ಮಂಗಳವಾರ, ಏಪ್ರಿಲ್ 20, 2021
32 °C

ನಿಶ್ಯಕ್ತ ಸಿಂಗನ ಬಿಲ್ಡಪ್‌ ಪ್ರಸಂಗ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಸಿಂಗ ಅಸಹಾಯಕ ಹೆಣ್ಣುಮಕ್ಕಳ ಪಾಲಿನ ಸೇವಕ. ಒಮ್ಮೆ ಮದ್ಯವ್ಯಸನಿಯೊಬ್ಬನ ಪತ್ನಿಗೆ ಅನಾರೋಗ್ಯ ಕಾಡುತ್ತದೆ. ಆತನ ಬಳಿ ದುಡ್ಡಿರುವುದಿಲ್ಲ. ಆತ ಹಣಕ್ಕಾಗಿ ಮೊರೆಹೋಗುವುದು ಸಿಂಗನ ಬಳಿಗೆ. ದೇಗುಲದ ಹುಂಡಿಯಿಂದ ಹಣ ಕಳವು ಮಾಡಿ ಆತನಿಗೆ ನೆರವಾಗುತ್ತಾನೆ ಸಿಂಗ. ಮತ್ತೆ ಹಣ ದೊರೆತಾಗ ಹುಂಡಿಗೆ ತಪ್ಪುಕಾಣಿಕೆ ಹಾಕುತ್ತಾನೆ.

ಕಳ್ಳತನ ಮಾಡುವುದು ಅಪರಾಧ. ಅದರಲ್ಲೂ ದೇವರ ಹುಂಡಿ ಹಣ ಕದಿಯುವುದು ತಪ್ಪಲ್ಲವೇ? ಇಂತಹ ತರ್ಕದ ಪ್ರಶ್ನೆಗಳಿಗೆ ಅರ್ಥ ಹುಡುಕುತ್ತಾ ಹೋದರೆ ‘ಸಿಂಗ’ ಚಿತ್ರವನ್ನು ನೋಡುವುದು ಕಷ್ಟವಾಗುತ್ತದೆ.

ಮನದಲ್ಲಿ ಧುತ್ತನೆ ಹುಟ್ಟುವ ಇಂತಹ ತರ್ಕದ ಪ್ರಶ್ನೆಗಳನ್ನು ಬದಿಗೆ ಸರಿಸಿ ಸಿನಿಮಾ ನೋಡುತ್ತೇವೆ ಎಂದರೂ ಅಸಹಜ ದೃಶ್ಯಗಳು ತುಸು ರೇಜಿಗೆ ಹುಟ್ಟಿಸುತ್ತವೆ. ನಿರ್ದೇಶಕ ವಿಜಯ್‌ ಕಿರಣ್‌ ಅವರು ಅಮ್ಮ– ಮಗನ ನಡುವಿನ ಮಮತೆಯ ಆಶಯವನ್ನು ಕಥೆಯಲ್ಲಿ ಹೇಳುವ ಉದ್ದೇಶ ಹೊಂದಿದ್ದರೂ ಅದು ನೆತ್ತರ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

ಕ್ರಿಮಿನಲ್‌ ಆರೋಪ ಹೊತ್ತವನು ಸಿಂಗ. ಅವನ ಅಮ್ಮನದು ಮೃದು ಸ್ವಭಾವ. ಅಪ್ಪ ಮಾತ್ರ ರೆಬೆಲ್‌. ಮಗನಿಗೆ ಮದುವೆ ಮಾಡಿಸುವುದೇ ತಾಯಿಯ ಏಕೈಕ ಗುರಿ. ಖಳನಟ ರುದ್ರ ಏನಾಗುತ್ತಾನೆ, ರೆಬೆಲ್‌ ಯಾರು ಎನ್ನುವುದನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು.

ಪ್ರಾಮಾಣಿಕ ಅಧಿಕಾರಿಗಳ ಜೀವವನ್ನು ಕಿತ್ತುತಿನ್ನುವ ರಾಜಕೀಯ ಮೃಗಗಳ ಕ್ರೌರ್ಯವೂ ಕಥೆಯ ಭಾಗವಾಗಿದೆ. ಆದರೆ, ಸಮಸ್ಯೆ ಇರುವುದು ನಿರೂಪಣೆಯಲ್ಲಿ. ಬಿಲ್ಡಪ್‌ಗಾಗಿ ಬರೆದ ಡೈಲಾಗ್‌ಗಳು, ಹೊಡೆದಾಟದ ಅಬ್ಬರದಲ್ಲಿ ಸಿನಿಮಾದ ಆಶಯ ಸದ್ದಿಲ್ಲದೆ ಹಿನ್ನೆಲೆಗೆ ಸರಿದುಬಿಡುತ್ತದೆ.

ಪಾತ್ರದ ವೈಭವೀಕರಣದಿಂದಾಗಿ ನಾಯಕನ ಪಾತ್ರ ಹಲವು ದೃಶ್ಯಗಳಲ್ಲಿ ಕುಸಿಯುತ್ತದೆ. ಇನ್ನೊಂದೆಡೆ ಈ ವೈಭವೀಕರಣ ತಾಳಿಕೊಂಡು ಪ್ರೇಕ್ಷಕರಿಗೆ ರಂಜನೆ ಉಣಬಡಿಸುವಷ್ಟು ಶಕ್ತಿಯೂ ಚಿತ್ರಕಥೆಗೆ ಇಲ್ಲ. ದುಷ್ಟನನ್ನು ಶಿಕ್ಷಿಸುವ ಹೊಣೆಯನ್ನು ನಿರ್ದೇಶಕರು ಕಾನೂನಿನ ಚೌಕಟ್ಟಿಗೆ ನೀಡುವುದೇ ಇಲ್ಲ. ನಾಯಕನ ತಾಯಿಯ ಕೈಗೆ ಚಾಕು ಕೊಟ್ಟು ಉತ್ತರ ನೀಡುತ್ತಾರೆ. ಚಿತ್ರಕಥೆಗೊಂದು ತಾತ್ವಿಕ ತಳಹದಿ ಇಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.

ಚಿತ್ರವನ್ನು ತಾಂತ್ರಿಕವಾಗಿಯೂ ಅಚ್ಚುಕಟ್ಟಾಗಿ ಕಟ್ಟಿಕೊಡಬೇಕೆಂಬ ನಿರ್ದೇಶಕರ ಹಂಬಲಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಕಥೆಯನ್ನು ಅನಗತ್ಯವಾಗಿ ಎಳೆದಾಡಲು ಅವರು ಹೋಗಿಲ್ಲ. ಆದರೆ, ಆಳವಾಗಿ ಜನರ ಮನಸ್ಸಿಗೆ ನಾಟುವಂತೆ ಕಟ್ಟಿಕೊಡುವ ಪ್ರಯತ್ನವನ್ನೂ ಮಾಡಿಲ್ಲ. ಹೆತ್ತ ಮಗನ ಜೀವ ಉಳಿಸಲು ಸತ್ಯ ಬೋಧಿಸಿದ ಅಮ್ಮನೇ ಖಳನಟನನ್ನು ಕೊಲೆ ಮಾಡುವುದು ದುರ್ಬಲ ಪರಿಕಲ್ಪನೆಯೇ ಸರಿ. 

ಚಿರು ಅವರ ಭಾವುಕತೆ, ರವಿಶಂಕರ್‌ ಅವರ ಡೈಲಾಗ್‌ನಲ್ಲಿ ಅದೇ ಹಳೆಯ ಗುಣವಿದೆ. ಅದಿತಿ ಪ್ರಭುದೇವ ಅವರದು ಅಚ್ಚುಕಟ್ಟಾದ ನಟನೆ.   

ನಟನೆ ಮತ್ತು ಸನ್ನಿವೇಶಗಳಲ್ಲಿನ ಕೊರತೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ನೀಗಿಸಲು ಛಾಯಾಗ್ರಾಹಕ ಕಿರಣ್‌ ಹಂಪಾಪುರ ಮತ್ತು ಸಂಗೀತ ನಿರ್ದೇಶಕ ಧರ್ಮ ವಿಶ್‌ ಶ್ರಮಿಸಿದ್ದಾರೆ.

ಚಿತ್ರ: ಸಿಂಗ

ನಿರ್ಮಾಣ: ಉದಯ್‌ ಕೆ. ಮೆಹ್ತಾ

ನಿರ್ದೇಶನ: ವಿಜಯ್‌ ಕಿರಣ್‌

ತಾರಾಗಣ: ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್, ತಾರಾ, ಶಿವರಾಜ್‌ ಕೆ.ಆರ್‌. ಪೇಟೆ, ಅರುಣಾ ಬಾಲರಾಜ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು