ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳದಿಂಗಳ ಬಾಲೆ @ 2019

Last Updated 18 ಫೆಬ್ರುವರಿ 2019, 14:50 IST
ಅಕ್ಷರ ಗಾತ್ರ

ಪ್ರೇಮ ಬದಲಾಗಿಲ್ಲ; ಆದರೆ ಅದರ ಪ್ರೆಸೆಂಟೇಷನ್ ಬದಲಾಗಿದೆ. ಆಗ ಪರಸ್ಪರ ರೀಚ್‌ ಆಗಲಿಕ್ಕೆ ಸಾಧನಗಳು ಕಡಿಮೆ ಇದ್ದವು. ಎರಡೂವರೆ ದಶಕಗಳ ಹಿಂದೆ ನಾನು ‘ಬೆಳದಿಂಗಳ ಬಾಲೆ’ ಸಿನಿಮಾ ಮಾಡಿದಾಗ ಲ್ಯಾಂಡ್‌ ಲೈನ್ ಮಾತ್ರವೇ ಇತ್ತು.

ಆದರೆ ಈಗ ತಂತ್ರಜ್ಞಾನ ತುಂಬ ಮುಂದುವರಿದಿದೆ. ಎಲ್ಲರ ಕೈಯಲ್ಲಿ ಮೊಬೈಲ್‌ಗಳಿವೆ. ಹಾಗಾದರೆ ಇಂದಿನ ತಂತ್ರಜ್ಞಾನ ಪಾರಮ್ಯ ಕಾಲದಲ್ಲಿ ‘ಬೆಳದಿಂಗಳ ಬಾಲೆ’ ಹೇಗಿರುತ್ತಾಳೆ ಗೊತ್ತೆ? ನಾನು ‘ಬೆಳದಿಂಗಳ ಬಾಲೆ’ ಸಿನಿಮಾವನ್ನು ಇಂದಿನ ಕಾಲಮಾನಕ್ಕೆ ಹೊಂದಿಸಿಕೊಂಡು ಪೂರ್ತಿ ಸ್ಕ್ರಿಪ್ಟ್ ಸಿದ್ಧ ಮಾಡಿಟ್ಟುಕೊಂಡಿದ್ದೇನೆ. ಒಂದು ದೃಶ್ಯ ಹೇಳುತ್ತೇನೆ:

ಹುಡುಗಿ ಹುಡುಗನಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿ ಹೇಳುತ್ತಾಳೆ. ‘ಇನ್ನು ಇಪ್ಪತ್ತು ನಿಮಿಷಕ್ಕೆ ನಾನು ಒರಾಯನ್ ಮಾಲ್‌ನಲ್ಲಿ ಇರುತ್ತೇನೆ. ನೀನು ಅಲ್ಲಿಗೆ ಬಂದು ನನ್ನನ್ನು ಕಂಡುಹಿಡಿದರೆ ನಾನು ನಿಮಗೆ ಸಿಗ್ತೇನೆ. ನಂತರ ಅಲ್ಲಿಯೇ ಒಂದು ಕಾಫಿಶಾಪ್‌ನಲ್ಲಿ ಕಾಫಿ ಕುಡಿಯಬಹುದು’.

ಅಲ್ಲಿಂದ ಶುರು. ನಾಯಕ ವೇಗವಾಗಿ ಒರಾಯನ್ ಮಾಲ್‌ಗೆ ಬಂದು ಕಾರ್‌ಪಾರ್ಕ್ ಮಾಡಿ ಮೇಲೆ ಓಡ್ತಾನೆ. ಅವರಿಬ್ಬರೂ ಫೋನ್‌ ಲೈನ್‌ನಲ್ಲಿಯೇ ಇದ್ದಾರೆ.

ಹುಡುಗಿ: ನೀವು ಬಂದಿದ್ದು ಗೊತ್ತಾಯ್ತು. ನಾನು ನಿಮ್ಮನ್ನು ನೋಡ್ತಾ ಇದ್ದೀನಿ.

ಅವನು ಇನ್ನಷ್ಟು ಗಡಿಬಿಡಿಗೆ ಬೀಳುತ್ತಾನೆ.

ಹುಡುಗ: ಎಲ್ಲಿ? ಯಾವ ಫ್ಲೋರ್‌?

ಹುಡುಗಿ: ನೀವು ಈಗ ಇರುವ ಫ್ಲೋರ್‌ನಲ್ಲಿಯೇ ಇದ್ದೇನೆ. ನಿಮ್ಮ ಬಲಕ್ಕೆ ತಿರುಗಿ ನೋಡಿ. ನೀಲಿ ಜೀನ್ಸ್‌ ಹಾಕಿಕೊಂಡಿದ್ದೇನೆ. ಗುರ್ತು ಹಿಡೀರಿ ನೋಡೋಣ.

ಹುಡುಗ ಬಲಕ್ಕೆ ತಿರುಗಿ ನೋಡುತ್ತಾನೆ. ಅಲ್ಲಿ ಎಂಟ್ಹತ್ತು ಹುಡುಗಿಯರು ನೀಲಿ ಜೀನ್ಸ್‌ ಹಾಕಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿರುತ್ತಾರೆ. ಅವರಲ್ಲಿ ಯಾರು? ಗೊತ್ತಾಗದೆ ಗೊಂದಲಕ್ಕೆ ಬೀಳುತ್ತಾನೆ.

ಹುಡುಗ: ರೀ, ಎಲ್ಲ ಹುಡುಗಿಯರೂ ಸಾಮಾನ್ಯವಾಗಿ ನೀಲಿ ಜೀನ್ಸ್‌ ಅನ್ನೇ ಹಾಕೋತಾರೆ. ಅದರಲ್ಲಿ ನೀವಿದ್ದೀರಾ ಎಂದು ಹೇಗೆ ನಂಬುವುದು?

ಹುಡುಗಿ: ನಾನು ನಿಮ್ಮನ್ನು ನೋಡ್ತಾನೇ ಇದೀನಿ. ನೀವು ಹಳದಿ ಷರ್ಟ್‌ ಹಾಕ್ಕೊಂಡಿದ್ದೀರಿ. ನಿಜ ತಾನೆ?

ಹುಡುಗ: ಹೌದು. ನೀವು ನನ್ನ ನೋಡ್ತಿದೀರಾ ಅಂತ ಗೊತ್ತಾಯ್ತು. ಆದ್ರೆ ನಾನು ನಿಮ್ಮನ್ನು ನೋಡಕ್ಕಾಗ್ತಿಲ್ವಲ್ಲ. ಒಂದೇ ಒಂದು ಸುಳಿವು ಕೊಡಿ ಪ್ಲೀಸ್‌.

ಹುಡುಗಿ: (ನಕ್ಕು) ಸರಿ. ಕ್ಲೂ ಕೊಡ್ತೀನಿ. ನಾನು ಬ್ಲ್ಯಾಕ್‌ ಟಾಪ್ ಹಾಕಿಕೊಂಡಿದೀನಿ. ಅದರ ಮೇಲೆ ಬಿಳಿಯ ಹೂಗಳ ಚಿತ್ತಾರ ಇದೆ. ಈಗಲಾದ್ರೂ ಗುರ್ತಿ ಹಿಡೀರಿ.

ಹುಡುಗಿ ಫೋನ್‌ ಕಾಲ್‌ ಕಟ್ ಆಗುತ್ತದೆ. ಹುಡುಗ ಗಡಿಬಿಡಿಯಿಂದ ಅತ್ತಿಂದಿತ್ತ ಓಡಾಡುತ್ತ ಹುಡುಕಲಿಕ್ಕೆ ಶುರುಮಾಡುತ್ತಾನೆ. ಕಾಣಿಸುವುದಿಲ್ಲ. ಈ ಸಮಯದಲ್ಲಿ ಕ್ಯಾಮೆರಾ ಒಂದು ಬ್ಲ್ಯಾಕ್‌ ಟಾಪ್‌ ಹಾಕಿಕೊಂಡು ಕಂಬದ ಮರೆಯಲ್ಲಿ ನಿಂತಿರುವ ಹುಡುಗಿಯ ಭುಜದ ಮೇಲೆ ಫೋಕಸ್‌ ಆಗುತ್ತದೆ. ಅದು ಅವನ ಆಸುಪಾಸಿನಲ್ಲಿಯೇ ಇದೆ. ಪ್ರೇಕ್ಷಕರಿಗೂ ‘ಅಯ್ಯೋ ಒಂಚೂರು ಹಿಂತಿರುಗಿ, ಆ ಕಡೆ ನೋಡಿದ್ರೆ ಸಿಕ್‌ ಬಿಡ್ತಿದ್ಲು’, ‘ಥತ್, ಆ ಕಡೆ ಹೋಗ್ಬಿಟ್ಟ’ ‘ಇಲ್ಲಿ ನೋಡಿದ್ರೆ ಆಗ್ಬಿಡ್ತಿತ್ತು’ ಅಂತೆಲ್ಲ ಚಡಪಡಿಕೆ ಶುರುವಾಗುತ್ತದೆ.

ಅಷ್ಟರಲ್ಲಿ ಹುಡುಗಿಯ ಕಾಲ್ ಬರುತ್ತದೆ. ಹುಡುಗ ರಿಸೀವ್ ಮಾಡ್ತಾನೆ.

ಹುಡುಗಿ: ನಿಮಗೆ ಕೊಟ್ಟ ಟೈಮ್‌ನಲ್ಲಿ ಇನ್ನು ಎರಡು ನಿಮಿಷ ಉಳ್ಕೊಂಡಿದೆ. ಅಷ್ಟರೊಳಗೆ ಹುಡುಕಿದ್ರೆ ಕಾಫಿ ಡೇ. ಇಲ್ಲಾಂದ್ರೆ ಬಾಯ್‌ ಬಾಯ್. ಮತ್ತೆ ಭೇಟಿಯಾಗೋಣ, ಯಾವಾಗಲಾದ್ರೂ.

ಹುಡುಗ: ರೀ.. ರೀ.. ನಿಲ್ರೀ... ಹಾಗೆಲ್ಲ ಬಿಟ್ಟು ಹೋಗ್ಬೇಡಿ. ಕಷ್ಟಪಟ್ಟು ಇಲ್ಲೀವರೆಗೆ ಬಂದಿದೀನಿ. ಈ ಸಲ ನಿಮ್ಮನ್ನು ಹುಡುಕಿಯೇ ಹುಡುಕ್ತೀನಿ.

ಗಾಬರಿಯಲ್ಲಿಯೇ ಎಸ್ಕಲೇಟರ್ ಹತ್ತಿ ನಾಲ್ಕನೇ ಫ್ಲೋರ್‌ ಕಡೆಗೆ ಓಡಲು ಶುರುಮಾಡ್ತಾನೆ. ನಾಲ್ಕನೇ ಫ್ಲೋರ್‌ನಲ್ಲಿ ಪಿವಿಆರ್ ಸಿನಿಮಾ. ತುಂಬ ಜನರು. ಹಾಗೆ ಹತ್ತುತ್ತಿದ್ದಾಗಲೇ ಕೆಳಗೆ ಬಾಗಿ ನೋಡುತ್ತಾನೆ. ಕೆಳಗೆ ಎರಡನೇ ಫ್ಲೋರ್‌ನಿಂದ ಒಂದನೇ ಫ್ಲೋರ್‌ಗೆ ಇಳಿಯುವ ಎಸ್ಕಲೇಟರ್‌ ಮೇಲೆ ಒಂದು ಹುಡುಗಿ ಕಾಣಿಸುತ್ತಾಳೆ! ಅದೇ ನೀಲಿ ಜೀನ್ಸ್‌ ಮತ್ತು ಕಪ್ಪು ಟಾಪ್‌ ಹುಡುಗಿ. ಮೇಲಿನಿಂದ ತಲೆಯಷ್ಟೇ ಕಾಣುತ್ತಿದೆ; ಮುಖ ಕಾಣಿಸುತ್ತಿಲ್ಲ. ಹುಡುಗನಿಗೆ ಪಕ್ಕಾ ಆಗಿ ಬಿಡುತ್ತದೆ. ‘ನಾನು ಹುಡುಕುತ್ತಿರುವುದು ಇವಳನ್ನೇ’. ಮೂವತ್ತು ಸೆಕೆಂಡ್‌ ಸಮಯ ಉಳಿದಿದೆ. ದಢದಢನೆ ಎಸ್ಕಲೇಟರ್‌ ಇಳಿದು ಬರುತ್ತಾನೆ. ಕೆಳಗೆ ಬಂದು ಏದುಸಿರು ಬಿಡುತ್ತ ಗ್ರೌಂಡ್‌ ಫ್ಲೋರ್‌, ಪಾರ್ಕಿಂಗ್‌ ಎಲ್ಲಾ ಓಡಾಡುತ್ತಾನೆ. ಅಷ್ಟರಲ್ಲಿ ಸಮಯ ಮುಗಿಯಿತು. ಹುಡುಗಿ ಪತ್ತೆ ಹತ್ತುವುದೇ ಇಲ್ಲ. ಮೇಲಿನಿಂದ ನೋಡಿದ ತಲೆ ಮತ್ತು ಕಪ್ಪು ಟಾಪ್‌ ಅಷ್ಟೇ ಅವನ ಮನಸಲ್ಲಿ ಉಳಿದಿರುತ್ತದೆ.

ಹೀಗೆ ಇಪ್ಪತ್ತೈದು ವರ್ಷಗಳ ಹಿಂದಿನ ‘ಬೆಳದಿಂಗಳ ಬಾಲೆ’ ಸಿನಿಮಾದ ನಾಯಕ–ನಾಯಕಿಯ ಭಾವನೆಗಳು ಈಗಲೂ ಹಾಗೆಯೇ ಇವೆ. ಆದರೆ ತಂತ್ರಜ್ಞಾನದ ಕಾರಣದಿಂದ ಅವುಗಳ ಪ್ರೆಸೆಂಟೇಷನ್‌ ಇನ್ನೂ ಹೆಚ್ಚು ಕುತೂಹಲಕಾರಿ ಮತ್ತು ಥ್ರಿಲ್ಲಿಂಗ್ ಆಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT