ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಸೇರುವ ಆಸೆ ಇಲ್ಲ: ನಟ ಸುದೀಪ್

ಆಗಸ್ಟ್‌ ಅಂತ್ಯಕ್ಕೆ ‘ಪೈಲ್ವಾನ್‌’ ಸಿನಿಮಾ ಬಿಡುಗಡೆ
Last Updated 6 ಜುಲೈ 2019, 10:38 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ತಕ್ಷಣ ರಾಜ್ಯ ರಾಜಕಾರಣ ಪ್ರವೇಶಿಸುತ್ತೇನೆ ಎಂದರ್ಥವಲ್ಲ. ನನಗೆ ರಾಜಕೀಯ ಪ್ರವೇಶಿಸುವ ಆಸೆಯೇ ಇಲ್ಲ’ ಎಂದು ನಟ ಸುದೀಪ್‌ ಹೇಳಿದರು.

ಸುದೀಪ್‌ ನಾಯಕ ನಟರಾಗಿರುವ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರ ಆಗಸ್ಟ್‌ ಅಂತ್ಯದಲ್ಲಿ ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

‘ಅಂತೆಕಂತೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ನನ್ನ ಸಿನಿಮಾಗಳನ್ನು ಎಂಜಾಯ್‌ ಮಾಡುತ್ತಿರುವೆ. ಸಿನಿಮಾ ಮಾಡಬಾರದೆಂದು ನನಗೊಂದು ದಿನ ಅನಿಸುತ್ತದೆ. ಆಗ ಮುಂದೇನು ಮಾಡುತ್ತೇನೆ ಎಂದು ಮಾಧ್ಯಮದ ಮೂಲಕವೇ ಹೇಳುತ್ತೇನೆ’ ಎಂದರು.

‘ರಾಜಕೀಯ ಪ್ರವೇಶಿಸಬೇಕಾದರೆ ಒಂದು ವಿಧಾನಸಭಾ ಕ್ಷೇತ್ರ ಹುಡುಕಬೇಕು. ಮೊದಲಿನಿಂದಲೂ ಅಲ್ಲಿ ಕೆಲಸ ಮಾಡಬೇಕು. ಜನರ ನಂಬಿಕೆ ಗಳಿಸಬೇಕು. ಸುದೀಪ್‌ ಸಿನಿಮಾ ನಟ. ವೋಟು ಹಾಕಿ ಎಂದರೆ ಯಾರೊಬ್ಬರು ಹಾಕುವುದಿಲ್ಲ. ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳುವ ಅರ್ಹತೆಯೇ ನನಗಿಲ್ಲ. ಆ ಸ್ಥಾನಕ್ಕೆ ನಾನಿನ್ನೂ ಕಿರಿಯ. ನಾಯಕತ್ವ ಎನ್ನುವುದು ಗೌರವ. ನಾಯಕನ ಮಾತನ್ನು ಇಡೀ ಸಿನಿಮಾ ಇಂಡಸ್ಟ್ರಿ ಕೇಳಬೇಕು. ಅಂಬರೀಷ್‌ ಅವರ ಮಾತುಗಳನ್ನು ಎಲ್ಲರೂ ಕೇಳುತ್ತಿದ್ದರು. ವೋಟು ಹಾಕಿಸಿಕೊಂಡು ನನ್ನ ಮಾತು ಕೇಳಿ ಎಂದರೆ ಯಾರೊಬ್ಬರು ಕೇಳುವುದಿಲ್ಲ ಎಂದರು.

‘ನಿಮ್ಮ ವ್ಯಕ್ತಿತ್ವ ಬದಲಾಗಬೇಕು ಎಂದಾಕ್ಷಣ ನನ್ನ ವ್ಯಕ್ತಿತ್ವವೂ ಬದಲಾಗಬೇಕು ಎಂದು ಅರ್ಥೈಸಿಕೊಳ್ಳುವುದು ತಪ್ಪು. ನನ್ನ ಬದುಕಿನಲ್ಲಿ ಯಾವುದೇ ವ್ಯಕ್ತಿಗೆ ಒಂದು ಸ್ಥಾನ ನೀಡಿದರೆ ಅದು ಹಾಗೆಯೇ ಇರುತ್ತದೆ. ಅದು ಎಂದಿಗೂ ಬದಲಾಗುವುದಿಲ್ಲ. ಹಾಗೆಂದು ನಿಮ್ಮಿಂದ ಮತ್ತೆ ಮತ್ತೇನನ್ನೋ ನಿರೀಕ್ಷೆ ಮಾಡುತ್ತಿದ್ದೇನೆ ಎನ್ನುವುದು ಅದರ ಅರ್ಥವಲ್ಲ. ನನ್ನ ಪ್ರೀತಿಯನ್ನು ನಾನು ಡಿಲಿಟ್‌ ಮಾಡುವುದು ನನಗೆ ಗೊತ್ತಿಲ್ಲ’ ಎಂದರು.

ನನಗೆ ಸ್ವಲ್ಪ ಹಟವಿದೆ:

‘ಕೋಟ್ಯಂತರ ಜನರು ನನ್ನನ್ನು ಪ್ರೀತಿಸುತ್ತಾರೆ. ಹಾಗಾಗಿ, ಬೆರಳೆಣಿಕೆಯಷ್ಟು ಮಂದಿ ನನ್ನ ವಿರುದ್ಧ ಮಾತನಾಡಿದರೆ ನಾನು ಚಿಂತಿಸಬೇಕಿಲ್ಲ. ಯಾರೊ ನನ್ನನ್ನು ಆರೋಗೆಂಟ್‌ ಎಂದು ಕರೆದರೆ ತಲೆಕೆಡಿಸಿಕೊಳ್ಳುವುದಿಲ್ಲ. ಟೀಕಿಸುವವರು ನನಗೆ ಬಾದಾಮಿ ತಿನ್ನಿಸಿರುವುದಿಲ್ಲ. ಯಾರನ್ನೂ ನಾನು ಬೈದಿಲ್ಲ. ಪ್ರೀತಿ ನೀಡಿದರೆ ಮರಳಿ ಆ ಪ್ರೀತಿಯನ್ನಷ್ಟೇ ನೀಡಲು ಸಾಧ್ಯ. ನನ್ನನ್ನು ಅಪ್ಪಿಕೊಂಡು ಮಾತನಾಡಿದರೆ ನಾನೇಕೆ ಅವರನ್ನು ಹೊರದಬ್ಬಲಿ. ನಾನು ಯಾವುದೇ ಘಟನೆ ಬಗ್ಗೆ ಅಲ್ಲಿಯೇ ಪ್ರತಿಕ್ರಿಯೆ ನೀಡಿರುತ್ತೇನೆ. ಮನೆಗೆ ಹೋಗಿ ಅದರ ಬಗ್ಗೆ ಚಿಂತಿಸುವುದಿಲ್ಲ. ನನಗೆ ಸ್ವಲ್ಪ ಹಟವಿದೆ’ ಎಂದು ನಕ್ಕರು.

‘ಎಲ್ಲ ನಟರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಎಲ್ಲರದ್ದೂ ಒಂದೇ ಅಭಿಪ್ರಾಯ ಇರಬೇಕು ಎಂಬ ನಿಯಮವಿಲ್ಲ. ಎಲ್ಲರೂ ಎಲ್ಲರೊಟ್ಟಿಗೆ ಚೆನ್ನಾಗಿರಬೇಕು ಎನ್ನುವ ಅವಶ್ಯಕತೆಯೂ ಇಲ್ಲ. ಹಾಗೆ ಇರಲೂ ಸಾಧ್ಯವಿಲ್ಲ. ನಮ್ಮ ಅಭಿರುಚಿ ಬೇರೆಯಾಗಿರುತ್ತದೆ. ಅವರ ಅಭಿರುಚಿಯೇ ಭಿನ್ನವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅವರು ನಾಯಕ ನಟರಲ್ಲ ಎಂದು ಟೀಕಿಸುವುದು ಸರಿಯಲ್ಲ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT