾತ್ರೆ ದಶಕಕಾಲ ಮುಂದುವರಿಯಿತು!

ಅನಂತ್‌ ನಾಗ್‌ ಮತ್ತು ಲಕ್ಷ್ಮಿ ನಟನೆಯ ‘ನಾನಿನ್ನ ಬಿಡಲಾರೆ’ ಹಾಗೂ ಶಂಕರ್‌ನಾಗ್‌ ನಟನೆಯ ‘ಆಟೋ ರಾಜ’ ಚಿತ್ರಗಳು ರೆಡ್ಡಿಯವರ ಯಶಸ್ಸಿನ ಗ್ರಾಫ್‌ ಅನ್ನು ಮತ್ತಷ್ಟು ಏರಿಸಿದವು. ಶ್ರೀನಿವಾಸ ಕಲ್ಯಾಣ, ಮಯೂರ (1975), ನಾ ನಿನ್ನ ಮರೆಯಲಾರೆ (1976), ಸನಾದಿ ಅಪ್ಪಣ್ಣ (1977), ಹುಲಿಯ ಹಾಲಿನ ಮೇವು (1979), ಮುಳ್ಳಿನ ಗುಲಾಬಿ (1982), ಭಕ್ತ ಪ್ರಹ್ಲಾದ (1983) ಹೀಗೆ ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೀರ್ತಿ ರೆಡ್ಡಿಯವರಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗದಲ್ಲಿ ಅವರು ನಿರ್ದೇಶಿಸಿದ ಕೊನೆ ಚಿತ್ರ ‘ಕರ್ನಾಟಕ ಸುಪುತ್ರ’ (1996). ನಿರ್ದೇಶನದ ಜತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ರೆಡ್ಡಿ, ನಿರ್ದೇಶಕ ಸೋಮಶೇಖರ್‌ ಜತೆಗೂಡಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದರು. ಇವರ ಬ್ಯಾನರ್‌ನಲ್ಲಿ ‘ಚಂಡಿ ಚಾಮುಂಡಿ’ ಸಿನಿಮಾ ನಿರ್ಮಿಸಿದ್ದಾರೆ.

ರೆಡ್ಡಿಯವರ ಕನಸಾಗಿಯೇ ಉಳಿದ ಚಿತ್ರ!

ರಾಜ್‌ಕುಮಾರ್‌ ನಟನೆಯ ಒಂಭತ್ತು ಚಿತ್ರಗಳನ್ನು ಸತತವಾಗಿ ನಿರ್ದೇಶನ ಮಾಡುವುದೆಂದರೆ ರೆಡ್ಡಿಯವರ ದೈತ್ಯ ಪ್ರತಿಭೆ ಮತ್ತು ಇವರ ಮೇಲೆ ರಾಜ್‌ ಎಷ್ಟೊಂದು ವಿಶ್ವಾಸವಿಟ್ಟಿದ್ದರು ಎನ್ನುವುದನ್ನು ಯಾರೊಬ್ಬರೂ ಊಹಿಸಬಹುದು. ರಾಜ್‌ಕುಮಾರ್‌ ನಟನೆಯಲ್ಲಿ ರೆಡ್ಡಿಯವರ ಹತ್ತನೇ ಚಿತ್ರ (ರಾಜ್‌ಗೆ 207ನೇ ಚಿತ್ರ) ‘ಭಕ್ತ ಅಂಬರೀಷ’ ಕೈಗೂಡಬೇಕಿತ್ತು. ಈ ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್‌ ಅವರೇ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಚಿತ್ರಕಥೆಯೂ ಸಿದ್ಧವಾಗಿತ್ತು. ಆಕಾಶ್‌ ಆಡಿಯೊ ಸ್ಟುಡಿಯೊದಲ್ಲಿ ಹಾಡುಗಳ ರೆಕಾರ್ಡಿಂಗ್‌ಗೆ 2000ರ ಜೂನ್‌ 22ರಂದು ಮುಹೂರ್ತ ಕೂಡ ನಡೆದಿತ್ತು. ಹಂಸಲೇಖ ಅವರು 8 ಹಾಡುಗಳಿಗೆ ಸಾಹಿತ್ಯ ಬರೆಯುವ ಜತೆಗೆ ಎರಡು ಕಂದಪದ್ಯಗಳನ್ನು ರಚಿಸಿದ್ದರು. ಈ ಚಿತ್ರದ ಪಾತ್ರಗಳಿಗೆ ಬೇಕಾಗಿದ್ದ ಕಾಸ್ಟೂಮ್‌ಗಳನ್ನು ಪಾರ್ವತಮ್ಮ ಅವರು ಮಾಡಿಸಿಯೂ ಇಟ್ಟಿದ್ದರು. ಚಿಕ್ಕಮಗಳೂರು, ಮೈಸೂರು ಅರಮನೆ ಮತ್ತು ಕೇದಾರನಾಥದಲ್ಲಿ ಚಿತ್ರೀಕರಣ ನಡೆಸಲು ಅನುಮತಿಯನ್ನು ಸಹ ಪಡೆಯಲಾಗಿತ್ತು. ಇದಲ್ಲದೇ ದೇವಸ್ಥಾನ ಸನ್ನಿವೇಶದ ಅದ್ಧೂರಿ ಸೆಟ್‌ ನಿರ್ಮಾಣಕ್ಕೂ ಯೋಜನೆ ಹಾಕಿಕೊಂಡಿದ್ದರಂತೆ. ಎರಡು ದಶಕಗಳ ಹಿಂದೆ ಈ ಚಿತ್ರಕ್ಕಾಗಿ ಪ್ರಾರಂಭಿಕವಾಗಿ ಸುಮಾರು ₹35 ಲಕ್ಷ ಹಣವನ್ನು ಪಾರ್ವತಮ್ಮ ಅವರು ವಿನಿಯೋಗಿಸಿದ್ದರೆಂದರೆ ಸಿನಿಮಾವನ್ನು ಎಷ್ಟೊಂದು ಅದ್ಧೂರಿಯಾಗಿ ನಿರ್ಮಿಸಬೇಕೆಂಬ ಕನಸು ಅವರಿಗಿತ್ತು ನೋಡಿ!

ಈ ಚಿತ್ರ ಮಾಡಲೇಬೇಕೆಂಬ ತುಡಿತ ಡಾ.ರಾಜ್‌ ಅವರಿಗೂ ಇತ್ತು. ಅವರು ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಲೋಕೇಶ್‌ ಜತೆಗೆ ಭಕ್ತ ಅಂಬರೀಷ ನಾಟಕಕ್ಕೆ ಬಣ್ಣಹಚ್ಚಿ ಅಭಿನಯಿಸಿದ್ದರು. ದುರದೃಷ್ಟವಶಾತ್‌ 2000ರ ಜುಲೈ 30ರಂದು ಸ್ಯಾಂಡಲ್‌ವುಡ್‌ಗೆ ಕತ್ತಲು ಕವಿಯುವಂತೆ ಕಾಡುಗಳ್ಳ ವೀರಪ್ಪನ್‌ನಿಂದ ಡಾ.ರಾಜ್‌ ಅಪಹರಣವಾಯಿತು. ನೂರ ಎಂಟು ದಿನಗಳ ವನವಾಸ ಮುಗಿಸಿ ಬರುವಷ್ಟರಲ್ಲಿ ರಾಜ್‌ ಹೈರಾಣಾಗಿದ್ದರು. ಮಂಡಿನೋವು ಕೂಡ ಅವರನ್ನು ಆವರಿಸಿಕೊಂಡಿತ್ತು. ವೀರಪ್ಪನ್‌ ಒತ್ತೆಯಿಂದ ಬಿಡಿಸಿಕೊಂಡ ಬಂದ ಮೇಲೆ ರಾಜ್‌ ಯಾಕೋ ನಟನೆಯಿಂದ ವಿಮುಖರಾಗಿಬಿಟ್ಟರು. ರೆಡ್ಡಿಯವರಿಗೂ ‘ಭಕ್ತ ಅಂಬರೀಷ’ ಒಲಿಯಲೇ ಇಲ್ಲ. ಆನಂತರ ಅದೇ ಸ್ಕ್ರಿಪ್ಟ್‌ ಇಟ್ಟುಕೊಂಡು ಶಿವಣ್ಣ ಮತ್ತು ಪುನೀತ್‌ ಅವರ ನಟನೆಯಲ್ಲಿ ‘ಭಕ್ತ ಅಂಬರೀಷ’ ಸಿನಿಮಾ ಮಾಡಿಸುವ ಕನಸು ಪಾರ್ವತಮ್ಮ ಅವರಿಗೆ ಇತ್ತಂತೆ, ಅದೂ ಯಾಕೋ ಕೈಗೂಡಲೇ ಇಲ್ಲ. ರಾಜ್‌, ಪಾರ್ವತಮ್ಮ, ರೆಡ್ಡಿ ಅವರ ಕನಸಿನ ‘ಭಕ್ತ ಅಂಬರೀಷ’ನನ್ನು ಯಾರಾದರೂ ಪೂರ್ಣಗೊಳಿಸುತ್ತಾರೋ ನೋಡಬೇಕು. 

ಜೀವನ ಸಂಧ್ಯಾಕಾಲದಲ್ಲಿ ಅಂದರೆ 85ರ ಹರೆಯದಲ್ಲಿ ರೆಡ್ಡಿಯವರು ಇಹಲೋಕ ತ್ಯಜಿಸಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಹೆಸರು ಈ ನಾಡಿನಲ್ಲಿ ಚಿರಸ್ಥಾಯಿಯಾಗಿರುವಂತೆ, ರಾಜ್ ಒಡನಾಡಿಯಾಗಿ ಅತ್ಯದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ವಿಜಯ‌ ರೆಡ್ಡಿಯವರ ಹೆಸರೂ ಕನ್ನಡಿಗರ ಮನದಲ್ಲಿ ಚಿರಕಾಲ ಉಳಿಯಲಿದೆ ಎನ್ನುವುದು ನಿಸ್ಸಂಶಯದ ಮಾತಲ್ಲವೇ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು