ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇರಿಕೊಂಡಿದೆ ಹೂ ದುಂಬಿಯೊಳಗೆ...; ‘ಸೂಜಿದಾರ’ದ ಸೊಗಸಾದ ಹಾಡು

Last Updated 29 ಮಾರ್ಚ್ 2019, 13:03 IST
ಅಕ್ಷರ ಗಾತ್ರ

‘ಜಾರುತಿರುವೆ ಹೆರಳಿನ ಜಾಲದೊಳಗೆ

ಕರಗುತಿರುವೆ ನೆರಳಿನ ಜೇನದನಿಗೆ’

ಎಂದು ಶುರುವಾಗುವ ಹಾಡಿನುದ್ದಕ್ಕೂ ನೆರಳು ಬೆಳಕಿನ ಹೆಣಿಗೆಯ ದೃಶ್ಯಜಾಲವಿದೆ. ಮನಸ್ಸು ಮನಸ್ಸುಗಳು ಗೊತ್ತಿಲ್ಲದೆಯೇ ಕರಗುವ, ಪರವಶವಾಗುವ ಜೇನಸವಿಯಂಥ ಮೋಹಕ ಭಾವಬಂಧವಿದೆ.

ಇದು ಮೌನೇಶ ಬಡಿಗೇರ್‌ ಅವರು ನಿರ್ದೇಶಿಸಿದ ‘ಸೂಜಿದಾರ’ ಚಿತ್ರದ ಹಾಡು. ಶುಕ್ರವಾರ ಸಂಜೆ ಶಿವರಾಜ್‌ಕುಮಾರ್‌ ಬಿಡುಗಡೆ ಮಾಡಿರುವ ಈ ವಿಡಿಯೊ ಸಾಂಗ್‌ ದೃಶ್ಯದ ನವಿರು ಹೆಣಿಗೆಯಿಂದಲೂ, ಸಂಗೀತದ ಕ್ಲಾಸಿಕ್‌ ಗುಣದಿಂದಲೂ, ಸಾಹಿತ್ಯದಲ್ಲಿನ ಮಾಧುರ್ಯದಿಂದಲೂ ಗಮನಸೆಳೆಯುತ್ತದೆ.

ವಿಕ್ರಮ್‌ ಹತ್ವಾರ್‌ ಬರೆದಿರುವ ಅರ್ಥಪೂರ್ಣ ಸಾಲುಗಳಿಗೆ ಭಿನ್ನಷಡ್ಜ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್‌ ಈಶ್ವರ್‌ ಹಾಡಿಗೆ ಭಾವತುಂಬಿ ಹಾಡಿದ್ದಾರೆ. ಈಗ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಬಹುಪಾಲು ಮಾಧುರ್ಯಗೀತೆಗಳ ಏಕತಾನತೆಗಿಂತ ಭಿನ್ನ ರೀತಿಯ ಸಂಯೋಜನೆ ಮತ್ತು ಸಾಹಿತ್ಯವಿರುವ ಕಾರಣಕ್ಕೇ ಈ ಹಾಡು ಹೃದಯಕ್ಕಿಳಿಯುತ್ತದೆ. ನೆನಪಿನ ಪುಸ್ತಕದಲ್ಲಿ ಮಧುರಕಾವ್ಯವಾಗಿಯೂ ಉಳಿದುಕೊಳ್ಳುತ್ತದೆ.

ಇದೇ ಹಾಡಿನ ಮುಂದಿನ ಸಾಲುಗಳನ್ನು ಗಮನಿಸಿ:

‘ಬೆಳಕಿಂದ ಪಾರಾಗಿ ಬಹುದೂರ ಬಂದಿರುವೆ

ನನ್ನೇ ನಾ ತೊರೆದ ಹಾಗೆ

ನಿಲ್ಲಲೂ ಆಗದು ಹಾರಲೂ ಆಗದು

ಸೇರಿಕೊಂಡಿದೆ ಹೂ ದುಂಬಿಯೊಳಗೆ’

ಹೂವಿನ ಮೇಲೆ ಕೂರಲಾಗದೆ ಕೂರುತ್ತ, ರೆಕ್ಕೆ ಬಡಿಯುತ್ತಲೇ ಬ್ಯಾಲೆನ್ಸ್‌ ಮಾಡುತ್ತ ಜೇನ ಹೀರುವ ದುಂಬಿಯ ತಾಜಾ ಬಿಂಬವು ಭರಿಸಲಾಗದ ತ್ಯಜಿಸಲೂ ಆಗದ ಪ್ರೇಮಧಾರಣೆಯ ಸಂತಸ–ಸಂಕಟಗಳನ್ನು ಸಶಕ್ತವಾಗಿ ಬಿಂಬಿಸುತ್ತದೆ.

ಈ ಹಾಡನ್ನು ಬಿಡುಗಡೆ ಮಾಡಿರುವ ಶಿವರಾಜ್‌ಕುಮಾರ್‌ ಹಾಡಿನ ಬಗ್ಗೆ, ಯಶವಂತ್‌ ಶೆಟ್ಟಿ, ಹರಿಪ್ರಿಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಸೂಜಿದಾರ ಸಿನಿಮಾದ ಹಾಡು ತುಂಬ ಟ್ಯೂನ್‌ ಇದೆ. ಹಾಡಿನಲ್ಲಿ ನೋವಿದೆ. ತೆಳುವಾದ ಪ್ರೇಮಭಾವವೂ ಇದೆ. ಹಾಡನ್ನು ಕೇಳಿ ತುಂಬ ಖುಷಿಯಾಯ್ತು. ಯಶ್‌ ಮತ್ತು ಹರಿಪ್ರಿಯಾ ಇಬ್ಬರೂ ಪ್ರತಿಭಾವಂತರು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.

‘ಸೂಜಿದಾರ’ ಚಿತ್ರದಲ್ಲಿ ಯಶವಂತ್‌ ಶೆಟ್ಟಿ
‘ಸೂಜಿದಾರ’ ಚಿತ್ರದಲ್ಲಿ ಯಶವಂತ್‌ ಶೆಟ್ಟಿ

ಈ ಹಾಡನ್ನು ಬರೆದಿರುವವರು ವಿಕ್ರಮ್ ಹತ್ವಾರ್‌. ‘ನಿರ್ದೇಶಕರು ಸ್ಕ್ರಿಪ್ಟ್ ಓದಿ ಹೇಳಿದ್ರು. ನಾಯಕ ನಾಯಕಿ ಮುಖಾಮುಖಿ ಆಗುವ ಸಂದರ್ಭಕ್ಕೆ ಒಂದು ಹಾಡು ಬೇಕು ಅಂದ್ರು. ಆ ಪಾತ್ರಗಳ ಒಳತುಮುಲಗಳು, ಇಡೀ ಸಿನಿಮಾದ ಆಶಯ, ಮತ್ತು ನಾಯಕ ನಾಯಕಿಯ ಮುಖಾಮುಖಿ, ಇದೆಲ್ಲವನ್ನು ಇಟ್ಟುಕೊಂಡು ಹಾಡು ಬರೆದೆ. ನಂತರ ಟ್ಯೂನ್‌ ಹಾಕಲಾಯಿತು. ಪ್ರೇಮ, ವಿಷಾದ, ಯಾತನೆ, ಬಿಡುಗಡೆಯ ಹಂಬಲ, ಎಲ್ಲವೂ ಇರುವ ಹಾಡಾಗಿ ಬಂದಿದೆ. ಇದು ಪ್ರೇಮಗೀತೆಯೂ ಸಿನಿಮಾದ ಥೀಮ್ ಗೀತೆಯೂ ಆಗುವ ಒಂದು ಸಣ್ಣ ಹೊಸ ಪ್ರಯತ್ನ’ ಎಂದು ಹಾಡು ಹುಟ್ಟಿದ ಕುರಿತು ವಿವರಿಸುತ್ತಾರೆ ವಿಕ್ರಮ್‌.

ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಯಶವಂತ್‌ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಪರಿಚಿತರಾಗುತ್ತಿದ್ದಾರೆ. ಅಚ್ಯುತ್‌ಕುಮಾರ್‌, ಸುಚೇಂದ್ರ ಪ್ರಸಾದ್‌, ಚೈತ್ರಾ ಕೊಟೂರ್‌, ಶ್ರೇಯಾ ಅಂಚನ್‌, ಬಿರಾದಾರ್‌ ಮುಂತಾದವರು ತಾರಾಗಣದಲ್ಲಿದ್ದಾರೆ. ಎಚ್‌.ಬಿ. ಇಂದ್ರಕುಮಾರ್‌ ಅವರ ಕಥೆಯನ್ನು ಸಿನಿಮಾ ರೂಪಕ್ಕೆ ಒಗ್ಗಿಸಿದ್ದಾರೆ ಮೌನೇಶ್‌ ಬಡಿಗೇರ್‌. ಅಶೋಕ್‌ ರಾಮನ್‌ ಛಾಯಾಗ್ರಹಣ, ಎಸ್‌. ಪ್ರದೀಪ್‌ ಕುಮಾರ್‌ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ವಿಕ್ರಮ್‌ ಹತ್ವಾರ್‌
ವಿಕ್ರಮ್‌ ಹತ್ವಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT