ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನ | ‘ಸೇಂಟ್ ಮಾರ್ಕ್ಸ್ ರೋಡ್’ ಚಿತ್ರದ ನಾಯಕಿ ಸಾರಾ ನಟನಾ ಪಯಣ

Last Updated 23 ಜುಲೈ 2020, 19:45 IST
ಅಕ್ಷರ ಗಾತ್ರ

ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾವೇ ಎರಡು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಂತಸದಲ್ಲಿದ್ದಾರೆ ‘ಸೇಂಟ್ ಮಾರ್ಕ್ಸ್ ರೋಡ್’ ಚಿತ್ರದ ನಾಯಕಿ ಸಾರಾ ವೆಂಕಟೇಶ್‌. ಎಂಜಿನಿಯರ್ ಆಗಿ‌ದ್ದರೂ ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುವ ಬಯಕೆ ಇವರದ್ದು. ನಟನೆಗೆ ಆಸಕ್ತಿ ಹಾಗೂ ಆತ್ಮವಿಶ್ವಾಸವೇ ಮುಖ್ಯ ಎಂಬ ನಿಲುವು ಹೊಂದಿದ್ದು, ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುವ ಒಲವಿದೆ.

_

ಬಾಲ್ಯದಿಂದಲೂ ನಟನೆಯ ಕನಸು ಕಂಡಿದ್ದ ಆಕೆಗೆ ಮನೆಯಲ್ಲಿ ಪ್ರೋತ್ಸಾಹವಿರಲಿಲ್ಲ. ಸಿನಿಮಾ ಕ್ಷೇತ್ರದ ಬಗ್ಗೆ ಸದಾ ಕೇಳಿ ಬರುತ್ತಿದ್ದ ಗಾಸಿಪ್ ಬಗ್ಗೆ ತಲೆ ಕೆಡಿಸಿಕೊಂಡ ತಂದೆ–ತಾಯಿ ನಟನೆಗೆ ಅವಕಾಶ ನೀಡಲಿಲ್ಲ. ಆ ಕಾರಣಕ್ಕೆ ನಟನೆಯ ಕನಸನ್ನು ಬದಿಗೊತ್ತಿ, ಎಂಜಿನಿಯರಿಂಗ್ ಪದವಿ ಪಡೆದು ಎಂಎನ್‌ಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆದರೂ ನಟನೆಯ ಕನಸು ಅವರನ್ನು ಆವರಿಸುತ್ತಲೇ ಇತ್ತು.

ಹೀಗಿರುವಾಗ ಒಮ್ಮೆ ಫೇಸ್‌ಬುಕ್‌ನಲ್ಲಿ ಸಿನಿಮಾ ಆಡಿಷನ್‌ವೊಂದರ ಪೋಸ್ಟ್‌ ನೋಡಿದರು. ನಾನು ಯಾಕೆ ಒಮ್ಮೆ ಪ್ರಯತ್ನ ಮಾಡಬಾರದು ಎಂದುಕೊಂಡು ನಿರ್ದೇಶಕರನ್ನು ಸಂಪರ್ಕಿಸಿದರು. ಆಡಿಷನ್‌ನಲ್ಲಿ ಭಾಗವಹಿಸಿ ಆಮೇಲೆ ನೋಡೋಣ ಎಂದರು ನಿರ್ದೇಶಕರು. ಆಡಿಷನ್ ನೀಡಿದ ಕೆಲವೇ ದಿನಗಳಲ್ಲಿ ಸಿನಿಮಾಕ್ಕೂ ಆಯ್ಕೆಯಾದರು. ಅವರೇ ‘ಸೇಂಟ್ ಮಾರ್ಕ್ಸ್ ರೋಡ್’ ಚಿತ್ರದ ನಾಯಕಿ ಸಾರಾ ವೆಂಕಟೇಶ್‌.

ಬೆಂಗಳೂರಿನ ಸಾರಾ ಸಿನಿಮಾಗಳನ್ನು ನೋಡುತ್ತಲೇ ನಟನೆಯ ಹುಚ್ಚು ಹತ್ತಿಸಿಕೊಂಡವರು. ಯಾವುದೇ ನಟನಾ ಹಿನ್ನೆಲೆಯಿಲ್ಲದೇ ಬಂದ ಇವರಿಗೆ ಮೊದಲ ಸಿನಿಮಾದಲ್ಲಿಯೇ ನಾಯಕಿಯಾಗುವ ಅವಕಾಶ ಸಿಕ್ಕಿತು. ಜೊತೆಗೆ ಮೊದಲ ಸಿನಿಮಾ ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ‘ಸೇಂಟ್ ಮಾರ್ಕ್ಸ್‌ ರೋಡ್’ ಸಿನಿಮಾ ತಮಿಳಿನಲ್ಲಿ ‘ಇವಂಥಾಲ್ ಉತ್ತಮ‌ನ್‌’ ಹೆಸರಿನಲ್ಲಿ ಮೂಡಿಬರಲಿದೆ.

ಚೆನ್ನೈ ಮೂಲದ ಮಹೇಶ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕೂಡ ಅಭಿನಯಿಸುತ್ತಿದ್ದಾರೆ. ಸೇಂಟ್‌ ಮಾರ್ಕ್ಸ್‌ ರಸ್ತೆಯ ಮನೆಯೊಂದರಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದು.

ಚಿತ್ರದಲ್ಲಿ ಸೆಲ್ಫಿ ಕ್ರೇಜ್ ಇರುವ ಬಬ್ಲಿ ಹುಡುಗಿ ಪಾತ್ರ ಸಾರಾ ಅವರದ್ದು. ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ಸಿನಿಮಾ ತಮಿಳು–ಕನ್ನಡ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಸಾರಾ.

‘ಮೊದಲ ದಿನ ಕ್ಯಾಮೆರಾ ಎದುರಿಸಿದಾಗ ತುಂಬಾನೇ ನರ್ವಸ್ ಆಗಿದ್ದೆ. ಅಂದು ಸೆಟ್‌ನಲ್ಲಿ ಸುಮಾರು 90 ಮಂದಿ ಇದ್ದರು. ಅಲ್ಲದೇ ಈ ಎಲ್ಲರೂ ಅನುಭವಿಗಳೇ ಆಗಿದ್ದರು. ನಾನು ಮಾತ್ರ ಹೊಸ ಹುಡುಗಿ. ಆ ಕಾರಣಕ್ಕೆ ಭಯವಾಗಿತ್ತು. ಆದರೆ ನಮ್ಮ ಸಿನಿಮಾ ತಂಡದವರು, ನಿರ್ದೇಶಕರು ನನಗೆ ತುಂಬಾನೇ ಸಹಾಯ ಮಾಡಿದ್ದಾರೆ. ಎರಡನೇ ದಿನದಿಂದ ಸರಾಗವಾಗಿ ನಟಿಸಿಕೊಂಡು ಹೋದೆ. ನಟಿಸಲು ಆಸಕ್ತಿ, ಆತ್ಮವಿಶ್ವಾಸ ಇದ್ದರೆ ನಟನೆ ಎಂದಿಗೂ ಕಷ್ಟವಲ್ಲ’ ಎನ್ನುತ್ತಾ ಆರಂಭದ ಶೂಟಿಂಗ್ ದಿನಗಳನ್ನು ನೆನೆಯುತ್ತಾರೆ.

ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬುವ ಆಸೆ ಇರಿಸಿಕೊಂಡಿರುವ ಇವರಿಗೆ ಬೋಲ್ಡ್‌ ಹಾಗೂ ಎಕ್ಸ್‌ಪೋಸಿಂಗ್ ಪಾತ್ರಗಳಲ್ಲಿ ನಟಿಸುವುದು ಇಷ್ಟವಿಲ್ಲವಂತೆ. ಸದ್ಯಕ್ಕೆ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಅವಕಾಶ ಬರುತ್ತಿದ್ದು ಕನ್ನಡದಲ್ಲಿ ಇನ್ನಷ್ಟು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ ಸಾರಾ.

ಸೇಂಟ್ ಮಾರ್ಕ್ಸ್‌ ರೋಡ್ಸಿನಿಮಾ ಮಾರ್ಚ್‌ನಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಸಾಧ್ಯವಾಗಲಿಲ್ಲ. ಆದರೆ ಈಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಸಿನಿಮಾ ಕ್ಷೇತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಸಾರಾ ‘ನನ್ನಂತೆ ಹೊರಗಿನಿಂದ ಸಿನಿಮಾ ಕ್ಷೇತ್ರಕ್ಕೆ ಬರುವವರು ಇಲ್ಲಸಲ್ಲದ ಮಾತುಗಳನ್ನು ಕೇಳಿಕೊಂಡು ಭಯ ಪಟ್ಟುಕೊಂಡಿರುತ್ತೇವೆ. ಆದರೆ ಸಿನಿಮಾ ಕ್ಷೇತ್ರ ಹಾಗಿಲ್ಲ. ಯಾರೋ ಒಬ್ಬರೊ ಇಬ್ಬರೊ ಮಾಡಿರುವ ತಪ್ಪಿಗೆ ಇಡೀ ಉದ್ಯಮವನ್ನೇ ದೂರುವುದು ತಪ್ಪು. ನನಗೆ ಉತ್ತಮ ಸಿನಿಮಾ ತಂಡ ಸಿಕ್ಕಿದೆ. ತಂಡದವರೆಲ್ಲರೂ ತುಂಬಾನೇ ಸಹಕಾರ ನೀಡುತ್ತಾರೆ. ಒಟ್ಟಾರೆ ಅವರೆಲ್ಲರ ಸಹಕಾರದಿಂದಲೇ ನಾನು ನಟಿ ಎನ್ನಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಖುಷಿಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT