ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ವಿಮರ್ಶೆ| ಬದುಕಿನ ಕಥೆಗೆ ನಗೆಲೇಪ

Last Updated 20 ಡಿಸೆಂಬರ್ 2019, 10:27 IST
ಅಕ್ಷರ ಗಾತ್ರ

ಚಿತ್ರ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಿರ್ಮಾಪಕರು: ದೇವರಾಜ್‌ ಆರ್‌., ಪ್ರಶಾಂತ್‍ ರೆಡ್ಡಿ ಎಸ್., ಜನಾರ್ದನ್‌ ಚಿಕ್ಕಣ್ಣ
ನಿರ್ದೇಶನ: ಅನೂಪ್‌ ರಾಮಸ್ವಾಮಿ ಕಶ್ಯಪ್‌
ತಾರಾಗಣ: ರಿಷಿ, ಧನ್ಯಾ ಬಾಲಕೃಷ್ಣ, ರಂಗಾಯಣ ರಘು, ದತ್ತಣ್ಣ, ಮಿತ್ರ, ಸಿದ್ದು ಮೂಲಿಮನಿ, ಶಾಲಿನಿ

ಪ್ರೀತಿ ಮತ್ತು ಬದುಕಿನ ವಿಷಯವಿಟ್ಟುಕೊಂಡು ಅದಕ್ಕೊಂದಿಷ್ಟು ಹಾಸ್ಯದ ಹೂರಣ ಬೆರೆಸಿದ ಚಿತ್ರಗಳು ಹೊಸತೇನಲ್ಲ.‌‌ ಕಾಮಿಡಿ ಮೂಲಕವೇ ಬದುಕಿನ ತಥ್ಯವನ್ನು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನೂಪ್‌ ರಾಮಸ್ವಾಮಿ ಕಶ್ಯಪ್. ಪ್ರೀತಿ, ಬದುಕಿನ ಲಾಲಿತ್ಯ, ರಾಜಕೀಯ ದೊಂಬರಾಟ ಮತ್ತು ಜನರ ಕೊಳ್ಳುಬಾಕತನವನ್ನು ಒಂದೇ ಸೂತ್ರಕ್ಕೆ ಅಳವಡಿಸುವ ಪ್ರಯತ್ನ ಅವರದು.

ಗಂಭೀರವಾಗಿ ಹಾಸ್ಯವನ್ನು ನೋಡುವ ಪ್ರೇಕ್ಷಕರಿಗೆ ಈ ಚಿತ್ರ ಪಥ್ಯವಾಗಲಾರದು. ಹಾಸ್ಯದ ಸ್ವರೂಪದ ಅಗತ್ಯವಿಲ್ಲದೆ ಕೇವಲ ಮನರಂಜನೆಯನ್ನಷ್ಟೆ ಅಪೇಕ್ಷಿಸುವವರಿಗೆ ಇಷ್ಟವಾಗಬಲ್ಲದು. ಅನೂಪ್‌ ಕಲ್ಪಿಸಿಕೊಂಡಿರುವ ಕಥೆ ಸೊಗಸಾಗಿದೆ. ತನ್ನ ಪ್ರೇಯಸಿಯು ಕಳೆದುಕೊಂಡ ಚಿನ್ನದ ಸರವನ್ನು ಮರಳಿ ಖರೀದಿಸಿ ಆಕೆಗೆ ಒಪ್ಪಿಸಲು ಮುಂದಾಗುವ ಹುಡುಗನ ಕಥೆಯಿದು. ಆದರೆ, ಹಣಕ್ಕಾಗಿ ಆ ಹುಡುಗನ ಹೋರಾಟದ ಕಥನ ದಿಕ್ಕಾಪಾಲಾಗಿದೆ. ವಿವಿಧ ಪಾತ್ರಗಳ ಮೂಲಕ ಕೌಟುಂಬಿಕ ಮೌಲ್ಯ ಬಿಂಬಿಸುವ ಭರದಲ್ಲಿಯೇ ಕ್ರಿಕೆಟ್‌ ಬೆಟ್ಟಿಂಗ್‌ನಂತಹ ಕಾನೂನುಬಾಹಿರ ಚಟುವಟಿಕೆಯನ್ನೂ ತೆರೆಯ ಮೇಲೆ ಚಿತ್ರಿಸಿರುವ ನಿರ್ದೇಶಕರ ಆಶಯವೇ ಗೊಂದಲಕಾರಿಯಾಗಿದೆ.

ವೇದಾಂತ್‌ (ರಿಷಿ) ಮತ್ತು ಜಾಹ್ನವಿ (ಧನ್ಯಾ) ಪ್ರೇಮಿಗಳು. ಜಾಹ್ನವಿಯ ಜನ್ಮದಿನಕ್ಕೆ ಆಕೆಯ ಅಮ್ಮ ಚಿನ್ನದ ಸರ ಕೊಡಿಸುತ್ತಾರೆ. ನಾಯಕ ರೌಡಿಗಳೊಟ್ಟಿಗೆ ಸೆಣಸಾಟ ನಡೆಸುವಾಗ ನಾಯಕಿಯ ಸರ ಕಳೆದುಹೋಗುತ್ತದೆ. ಹೊಸ ಸರ ಖರೀದಿಸಿ ಆಕೆಗೆ ಕೊಡಲು ವೇದಾಂತ್‌ ಬಳಿ ದುಡ್ಡಿರುವುದಿಲ್ಲ. ಹಣಕ್ಕಾಗಿ ಆತನದು ದಣಿವರಿಯದ ಅಲೆದಾಟ. ಕೊನೆಗೆ, ಅವನ ನೆರವಿಗೆ ಬರುವುದು ರಾಜಕಾರಣಿ. ಸಾರ್ವಜನಿಕರಿಗೆ ಯಾವ ಆಫರ್‌ ನೀಡಿ ಆತ ಹಣ ಸಂಪಾದಿಸುತ್ತಾನೆ ಎನ್ನುವುದು ಚಿತ್ರದ ತಿರುಳು.

ಸಡಿಲ ಚಿತ್ರಕಥೆ ಮತ್ತು ನೀರಸ ನಿರೂಪಣೆಯಿಂದ ಮೊದಲಾರ್ಧವು ನೋಡುಗರ ತಾಳ್ಮೆಗೆ ಸವಾಲು ಎಸೆಯುತ್ತದೆ. ದ್ವಿತೀಯಾರ್ಧದಲ್ಲಿ ಈ ಲೋಷ ಮುಚ್ಚುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಬಡ್ಡಿ, ಬೆಟ್ಟಿಂಗ್‌ ವ್ಯವಹಾರ ನಡೆಸುವ ಒಂಟಿ ಕೈ ಸೀನನಾಗಿ ಬರುವ ರಂಗಾಯಣ ರಘು ಚಿತ್ರದ ನಿಜವಾದ ಹೀರೊ. ತಮ್ಮ ನಟನೆ ಮೂಲಕ ತೆರೆಯನ್ನು ಆವರಿಸಿಕೊಳ್ಳುವ ಅವರು ನಗೆಯುಕ್ಕಿಸುತ್ತಾರೆ.

ವಿಘ್ನೇಶ್‍ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ. ಮಿಥುನ್ ಮುಕುಂದನ್ ಸಂಗೀತ ಸಂಯೋಜನೆಯ ಒಂದೂ ಹಾಡು ಮನದಲ್ಲಿ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT