ಮಂಗಳವಾರ, ಸೆಪ್ಟೆಂಬರ್ 29, 2020
22 °C

‘ಪುಷ್ಪ’ ಸಿನಿಮಾ ನಿರ್ದೇಶನಕ್ಕೆ ಸುಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಸುಕುಮಾರ್‌ ತೆಲುಗು ನೆಲದ ಜವಾರಿ ಗುಣವನ್ನು ಪರದೆ ಮೇಲೂ ಕಟ್ಟಿಕೊಡುವುದರಲ್ಲಿ ಸಿದ್ಧಹಸ್ತರು. ರಾಮ್‌ ಚರಣ್‌ ಮತ್ತು ಸಮಂತಾ ಅಕ್ಕಿನೇನಿ ನಟಿಸಿದ್ದ ‘ರಂಗಸ್ಥಲಂ’ ಚಿತ್ರ ಇದಕ್ಕೊಂದು ನಿದರ್ಶನ. ಸುಕುಮಾರ್‌ ತೆರೆದಿಟ್ಟ ಹಳ್ಳಿ ಸೊಡಗಿನ ಈ ಕಥನ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿತ್ತು. ಈ ಸಿನಿಮಾ ಈಗ ತಮಿಳಿಗೂ ರಿಮೇಕ್‌ ಆಗುತ್ತಿದೆ.

ಈ ಚಿತ್ರದ ಬಳಿಕ ಅವರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ‘ಪುಷ್ಪ’. ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಇದರಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. ಈಗಾಗಲೇ, ಇದರ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ರಕ್ತಚಂದನದ ಕಳ್ಳಸಾಗಣೆ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆಯಂತೆ.

ಸುಕುಮಾರ್‌ ದಕ್ಷಿಣ ಭಾರತದ ಸೃಜನಾತ್ಮಕ ನಿರ್ದೇಶಕರ ಪೈಕಿ ಒಬ್ಬರು. ‘ಆರ್ಯ’ ಚಿತ್ರದಿಂದ ಆರಂಭಗೊಂಡ ಅವರ ಯಶಸ್ಸಿನ ಯಾನ ಮುಂದುವರಿಯುತ್ತಲೇ ಇದೆ. ಮತ್ತೊಂದೆಡೆ ಅವರ ಸಂಭಾವನೆಯ ಗ್ರಾಫ್‌ ಕೂಡ ಏರಿಕೆಯಾಗುತ್ತಿದೆ.
ಈಗಾಗಲೇ, ‘ಪುಷ್ಪ’ದ ಕಥೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದಕ್ಕೆ ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡಿದೆ. ಟಾಲಿವುಡ್‌ ಮೂಲದ ಪ್ರಕಾರ ಸುಕುಮಾರ್‌ ಈ ಸಿನಿಮಾದ ನಿರ್ದೇಶನಕ್ಕಾಗಿ ₹ 20 ಕೋಟಿ ಸಂಭಾವನೆಯನ್ನು ಪಡೆದಿದ್ದಾರಂತೆ.

‘ರಂಗಸ್ಥಲಂ’ ಚಿತ್ರದ ಬಿಗ್‌ ಸಕ್ಸಸ್‌ ವೇಳೆಯೇ ‘ಪುಷ್ಪ’ದ ನಿರ್ಮಾಪಕರು ಇಷ್ಟು ಮೊತ್ತದ ಸಂಭಾವನೆ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದರಂತೆ. ‘ಅಲಾ ವೈಕುಂಠಪುರಮುಲೊ’ ಚಿತ್ರ ಸೂಪರ್‌ ಹಿಟ್‌ ಆದ ಬಳಿಕ ಅಲ್ಲು ಅರ್ಜುನ್‌ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ, ಇಬ್ಬರಿಗೂ ಕೋವಿಡ್‌–19ನಿಂದ ಸೃಷ್ಟಿಯಾಗಿರುವ ಆರ್ಥಿಕ ಸಂಕಷ್ಟದ ನಡುವೆಯೇ ಮೊದಲೇ ನಿಗದಿಯಾದ ಸಂಭಾವನೆ ನೀಡಲು ಮೈತ್ರಿ ಮೂವಿ ಮೇಕರ್ಸ್‌ ಮುಂದಾಗಿದೆ.

ತಂತ್ರಜ್ಞರಿಗೆ ಕೋವಿಡ್‌ ಸೋಂಕು ಕಾಣಿಸಿಕೊಳ್ಳುವುದಕ್ಕೂ ಮೊದಲೇ ₹ 30 ಕೋಟಿ ಸಂಭಾವನೆ ನೀಡಲಾಗಿದೆ ಎನ್ನುವುದು ಟಾಲಿವುಡ್‌ ಅಂಗಳದ ಸುದ್ದಿ. ಶೀಘ್ರವೇ, ಶೂಟಿಂಗ್‌ ಆರಂಭಿಸಲು ಸುಕುಮಾರ್‌ ಸಿದ್ಧತೆ ನಡೆಸಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು