ಮಂಗಳವಾರ, ಜನವರಿ 31, 2023
18 °C

ಆರೋಗ್ಯದಲ್ಲಿ ಏರುಪೇರು: ಐಸಿಯುವಿನಲ್ಲಿ ನಿರ್ದೇಶಕ ಭಗವಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಕೆ.ಭಗವಾನ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ನಗರದ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

‘ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಭಗವಾನ್‌ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅವರಿಗೆ ಸುಮಾರು 20–25 ವರ್ಷದಿಂದಲೂ ಹೃದಯದಲ್ಲಿ ಸಮಸ್ಯೆ ಇದೆ. ಕೆಲ ದಿನಗಳ ಹಿಂದೆ ಅವರ ಹೃದಯದ ಸಾಮರ್ಥ್ಯ ಕುಂಠಿತವಾಗಿ ಹೃದಯ ವೈಫಲ್ಯವಾಗಿತ್ತು. ಹೃದಯ ಬಡಿತದ ಏರುಪೇರಿನಿಂದಾಗಿ ಉಸಿರಾಟದ ಸಮಸ್ಯೆ ಉದ್ಭವಿಸಿತ್ತು. ವಯಸ್ಸಿನ ಕಾರಣದಿಂದಾಗಿ ಅವರ ಹೃದಯ ಬಹಳ ದುರ್ಬಲವಾಗಿದೆ. ಜೊತೆಗೆ ಶ್ವಾಸಕೋಶದ ಸೋಂಕಿಗೂ ಅವರು ತುತ್ತಾಗಿದ್ದಾರೆ. ಸದ್ಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಗೆ ದಾಖಲಾದ ದಿನಕ್ಕೆ ಹೋಲಿಸಿದರೆ ಸದ್ಯ ಅವರ ಆರೋಗ್ಯ ಸುಧಾರಿಸಿದೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಮಂಗಳವಾರ(ಡಿ.6) ತಿಳಿಸಿದ್ದಾರೆ. 

89 ವರ್ಷದ ಭಗವಾನ್‌ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. ದೊರೆ–ಭಗವಾನ್‌ ಖ್ಯಾತಿಯ ಜೋಡಿ ‘ಹೊಸಬೆಳಕು’, ‘ಕಸ್ತೂರಿ ನಿವಾಸ’ ಸೇರಿದಂತೆ 50ಕ್ಕೂ ಅಧಿಕ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದೆ.

ಜಯದೇವಕ್ಕೆ ರಾಯ್‌: ಹೃದಯಾಘಾತಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಮನ್‌ದೀಪ್‌ ರಾಯ್‌ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಅವರ ಮೂರು ರಕ್ತನಾಳಗಳಲ್ಲಿ ಸಮಸ್ಯೆ ಇದ್ದು, ಹೃದಯವೂ ದುರ್ಬಲವಾಗಿದೆ. ಸದ್ಯ ಅವರು ಐಸಿಯುವಿನಲ್ಲಿದ್ದು, ಶೀಘ್ರದಲ್ಲೇ ವಾರ್ಡ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ’ ಎಂದು ಮಂಜುನಾಥ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು