ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿನ್ನ ಸನಿಹಕೆ’ ಸಿನಿಮಾ | ಸೂರಜ್‌ ದ್ವಿಪಾತ್ರ!

Last Updated 17 ಏಪ್ರಿಲ್ 2020, 0:56 IST
ಅಕ್ಷರ ಗಾತ್ರ

‘ನನಗೆ ಕಥೆ ಬರೆಯುವ ಹವ್ಯಾಸ ಇರಲಿಲ್ಲ, ನಿರ್ದೇಶಕನಾಗುವ ಕನಸನ್ನೂ ಕಂಡಿರಲಿಲ್ಲ. ಆದರೆ, ನಟನಾಗಿ ಬೆಳೆಯುವುದಕ್ಕೂ ಮೊದಲುಸಿನಿಮಾದ ಪ್ರಕ್ರಿಯೆ ಕುರಿತು ತಿಳಿದುಕೊಳ್ಳುವ ಹಂಬಲವಿತ್ತು. ಫಿಲ್ಮ್‌ ಮೇಕಿಂಗ್‌ ನನಗೆ ಹೊಸದಲ್ಲ. ಹಾಗಾಗಿಯೇ, ನಿರ್ದೇಶನ ಸುಲಭವಾಯಿತು...’

–ಹೀಗೆಂದು ನಟ ಸೂರಜ್‌ ಗೌಡ ಮೊದಲ ಬಾರಿಗೆ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ ಅನುಭವ ಬಿಡಿಸಿಟ್ಟರು. ಧನ್ಯಾ ರಾಮ್‌ಕುಮಾರ್‌ ಮತ್ತು ಸೂರಜ್‌ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ಇದು.

ಸೂರಜ್‌ ಅವರೇ ಈ ಕಥೆ ಬರೆದಿದ್ದಾರೆ. ‘ಮದುವೆಯ ಮಮತೆಯ ಕರೆಯೋಲೆ’, ‘ಕಹಿ’, ‘ಸಿಲಿಕಾನ್‌ ಸಿಟಿ’ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದ ಅವರು, ಮೊದಲ ಬಾರಿಗೆ ಈ ಚಿತ್ರದಲ್ಲಿ ಆ್ಯಕ್ಷನ್‌ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏಕಕಾಲಕ್ಕೆ ನಿರ್ದೇಶನ ಮತ್ತು ನಟನೆಯಲ್ಲಿ ತೊಡಗಿಸಿಕೊಂಡಿರುವ ಅವರದು ಬೆಳ್ಳಿತೆರೆಯಲ್ಲಿ ಮೊದಲ ಬಾರಿಗೆ ಡಬಲ್‌ ಪಾರ್ಟ್‌!

ಪ್ರೇಕ್ಷಕರು ತನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವೂ ಅವರಿಗಿದೆಯಂತೆ. ಅವರೊಟ್ಟಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

‘ನಿನ್ನ ಸನಿಹಕೆ’ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ?

ನಾನೊಂದು ಕಥೆ ಕೇಳಿದ್ದೆ. ಅದರ ನಿರೂಪಣೆ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗ ನೀನೇಕೆ ಕಥೆ ಬರೆಯಬಾರದು ಎಂದು ನನ್ನ ಸ್ನೇಹಿತ ಐಡಿಯಾ ಕೊಟ್ಟ. ನಾನು ಕಥೆ ಬರೆಯಲು ಶುರುಮಾಡಿದ್ದು ಆಗಲೇ. ನಾವು ಅಂದುಕೊಂಡಂತಹ ಅವಕಾಶಗಳು ಬಾರದೆ ಇದ್ದಾಗ ನಾವೇ ಉತ್ತಮ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿಯೇ, ಕಥೆ ಬರೆದು ಅದನ್ನು ಚಿತ್ರಕಥೆಯ ರೂಪಕ್ಕಿಳಿಸಿದೆ. ಮತ್ತೊಂದೆಡೆ ಸ್ನೇಹಿತರಾದಅಕ್ಷಯ್‌ ರಾಜಶೇಖರ್‌ ಮತ್ತು ರಂಗನಾಥ್‌ ಕುಡ್ಲಿ ಅವರಿಗೆ ಸಿನಿಮಾ ನಿರ್ಮಿಸುವ ಆಸೆಯಿತ್ತು. ಅವರಿಗೂ ಕಥೆ ಇಷ್ಟವಾಯಿತು.

ಈ ಚಿತ್ರದ ಕಥೆಯ ಎಳೆ ಎಂತಹದ್ದು?

ಎರಡು ಸಣ್ಣ ಪಟ್ಟಣಗಳಿಂದ ಹುಡುಗ ಮತ್ತು ಹುಡುಗಿ ಮೆಟ್ರೊಪಾಲಿಟನ್‌ ಸಿಟಿಗೆ ಬರುತ್ತಾರೆ. ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಅದು ಪ್ರೀತಿಗೆ ತಿರುಗುತ್ತದೆ. ಅವರಿಬ್ಬರ ಕುಟುಂಬದ ಸ್ಥಿತಿಗತಿ ಹೇಗೆ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೇ ಚಿತ್ರದ ಕಥಾಹಂದರ. ನಗು, ಅಳು, ಹಾಡು, ಫೈಟಿಂಗ್ ಎಲ್ಲವೂ ಇರುವ ಮನರಂಜನಾತ್ಮಕ ಸಿನಿಮಾ ಇದು. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಅಂಶಗಳು ಇವೆ. ಕುಟುಂಬ ಸಮೇತ ನೋಡುವ ಚಿತ್ರ.

ಈಗ ಸಿನಿಮಾ ಯಾವ ಹಂತದಲ್ಲಿದೆ?

ಕೊರೊನಾ ಭೀತಿ ಕಾಣಿಸಿಕೊಳ್ಳುವುದಕ್ಕೂ ಮೊದಲೇಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿತು. ಜೊತೆಗೆ, ಡಬ್ಬಿಂಗ್‌ ಕೂಡ ಪೂರ್ಣಗೊಂಡಿತ್ತು. ಅದಾದ ಬಳಿಕವೇ ಲಾಕ್‌ಡೌನ್‌ ಘೋಷಣೆಯಾಯಿತು. ಈಗ ಮನೆಯಲ್ಲಿಯೇ ಎಡಿಟಿಂಗ್‌ ಕೆಲಸ ಮುಂದುವರಿಸಿದ್ದೇನೆ. ಬೆಂಗಳೂರು ಕೇಂದ್ರಿತ ಕಥೆ ಇದಾಗಿದೆ. ಹಾಗಾಗಿ, ಇಲ್ಲಿಯೇ ಹೆಚ್ಚಿನ ಭಾಗದ ಶೂಟಿಂಗ್‌ ನಡೆಸಿದ್ದೇವೆ. ಚಿಕ್ಕಮಗಳೂರು, ಗೋಕರ್ಣ, ಮಂಡ್ಯದ ಕೆಲವೆಡೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಏಳು ಹಾಡುಗಳಿವೆ.

ನಾಯಕಿ ಧನ್ಯಾ ರಾಮ್‌ಕುಮಾರ್‌ ಮತ್ತು ನಿಮ್ಮ ಕಾಂಬಿನೇಷನ್‌ ಬಗ್ಗೆ ಹೇಳಿ...

ಧನ್ಯಾ ಅವರು ನಿರ್ದೇಶಕರು ಹೇಳಿದ್ದನ್ನು ಸುಲಭವಾಗಿ ಗ್ರಹಿಸುತ್ತಾರೆ. ಇದರಿಂದ ನನ್ನ ಕೆಲಸ ಸುಲಭವಾಯಿತು. ಇಡೀ ತಂಡ ಸ್ಪರ್ಧಾತ್ಮಕವಾಗಿಯೇ ಕೆಲಸ ಮಾಡಿದೆ. ಹಾಗಾಗಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ.

ಕಾಲೇಜು ದಿನಗಳಲ್ಲಿ ನಿಮಗೆ ಕಥೆ ಬರೆಯುವ ಹವ್ಯಾಸ ಇತ್ತೇ?

ಆ ಹಂತದಲ್ಲಿ ಕಥೆ ಬರೆಯುವ ಹವ್ಯಾಸ ಇರಲಿಲ್ಲ. ಚಿತ್ರಕಥೆ ಬರೆಯುವುದೂ ಗೊತ್ತಿರಲಿಲ್ಲ. ಆದರೆ, ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದೆ. ವಿಡಿಯೊಗಳನ್ನು ಶೂಟ್‌ ಮಾಡಿ ಎಡಿಟಿಂಗ್‌ ಮಾಡುತ್ತಿದ್ದೆ. ‘ನಿನ್ನ ಸನಿಹಕೆ’ ಚಿತ್ರಕ್ಕಾಗಿಯೇ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಕಥೆ ಬರೆದಿದ್ದೇನೆ.

ಮೊದಲ ಸಿನಿಮಾ ನಿರ್ದೇಶನದ ಅನುಭವ ಹೇಗಿತ್ತು?

ಮೊದಲಿಗೆ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸುಮನ್‌ ಜಾದೂಗಾರ್. ಅವರು ಅಪಘಾತಕ್ಕೆ ತುತ್ತಾದರು. ಅದಾಗಲೇ, ನಿರ್ಮಾಪಕರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಶೂಟಿಂಗ್‌ ಸ್ಥಗಿತಗೊಳಿಸಲು ಸಾಧ್ಯವಿರಲಿಲ್ಲ. ಸುಮನ್‌ ಮತ್ತು ನಿರ್ಮಾಪಕರು ನನಗೆ ನಿರ್ದೇಶನ ಮುಂದುವರಿಸಲು ಸಲಹೆ ನೀಡಿದರು. ಹಾಗಾಗಿಯೇ, ನಿರ್ದೇಶನದ ಹೊಣೆ ನನ್ನ ಹೆಗಲಿಗೇರಿತು. ಸುಮನ್‌‌ ಚೇತರಿಸಿಕೊಂಡ ಬಳಿಕ ಸೆಟ್‌ಗೆ ಬಂದರು. ಅಲ್ಲಿಯವರೆಗಿನ ಶೂಟಿಂಗ್‌ ನೋಡಿ ನೀನೇ ಮುಂದುವರಿಸುವಂತೆ ಕೋರಿದರು. ಈಗಲೂ ಸುಮನ್‌ ನಮ್ಮ ತಂಡದಲ್ಲಿಯೇ ಇದ್ದಾರೆ.

ಸಿನಿಮಾ ನಿರ್ದೇಶನ ಎಂಬುದು ಅದ್ಭುತವಾದ ಪಯಣ. ನಾವು ತೆರೆಯ ಮೇಲೆ ಏನು ಮಾಡುತ್ತೇವೆಯೋ ಅದಕ್ಕೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬರುತ್ತದೆ. ಆಡಿಯೊ, ವಿಡಿಯೊ, ಎಡಿಟಿಂಗ್‌ ಸೇರಿದಂತೆ ಎಲ್ಲವನ್ನೂ ಒಂದು ಹಂತಕ್ಕೆ ತಂದು ಪ್ರೇಕ್ಷಕರಿಗೆ ರಸದೌತಣ ಉಣಬಡಿಸುವುದೇ ನಿರ್ದೇಶಕನ ಕೆಲಸ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಖುಷಿಯಿದೆ.

ಹೊಸ ಯೋಜನೆಗಳ ಬಗ್ಗೆ ಹೇಳಿ...

‘ನಿನ್ನ ಸನಿಹಕೆ’ ಪಕ್ಕಾ ಕಮರ್ಷಿಯಲ್‌ ಚಿತ್ರ. ಇದರ ಮೇಲೆ ಇಡೀ ಚಿತ್ರತಂಡ ದೊಡ್ಡಮಟ್ಟದ ಭರವಸೆ ಇಟ್ಟುಕೊಂಡಿದೆ. ನಾನು ಮೊದಲ ಬಾರಿಗೆ ಆ್ಯಕ್ಷನ್‌ ಹೀರೊ ಆಗಿ ನಟಿಸಿರುವೆ. ನನ್ನನ್ನು ಜನರು ಹೇಗೆ ಇಷ್ಟಪಡುತ್ತಾರೆ ಎನ್ನುವುದರ ಮೇಲೆ ಹೊಸ ಅವಕಾಶಗಳನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದೇನೆ. ‘ಸಿಲಿಕಾನ್‌ ಸಿಟಿ’ ಸಿನಿಮಾ ನಿರ್ದೇಶಿಸಿದ್ದ ಮುರಳಿ ಗುರಪ್ಪ ಅವರ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT