ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನು ಸೂದ್‌ಗಾಗಿ ಮನೆಯ ಟಿವಿಯನ್ನೇ ಕುಟ್ಟಿ ಪುಡಿ ಮಾಡಿದ ಬಾಲಕ... ಕಾರಣ ಗೊತ್ತೇ?

ಅಕ್ಷರ ಗಾತ್ರ

ಲಾಕ್‌ಡೌನ್‌ ಸಮಯದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದಾಗಿ ನಟ ಸೋನು ಸೂದ್‌ ಅವರು ರಿಯಲ್ ಹೀರೊ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ತೆಲಂಗಾಣದಲ್ಲಿ ಸೋನು ಸೂದ್‌ ಅಭಿಮಾನಿಗಳು ಅವರಿಗಾಗಿ ದೇವಾಲಯವನ್ನೇ ನಿರ್ಮಿಸಿದ್ದರು. ಆದರೆ, ಅವರ ಪುಟ್ಟ ಅಭಿಮಾನಿಯೊಬ್ಬ ಸೋನು ಸೂದ್‌ಗಾಗಿ ತನ್ನ ಮನೆಯ ಟಿವಿಯನ್ನೇ ಕುಟ್ಟಿ ಪುಡಿ ಮಾಡಿದ್ದಾನೆ.

ಹೌದು, ತೆಲಂಗಾಣದ ಸಂಗರೆಡ್ಡಿ ಊರಿನ ಬಾಲಕ ವಿರಾಟ್‌. ಅವನು ತೆಲುಗಿನ 'ದೂಕುಡು' ಸಿನೆಮಾವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಮಹೇಶ್‌ ಬಾಬು ನಾಯಕರಾಗಿ ಮತ್ತು ಸೋನು ಸೂದ್‌ ಅವರು ಖಳನಾಯಕರಾಗಿ ದೂಕುಡು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ವೇಳೆ ಮಹೇಶ್‌ ಬಾಬು ಅವರು ಸೋನು ಸೂದ್‌ಗೆ ಹೊಡೆಯುವ ದೃಶ್ಯವೊಂದು ವಿರಾಟ್‌ ಕಣ್ಣಿಗೆ ಬಿದ್ದಿದೆ. ಸೋನು ಸೂದ್‌ಗೆ ಹೊಡೆಯುವುದನ್ನು ಸಹಿಸದ ವಿರಾಟ್‌ ತಾನು ನೋಡುತ್ತಿದ್ದ ಟಿವಿಯನ್ನೇ ಕುಟ್ಟಿ ಪುಡಿ ಮಾಡಿದ್ದಾನೆ.

'ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ ಸೋನು ಸೂದ್‌ ಅವರೇ ರಿಯಲ್‌ ಹೀರೊ ಎಂದು ವಿರಾಟ್‌ ನಂಬಿಕೊಂಡಿದ್ದಾನೆ. ಸೋನು ಅವರಿಗೆ ಹೊಡೆಯುವ ದೃಶ್ಯದಿಂದ ವಿರಾಟ್‌ಗೆ ಕೋಪ ಬಂದಿದೆ. ಆ ಕಾರಣಕ್ಕಾಗಿ ವಿರಾಟ್‌ ಟಿವಿಯನ್ನೇ ಕುಟ್ಟಿಪುಡಿ ಮಾಡಿದ್ದಾನೆ' ಎಂದು ವರದಿಯಾಗಿದೆ.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಸೋನು ಸೂದ್‌, 'ಅರೇ, ನೀನು ಟಿವಿಯನ್ನು ಒಡೆಯಬೇಡ ಕಣೋ. ನಿನ್ನ ತಂದೆ ಹೊಸ ಟಿವಿಯನ್ನು ತಂದುಕೊಡಲು ನನಗೇ ಹೇಳಿಯಾರು' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ಸುರಕ್ಷಿತವಾಗಿ ಊರುಗಳಿಗೆ ಮರಳಲು ಬಸ್ಸು, ವಿಮಾನದ ವ್ಯವಸ್ಥೆ ಮಾಡಿದ್ದರು ಸೋನು. ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿದ್ದಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿದ್ದರು.

ಸೋನು ಅವರ ಈ ಕಾರ್ಯಕ್ಕೆ ದೇಶವೇ ತಲೆದೂಗಿತ್ತು. ರಾಜಕಾರಣಿಗಳು, ಸಿನಿಮಾರಂಗದವರು ಸೇರಿದಂತೆ ಪ್ರಧಾನಿ ಮೋದಿ ಕೂಡ ಸೋನು ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT