ಭಾನುವಾರ, ಆಗಸ್ಟ್ 1, 2021
26 °C
ಅಂತರ ಕಾಯ್ದುಕೊಂಡು ಸಿನಿಮಾ ವೀಕ್ಷಿಸುವ 'ಡ್ರೈವ್-ಇನ್ ಥಿಯೇಟರ್'

ಕಾರಿನಲ್ಲೇ ಕುಳಿತು ಸಿನಿಮಾ ವೀಕ್ಷಣೆ ಅವಕಾಶ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಚಿತ್ರಮಂದಿರಗಳು ಹಾಗೂ ಮಾಲ್‍ಗಳಲ್ಲಿ ತಾತ್ಕಾಲಿಕವಾಗಿ ಸಿನಿಮಾ ಪ್ರದರ್ಶನ ನಿರ್ಬಂಧಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಸ್ಟೆಪಿನ್-ಔಟ್ ಮೂವಿ ನೈಟ್ಸ್ ಎಂಬ ಸಂಸ್ಥೆಯು ಸಿನಿಪ್ರಿಯರು ಅಂತರ ಕಾಯ್ದುಕೊಂಡು, ಕಾರಿನಲ್ಲೇ ಕುಳಿತು ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಿದೆ.

ತೆರೆದ ಜಾಗವೊಂದರಲ್ಲಿ ದೊಡ್ಡ ಪರದೆಯನ್ನು ಅಳವಡಿಸಲಾಗುತ್ತದೆ. ಒಂದು ಸಿನಿಮಾ ಪ್ರದರ್ಶನಕ್ಕೆ ನಿಗದಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ. ಪರದೆ ಮೇಲೆ ಪ್ರದರ್ಶನಗೊಳ್ಳುವ ಸಿನಿಮಾಗಳನ್ನು ಕಾರಿನಲ್ಲಿ ಕುಳಿತು ಪ್ರೇಕ್ಷಕರು ಆನಂದಿಸಬಹುದು.

ಸಂಸ್ಥೆ ಈ ಹಿಂದೆ ಇದೇ ಮಾದರಿಯಲ್ಲಿ ಟೇಬಲ್‍ಗಳ ಅಳವಡಿಕೆ ಅಥವಾ ನೆಲಹಾಸಿನ ಮೇಲೆ ಕುಳಿತು ಸಿನಿಮಾ ಪ್ರದರ್ಶಿಸುತ್ತಿತ್ತು. ಆದರೆ, ಕೊರೊನಾ ಸೋಂಕು ಇರುವ ಕಾರಣ ಪ್ರೇಕ್ಷಕರ ಆರೋಗ್ಯ ದೃಷ್ಟಿಯಿಂದ ಅಂತರ ಕಾಯ್ದುಕೊಂಡು ಕೆಲವೇ ಮಂದಿಗೆ ಚಲನಚಿತ್ರ ವೀಕ್ಷಣೆಗೆ ಸಂಸ್ಥೆ ವಿನೂತನ ಪ್ರಯತ್ನ ಮಾಡಿದೆ.

'ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಸ್ಯಾನಿಟೈಸರ್, ಮಾಸ್ಕ್, ದೇಹದ ಉಷ್ಣಾಂಶ ತಪಾಸಣೆ ಹಾಗೂ ಸಂಪರ್ಕರಹಿತ ಭೋಜನ ವ್ಯವಸ್ಥೆ ಇರಲಿದೆ. ಮೊಬೈಲ್ ಆ್ಯಪ್ ಮೂಲಕ ಪ್ರೇಕ್ಷಕರು ಭೋಜನ, ತಿಂಡಿತಿನಿಸುಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಒಂದು ಪ್ರದರ್ಶನಕ್ಕೆ ನಿಗದಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು' ಎಂದು ಸ್ಟೆಪಿನ್-ಔಟ್ ಮೂವಿನೈಟ್ಸ್ ಸಂಸ್ಥೆಯ ಯೋಜನಾ ಮುಖ್ಯಸ್ಥ ಸುಶೇನ್ ಕಕ್ಕರ್ ತಿಳಿಸಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಟಿಂಬ್ರೆ ಗೋದ್ರೆಜ್ ರಾಯಲ್ ವುಡ್ಸ್ ನಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ಮೊದಲ ಹಂತದಲ್ಲಿ ಜುಲೈ ತಿಂಗಳ ವಾರಾಂತ್ಯಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಯೋಜನೆ ರೂಪಿಸಿದೆವು. ಜು.3ರಿಂದ ಮೊದಲ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಶನಿವಾರ ಮತ್ತು ಭಾನುವಾರ ಕೂಡ ಪ್ರದರ್ಶನ ನಡೆದಿದೆ. ಜು.9, 10, 11 ಹಾಗೂ 16ರಂದೂ ಪ್ರದರ್ಶನಗಳು ಇರಲಿವೆ. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ವೀಕ್ಷಣೆಗೆ ಹೆಚ್ಚು ಮಂದಿಗೆ ಅವಕಾಶ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಸೋಂಕಿನ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಜವಾಬ್ದಾರಿ’ ಎಂದರು. 

ಏನಿದು ಡ್ರೈವ್-ಇನ್ ಥಿಯೇಟರ್?

1933ರಲ್ಲಿ ರಿಚರ್ಡ್ ಹಾಲಿಂಗ್ಸ್‍ಹೆಡ್ ಎಂಬಾತ ಅಮೆರಿಕದ ನ್ಯೂಜೆರ್ಸಿಯಲ್ಲಿ 'ಡ್ರೈವ್‍ಇನ್ ಥಿಯೇಟರ್' ಅನ್ನು ಮೊದಲ ಬಾರಿಗೆ ತೆರೆದಿದ್ದ. ಕುಟುಂಬದೊಂದಿಗೆ ವಾರಾಂತ್ಯ ಕಳೆಯಲು ಇಚ್ಛಿಸುವವರಿಗಾಗಿ ಈ ಪರಿಕಲ್ಪನೆ ಹುಟ್ಟುಕೊಂಡಿತು. ಕಾರುಗಳನ್ನು ನಿಲುಗಡೆ ಮಾಡುವ ಸ್ಥಳವನ್ನೇ ಸಿನಿಮಾ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗಿತ್ತು. ಇದು 50-60ರ ದಶಕದಲ್ಲಿ ಹೆಚ್ಚು ಪ್ರಚಲಿತವಾಗಿತ್ತು.

ಪ್ರೇಕ್ಷರಿಂದಲೇ ಸಿನಿಮಾ ಆಯ್ಕೆ

'ಸಿನಿಪ್ರಿಯರಿಗೆ ತಮ್ಮ ನೆಚ್ಚಿನ ಚಲನಚಿತ್ರಗಳ ಆಯ್ಕೆಗೆ ಸಂಸ್ಥೆಯ ಫೇಸ್‍ಬುಕ್ ಪುಟ SteppinOut Movie Nightsದಲ್ಲಿ ಅವಕಾಶ ಕಲ್ಪಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಚಲನಚಿತ್ರಗಳನ್ನು ನಿಗದಿತ ದಿನದಂದು ಪ್ರದರ್ಶಿಸಲಾಗುವುದು. ಸಿನಿಮಾ ವೀಕ್ಷಣೆಗೆ ಮೊದಲೇ ನೋಂದಣಿ ಮಾಡಿಕೊಂಡು, ಸ್ಥಳ ಕಾಯ್ದಿರಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಿಗೆ ಜನ ಒಲವು ತೋರಿದ್ದಾರೆ. ಅನಿಮೇಷನ್, ಕಾಮಿಡಿ, ಥ್ರಿಲ್ಲರ್, ಹಾರರ್ ಸಿನಿಮಾಗಳನ್ನು ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಒಂದು ವೇಳೆ ಕನ್ನಡ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾದರೆ ಕನ್ನಡ ಸಿನಿಮಾಗಳ ಪ್ರದರ್ಶನವೂ ಇರಲಿದೆ' ಎಂದು ಸುಶೇನ್ ಮಾಹಿತಿ ನೀಡಿದರು.

ಅಂಕಿ ಅಂಶ

3 ಮಂದಿ
ಒಂದು ಕಾರಿನಲ್ಲಿ ಕೂರಲು ಅವಕಾಶ

17
ಪ್ರದರ್ಶನವೊಂದಕ್ಕೆ ನಿಗದಿತ ಕಾರುಗಳು

50 ಮಂದಿ
ಒಂದು ಸಿನಿಮಾ ವೀಕ್ಷಣೆಗೆ ಅವಕಾಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು