ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧುರಿ ದೀಕ್ಷಿತ್ ನೆನಪಿಸಿದ ಶ್ರದ್ಧಾ ಶ್ರೀನಾಥ್

Last Updated 12 ಮಾರ್ಚ್ 2019, 7:43 IST
ಅಕ್ಷರ ಗಾತ್ರ

ಚಂದನವನದ ಚೆಲುವೆ ಶ್ರದ್ಧಾ ಶ್ರೀನಾಥ್ ತಮ್ಮ ಪ್ರತಿಭೆಯ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗವಷ್ಟೇ ಅಲ್ಲ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಟೈಗ್ಮಾನ್ಷು ಧುಲಿಯಾ ನಿರ್ದೇಶನದ ‘ಮಿಲನ್ ಟಾಕೀಸ್’ ಮೂಲಕ ಶ್ರದ್ಧಾ ಹಿಂದಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಈ ಸಿನಿಮಾದ ‘ಜಾಬ್‌ಲೆಸ್’ ಹಾಡು ಈಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ. ‘ಮೈ ತೋ ಹೂ ಜಾಬ್‌ಲೆಸ್’ ಎನ್ನುವ ಸಾಲುಗಳಿಗೆ ಹೆಜ್ಜೆ ಹಾಕಿರುವ ಶ್ರದ್ಧಾ, ಮಧ್ಯಮವರ್ಗದ ಹುಡುಗಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಾರೆ. ಸಿಂಪಲ್ ಚೂಡಿದಾರ್‌ನಲ್ಲಿ ಸೀದಾಸಾದಾ ಹುಡುಗಿಯಾಗಿ ಕಾಣಿಸಿಕೊಂಡಿರುವ ಶ್ರದ್ಧಾ ಒಂದು ಕೋನದಲ್ಲಿ 90ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನಾಳಿದ ಮಾಧುರಿ ದೀಕ್ಷಿತ್ ಅವರನ್ನು ನೆನಪಿಸುವಂತಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

‘ಹಮ್ ಆಪ್ಕೆ ಹೈ ಕೌನ್’ ಸಿನಿಮಾದ ‘ಚಾಕಲೇಟ್ ಲೈಮ್ ಜ್ಯೂಸ್’ ಹಾಡಿಗೆಮಾಧುರಿ ದೀಕ್ಷಿತ್ ಜೀವತುಂಬಿದಂತೆ ‘ಜಾಬ್‌ಲೆಸ್’ ಹಾಡಿಗೆ ಶ್ರದ್ಧಾ ಜೀವತುಂಬಿದ್ದಾರೆ. ಪ್ರೇಮದ ಉನ್ಮಾದದಲ್ಲಿ ಅಂದು ಮಾಧುರಿ ಮಾಡಿದ್ದ ತುಂಟತನಗಳನ್ನು ಜಾಬ್‌ಲೆಸ್ ಹಾಡಿನಲ್ಲಿ ಶ್ರದ್ಧಾ ಕೂಡಾ ಮಾಡಿದ್ದಾರೆ. ಪ್ರಿಯತಮ ಹಾರಿಬಿಡುವ ಗಾಳಿಪಟ ತಂದೆಯ ಕೈಗೆ ಸಿಕ್ಕಾಗ ಅದನ್ನು ತಕ್ಷಣವೇ ಕಸಿದುಕೊಂಡು ಬರುವುದು, ತಲೆದಿಂಬನ್ನು ಅವಚಿಕೊಂಡು, ಅದರೊಳಗಿನ ಹತ್ತಿಯನ್ನು ಹರಡುವುದು... ಹೀಗೆ ಅನೇಕ ದೃಶ್ಯಗಳಲ್ಲಿ ಶ್ರದ್ಧಾ ಅವರ ನಟನೆ ಮಾಧುರಿಯನ್ನು ನೆನಪಿಸುವಂತಿದೆ.

ಶ್ರದ್ದಾಗೆ ನಾಯಕನಾಗಿ ಅಲಿ ಫಜಲ್ ಕಾಣಿಸಿಕೊಂಡಿದ್ದು, ಅಪ್ಪಟ ಪ್ರೇಮಿಯಾಗಿ ಶ್ರದ್ದಾಳನ್ನು ಆರಾಧಿಸುವ ಪಾತ್ರದಲ್ಲಿ ಅಲಿ ಗಮನ ಸೆಳೆಯುತ್ತಾರೆ. ‘ಜಾಬ್‌ಲೆಸ್’ ಹಾಡನ್ನು ಆಕೃತಿ ಕಕರ್ ಬರೆದಿದ್ದು, ಬಾಲಿವುಡ್‌ನಲ್ಲಿ ಇದು ಅವರ ಮೊದಲ ಹಾಡು.

‘ಮಿಲನ್ ಟಾಕೀಸ್’ ಜತೆಜತೆಗೆ ಶ್ರದ್ಧಾ, ಕಾಲಿವುಡ್‌ನಲ್ಲಿ ‘ನೀರ್ಕೊಂಡ ಪಾರವೈ’ ಸಿನಿಮಾದಲ್ಲಿ ಅಜಿತ್ ಜತೆಗೆ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ ‘ಪಿಂಕ್’ ಸಿನಿಮಾದ ರಿಮೇಕ್ ಆಗಿದ್ದು, ತಾಪ್ಸಿ ಪನ್ನು ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಶ್ರದ್ದಾ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT