ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಯತ್ತ ಸುಪ್ರೀತಾ...

Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಸೀತಾವಲ್ಲಭ’ ಧಾರಾವಾಹಿ ಕಿರುತೆರೆ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಅಚ್ಚು–ಗುಬ್ಬಿಯ ಮಧುರ ಸ್ನೇಹ ಕಥೆ, ಆರ್ಯ–ಮೈಥಿಲಿಯ ಪ್ರೇಮ ಬಾಂಧವ್ಯಕ್ಕೆ ಸಾಕ್ಷಿಯಾದ ಸೀತಾವಲ್ಲಭದ ಮೈಥಿಲಿ ಪಾತ್ರ ಕರ್ನಾಟಕದಾದ್ಯಂತ ಹೆಸರು ಗಳಿಸಿತ್ತು. ಈ ಪಾತ್ರಕ್ಕೆ ಜೀವ ತುಂಬಿದ್ದವರು ಮೈಸೂರು ಮೂಲದ ಸುಪ್ರೀತಾ ಸತ್ಯನಾರಾಯಣ.

ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದ ಇವರು ಮೊದಲ ಧಾರಾವಾಹಿ ಯಿಂದಲೇ ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇನ್ನಷ್ಟೇ ಪ್ರಸಾರವಾಗಬೇಕಿರುವ ‘ಸರಸು’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಇಂತಿಪ್ಪ ಸುಪ್ರೀತಾ ತಮ್ಮ ಕಿರುತೆರೆ ಹಾಗೂ ಹಿರಿತೆರೆಯ ಪಯಣದ ಬಗ್ಗೆ ‘ಪ್ರಜಾ ಪ್ಲಸ್’ ಜೊತೆ ಮಾತನಾಡಿದ್ದಾರೆ.

ಬರವಣಿಗೆಯ ಕನಸಿನೊಂದಿಗೆ ಸಾಗಿದ ನಟನೆಯ ಹೆಜ್ಜೆ

ಎಂಜಿನಿಯರಿಂಗ್ ಪದವಿ ಪ‍ಡೆದು ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದ ಸುಪ್ರೀತಾಗೆ ಬರವಣಿಗೆ ಎಂದರೆ ವಿಪರೀತ ಒಲವು. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸ್ಕ್ರಿಪ್ಟ್ ರೈಟರ್ ಪರೀಕ್ಷೆ ಬರೆಯಲು ಹೋಗಿದ್ದ ಅವರು ಆಕಸ್ಮಿಕವಾಗಿ ಸೀತಾವಲ್ಲಭ ಧಾರಾವಾಹಿ ತಂಡದವರೊಬ್ಬರ ಕಣ್ಣಿಗೆ ಬೀಳುತ್ತಾರೆ. ಅವರು ಇವರಿಗೆ ನಟನೆ ಬಗ್ಗೆ ಆಸಕ್ತಿ ಇದೆಯಾ? ಆಡಿಷನ್ ಕೊಡಿ ಎಂದಿದ್ದರು. ನಟನೆಯ ಹಿಂದುಮುಂದು ತಿಳಿಯದೇ ಆಡಿಷನ್ ನೀಡಿದ ಸುಪ್ರೀತಾ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆ ಆಗಿದ್ದರು.

ಮೈಥಿಲಿ ಪಾತ್ರ ತಂದ ಯಶಸ್ಸು

‘ಮೈಥಿಲಿ ಅನ್ನೋ ಪಾತ್ರ ನನ್ನ ಜೀವನದಲ್ಲಿ ಇಷ್ಟೊಂದು ಯಶಸ್ಸಿಗೆ ಕಾರಣವಾಗುತ್ತದೆ ಎಂಬುದನ್ನು ನಾನು ಅಂದುಕೊಂಡೇ ಇರಲಿಲ್ಲ. ಈಗ ಎಲ್ಲಿಗೆ ಹೋದರೂ ನನ್ನನ್ನು ಗುರುತಿಸುತ್ತಾರೆ. ಈ‍‍‍ಪಾತ್ರ ಜನರ ಮನಸ್ಸಿನಲ್ಲಿ ಇಷ್ಟೊಂದು ಆಳವಾಗಿ ಬೇರೂರುತ್ತದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಮೇಕಪ್‌ ಇಲ್ಲದೆ, ಕನ್ನಡಕ ಧರಿಸಿದರೆ ಅಷ್ಟು ಸುಲಭವಾಗಿ ನನ್ನನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಈಗ ಕನ್ನಡಕ ಹಾಕಿ, ಮಾಸ್ಕ್ ಹಾಕಿದ್ದರೂ ಜನ ಗುರುತಿಸುತ್ತಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಇಷ್ಟಕ್ಕೆಲ್ಲಾ ಮೈಥಿಲಿ ಪಾತ್ರವೇ ಕಾರಣ’ ಎನ್ನುವ ಖುಷಿ ಈ ಬೆಡಗಿಯದ್ದು.

ಸಿನಿಮಾದಲ್ಲಿ ನಟನೆ

ಸೀತಾವಲ್ಲಭ ಧಾರಾವಾಹಿ ಮುಗಿದ ಕೆಲವು ದಿನಗಳಲ್ಲೇ ಸಿನಿಮಾವೊಂದಕ್ಕೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಸುಪ್ರೀತಾ. ಹೆಸರು ಅಂತಿಮವಾಗದ ಸಿನಿಮಾವೊಂದರಲ್ಲಿ ಅರ್ಜುನ್ ಯೋಗಿ ಜೊತೆ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಶ್ರೀರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸ್ಕ್ರಿಪ್ಟ್‌ ರೈಟರ್ ಆಗಿದ್ದ ಶ್ರೀರಾಜ್ ಮೊದಲ ಬಾರಿಗೆ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಸಿನಿಮಾದ ಪಾತ್ರ ಹಾಗೂ ಕಥೆಯ ಗುಟ್ಟು ಬಿಟ್ಟು ಕೊಡದ ಇವರು ‘ಈ ಸಿನಿಮಾದ ಕಥೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಸಿನಿಮಾ ನೋಡುತ್ತಾ ಹೋದಂತೆ ಪ್ರತಿಯೊಬ್ಬರಿಗೂ ಇದು ನನ್ನ ಜೀವನದಲ್ಲಿ ನಡೆದ ಕಥೆಯಂತೆ ಇದೆ ಅನ್ನಿಸುತ್ತದೆ. 3 ಗಂಟೆ ಕಾಲ ಜನರಲ್ಲಿ ಕುತೂಹಲ ಹುಟ್ಟಿಸಿ ಕುಳಿತಲ್ಲೇ ಕುಳಿತುಕೊಳ್ಳುವಂತೆ ಮಾಡುವ ಅದ್ಭುತ ಕಥೆ ಹೊಂದಿರುವ ಚಿತ್ರ’
ಎನ್ನುತ್ತಾರೆ.

‘ಸರಸು’ ಧಾರಾವಾಹಿ ಬಗ್ಗೆ..

‘ಸರಸು’ ಧಾರಾವಾಹಿಯಲ್ಲಿ ಇವರದ್ದು ನಾಯಕಿಯ ಪಾತ್ರ. ‘ಸರಸು ಹಳ್ಳಿಯಲ್ಲಿ ಬೆಳೆಯುವ ಆಶಾವಾದಿ ಹುಡುಗಿ. ಚೆನ್ನಾಗಿ ಓದಿ ತನ್ನ ಹಳ್ಳಿಯನ್ನು ಉದ್ಧಾರ ಮಾಡಬೇಕು ಎಂಬ ಕನಸು ಇಟ್ಟುಕೊಂಡಿರುವ ಹುಡುಗಿ. ಈ ಪಾತ್ರ ನನ್ನ ಮೊದಲ ಧಾರಾವಾಹಿಯ ಪಾತ್ರಕ್ಕಿಂತ ತುಂಬಾ ಭಿನ್ನವಾಗಿದೆ’ ಎನ್ನುತ್ತಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT