ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಗಳ ಅಡ್ಡಾದಲ್ಲಿ ಘೀಳಿಟ್ಟ ‘ಸಲಗ’

Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

‘ಸಲಗ’ –ದುನಿಯಾ ವಿಜಯ್‌ ನಟನೆಯ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಿತ್ರ. ಬೆಂಗಳೂರಿನಲ್ಲಿಯೇ ಸಿನಿಮಾದ ಬಹುತೇಕ ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ ಕುಂಬಳಕಾಯಿಯನ್ನು ಒಡೆದಿದೆ. ಹಿನ್ನೆಲೆ ಸಂಗೀತ ಹೊರತುಪಡಿಸಿದರೆ ಪೋಸ್ಟ್‌ ಪ್ರೊಡಕ್ಷನ್‌ನ ಉಳಿದ ಎಲ್ಲಾ ಕೆಲಸಗಳೂ ಪೂರ್ಣಗೊಂಡಿವೆ. ಮಾರ್ಚ್ ಮೊದಲ ವಾರ ಥಿಯೇಟರ್‌ನಲ್ಲಿ ‘ಸಲಗ’ ಘೀಳಿಡಲಿದೆ.

ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್‌ ನಡೆದಿರುವುದು ಬೆಂಗಳೂರಿನ ರೌಡಿಗಳ ಅಡ್ಡಗಳಲ್ಲಿಯೇ. ಯಾರೊಬ್ಬರೂ ಕೋಪಕ್ಕೆ ಬಲಿಯಾಗುವುದು ದೊಡ್ಡದಲ್ಲ. ಕ್ರೌರ್ಯ ಮಾಡುವುದಕ್ಕೂ ಮುಂಚೆ ಎರಡು ನಿಮಿಷ ರೌಡಿಗಳು ಯೋಚಿಸುವುದಿಲ್ಲ. ತಪ್ಪು ಎಸಗಿದ ಬಳಿಕ ಅವರಲ್ಲೂ ಪಶ್ಚಾತ್ತಾಪ ಮೂಡುತ್ತದೆ. ಜೊತೆಗೆ, ರೌಡಿಯನ್ನು ವ್ಯವಸ್ಥೆ ಹೇಗೆಲ್ಲಾ ಬಳಸಿಕೊಳ್ಳುತ್ತದೆ ಎನ್ನುವುದೇ ಈ ಚಿತ್ರದ ಹೂರಣ. ರೌಡಿಗಳ ಪಶ್ಚಾತ್ತಾಪ, ಕಾರಣ ಮತ್ತು ಪರಿಣಾಮದ ಸುತ್ತ ಕಥೆ ಹೆಣೆಯಲಾಗಿದೆಯಂತೆ.

ಕಥೆಯ ಹುಟ್ಟು ಮತ್ತು ಶೂಟಿಂಗ್‌ ಕುರಿತು ಚಿತ್ರದ ಸಂಭಾಷಣೆಕಾರ ಮಾಸ್ತಿ ವಿವರಿಸುವುದು ಹೀಗೆ: ‘ವಿಜಿ ಬಳಿ ಕಥೆಯ ಎಳೆಯೊಂದಿತ್ತು. ಅದಕ್ಕೆ ಸಲಗ ಎಂದು ಟೈಟಲ್‌ ಇಟ್ಟಿದ್ದ. ರೌಡಿಸಂನ ಇನ್ನೊಂದು ಮುಖ ತೋರಿಸುವ ಆಸೆ ಅವನಲ್ಲಿತ್ತು. ನನ್ನ ಹತ್ತಿರ ಕಥೆಯ ಎಳೆ ಹೇಳಿದ. ಅದನ್ನು ನಾವು ಬೆಳೆಸುತ್ತಾ ಹೋದಂತೆ ಸಲಗ ಸಿನಿಮಾವಾಗಿ ರೂಪತಾಳಿತು’ ಎನ್ನುತ್ತಾರೆ.

‘ರೌಡಿಗಳ ಅಡ್ಡ ಎಲ್ಲರಿಗೂ ಗೊತ್ತಿರುವುದಿಲ್ಲ. ಪಶ್ಚಾತ್ತಾಪದಲ್ಲಿ ಮುಳುಗಿರುವ ರೌಡಿಗಳೊಟ್ಟಿಗೆ ಚರ್ಚಿಸಿ ಅಂತಹ ತಾಣಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಸಿನಿಮಾ ವಾಸ್ತವಕ್ಕೆ ಹತ್ತಿರವಾಗಿದೆ. ಇದು ಕೇವಲ ರೌಡಿಸಂ ಕಥೆಯಲ್ಲ; ಎಮೋಷನ್‌ ಕೂಡ ಇದೆ. ಭೂಗತಲೋಕದೊಳಕ್ಕೆ ಜಿಗಿದು ಅದರಿಂದ ಹೊರಬರಲಾರದೆ ಏಕೆ ಒದ್ದಾಡುತ್ತಿದ್ದಾರೆ. ಕೋಪಕ್ಕೆ ಕೈಕೊಟ್ಟಾಗ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಚಿತ್ರ ಕಟ್ಟಿಕೊಡಲಿದೆ’ ಎಂದು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತಾರೆ.

‘ವಿಜಿ ಒಳ್ಳೆಯ ಮೇಸ್ತ್ರಿ. ಆತನಿಗೂ ಗಾರೆ ಕೆಲಸ ಬರುತ್ತದೆ. ಆದರೆ, ಯಾರ ಬಳಿ ಯಾವ ಕೆಲಸ ಮಾಡಿಸಬೇಕು ಎನ್ನುವ ಅರಿವಿದೆ. ಸದೃಢವಾದ ಮನೆ ಕಟ್ಟುವ ಕಲೆಯೂ ಗೊತ್ತಿದೆ. ಸಲಗದಲ್ಲಿ ಅದನ್ನು ಕಾಣಬಹುದು. ನಟನೆಯನ್ನು ನಿರ್ದೇಶಕರು ಹೇಳಿಕೊಡುತ್ತಾರೆ; ಕಲಾವಿದರು ನಟಿಸಿ ಹೋಗುತ್ತಾರೆ. ನಿರ್ದೇಶನ ದೊಡ್ಡ ಸಾಗರ. ವಿಜಿ ತನ್ನ ವೃತ್ತಿಬದುಕಿನ ಇಡೀ ಅನುಭವವನ್ನು ಈ ಚಿತ್ರಕ್ಕೆ ಧಾರೆ ಎರೆದಿದ್ದಾನೆ’ ಎನ್ನುತ್ತಾರೆ ಮಾಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT