ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಅಯಾನ ಸಿನಿಯಾನ

Last Updated 2 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅಯಾನ ಇದೀಗ ಕಮರ್ಷಿಯಲ್‌ ಚಿತ್ರಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ನಟ ಪೃಥ್ವಿ ಅಂಬಾರ್‌ ನಾಯಕನಾಗಿ ನಟಿಸಿರುವ, ಸುಕೇಶ್‌ ಶೆಟ್ಟಿ ನಿರ್ದೇಶನದ ‘ದೂರದರ್ಶನ’ ಸಿನಿಮಾದಲ್ಲಿ 80ರ ದಶಕದ ಹುಡುಗಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ ಅಯಾನ. ಇಂದು(ಮಾರ್ಚ್‌ 3) ಸಿನಿಮಾ ಬಿಡುಗಡೆಯಾಗಿದ್ದು, ಈ ಹೊತ್ತಿನಲ್ಲಿ ಅವರ ಜೊತೆಗೊಂದು ಮಾತುಕತೆ.

‘ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. ಪಕ್ಕಾ ಪೇಟೆ ಹುಡುಗಿ ನಾನು. ನಟನೆಯ ಕನಸು ಹೊತ್ತು ಬೆಳೆದವಳೇ ಅಲ್ಲ. ನಾನು ಭರತನಾಟ್ಯ ಕಲಿತಿದ್ದೇನೆ. ಹತ್ತನೇ ತರಗತಿ ಓದುತ್ತಿರುವಾಗಲೇ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ನಾನು ಚಿಕ್ಕವಳಂತೆ ಕಾಣುತ್ತಿದ್ದ ಕಾರಣ ಇನ್ನೂ ಸ್ವಲ್ಪ ವರ್ಷ ಕಾಯಲು ಸೂಚಿಸಿದರು. ಇದಾದ ಬಳಿಕ ಎಂ.ಎಸ್‌.ಸತ್ಯು ಅವರ ನಾಟಕಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅವರ ನಿರ್ದೇಶನದ ಮೂರು ನಾಟಕಗಳಲ್ಲಿ ಲೀಡ್‌ನಲ್ಲಿ ನಟಿಸಿದೆ. ಇವುಗಳು 40 ಪ್ರದರ್ಶನ ಕಂಡಿವೆ. ಹೀಗೆ ರಂಗಭೂಮಿ ಹಿನ್ನೆಲೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟವಳು ನಾನು’ ಎಂದು ಅಯಾನ ಸಿನಿಪಯಣದ ಆರಂಭವನ್ನು ಬಿಚ್ಚಿಟ್ಟರು.

‘ಇಲ್ಲಿರಲಾರೆ...’ ಸಿನಿಮಾ ಬಳಿಕ ಬ್ರೇಕ್‌ ತೆಗೆದುಕೊಂಡಿಲ್ಲ. ಈ ಅವಧಿಯಲ್ಲಿ ಮಾಡೆಲಿಂಗ್‌, ಜಾಹೀರಾತುಗಳ ಚಿತ್ರೀಕರಣದಲ್ಲಿ ನಾನು ತೊಡಗಿಸಿಕೊಂಡಿದ್ದೆ. ‘ದೂರದರ್ಶನ’ ಕಮರ್ಷಿಯಲ್‌ ದೃಷ್ಟಿಯಿಂದ ನನ್ನ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ‘ಮೈತ್ರಿ’ ಎಂಬ ಪಾತ್ರ ಮಾಡಿದ್ದೇನೆ. ಈ ಕಥೆ ನಡೆಯುವುದು 80–90ರ ದಶಕದಲ್ಲಿ. ಹೀಗಾಗಿ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ನಿಜ ಜೀವನಕ್ಕೂ ರೀಲ್‌ನಲ್ಲಿನ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಪಾತ್ರಕ್ಕೆ ಸಿದ್ಧವಾಗಬೇಕಾದರೆ ಬಹಳಷ್ಟು ತಯಾರಿಯ ಅಗತ್ಯವಿತ್ತು. ದಕ್ಷಿಣ ಕನ್ನಡದ ಪುತ್ತೂರು ಸಮೀಪದ ಆರ್ಲಪದವು ಎಂಬಲ್ಲಿ ಸುಮಾರು 38 ದಿನ ಈ ಚಿತ್ರದ ಚಿತ್ರೀಕರಣ ನಡೆಸಿದ್ದೆವು. ಆ ಊರು ನಮ್ಮ ಕಥೆಗೆ ಸೂಕ್ತವಾಗಿತ್ತು. ಹೆಚ್ಚಿನ ಸೆಟ್‌ ಹಾಕುವ ಅವಶ್ಯಕತೆ ಬರಲೇ ಇಲ್ಲ. ಅಲ್ಲಿನ ಫೀಲ್‌ 80ರ ದಶಕದ್ದಾಗಿತ್ತು’ ಎನ್ನುತ್ತಾರೆ ಅಯಾನ.

‘ಪೃಥ್ವಿ ಅಂಬಾರ್‌ ಅವರು ಈ ಸಿನಿಮಾದ ನಾಯಕ ಎಂದು ಚಿತ್ರಕ್ಕೆ ಅಡಿಷನ್‌ ನೀಡುವ ಸಂದರ್ಭದಲ್ಲಿ ನನಗೆ ತಿಳಿದಿರಲಿಲ್ಲ. ಚಿತ್ರದ ಕಂಟೆಂಟ್‌, ಪಾತ್ರಗಳಿಗಿದ್ದ ಜೀವಂತಿಕೆ ನನ್ನನ್ನು ಈ ಸಿನಿಮಾದತ್ತ ಸೆಳೆಯಿತು. ಅಡಿಷನ್‌ನಲ್ಲಿ ಆಯ್ಕೆಯಾದ ಬಳಿಕ ಪೃಥ್ವಿ ಈ ಹೀರೊ ಎಂದು ತಿಳಿಸಿದ್ದರು. ‘ದಿಯಾ’ ಸಿನಿಮಾ ನೋಡಿ ನಾನು ಮೊದಲೇ ಅವರ ಅಭಿಮಾನಿಯಾಗಿದ್ದೆ. ಅವರೇ ಈ ಚಿತ್ರದ ಹೀರೊ ಎಂದು ತಿಳಿದ ಬಳಿಕ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ’ ಎಂದು ಹೇಳುತ್ತಾರೆ.

‘ಮೈತ್ರಿ’ ಯಾರು?: ‘ಮೈತ್ರಿ’ ಆಟೊ ಚಾಲಕನ ಮಗಳು. ಟೈಲರಿಂಗ್‌ ತರಬೇತಿಯನ್ನು ಆಕೆ ಪಡೆಯುತ್ತಿರುತ್ತಾಳೆ. ಅಪ್ಪನ ಆರೈಕೆಯಲ್ಲಿ ಬೆಳೆಯುವ ಹುಡುಗಿ, ಮೇಲ್ಜಾತಿಯ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಾಗ ಮುಂದೇನಾಗುತ್ತದೆ ಎನ್ನುವುದು ಚಿತ್ರದ ಕಥೆಯಲ್ಲಿ ಮೈತ್ರಿಯ ಅಧ್ಯಾಯ. ಇದು ಕಥೆಗೆ ತಿರುವು ನೀಡುವ ಪಾತ್ರ. ಆಗಿನ ಕಾಲದಲ್ಲಿ ಪ್ರೀತಿ ಮಾಡುವುದು ಸುಲಭವಾಗಿರಲಿಲ್ಲ. ಈಗ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಎಂಬ ಸಂದೇಶ ಸಾಧನಗಳಿವೆ. ಆದರೆ ಆವಾಗಿನ ಕಾಲಕ್ಕೆ ಇದಾವುದೂ ಇಲ್ಲದೆ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಕಷ್ಟಗಳನ್ನು ಆಕೆ ಅನುಭವಿಸುತ್ತಾಳೆ ಎನ್ನುವುದನ್ನು ನಿರ್ದೇಶಕರು ಲವ್‌ಟ್ರ್ಯಾಕ್‌ನಲ್ಲಿ ತೋರಿಸಿದ್ದಾರೆ.

ಪೃಥ್ವಿ ಅಂಬಾರ್‌ ಹಾಗೂ ಉಗ್ರಂ ಮಂಜು ಅವರ ಜೊತೆಗಿನ ನಟನೆ ಅವಿಸ್ಮರಣೀಯ. ಅನುಭವಿ ಕಲಾವಿದರ ನಡುವೆಯೂ ಯಾವುದೇ ಒತ್ತಡ, ಭಯ ನನಗೆ ಇರಲಿಲ್ಲ. ಏಕೆಂದರೆ, ಪೃಥ್ವಿ ಅವರು ತಮ್ಮ ನಟನೆಗೆ ಪ್ರತಿಕ್ರಿಯೆಯನ್ನಷ್ಟೇ ನೀಡಲು ನನಗೆ ಸೂಚಿಸುತ್ತಿದ್ದರು. ಹೀಗಾಗಿ ಬಹಳ ನೈಜವಾಗಿ ದೃಶ್ಯಗಳು ಮೂಡಿಬಂದಿವೆ ಎನ್ನುತ್ತಾರೆ ಅಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT