ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo ಆರೋಪದ ಬಳಿಕ ಅವಕಾಶಗಳು ತಗ್ಗಿವೆ ಎನ್ನುತ್ತಾರೆ ಶ್ರುತಿ ಹರಿಹರನ್

Last Updated 19 ಡಿಸೆಂಬರ್ 2018, 9:43 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ತಿಂಗಳು #MeToo ಅಭಿಯಾನ ಸದ್ದು ಮಾಡಿದ್ದು, ಕನ್ನಡದ ನಟಿ ಶ್ರುತಿ ಹರಿಹರನ್ ಅದನ್ನೊಂದು ವೇದಿಕೆಯಾಗಿಸಿಕೊಂಡು ಅರ್ಜುನ್ ಸರ್ಜಾ ಹೆಸರು ಪ್ರಸ್ತಾಪಿಸಿದ್ದು ಹಳೆಯ ಸುದ್ದಿ. ಈ ಪ್ರಕರಣ ಈಗ ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಿ, ನ್ಯಾಯಾಲಯದ ಕಟಕಟೆ ತಲುಪಿದೆ. ದೂರು–ಪ್ರತಿದೂರು, ವಾದ–ಪ್ರತಿವಾದದ ಜಟಾಪಟಿ ಇದೀಗ ಒಂದು ಹಂತಕ್ಕೆ ಬಂದಿದೆ.

ಅದೆಲ್ಲಾ ಸರಿ. #MeToo ಮೂಲಕ ನೋವು ಹೊರಹಾಕಿದ ಶ್ರುತಿ ಈಗ ಎಲ್ಲಿದ್ದಾರೆ? ಏನು ಹೇಳುತ್ತಾರೆ? ‘ದಿ ನ್ಯೂಸ್‌ ಮಿನಿಟ್’ಜಾಲತಾಣದ ಸೌಮ್ಯಾ ರಾಜೇಂದ್ರನ್ ಅವರಿಗೆ ಸಂದರ್ಶನ ನೀಡಿರುವ ಶ್ರುತಿ ಹರಿಹರನ್, ‘ಈಗ ನನಗೆ ಅವಕಾಶಗಳು ಕಡಿಮೆಯಾಗಿವೆ’ಎಂದು ಒಪ್ಪಿಕೊಂಡಿದ್ದಾರೆ.

ಆರೋಪ ಮಾಡಿದ್ದನ್ನೇ ನೆಪವಾಗಿಸಿಕೊಂಡು ತಮಗೆ ಅವಕಾಶ ನಿರಾಕರಿಸುವ ಪ್ರವೃತ್ತಿ ಶ್ರುತಿ ಅವರ ಸ್ವಾಭಿಮಾನಕ್ಕೂ ಧಕ್ಕೆ ತಂದಿದೆಯಂತೆ. ’ನಾನು #MeToo ಆರೋಪ ಮಾಡಿದ ನಂತರ ಅವಕಾಶಗಳು ಕಡಿಮೆಯಾಗಿವೆ. ಮೊದಲು ನನಗೆ ವಾರಕ್ಕೆ ಮೂರಾದರೂ ಅವಕಾಶಗಳು ಬರುತ್ತಿದ್ದವು. ಹಲವು ಸ್ಕ್ರಿಪ್ಟ್‌ಗಳನ್ನು ನೋಡಿ ನನ್ನಿಷ್ಟದ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ನಾನು ಅಭಿನಯಿಸಿರುವ ಒಂದು ಚಿತ್ರ ಹಿಟ್ ಆದರೆ, ಸಹಜವಾಗಿಯೇ ನನಗಿರುವ ಅವಕಾಶಗಳು ಹೆಚ್ಚಾಗುತ್ತಿದ್ದವು. ಸೆಪ್ಟೆಂಬರ್‌ನಲ್ಲಿ ನಾನು ಅಭಿನಯಿಸಿದ್ದ ದೊಡ್ಡ ಬಜೆಟ್‌ ಚಿತ್ರವೊಂದು ಬಿಡುಗಡೆಯಾಗಿತ್ತು. ನಾನು ಬಾಯ್ಮುಚ್ಚಿಕೊಂಡು ಸುಮ್ಮನಿದಿದ್ದರೆ ಇಷ್ಟೊತ್ತಿಗೆ ಇನ್ನೊಂದಿಷ್ಟು ಅವಕಾಶಗಳು ಸಿಕ್ಕಿರುತ್ತಿದ್ದವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನನಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಈ ಬೆಳವಣಿಗೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಅಷ್ಟೇ ಅಲ್ಲ. ನನ್ನ ಪರಿಸ್ಥಿತಿ ನೋಡಿದ ಅನೇಕ ಮಹಿಳೆಯರು ತಮಗೆ ಆದ ನೋವಿನ ಬಗ್ಗೆ ಮಾತನಾಡಲು ಹಿಂಜರಿಯಬಹುದು ಎಂದು ಬೇಸರವಾಗುತ್ತದೆ.

‘#MeToo ಆರೋಪ ಮಾಡಿದ ನಂತರ ನನಗೆ ಕೇವಲ ಎರಡು ಆಫರ್‌ಗಳು ಬಂದಿದ್ದವು. ಅದನ್ನು ಕೈಗೆತ್ತಿಕೊಳ್ಳುವ ಆಸಕ್ತಿಯೂ ನನಗೆ ಇರಲಿಲ್ಲ. ಆದರೆ ಇಷ್ಟಂತೂ ನಿಜ. ನನಗೆ ಸಿಗುತ್ತಿದ್ದ ಅವಕಾಶಗಳು ಕಡಿಮೆಯಾಗಿವೆ. ಬಹುಶಃ ಅನೇಕರಿಗೆ ನನ್ನೊಡನೆ ಕೆಲಸ ಮಾಡಲು ಇಷ್ಟವಿಲ್ಲ ಎನಿಸುತ್ತೆ. ನನಗೆ ಅವಕಾಶ ಕೊಡುವ ಕೆಲವರೂ ಇನ್ನೂ ಸ್ಕ್ರಿಪ್ಟ್‌ ಬರೆಯುತ್ತಿದ್ದಾರೆ ಅನಿಸುತ್ತೆ. ಈ ಜಗತ್ತು ಇರುವುದೇ ಹೀಗೆ. ನನಗೇನೂ ಇದರಿಂದ ಅಚ್ಚರಿಯಾಗಿಲ್ಲ. ಕೆಲವರು ನನಗೆ ಶತ್ರುಗಳಾಗಿರಬಹುದು. ಈ ಹಿಂದೆ ಇದ್ದ ಪರಿಸ್ಥಿತಿಗೂ, ಈಗ ಇರುವ ಸ್ಥಿತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ನಾನು ಇದೆಲ್ಲವನ್ನೂ ಒಪ್ಪಿಕೊಳ್ಳುತ್ತೇನೆ. ನನ್ನದೇ ದಾರಿಯಲ್ಲಿ ಹೋರಾಡುತ್ತೇನೆ’ ಎಂದು ಖಡಕ್ ಆಗಿ ನುಡಿಯುತ್ತಾರೆ ಶ್ರುತಿ.

‘ನಾನು ಸದಾ ಆಶಾವಾದಿಯಾಗಿ ಇರಲು ಬಯಸುತ್ತೇನೆ. ಯಾರನ್ನೋ ಓಲೈಸಿ ಅಥವಾ ಅತಿಸುಂದರಿ ಎನ್ನುವ ಕಾರಣ ಈ ಹಂತಕ್ಕೆ ಬರಲಿಲ್ಲ. ನನ್ನ ವೃತ್ತಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ನಟಿ ಎನ್ನುವ ಕಾರಣಕ್ಕೆ ಈ ಹಂತ ತಲುಪಿದ್ದೇನೆ. ನನ್ನ ಬಗ್ಗೆ ನನಗೆ ನಂಬಿಕೆ ಇದೆ. ಕೇವಲ ನಟಿಯಾಗಿ ಬದುಕುವುದಕ್ಕೆ ಮೀರಿದ ಹೊಸ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ ಬಹುಶಃ ಈಗ ಬಂದಿದೆ. ನನ್ನೊಳಗಿನ ನಟಿಯನ್ನು ಹುಚ್ಚೆಬ್ಬಿಸುವ ಅವಕಾಶ ಸಿಕ್ಕರೆ ಖಂಡಿತ ನಾನು ಅದರ ಭಾಗವಾಗುತ್ತೇನೆ. ಆಗ ನನ್ನ ಬಗ್ಗೆ ತಪ್ಪು ತಿಳಿಯಬೇಡಿ’ ಎನ್ನುವುದು ಅವರ ಮನದ ಮಾತು.

ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡುವುದಕ್ಕೂ ಮೊದಲು ಶ್ರುತಿ ಸಹಿ ಹಾಕಿದ್ದ ನಾಲ್ಕು ಕನ್ನಡ ಮತ್ತು ಒಂದು ತಮಿಳು ಚಿತ್ರಗಳು ಇದೀಗ ತೆರೆಗೆ ಸಿದ್ಧವಾಗಿವೆ.

(ಅನುವಾದ: ವನಿತಾ ಜೈನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT