ಮತ್ತೆ ಸಂಜು ಮತ್ತು ಮಾಧುರಿ

ಸೋಮವಾರ, ಮಾರ್ಚ್ 18, 2019
31 °C

ಮತ್ತೆ ಸಂಜು ಮತ್ತು ಮಾಧುರಿ

Published:
Updated:
Prajavani

90ರ ದಶಕದ ಜನಪ್ರಿಯ ಜೋಡಿಗಳಲ್ಲಿ ಸಂಜಯ್‌ ದತ್‌ ಹಾಗೂ ಮಾಧುರಿ ದೀಕ್ಷಿತ್‌ ಹೆಸರು ಮರೆಯುವಂತೆಯೇ ಇಲ್ಲ. ‘ಸಾಜನ್‌’, ‘ಇಲಾಕಾ’, ‘ಠಾಣೇದಾರ್‌’, ‘ಖಳನಾಯಕ್‌’ನಂಥ ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದ ಈ ಜೋಡಿ ಇದೀಗ ಎರಡು ದಶಕಗಳ ನಂತರ ಮತ್ತೆ ತೆರೆಯನ್ನು ಹಂಚಿಕೊಂಡಿದೆ.

ಧರ್ಮಾ ಪ್ರೊಡಕ್ಷನ್‌ನ ‘ಕಳಂಕನ್‌’ ಚಿತ್ರದಲ್ಲಿ ಸಂಜಯ್‌ ದತ್‌ ಹಾಗೂ ಮಾಧುರಿ ಮತ್ತೆ ಒಗ್ಗೂಡಿದ್ದಾರೆ. ಮಾಧುರಿಯ ಈ ಪಾತ್ರವನ್ನು ಮೂಲತಃ ಶ್ರೀದೇವಿ ನಿರ್ವಹಿಸಬೇಕಿತ್ತು. ಕಳೆದ ವರ್ಷ ಫೆಬ್ರುವರಿಯಲ್ಲಿ ಶ್ರೀದೇವಿಯವರ ಸಾವಿನ ನಂತರ ಈ ಪಾತ್ರ ಮಾಧುರಿ ಅವರನ್ನು ಅರಸಿ ಬಂದಿತು. 

ಸಂಜೂಬಾಬಾಗೆ ಮಾಧುರಿ ಜೊತೆಗೆ ಮತ್ತೆ ಕೆಲಸ ಮಾಡಿದ್ದು, ಸಂತೋಷವಾಗಿದೆಯಂತೆ. ‘ಅವಕಾಶಗಳು ಸಿಕ್ಕರೆ ಇನ್ನಷ್ಟು ಚಿತ್ರಗಳನ್ನು ಮಾಧುರಿ ಜೊತೆ ಮಾಡಲು ಪ್ರಯತ್ನಿಸುವೆ. ತೆರೆಯ ಮೇಲೆ ಅಥವಾ ಹಿಂದೆ ನಮ್ಮ ಸ್ನೇಹ ಯಾವತ್ತಿಗೂ ಮಾಸಿಲ್ಲ. ಹಾಗಾಗಿ, ನಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ’ ಎಂದೆಲ್ಲ ಹೇಳಿಕೊಂಡಿದ್ದಾರೆ. ಮಾಧುರಿ ಸಹ, ಈಚೆಗೆ ಅನಿಲ್‌ ಕಪೂರ್‌ ಜೊತೆಗೆ ನಟಿಸಿದ್ದನ್ನೂ ನೆನಪಿಸಿಕೊಂಡರು. ‘ಜೀವನದ ಒಂದು ಹಂತದಲ್ಲಿ ಹೀಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಗುವುದೇ ಅಪರೂಪ. ಆದರೆ, ಇಬ್ಬರು ಸಹಕಲಾವಿದರೊಂದಿಗೆ ನಟಿಸುವಾಗ ಹಳೆಯ ದಿನಗಳ ನೆನಪು ಯಾವತ್ತಿದ್ದರೂ ಚೇತೋಹಾರಿ. ಆಗಿನ ಉತ್ಸಾಹ, ಈಗ ಮಾಗಿದ ಅನುಭವ ಎರಡೂ ಸೇರಿಸಿ ಕೆಲಸ ಮಾಡುವ ಸೊಗಸೇ ಬೇರೆ’ ಎಂದು ಧಕ್‌ ಧಕ್‌ ಸುಂದರಿ ಹೇಳಿದ್ದಾರೆ.

‘ಈ ಪಾತ್ರದ ಬಗ್ಗೆ ಮೊದಲು ಕೇಳಿದಾಗ ಗಂಟಲುಬ್ಬಿ ಬಂದಿತು. ಏನೂ ಮಾತಾಡಲಾಗಲಿಲ್ಲ. ಶ್ರೀದೇವಿ ಮಾಡಬೇಕಿರುವ ಪಾತ್ರವನ್ನು ನಿರ್ವಹಿಸುವುದೇ ಗೌರವದ ವಿಷಯ. ಆದರೆ, ಅವರು ಇರಬೇಕಿತ್ತು ಎಂದು ಪ್ರತಿದಿನವೂ ಅನಿಸಿದ್ದು ಸುಳ್ಳಲ್ಲ. ಅವರು ಇಡೀ ಪಾತ್ರವನ್ನೇ ಇನ್ನೊಂದು ಸ್ತರಕ್ಕೆ ಕೊಂಡೊಯ್ಯುತ್ತಿದ್ದರು. ಅವರಂತೆ ನಟಿಸುವುದು ಯಾರಿಂದಲೂ ಆಗದು. ಆದರೆ, ಪಾತ್ರಕ್ಕೆ ನ್ಯಾಯ ಒದಗಿಸಬಲ್ಲೆ ಎಂಬ ವಿಶ್ವಾಸವಿದೆ. ಒಮ್ಮೆ ಕೆಲಸ ಆರಂಭವಾದರೆ
ಪಾತ್ರವೇ ನಾನಾಗುತ್ತೇನೆ. ಅದಲ್ಲದೆ, ಆಲಿಯಾ ಭಟ್‌, ಸೋನಾಕ್ಷಿ ಸಿನ್ಹಾ, ವರುಣ್‌ ಧವನ್‌, ಆದಿತ್ಯ ರಾಯ್‌ ಕಪೂರ್‌ ಇವರೆಲ್ಲರೊಂದಿಗೆ ಕೆಲಸ ಮಾಡಿದ್ದು ಖುಷಿ ತಂದಿದೆ’ ಎಂದೂ ಮಾಧುರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !