ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ

Last Updated 16 ಫೆಬ್ರುವರಿ 2022, 4:16 IST
ಅಕ್ಷರ ಗಾತ್ರ

ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಬುಧವಾರ ಬೆಳಿಗ್ಗೆ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಬಪ್ಪಿ ಲಹಿರಿ ಮುಂಬೈಯ ಜುಹೂ ಪ್ರದೇಶದ ‘ಕೃತಿ ಕೇರ್’ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಬಪ್ಪಿ ಲಹಿರಿ ಅವರು ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡಿದ್ದ ಅವರನ್ನು ಫೆಬ್ರುವರಿ 15ಕ್ಕೆ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗಿತ್ತು ಎಂದು ವೈದ್ಯ ಡಾ.ದೀಪಕ್ ನಮ್‌ಜೋಶಿ ತಿಳಿಸಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

‘ಬಪ್ಪಿ ದಾ’ ಎಂದೇ ಚಿತ್ರೋದ್ಯಮದಲ್ಲಿ ಜನಪ್ರಿಯರಾಗಿದ್ದ ಇವರು 1970 ಹಾಗೂ 80ರ ದಶಕದ ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಡಿಸ್ಕೊ ಪ್ರಕಾರದ ನೃತ್ಯ ಸಂಗೀತವನ್ನು ಭಾರತಕ್ಕೆ ಪರಿಚಯಿಸಿದ ಗಾಯಕರಲ್ಲಿ ಬಪ್ಪಿ ಲಹಿರಿ ಕೂಡ ಒಬ್ಬರು. ಹೀಗಾಗಿಯೇ ಅವರು ‘ಡಿಸ್ಕೊ ಕಿಂಗ್’ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಅನೇಕ ಚಿತ್ರ ತಾರೆಯರಿಗೆ ಧ್ವನಿ ನೀಡಿದ್ದರು.

ಸಂಗೀತ ನಿರ್ದೇಶನ, ಗಾಯನದ ಜೊತೆಗೆ ಚಿನ್ನದ ಆಭರಣಗಳು, ಭಿನ್ನ ಉಡುಗೆ, ಗಾಢ ಬಣ್ಣದ ಕನ್ನಡಕದಿಂದಲೂ ಬಪ್ಪಿ ಅಭಿಮಾನಿಗಳ ಗಮನ ಸೆಳೆದಿದ್ದರು.

ಲಹಿರಿ ಅವರು ಪತ್ನಿ, ಮಗ ಬಪ್ಪ ಲಹಿರಿ, ಪುತ್ರಿ ರೆಮಾ ಲಹಿರಿ, ಮೊಮ್ಮಗು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಬಪ್ಪಿ ಅವರಿಗೆ ಕೋವಿಡ್ ತಗುಲಿತ್ತು. ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಬಪ್ಪಿ ಲಹಿರಿ – ಪಿಟಿಐ ಸಂಗ್ರಹ ಚಿತ್ರ
ಬಪ್ಪಿ ಲಹಿರಿ – ಪಿಟಿಐ ಸಂಗ್ರಹ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT