ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿ ನಾಯಕಿ ನಿಮ್ಮ ಆಶಾ ಮಾತನಾಡಿದಾಗ..

Last Updated 6 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಇವರು ಕಲಾ ಕುಟುಂಬದ ಕುಡಿ. ಆ ಕಾರಣಕ್ಕೆ ನಟನೆ ಅವರಿಗೆ ಬಳುವಳಿಯಾಗಿ ಬಂದಿತ್ತು. ಮನೆಯಲ್ಲಿ ಕಲಾವಿದರ ದಂಡೇ ಇರುವ ಕಾರಣದಿಂದ ನಟನೆಯ ಮೇಲೆ ಆಸಕ್ತಿ ಸಹಜವಾಗಿ ಬೆಳೆದಿತ್ತು. ಹಾಗಾಗಿ ತನ್ನ 5ನೇ ವಯಸ್ಸಿಗೆ ಬಾಲನಟಿಯಾಗಿ ಸಿನಿರಂಗ ಪ್ರವೇಶಿಸುತ್ತಾರೆ. ಇವರು ನಟಿಸಿದ ಮೊದಲ ಸಿನಿಮಾ ‘ತಾಯಿಯ ಮಡಿಲು’.

ಅಂದಿನಿಂದ ಇಂದಿನವರೆಗೆ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಮನ್ನಣೆ ಗಳಿಸಿರುವ ಇವರು ಸಂಗೀತಾ ಅನಿಲ್‌. ರಂಗಭೂಮಿಯ ಧೀಮಂತ ಗುಬ್ಬಿ ವೀರಣ್ಣ ಅವರ ಕುಟುಂಬದ ಕುಡಿ ಈಕೆ. ಸ್ಟಾರ್ ಸುವರ್ಣ ವಾಹಿನಿಯ ‘ಇಂತಿ ನಿಮ್ಮ ಆಶಾ’ ಧಾರಾವಾಹಿಯ ನಾಯಕಿ.

ಬಾಲನಟಿಯಾಗಿ ಸುಮಾರು ಏಳೆಂಟು ಸಿನಿಮಾಗಳಲ್ಲಿ ನಟಿಸಿದ್ದರು. 15ನೇ ವಯಸ್ಸಿನಲ್ಲಿ ‘ಕಾವೇರಿ ತೀರ’ದಲ್ಲಿ ಸಿನಿಮಾದ ಮೂಲಕ ನಾಯಕಿಯಾಗಿಯೂ ಭಡ್ತಿ ಪಡೆದಿದ್ದರು. ಆನಂತರವೂ ನಾಲ್ಕೈದು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ನಡುವೆ ತಂದೆಗೆ ಇಷ್ಟವಿಲ್ಲದ ಕಾರಣ ನಟನೆಗೆ ಬ್ರೇಕ್ ಹಾಕಿ ಓದು ಮುಗಿಸುತ್ತಾರೆ. ಪದವಿ ಮುಗಿದ ಮೇಲೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬರುತ್ತದೆ. ಹೀಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಜನನಿ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿರಿಸಿದ್ದರು ಸಂಗೀತಾ.

ಮದುವೆಯಾದ ನಂತರವೂ ತಂದೆಗೆ ಇಷ್ಟವಿಲ್ಲದ ಕಾರಣದಿಂದ ಕೆಲ ಕಾಲ ನಟನೆಯತ್ತ ಮುಖ ಮಾಡಲಿಲ್ಲ. ಆದರೆ ಗಂಡ ಮತ್ತೆ ನಟಿಸಲು ಪ್ರೋತ್ಸಾಹ ನೀಡಿದ್ದರು. ಹಾಗಾಗಿ ‘ಗಜ’ ಸಿನಿಮಾದ ಮೂಲಕ ನಟನೆಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು ಸಂಗೀತಾ.

ಸಪೋರ್ಟಿಂಗ್ ಪಾತ್ರಗಳಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ ಎನ್ನುವ ಇವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೇವಂತಿ’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.

‘ನನಗೆ ನಟಿಸಿರುವ ಪಾತ್ರಗಳಲ್ಲಿ ‘ಇಂತಿ ನಿಮ್ಮ ಆಶಾ’ ಧಾರಾವಾಹಿಯ ಪಾತ್ರ ತುಂಬಾ ಇಷ್ಟವಾಗಿದೆ. ಇದು ಕೇವಲ ನನಗೆ ಮಾತ್ರವಲ್ಲ, ನನ್ನ ವಯಸ್ಸಿನ ಎಲ್ಲಾ ಮಹಿಳೆಯರಿಗೂ ಇಷ್ಟವಾಗುವ ಪಾತ್ರ. ಅಷ್ಟೇ ಅಲ್ಲದೇ ಇದು ನನ್ನ ವಯಸ್ಸಿಗೆ ತಕ್ಕಂತಹ ಪಾತ್ರ. ಜೊತೆಗೆ ಮತ್ತೆ ನಾಯಕಿಯಾಗಿ ನಟಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ’ ಎನ್ನುವ ಸಂತಸ ಇವರದ್ದು.

‘ಮದುವೆಯಾಗಿ ಮಕ್ಕಳಾದ ಮೇಲೆ ಒಬ್ಬ ಹೆಂಗಸಿನ ಜೀವನ ಹೇಗಿರುತ್ತದೆ, ಆಕೆ ಯಾವೆಲ್ಲಾ ರೀತಿ ಕುಟುಂಬ, ಗಂಡ ಹಾಗೂ ಮಕ್ಕಳನ್ನು ನಿಭಾಯಿಸುತ್ತಾಳೆ. ಸಮಾಜದಲ್ಲಿ ಮನೆಯ ಗೌರವ ಉಳಿಸುವ ಸಲುವಾಗಿ ಆಕೆ ಪಡುವ ಪಾಡು. ಇಷ್ಟೆಲ್ಲದರ ನಡುವೆ ಹೆಣ್ಣು ಬರೀ ನಾಲ್ಕು ಗೋಡೆಗಷ್ಟೇ ಸೀಮಿತವಲ್ಲ. ಅವಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸುವ ನಿಜಜೀವನ ಹಾಗೂ ಸಮಾಜದಲ್ಲಿ ನಡೆಯುವ ಘಟನೆಗಳ ಮೇಲೆ ಬೆಳಕು ಚೆಲ್ಲುವ ಪಾತ್ರ ಆಶಾ’ ಎನ್ನುತ್ತಾ ಇಂತಿ ನಿಮ್ಮ ಆಶಾ ಧಾರಾವಾಹಿಯ ಆಶಾ ಪಾತ್ರದ ವಿವರಣೆ ನೀಡುತ್ತಾರೆ.

ನಟನೆಗೆ ಬಂದಿಲ್ಲ ಎಂದರೆ ಮನೆಯಲ್ಲೇ ಇರುತ್ತಿದ್ದ ಎನ್ನುವ ಇವರಿಗೆ ಅಡುಗೆಮನೆ ಮಾಡುವುದು, ಮನೆ ಸ್ವಚ್ಛ ಮಾಡುವುದು ಇಷ್ಟದ ಕೆಲಸವಂತೆ.

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಗ, ಇನ್ನಷ್ಟು ಅವಕಾಶಗಳು ಸಿಕ್ಕುವ ಸಮಯದಲ್ಲೇ ನಟನೆಗೆ ಬ್ರೇಕ್‌ ಹಾಕಿರುವ ಬಗ್ಗೆ ಈಗ ಒಮ್ಮೊಮ್ಮೆ ಪಶ್ಚಾತ್ತಾಪ ಪಡುತ್ತೇನೆ. ಆದರೆ ಮತ್ತೆ ನಟನೆ ಆರಂಭಿಸಿ ಇದರಲ್ಲಿ ಬದುಕು ಕಟ್ಟಿಕೊಂಡ ಆತ್ಮತೃಪ್ತಿಯಂತೂ ಖಂಡಿತ ಇದೆ ಎನ್ನುವುದು ಸಂಗೀತಾ ಅಭಿಪ್ರಾಯ.

ಸಿನಿಮಾ ಧಾರಾವಾಹಿ ಎರಡರಲ್ಲೂ ನಟಿಸಿ ಅನುಭವ ಹೊಂದಿರುವ ಇವರು ‘ಧಾರಾವಾಹಿಯಲ್ಲಿ ಜನ ಹೆಚ್ಚು ನಮ್ಮನ್ನು ಗುರುತಿಸುತ್ತಾರೆ. ಸಿನಿಮಾ ಎಂದರೆ ಅಲ್ಲಿ ಕೇವಲ ನಾಯಕ ಹಾಗೂ ನಾಯಕಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ಆದರೆ ಧಾರಾವಾಹಿ ಹಾಗಲ್ಲ. ಅದರಲ್ಲೂ ನಮ್ಮ ವಯಸ್ಸಿನವರಿಗೆ ಮನ್ನಣೆ ಸಿಗುವುದು ಧಾರಾವಾಹಿಯಿಂದ. ಜೊತೆಗೆ ನಮ್ಮ ಪ್ರತಿಭೆ ಹೊರ ಹಾಕಲು ಹಾಗೂ ಪ್ರತಿಭೆಯನ್ನು ಜನ ಗುರುತಿಸಲು ಧಾರಾವಾಹಿಯಿಂದಲೇ ಸಾಧ್ಯ. ಅಲ್ಲದೇ ಧಾರಾವಾಹಿಯಿಂದ ನನಗೆ ಆತ್ಮತೃಪ್ತಿ ಸಿಕ್ಕಿದೆ’ ಎನ್ನುತ್ತಾ ಖುಷಿ ವ್ಯಕ್ತಪಡಿಸುತ್ತಾರೆ.

ಈಗೀನ ನಟ–ನಟಿಯರ ಬಗ್ಗೆ ಯಾವುದೇ ಈರ್ಷ್ಯೆ, ಅಸೂಯೆ ಇಲ್ಲದೇ ತುಂಬು ಮನಸ್ಸಿನಿಂದ ಮಾತನಾಡುವ ಸಂಗೀತ ‘ಈಗಿನ ಯುವ ನಟ–ನಟಿಯರನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾಕೆಂದರೆ ಅವರು ನಟನೆಗೆ ಬರುವ ಮೊದಲೇ ಅಭಿನಯ, ನೃತ್ಯ, ಮೇಕಪ್ ಎಲ್ಲವನ್ನೂ ಕಲಿತು ಬಂದಿರುತ್ತಾರೆ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ನಾವೆಲ್ಲಾ ಸುಮ್ಮನೆ ನಟನಾಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದೆವು. ನಂತರ ಅಲ್ಲಿ ಎಲ್ಲವೂ ಕಲಿಯುತ್ತಿದ್ದೆವು. ಈಗ ಹಾಗಿಲ್ಲ. ಎಲ್ಲವೂ ಕಲಿತು ಸಿದ್ಧರಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ’ ಎನ್ನುತ್ತಾರೆ.

‘ನಟನೆ ಎಂದರೆ ಪವಿತ್ರವಾದ ದೇವರ ಉಡುಗೊರೆ. ನಟನೆ ಸುಲಭವಾಗಿ ಎಲ್ಲರಿಗೂ ಒಲಿಯುವುದಿಲ್ಲ. ಕಲಾವಿದರೆಲ್ಲಾ ದೇವರಿಗೆ ಇಷ್ಟವಾಗುವ ಮಕ್ಕಳು. ಪುಣ್ಯವಂತರಿಗಷ್ಟೇ ನಟರಾಗಲು ಅವಕಾಶ ಸಿಗುವುದು. ನಟನಾರಂಗದಲ್ಲಿರುವವರಿಗೆ ಮಾತ್ರ ಈ ಕ್ಷೇತ್ರದಲ್ಲಿ ಸಿಗುವ ಆತ್ಮತೃಪ್ತಿಯ ಅರಿವು ಇರುತ್ತದೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT