ಗುರುವಾರ , ನವೆಂಬರ್ 21, 2019
23 °C

ನೈಜ ನಟನೆಯ ಸರದಾರ ಸೌಬಿನ್

Published:
Updated:
Prajavani

ಪೋಷಕ ನಟರಾಗಿ ಅಭಿನಯ ರಂಗಕ್ಕೆ ಕಾಲಿರಿಸಿ ಬಳಿಕ ನಾಯಕ ನಟರಾಗಿ ಮಿಂಚಿದವರು ಮಲಯಾಳ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇಂಥವರಲ್ಲಿ ಯುವನಟ ಸೌಬಿನ್ ಶಾಹಿರ್ ಕೂಡ ಒಬ್ಬರು.

ಭಿನ್ನ ಪಾತ್ರಗಳ ನಟನೆಯ ಮೂಲಕ ಮಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಇವರು ಸದ್ಯ ಬಹು ಬೇಡಿಕೆಯ ನಟ. ಈಗ ಪ್ರದರ್ಶನಗೊಳ್ಳುತ್ತಿರುವ ‘ಅಂಬಿಳಿ’ ಚಿತ್ರದಲ್ಲಿ ಭಿನ್ನ ಸಾಮರ್ಥ್ಯದ ಯುವಕನ ಪಾತ್ರದಲ್ಲಿ ನಟಿಸಿರುವ ಸೌಬಿನ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜಾನ್ ಪೌಲ್ ಜಾರ್ಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನೀನಾ ಕುರುಪ್ಪ್, ತನ್ವಿ ರಾಮ್, ಶ್ರೀಲತಾ ನಂಬೂದಿರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ‌. ಹಳ್ಳಿಯೊಂದರಲ್ಲಿ ಏಕಾಂಗಿಯಾಗಿ ಬದುಕುವ ವಿಶೇಷ ಸಾಮರ್ಥ್ಯದ ಯುವಕ, ದೀರ್ಘಕಾಲದ ಬಳಿಕ ತನ್ನ ಬಾಲ್ಯದ ಗೆಳತಿಯನ್ನು ಭೇಟಿಯಾಗುತ್ತಾನೆ. ಆ ನಂತರ ಆತನ ಬದುಕು ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಇದುವೇ ಈ ಚಿತ್ರದ ಕಥಾಹಂದರ. ವಿಶೇಷ ಸಾಮರ್ಥ್ಯದ ಯುವಕನ ಸಾಧನೆಗೂ ಈ ಚಿತ್ರ ಕನ್ನಡಿ ಹಿಡಿಯುತ್ತದೆ.

ಹೃದಯಸ್ಪರ್ಶಿ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಸೌಬಿನ್ ಅವರ ಮನೋಜ್ಞ ಅಭಿನಯ ಮಲಯಾಳ ಸಿನಿಪ್ರಿಯರನ್ನು ಮೋಡಿ ಮಾಡಿದೆ. ಅವರು ಆರಂಭದಲ್ಲಿ ಸಹ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ‌‌. ಪ್ರಸಿದ್ಧ ನಿರ್ದೇಶಕರಾದ ಫಾಝಿಲ್, ಸಂತೋಷ್ ಶಿವನ್, ರಾಜೀವ್ ರವಿ, ಪಿ‌. ಸುಕುಮಾರ್, ಅಮಲ್ ನೀರದ್ ಅವರ ಗರಡಿಯಲ್ಲಿ ಪಳಗಿದ್ದಾರೆ.

2002ರಲ್ಲಿ ಫಾಝಿಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಕೈಯೆತ್ತುಂ ದೂರತ್ತ್’ ಸಿನಿಮಾದಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದ್ದರು. ಮುಂದೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಇದ್ಯಾವುದೂ ಅವರಿಗೆ ಯಶಸ್ಸು ತಂದುಕೊಟ್ಟಿರಲಿಲ್ಲ. 2015ರಲ್ಲಿ ಅಲ್ಫೋನ್ಸ್ ಪುತ್ರನ್ ನಿರ್ದೇಶನದಲ್ಲಿ ತೆರೆಕಂಡಿದ್ದ ‘ಪ್ರೇಮಂ’ ಸಿನಿಮಾದ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದ ನಟನೆ ಸೌಬಿನ್ ಅವರಿಗೆ ಹೆಸರು ತಂದುಕೊಟ್ಟಿತ್ತು.

ಅನಂತರ ‘ಚಾರ್ಲಿ’, ‘ಮಹೇಶಂಡೆ ಪ್ರತೀಕಾರಂ’, ‘ಕಮ್ಮಾಟಿ ಪಾಡಂ’, ‘ಸಿಐಎ’ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದರು.

2018ರಲ್ಲಿ ಜಕರಿಯಾ ಮೊಹಮ್ಮದ್ ನಿರ್ದೇಶನದಲ್ಲಿ ತೆರೆಕಂಡ ‘ಸುಡಾನಿ ಫ್ರಂ ನೈಜೀರಿಯಾ’ ಚಿತ್ರ ಸೌಬಿನ್‌ಗೆ ಜನಪ್ರಿಯತೆ ತಂದುಕೊಟ್ಟಿತು. ಈ ಸಿನಿಮಾದ ನಟನೆಗಾಗಿ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪುರಸ್ಕಾರಕ್ಕೂ ಪಾತ್ರರಾಗಿದ್ದರು‌.

ಫುಟ್‌ಬಾಲ್ ಆಟವನ್ನು ಕೇಂದ್ರ ಕಥಾ ವಸ್ತುವಾಗಿಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗಿದೆ‌. ಹಳ್ಳಿಯೊಂದರ ಯುವಕರ ಫುಟ್‌ಬಾಲ್ ಪ್ರೀತಿಯನ್ನು ಈ ಚಿತ್ರದಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ. ಈ ವರ್ಷ ಬಿಡುಗಡೆಗೊಂಡಿರುವ ‘ಕುಂಬಳಂಗಿ ನೈಟ್ಸ್’ ಚಿತ್ರದಲ್ಲಿ ಸೌಬಿನ್ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ ಭಾರಿ ಯಶಸ್ಸು ಕಂಡಿತ್ತು. 2017ರಲ್ಲಿ ಬಿಡುಗಡೆಗೊಂಡಿದ್ದ ದುಲ್ಖರ್ ಸಲ್ಮಾನ್ ಅಭಿನಯದ ‘ಪರವ’ ಸಿನಿಮಾವನ್ನು ಸೌಬಿನ್ ನಿರ್ದೇಶಿಸಿದ್ದರು.

ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಟ್ರಾನ್ಸ್’ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

ಪ್ರತಿಕ್ರಿಯಿಸಿ (+)