ಬುಧವಾರ, ಜುಲೈ 6, 2022
22 °C

ಪಾತಕ ಲೋಕಕ್ಕೆ ಮರಿ ಟೈಗರ್‌ ಎಂಟ್ರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ವಿನೋದ್‌ ಪ್ರಭಾಕರ್‌ ಸಿನಿಮಾಗಳ ಪಾತ್ರಕ್ಕೆ ತಕ್ಕಂತೆ ದೇಹ ಹುರಿಗೊಳಿಸಲು ಹಿಂದೇಟು ಹಾಕುವುದಿಲ್ಲ. ಕಠಿಣ ಸಾಹಸ ದೃಶ್ಯಗಳನ್ನು ಮಾಡಲೂ ಹಿಂದಡಿ ಇರುವುದಿಲ್ಲ. ಚಿತ್ರರಂಗದ ಬಹುತೇಕ ನಟರಿಗೆ ಸಿಕ್ಸ್‌ ಪ್ಯಾಕ್‌ ಮಾಡುವುದು ಕ್ರೇಜ್‌ ಆಗಿರುವುದು ಸಹಜ. ಆದರೆ, ‘ರಗಡ್‌’ ಚಿತ್ರದ ಪಾತ್ರಕ್ಕಾಗಿ ಅವರು ಎಯ್ಟ್‌ ಪ್ಯಾಕ್‌ ಮಾಡಿದ್ದರು.

ಆದರೆ, ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ವಿನೋದ್‌ಗೆ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. ಹಾಗೆಂದು ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿಲ್ಲ. ರವಿಗೌಡ ನಿರ್ದೇಶನದ ‘ಶ್ಯಾಡೊ’ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅವರು ‘ರಗಡ್‌’ ಲುಕ್‌ನಲ್ಲಿ ಕಾಣಿಸಿಕೊಂಡಿರುವುದೇ ಹೆಚ್ಚು. ಈ ಚಿತ್ರದಲ್ಲೂ ಅವರದ್ದೇ ಅದೇ ವರಸೆ. ಇದರಲ್ಲಿ ಅವರ ಪಾತ್ರದ ಹೆಸರು ಸಿಎಂ. ಚಿತ್ರದಲ್ಲಿ ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆಯೇ? ಎಂದು ತಲೆಕೆಡಿಸಿಕೊಂಡವರ ಸಂಖ್ಯೆ ದೊಡ್ಡದು. ಸಿಎಂ ಅಂದರೆ ಕಾಮನ್‌ ಮ್ಯಾನ್‌ ಎಂದರ್ಥವಂತೆ. ಈ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಮುಂದಕ್ಕೆ ಹೋಗಿದೆ.

ತರುಣ್‌ ಸುಧೀರ್‌ ನಿರ್ದೇಶನದ ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರದಲ್ಲೂ ಮುಖ್ಯಪಾತ್ರಕ್ಕೆ ವಿನೋದ್‌ ಬಣ್ಣ ಹಚ್ಚಿದ್ದಾರೆ. ಆದರೆ, ಚಿತ್ರತಂಡ ಅವರ ಪಾತ್ರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ನಡುವೆಯೇ ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಡಿ ಹೇಮಾವತಿ ಮುನಿಸ್ವಾಮಿ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೂ ಅವರೇ ನಾಯಕರಾಗಿದ್ದಾರೆ. ಹಿಂದೆ ಈ ಸಂಸ್ಥೆಯು ‘ಕುಲ್ಫಿ’ ಚಿತ್ರವನ್ನು ನಿರ್ಮಾಣ ಮಾಡಿತ್ತು.

ಈಗಾಗಲೇ, ಚಿತ್ರದ ಫೋಟೊಶೂಟ್‌ ಕೂಡ ಮುಗಿದಿದೆಯಂತೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಶುರುವಾಗಿದೆ. ಲಾಕ್‌ಡೌನ್ ಮುಗಿದ ಮೇಲೆ ಚಿತ್ರದ ಟೈಟಲ್‌ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ, ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

‘ಮೂರ್ಕಲ್ ಎಸ್ಟೇಟ್’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪ್ರಮೋದ್ ಕುಮಾರ್ ಅವರೇ ಈ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಥ್ರಿಲ್ಲರ್‌ ಸಿನಿಮಾ ಇದು. ನವೀರಾದ ಪ್ರೇಮಕಥೆಯೂ ಇದರಲ್ಲಿ ಮಿಳಿತವಾಗಿದೆಯಂತೆ.

‘ಭೂಗತ ಲೋಕದ ಸುತ್ತ ಹೆಣೆದ ಕಥೆ ಇದು. ವಿನೋದ್‌ ಪ್ರಭಾಕರ್‌ ಅವರು ಡಾನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲಾಗುವುದು. ಎಲ್ಲಿ ಶೂಟಿಂಗ್‌ ನಡೆಸಬೇಕು ಎಂಬುದು ಇನ್ನೂ ಅಂತಿಮಗೊಂಡಿಲ್ಲ’ ಎಂದು ನಿರ್ದೇಶಕ ಪ್ರಮೋದ್‌ ಕುಮಾರ್ ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

ಕಳೆದ ವರ್ಷ ತೆರೆಕಂಡಿದ್ದ ಗಣೇಶ್ ನಟನೆಯ ‘ಗೀತಾ’ ಸಿನಿಮಾದಲ್ಲಿ ನಟಿಸಿದ್ದ ಮಲಯಾಳದ ನಟಿ ಪಾರ್ವತಿ ಅರುಣ್ ಈ ಚಿತ್ರದ ನಾಯಕಿ. ಇದು ಅವರಿಗೆ ಕನ್ನಡದಲ್ಲಿ ಎರಡನೇ ಚಿತ್ರ. ಇದಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಲಿದ್ದಾರೆ. ಸುಜ್ಞಾನ್ ಅವರ ಕ್ಯಾಮೆರಾ ಕೈಚಳಕ ಇರಲಿದೆ. ಕೆ.ಡಿ. ವೆಂಕಟೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ.


ಪಾರ್ವತಿ ಅರುಣ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು