ಸೋಮವಾರ, ಏಪ್ರಿಲ್ 12, 2021
23 °C
ನಟ ಸುದೀಪ್‌ ಬಿಚ್ಚು ಮಾತು

ಸ್ನೇಹ ಡಿಲೀಟ್‌ ಮಾಡಲ್ಲ!

ಸಂದರ್ಶನ: ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಗೋಡೆ ತಬ್ಬಿಕೊಂಡಿದ್ದ ಹಸಿರು ಬಳ್ಳಿಗಳು. ತೂಗು ಹಾಕಿದ್ದ ಥರಾವರಿ ಅಡುಗೆ ಪರಿಕರಗಳು. ಡಬ್ಬಿಗಳೊಳಗೆ ಬೆಚ್ಚಗೆ ಅವಿತಿದ್ದ ಮಸಾಲೆ ಪದಾರ್ಥಗಳು. ಮೂಲೆಯಲ್ಲಿ ಪ್ರಖರ ಬೆಳಕು ಚಿಮ್ಮುತ್ತಿದ್ದ ವಿದ್ಯುದ್ದೀಪಗಳು... ಎಲ್ಲವೂ ಕಿಚ್ಚನ ಬರುವಿಕೆಗೆ ಕಾದು ಕೂತಿದ್ದವು. 

ಜಿಮ್‌ನಲ್ಲಿ ಮೂರು ತಾಸು ಬೆವರು ಸುರಿಸಿ ಮೆಟ್ಟಿಲೇರಿ ಬಂದ ನಟ ಸುದೀಪ್‌ ನೇರವಾಗಿ ಅಡುಗೆ ಕೋಣೆ ಹೊಕ್ಕಿದರು. ‘ಬನ್ನಿ ಇಲ್ಲಿ’ ಎಂದು ಕರೆದ ಅವರು, ಕಪಾಟಿನಲ್ಲಿದ್ದ ಬಿದಿರು ಬಳಸಿ ತಯಾರಿಸಿದ್ದ ಬುಟ್ಟಿಯಾಕಾರದ ವಸ್ತು ತೋರಿಸಿದರು. ‘ನಾನು ಥಾಯ್ಲೆಂಡ್‌ಗೆ ಹೋಗಿದ್ದಾಗ ಅಲ್ಲಿನ ಹೋಟೆಲ್‌ವೊಂದರಲ್ಲಿ ಅಡುಗೆ ತಯಾರಿಸಿದೆ. ಇದರಲ್ಲಿಯೇ ಅಕ್ಕಿ ಹಾಕಿ ಹಬೆಯಲ್ಲಿ ಅನ್ನ ಮಾಡುತ್ತಾರೆ’ ಎಂದು ಅಲ್ಲಿನ ಅನುಭವಗಳನ್ನು ನೆನಪಿಸಿಕೊಳ್ಳತೊಡಗಿದರು. 

ಅವರ ಪುತ್ರಿ ಹುಟ್ಟುಹಬ್ಬಕ್ಕೆ ಕೊಟ್ಟಿದ್ದ ಗಿಫ್ಟ್‌ ಅನ್ನು ಉತ್ಸಾಹದಿಂದಲೇ ತೋರಿಸಿದರು. ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರ ಅಭಿರುಚಿಗೆ ತಕ್ಕಂತೆ ಮೂರಂತಸ್ತಿನ ಚಾವಣಿ ಮೇಲೆ ಪುಟ್ಟದಾದ ಪಾಕಶಾಲೆ ಮಾಡಿಕೊಂಡಿದ್ದರು. ಬಾಯಲ್ಲಿ ನೀರೂರಿಸುವ ಬಗೆಬಗೆಯ ಅಡುಗೆ ರುಚಿ ಹಂಚಿಕೊಳ್ಳುತ್ತಲೇ ಮಾತಿಗೆ ಕುಳಿತರು.

‘ನಿಮ್ಮ ವ್ಯಕ್ತಿತ್ವ ಬದಲಾಯಿತು ಎಂದಾಕ್ಷಣ ನನ್ನ ವ್ಯಕ್ತಿತ್ವವೂ ಬದಲಾಗಬೇಕು ಎನ್ನುವುದು ತಪ್ಪು. ನನ್ನ ಬದುಕಿನಲ್ಲಿ ಯಾವುದೇ ವ್ಯಕ್ತಿಗೆ ಒಂದು ಸ್ಥಾನ ನೀಡಿದರೆ ಅದು ಕೊನೆಯವರೆಗೂ ಜೀವಂತವಾಗಿರುತ್ತದೆ. ಅದೆಂದಿಗೂ ಬದಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಂದ ಭಾವನಾತ್ಮಕವಾಗಿ ಮತ್ತೇನನ್ನೋ ನಿರೀಕ್ಷೆ ಮಾಡುತ್ತಿರುವೆ ಎಂದರ್ಥವಲ್ಲ. ನನಗೆ ಪ್ರೀತಿ, ಸ್ನೇಹವನ್ನು ಡಿಲೀಟ್‌ ಮಾಡುವುದು ಗೊತ್ತಿಲ್ಲ’ ಎಂದು ಕ್ಷಣಕಾಲ ಭಾವುಕರಾದರು.

‘ನಾವು ದುಡ್ಡು ಕೊಟ್ಟು ಓದಿದ ಶಿಕ್ಷಣ ನೆನಪಿಲ್ಲ. ಆದರೆ, ಬದುಕಿನ ಪಾಠ ಕಲಿಸಿದ ಯಾವುದಕ್ಕೂ ನಾವು ದುಡ್ಡು ಕೊಟ್ಟಿಲ್ಲ. ಯಾರೋ ಒಬ್ಬರಿಗಾಗಿ ಬದಲಾಗಲು ನನಗಿಷ್ಟವಿಲ್ಲ. ನಾನು ನಾನಾಗಿಯೇ ಇರುತ್ತೇನೆ’ ಎಂದು ಖಡಕ್‌ ಆಗಿ ಹೇಳಿದರು.

‘ಹೌದು. ನಾನು ಎಕ್ಸ್‌ಪೆನ್ಸಿವ್‌. ನನ್ನ ಮನೆಗೆ ಸಿನಿಮಾ ಮಾಡಬೇಕೆಂದು ದಿನಕ್ಕೆ 25 ಜನರು ಬರುತ್ತಾರೆ. ಅವರೆಲ್ಲರೂ ಸುಮ್ಮನೆ ಬರುವುದಿಲ್ಲ. ನನ್ನ ಬೆಳವಣಿಗೆ ಎಷ್ಟಿದೆಯೋ ಅಷ್ಟು ಸಂಭಾವನೆ ಇದೆ. ‘ತಾಯವ್ವ’, ‘ಹುಚ್ಚ’, ‘ಮೈ ಆಟೊಗ್ರಾ‍ಫ್‌’ ಮಾಡುವಾಗಿನ ಪರಿಸ್ಥಿತಿ ಈಗಿಲ್ಲ. ಅವರೆಲ್ಲರಿಗೂ ನಾವೇಕೆ ಸುದೀಪ್‌ಗೆ ಹಣ ನೀಡುತ್ತಿದ್ದೇವೆ ಎಂಬ ಅರಿವಿದೆ. ನೀವೇಕೆ ಅಷ್ಟು ಹಣ ಕೊಡುತ್ತಿದ್ದೀರಿ ಎಂದು ನಿರ್ಮಾಪಕರು, ವಿತರಕರಿಗೆ ನಾನೂ ಕೇಳುತ್ತೇನೆ’ ಎಂದರು.

‘20 ವರ್ಷದ ಹಿಂದೆ ನೆಟ್ಟಿದ್ದ ಸಸಿ ಈಗ ಮರವಾಗಿ ಫಲ ಕೊಡುತ್ತಿದೆ. ಬುದ್ಧಿವಂತ ನಿರ್ಮಾಪಕರು ಲಾಭ ಮಾಡಿಕೊಂಡಿದ್ದಾರೆ. ಯಾವುದೇ, ಸಿನಿಮಾಕ್ಕೆ ನಾನು ಸಂಭಾವನೆ ನಿಗದಿಪಡಿಸುವುದಿಲ್ಲ. ಕೆಲವು ಕಥೆಗಳಿಗೆ ಖರ್ಚು ಇರುವುದಿಲ್ಲ. ಅದಕ್ಕೆ ನಿಗದಿಪಡಿಸುವ ಸಂಭಾವನೆಯೇ ಬೇರೆ. ನಿರ್ಮಾಪಕರಿಂದ ಇಂದಿಗೂ ನಾನು ಮುಂಗಡ ತೆಗೆದುಕೊಳ್ಳುವುದಿಲ್ಲ. ಮೊದಲು ಕಥೆ ಕೇಳುತ್ತೇನೆ. ಅವರಿಗೊಂದು ಆಫರ್‌ ಕೊಡುತ್ತೇನೆ. ಅದಕ್ಕೆ ಒಪ್ಪಿದರೆ ಸಿನಿಮಾ ಮಾಡುತ್ತೇನೆ’ ಎಂದು ನೇರವಾಗಿ ಉತ್ತರಿಸಿದರು. 

* ‘ಪೈಲ್ವಾನ್‌’ ಚಿತ್ರಕ್ಕಾಗಿ ದೇಹ ದಂಡಿಸುವಾಗ ನಿಮ್ಮಲ್ಲಾದ ಬದಲಾವಣೆ ಹೇಗಿತ್ತು?

ಇಲ್ಲಿಯತನಕ ಬುದ್ಧಿಗೆ ಕೆಲಸ ಕೊಟ್ಟಿದ್ದೆ ಅನಿಸಿತು. ಅದನ್ನು ಮಲಗಿಸಿ ದೇಹಕ್ಕೆ ಕೆಲಸ ಕೊಟ್ಟೆ. ಸ್ನೇಹಿತರೆಲ್ಲರೂ ಸಂಭ್ರಮದಲ್ಲಿ ಕುಳಿತಿದ್ದಾಗ ‘ಪೈಲ್ವಾನ್‌’ ಕಥೆ ಬಂತು. ಏಕಾಏಕಿ ಆ ಚಾಲೆಂಜ್‌ ಒ‍ಪ್ಪಿಕೊಳ್ಳಲಿಲ್ಲ. ಇದು ನನ್ನ ಕೈಯಿಂದ ಆಗಲ್ಲ ಎಂದಿದ್ದೆ. ಚಿತ್ರದಲ್ಲಿ ನನ್ನದು ಮೂರು ಗೆಟಪ್‌ಗಳಿರುವ ಪಾತ್ರ. ಹಾಗಾಗಿ, ದೈಹಿಕ ಕಸರತ್ತು ಬೇಕಿತ್ತು. ಜಿಮ್‌ಗೆ ಹೋದ ತಕ್ಷಣವೇ ದೇಹ ಹುರಿಗೊಳಿಸಲು ಆಗುವುದಿಲ್ಲ. ಅದಕ್ಕೊಂದು ಶಿಸ್ತುಬೇಕು. ಅದು ನನ್ನ ಕೈಯಿಂದ ಆಗುತ್ತದೆಯೇ ಎಂದು ಆತ್ಮಾವಲೋಕನ ಮಾಡಿಕೊಂಡೆ. ಮೂರು ದಿನದ ಬಳಿಕ ಯೋಚಿಸಿ ಮತ್ತೆ ನಿರ್ದೇಶಕ ಕೃಷ್ಣ ಅವರನ್ನು ಕರೆಯಿಸಿದೆ. ನನಗೊಂದಿಷ್ಟು ದಿನ ಟೈಮ್‌ ನೀಡಲು ಕೋರಿದೆ. ಆ ಬಳಿಕವೇ ಕುಸ್ತಿಯ ಅಖಾಡಕ್ಕೆ ಇಳಿಸಲು ಸಜ್ಜಾದೆ.  

* ‘ಪೈಲ್ವಾನ್‌’ ಪ್ರೇಕ್ಷಕರ ಮುಂದೆ ಅಖಾಡಕ್ಕೆ ಇಳಿಯುವುದು ಯಾವಾಗ? 

ಆಗಸ್ಟ್‌ ಅಂತ್ಯದಲ್ಲಿ ಕನ್ನಡ ಸೇರಿದಂತೆ ಎಂಟು ಭಾಷೆಯಲ್ಲಿ ಏಕಕಾಲಕ್ಕೆ ಪೈಲ್ವಾನ್‌ ಅಖಾಡಕ್ಕೆ ಇಳಿಯಲಿದ್ದಾನೆ. ಚಿತ್ರದಲ್ಲಿ ಒಂದು ಗಂಟೆ ನಲವತ್ತು ನಿಮಿಷದಷ್ಟು ಗ್ರಾಫಿಕ್ಸ್‌ ಕೆಲಸವಿದೆ. ಹಾಗಾಗಿ ತಡವಾಗಿದೆ ಅಷ್ಟೇ. ಈ ಕೆಲಸ ನಿರ್ವಹಿಸುತ್ತಿರುವುದು ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ. ಅಪ್ಪಟ ಕನ್ನಡ ಸಿನಿಮಾ ಇದು. ಚಿತ್ರದ ಮೊದಲ ಪೋಸ್ಟರ್‌, ಟೀಸರ್‌ ಬಿಟ್ಟ ಬಳಿಕವೇ ಪೈಲ್ವಾನ್‌ನ ಅಲೆ ಎದ್ದಿದ್ದು. ಆಗ ಎಲ್ಲೆಡೆಯಿಂದ ಚಿತ್ರದ ಬಗ್ಗೆ ಪರಿಶೀಲನೆ ಶುರುವಾಯಿತು. ಮೊದಲ ಪ್ರೇಮ್‌ನಿಂದಲೇ ರಿಚ್‌ ಆಗಿ ಚಿತ್ರೀಕರಿಸಿದ್ದರಿಂದ ಬಹುಭಾಷೆಯಲ್ಲಿ ಬಿಡುಗಡೆಗೆ ಈಗ ಸುಲಭವಾಗಿದೆ.

* ಇನ್ನುಮುಂದೆ ಮಲ್ಟಿ ಸ್ಟಾರ್‌ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೀರಲ್ಲ.

ಇಬ್ಬರು ಸ್ಟಾರ್‌ ನಟರು ಇದ್ದಾಗ ನಿರೀಕ್ಷೆ ಹೆಚ್ಚಿರುವುದು ಸಹಜ. ಅಂತಹ ಸಿನಿಮಾಗಳಿಂದ ಯಾರೊಬ್ಬರಿಗೂ ನ್ಯಾಯ ಸಿಗುವುದಿಲ್ಲ. ಸ್ಕ್ರಿಪ್ಟ್‌ಗೆ ತಕ್ಕಂತೆ ಸಿನಿಮಾ ಮಾಡಬೇಕು. ‘ದಿ ವಿಲನ್‌’ನಲ್ಲಿ ಶಿವಣ್ಣ, ಪ್ರೇಮ್‌ ಮತ್ತು ನಾನು ತಪ್ಪು ಮಾಡಿಲ್ಲ. ಆದರೆ, ಅಪ್‌ಸೆಟ್‌ ಆಗಿದ್ದು ಅಭಿಮಾನಿಗಳು. ಇದರಿಂದ ತೊಂದರೆಯಾಗಿದ್ದು ಸಿನಿಮಾಕ್ಕೆ. ನ್ಯಾಯ ಸಿಗುವುದಿಲ್ಲ ಎಂದಾದ ಮೇಲೆ ಸಿನಿಮಾ ಮಾಡುವುದು ಸರಿಯಲ್ಲ. ಸ್ಟಾರ್ ನಟರು ನಟಿಸಿದರೆ ಬಂಡವಾಳ ಹೂಡಲು ಸಿದ್ಧ. 

* ನಿಮ್ಮ ಮಗಳನ್ನು ನಟನೆಗೆ ಇಳಿಸುವ ಆಲೋಚನೆ ಇದೆಯೇ?

ಅವಳಿಗಿನ್ನೂ 14 ವರ್ಷ. ಪೇಟಿಂಗ್‌ ಎಂದರೆ ಬಹುಪ್ರೀತಿ. ಆ ವಯಸ್ಸಿಗೆ ತಕ್ಕಂತೆ ಅವಳದ್ದೇ ಲೋಕದಲ್ಲಿ ವಿಹರಿಸುತ್ತಿದ್ದಾಳೆ. ಚಿತ್ರಕಲೆ, ಸಂಗೀತ ಕೇಳಿಕೊಂಡು ಖುಷಿಯಾಗಿದ್ದಾಳೆ. ಸದ್ಯಕ್ಕಂತೂ ಆ ಯೋಚನೆ ಇಲ್ಲ. ನಮ್ಮ ಮನೆಯಲ್ಲಿ ಅವಳೇ ಒಳ್ಳೆಯ ಸಿನಿಮಾ ವಿಮರ್ಶಕಿ. ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾಳೆ. ದುಡ್ಡು ತೆಗೆದುಕೊಂಡು ಸಿನಿಮಾ ಮಾಡಿರುತ್ತೇನೆ. ಹಾಗಾಗಿ, ಅವಳ ಮಾತು ಕೇಳಲು ಸಾಧ್ಯವೇ?

* ಮತ್ತೆ ನಿರ್ದೇಶನಕ್ಕೆ ಇಳಿಯುವುದು ಯಾವಾಗ?

ನಿರ್ದೇಶನ ಒಂದು ತರಹ ಅಡಿಕ್ಷನ್‌ ಇದ್ದಂತೆ. ಹಲವು ನಿರ್ದೇಶಕರು ನನಗಾಗಿ ಕಥೆ ಬರೆಯುತ್ತಿದ್ದಾರೆ. ಹಾಗಾಗಿ, ನಾನೇಕೆ ನಿರ್ದೇಶನದ ಬಗ್ಗೆ ಚಿಂತಿಸಲಿ. ಹಲವು ಮಂದಿ ಪೇಂಟಿಂಗ್‌ ಮಾಡುತ್ತಿದ್ದಾರೆ. ಅವರ ಬಣ್ಣಗಳಲ್ಲಿ ನಾನೊಂದು ಬಣ್ಣವಾಗುವುದೇ ನನಗೆ ಖುಷಿ. 

* ನಿಮಗೆ ಯಾವುದಾದರೂ ಕನಸಿನ ಪಾತ್ರದಲ್ಲಿ ನಟಿಸುವ ಆಸೆ ಇದೆಯೇ?

ನನಗೆ ಕನಸುಗಳೇ ಇಲ್ಲ. ಸ್ಕ್ರಿಪ್ಟ್‌ಗಾಗಿ ಸಿನಿಮಾ ಮಾಡಬೇಕು. ನಮ್ಮ ಆಸೆಗಾಗಿ ಚಿತ್ರ ಮಾಡಬಾರದು. ಆಗಲೇ ನಾವು ದಿಕ್ಕುತಪ್ಪುವುದು. ಕನಸಿನ ಪಾತ್ರ ಎನ್ನುವುದೇ ನನ್ನ ಪ್ರಕಾರ ತಪ್ಪು. ನಾವು ಬೆಳಗ್ಗಿನ ತಿಂಡಿಯನ್ನು ಎಂಜಾಯ್‌ ಮಾಡುತ್ತಾ ತಿನ್ನಬೇಕು. ಆ ವೇಳೆಯೇ ಮಧ್ಯಾಹ್ನದ ಊಟವನ್ನು ನೆನಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಸ್ಕ್ರಿಪ್ಟ್‌ನಲ್ಲಿ ಕನಸಿನ ಪಾತ್ರ ಇರುವುದಿಲ್ಲ. ಯಾರದ್ದೋ ಸಿನಿಮಾದ ಕ್ಯಾರೆಕ್ಟರ್‌ ನೋಡಿ ಅದರ ಬಗ್ಗೆ ಹೇಳುತ್ತಿರುತ್ತೇವೆ ಅಷ್ಟೇ. ನಾವೇ ಹೊಸದಾದ ಕ್ಯಾರೆಕ್ಟರ್‌ ಕ್ರಿಯೇಟ್‌ ಮಾಡಬೇಕು. ಅದನ್ನು ನೋಡಿದವರು ನಾನೂ ಅಂತಹದ್ದೊಂದು ಪಾತ್ರ ಮಾಡಬೇಕೆಂದು ಹೇಳುವಂತೆ ನಟಿಸಬೇಕು. 

* ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ.

‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್‌ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಹಿಂದಿಯಲ್ಲಿ ಬಯೋ‍ಪಿಕ್‌ ಮಾಡುವ ಅವಕಾಶ ಬಂದಿದೆ. ಸೈನಿಕರ ಜೀವನಗಾಥೆಯ ಬಗ್ಗೆ ಕೇಳುತ್ತಿದ್ದೇನೆ. ಬಯೋಪಿಕ್‌ ಸಿನಿಮಾ ಮಾಡುವುದು ಸುಲಭವಲ್ಲ. ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಕಷ್ಟವಾಗಲಿದೆ. ಸಿನಿಮಾದ ಬಳಿಕ ಎದುರಾಗುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿರುವುದು ನಾನೇ. ಚಿತ್ರಕಥೆ, ನಿರ್ದೇಶನ ಉತ್ತಮವಾಗಿದ್ದರೆ ಅಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತವೆ. ಅಕ್ಟೋಬರ್‌ನಲ್ಲಿ ಜಾಕ್‌ ಮಂಜು ನಿರ್ಮಾಣದ ಅನೂಪ್‌ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದೇನೆ. 

* ಸ್ಟಾರ್‌ ನಟರು ಕಥೆ ಕೇಳುವುದಿಲ್ಲ ಎಂಬ ಆರೋಪ ಇದೆಯಲ್ಲಾ?

ಎಲ್ಲರೂ ಅವರವರ ಹಾದಿಯಲ್ಲಿ ಸಾಗುತ್ತಾರೆ. ಅದು ಸರಿ– ತಪ್ಪು ಎಂದು ಇಬ್ಭಾಗಿಸುವುದು ಕಷ್ಟಸಾಧ್ಯ. ಎಲ್ಲರೂ ಪ್ರಯೋಗಕ್ಕೆ ಮುಂದಾಗುವುದಿಲ್ಲ. ವೃತ್ತಿಬದುಕಿನ ಒಂದು ಘಟ್ಟ ದಾಟಿದ ನಂತರ ಕೆಲವರು ರಕ್ಷಣೆಯ ಚಿಪ್ಪಿನೊಳಕ್ಕೆ ಜಾರುತ್ತಾರೆ. ಅದು ತಪ್ಪೆಂದು ನಾನು ಹೇಳುವುದಿಲ್ಲ. ಅದು ಅವರ ನಿರ್ಧಾರ. ನಾವೆಲ್ಲರೂ ಅಜ್ಜಿಯಂದಿರು ಇದ್ದಂತೆ. ಮೊಮ್ಮಕ್ಕಳಿಗೆ ಒಂದೇ ದಾಟಿಯ ಕಥೆ ಹೇಳಿದರೆ ರುಚಿಸುವುದಿಲ್ಲ. ಇರುವ ಕಥೆಯನ್ನೇ ಭಿನ್ನವಾಗಿ ಹೇಳಬೇಕು. ಆಗ ಅವರಿಗೆ ಅರ್ಥವಾಗುತ್ತದೆ. ನಮ್ಮದು ಪ್ರೇಕ್ಷಕರಿಗೆ ಕಥೆ ಹೇಳುವ ಕೆಲಸ. ಅದನ್ನು ಚೆನ್ನಾಗಿ ಹೇಳಬೇಕು ಅಷ್ಟೇ. ನಾನು ಯಾವುದೇ ಇಮೇಜ್‌ಗೆ ಜೋತುಬಿದ್ದಿಲ್ಲ. ಹಾಗಾಗಿ, ನನಗೆ ಅಳುಕಿಲ್ಲ. ನಂಗೆ ಕಥೆ ಇಷ್ಟವಾದರೆ ನಟಿಸುತ್ತೇನೆ. 

ಬೆಲ್ಜಿಯಂ ಕುದುರೆ ಬೇಡವೆಂದ ಕಿಚ್ಚ!

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಸಹೋದರ ಸೊಹೈಲ್‌ ಖಾನ್‌ ನನಗೆ ಆಪ್ತರು. ‘ದಬಾಂಗ್‌ 3’ ಚಿತ್ರದ ವಿಲನ್‌ ಪಾತ್ರದಲ್ಲಿ ನೀವೇ ನಟಿಸಬೇಕೆಂದು ಹಟ ಹಿಡಿದರು. ನಿರ್ದೇಶಕ ಪ್ರಭುದೇವ್‌ ಮೈಸೂರಿಗೆ ಬಂದು ನನಗೆ ಕಥೆ ನಿರೂಪಿಸಿದರು. ಸಲ್ಮಾನ್‌ ಖಾನ್‌ ಅವರ ಪಾತ್ರದಷ್ಟೇ ಸರಿಸಮಾನವಾದ ಪಾತ್ರ ನನ್ನದು. 

ಸೆಟ್‌ನಲ್ಲಿ ಸಲ್ಲು ನನ್ನನ್ನು ‘ಕಿಚ್ಚ’ ಎಂದೇ ಕರೆಯುತ್ತಾರೆ. 18 ದಿನಗಳ ಕಾಲ ಇಬ್ಬರೂ ಫೈಟ್‌ ಮಾಡಿದ್ದೇವೆ. ಇನ್ನೂ ಹಲವು ದಿನಗಳ ಶೂಟಿಂಗ್‌ ಇದೆ. ಒಳ್ಳೆಯ ಟೀಮ್‌ ಅದು. ನನ್ನನ್ನು ರಾಜನಂತೆ ನೋಡಿಕೊಳ್ಳುತ್ತಿದ್ದಾರೆ. ನಾನು ಮತ್ತು ಸಲ್ಮಾನ್‌ ಖಾನ್‌ ಒಟ್ಟೊಟ್ಟಿಗೆ ವರ್ಕ್‌ಔಟ್‌ ಮಾಡುತ್ತೇವೆ. 

ಒಂದು ದಿನ 15 ಬಾಕ್ಸ್‌ಗಳನ್ನು ತಂದರು. ಅವುಗಳ ತುಂಬಾ ಬಟ್ಟೆಗಳಿದ್ದವು. ನಿಮ್ಮ ಅಳತೆ ಎಷ್ಟು? ನಿಮಗೆ ಬಟ್ಟೆಗಳನ್ನು ತಂದಿರುವೆ. ಕಲರ್ಸ್ ಇಷ್ಟವೇ? ಎಂದು ಕೇಳಿದರು. ನನಗೆ ಅಚ್ಚರಿಯಾಯಿತು. ‘ಸರ್‌ ನನಗೆ ಯಾರೊಬ್ಬರೂ ಗಿಫ್ಟ್ ಕೊಡುವುದಿಲ್ಲ. ನೀವು ಕೊಟ್ಟರೆ ಸ್ವೀಕರಿಸುವೆ’ ಎಂದು ಎಲ್ಲವನ್ನೂ ಪಡೆದುಕೊಂಡೆ. 

ಅವರ ಮತ್ತು ನನ್ನ ಆಲೋಚನೆ ಒಂದೇ ರೀತಿಯಿದೆ. ಸ್ನೇಹಕ್ಕೆ ಅವರು ಕೊಡುವ ಗೌರವ ಅನನ್ಯವಾದುದು. ನನ್ನದೂ ಅದೇ ಮನಸ್ಥಿತಿ. ಒಂದು ದಿನ ಅವರ ಕುದುರೆ ನೋಡಿದೆ. ಬಹಳ ಇಷ್ಟವಾಯಿತು. ‘ನಿನಗೆ ಬೆಲ್ಜಿಯಂನಿಂದ ಕುದುರೆ ತರಿಸಿಕೊಡುತ್ತಾನೆ’ ಎಂದರು. ‘ದಯವಿಟ್ಟು ಬೇಡ ಸರ್‌. ನನ್ನನ್ನು ಕಷ್ಟಕ್ಕೆ ಸಿಲುಕಿಸಬೇಡಿ. ನನಗೆ ಕುದುರೆ ಸಾಕುವುದು ಗೊತ್ತಿಲ್ಲ. ಸವಾರಿಯೂ ಗೊತ್ತಿಲ್ಲ’ ಎಂದು ಮನವಿ ಮಾಡಿಕೊಂಡೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು