ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳುವ ಮೊದಲೇ ಬಾಡಿದ ಸುಶಾಂತ್ ಸಿಂಗ್‌ ರಜಪೂತ್‌

ಅಕ್ಷರ ಗಾತ್ರ

1986 ಜನವರಿ 21ರಲ್ಲಿ ಬಿಹಾರ ಪಟ್ನಾದಲ್ಲಿ ಜನಿಸಿದ್ದ ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಬಹುಮುಖ ಪ್ರತಿಭೆ. ನೃತ್ಯ, ನಾಟಕ, ಟಿವಿ ಧಾರಾವಾಹಿಗಳು ಹಾಗೂ ಸಿನಿಮಾಗಳ ಮೂಲಕ ಖ್ಯಾತಿ ಪ್ರವರ್ಧಮಾನಕ್ಕೆ ಬಂದವರು. ಇತ್ತೀಚೆಗೆ ಹೆಸರು ಕೊಟ್ಟಿದ್ದ ಸಿನಿಮಾ ಅವರು ನಾಯಕ ನಟನಾಗಿ ನಟಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರ ಜೀವನಚರಿತ್ರೆ ಆಧಾರಿತ ’ಎಂ.ಎಸ್‌. ಧೋನಿ ಅನ್‌ಟೋಲ್ಡ್‌ ಸ್ಟೋರಿ‘.

ಶಾಮಕ್‌ ದಾವರ್‌ ಅಡಿಯಲ್ಲಿ ನೃತ್ಯದಲ್ಲಿ ಪಳಗಿದ್ದ ಸುಶಾಂತ್‌ ನಂತರ ನಾಟಕಗಳಲ್ಲೂ ಅಭಿನಯಿಸಲು ಆರಂಭಿಸಿದರು. ಇದು ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್‌ ಅವರ ಗಮನ ಸೆಳೆಯಿತು. ಏಕ್ತಾ ಅವರ ನಿರ್ಮಾಣದಲ್ಲಿ ಸ್ಟಾರ್ ಪ್ಲಸ್ಟ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ’ಕಿಸ್ ದೇಶ್ ಮೆ ಹೈ ಮೇರಾ ದಿಲ್‘ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಜೀ ಟಿವಿಯಲ್ಲಿ ಪ್ರಸಾರವಾಗಿದ್ದ ’ಪವಿತ್ರ ರಿಷ್ತಾ‘ ಧಾರಾವಾಹಿಯಿಂದ ಹೆಚ್ಚು ಖ್ಯಾತರಾಗಿದ್ದರು. ಅಲ್ಲದೇ ಈ ಧಾರಾವಾಹಿ ಇವರಿಗೆ ದೇಶದಾದ್ಯಂತ ಅನೇಕ ಮಹಿಳಾ ಅಭಿಮಾನಿಗಳು ಹುಟ್ಟಿಕೊಳ್ಳುವಂತೆ ಮಾಡಿತ್ತು. ‘ಝರಾ ನಚ್‌ ಕೆ ದಿಖಾ’ ಹಾಗೂ ‘ಜಲಖ್‌ ದಿಖಲಾ ಜಾ’ ಟಿವಿ ಡಾನ್ಸ್‌ ಶೋಗಳಲ್ಲೂ ಭಾಗವಹಿಸಿದ್ದ ಹೆಮ್ಮೆ ಅವರದ್ದು.

ಕಾಯ್‌ ಪೊ ಚೆ

ನಟ, ನರ್ತಕ, ಉದ್ಯಮಿ ಹಾಗೂ ಉದಾರದಾನಿಯಾಗಿದ್ದ ಸುಶಾಂತ್ 2013ರಲ್ಲಿ ’ಕಾಯ್‌ ಪೊ ಚೆ‘ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಾರೆ. ಈ ಸಿನಿಮಾಕ್ಕೆ ಫಿಲ್ಮಫೇರ್‌ ಪ್ರಶಸ್ತಿಗೆ ನಾಮಿನೇಟ್‌ ಆಗುತ್ತಾರೆ. ನಂತರ ಹಿಂದಿರುಗಿ ನೋಡದ ಇವರು ಅನೇಕ ಸಿನಿಮಾಗಳಲ್ಲಿ ನಟಿಸುತ್ತಾರೆ.

’ಶುದ್ಧ್‌ ದೇಸಿ ರೋಮ್ಯಾನ್ಸ್‘, ’ಡಿಟೆಕ್ಟಿವ್‌ ಬ್ಯೋಮಕೇಶ್‌ ಬಕ್ಷಿ‘ ಸಿನಿಮಾಗಳು ಅಷ್ಟರ ಮಟ್ಟಿಗೆ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಕಂಡಿಲ್ಲ. ಆದರೆ ನಂತರದ ಸಿನಿಮಾದ ಅಮೀರ್ ಖಾನ್ ನಟನೆಯ ’ಪಿಕೆ‘ಯಲ್ಲಿನ ಪೋಷಕ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ನಂತರದ ಎಂ.ಎಸ್. ಧೋನಿ ಸಿನಿಮಾಕ್ಕೆ ಪುನಃ ಉತ್ತಮ ನಟ ಎಂಬ ‘ಸ್ಕ್ರೀನ್‌ ಪ್ರಶಸ್ತಿ’ಯನ್ನು ಪಡೆಯುತ್ತಾರೆ.

2018 ಹಾಗೂ 2019ರಲ್ಲಿ ಕ್ರಮವಾಗಿ ಬಿಡುಗಡೆಯಾದ ’ಕೇದಾರ್‌ನಾಥ್‘ ಹಾಗೂ ’ಚಿಚೋರೆ ಸಿನಿಮಾಗಳು‘ ಇವರ ಹೆಸರಿಗೆ ಇನ್ನಷ್ಟು ಖ್ಯಾತಿ ಸಿಗುವಂತೆ ಮಾಡಿದ್ದವು.

ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಜೊತೆಗೆ ದಾನಿಯೂ ಆಗಿರುವ ಸುಶಾಂತ್ ಯುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ’ಸುಶಾಂತ್4ಎಜುಕೇಷನ್‘ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ವೈಯಕ್ತಿಕ ಜೀವನ

ಪಟ್ನಾದ ಪೂರ್ಣಿಯ ಜಿಲ್ಲೆಯಲ್ಲಿ ಜನಿಸಿರುವ ಇವರ ಸಹೋದರಿ ಮಿತು ಸಿಂಗ್ ಕ್ರಿಕೆಟ್ ಆಟಗಾರ್ತಿ. 2002ರಲ್ಲಿ ತಾಯಿಯನ್ನ ಕಳೆದುಕೊಂಡ ಸುಶಾಂತ್ ಆ ನಂತರ ಕುಟುಂಬದೊಂದಿಗೆ ದೆಹಲಿಯಲ್ಲಿ ನೆಲೆ ನಿಂತರು.

ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಸುಶಾಂತ್ ಭೌತಶಾಸ್ತ್ರದಲ್ಲಿ ನ್ಯಾಷನಲ್ ಒಲಂಪಿಯಾರ್ಡ್ ವಿಜೇತರಾಗಿದ್ದರು. ನಾಟಕಗಳು ಹಾಗೂ ಡಾನ್ಸ್‌ನ ಮೇಲೆ ಆಸಕ್ತಿ ಹುಟ್ಟಿಸಿಕೊಂಡ ಸುಶಾಂತ್ ಓದು ಮುಗಿಸಿದ ನಂತರ ನಟನೆಯತ್ತ ಮನಸ್ಸು ವಾಲಿಸಿದರು.

ತನ್ನ ಸಹ ನಟಿ ಅಂಕಿತಾ ಲೋಖಾಂಡೆಯನ್ನು ಆರು ವರ್ಷಗಳ ಕಾಲ ಪ್ರೀತಿಸಿದ್ದ ಸುಶಾಂತ್ 2016ರಲ್ಲಿ ಬ್ರೇಕ್ ಅಪ್‌ ಮಾಡಿಕೊಂಡಿದ್ದರು.

ಕೈಯಲ್ಲಿದ್ದ ಚಿತ್ರಗಳು

ಆರ್. ಮಾಧವನ್ ಜೊತೆ ’ಚಂದ ಮಾಮ ದೂರ್ ಕೆ‘ ಸಿನಿಮಾದಲ್ಲೂ ಸುಶಾಂತ್ ನಟಿಸಲಿದ್ದರು, ಆದರೆ ಹಣಕಾಸಿನ ಕೊರತೆಯ ಕಾರಣದಿಂದ ಈ ಸಿನಿಮಾ ಅರ್ಧಕ್ಕೆ ನಿಂತಿತ್ತು. ಹಾಲಿವುಡ್‌ನ ’ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್‌‘ ಸಿನಿಮಾದ ಹಿಂದಿ ರಿಮೇಕ್ ’ದಿಲ್ ಬೇಚಾರ‘ ಸಿನಿಮಾದಲ್ಲಿ ನಟಿಸಲು ಸುಶಾಂತ್ ಸಹಿ ಹಾಕಿದ್ದರು. ಅಷ್ಟೇ ಅಲ್ಲದೇ ಸ್ಟೋರಿಸ್ ಆಫ್ ಇಂಡಿಯಾ ಎಂಬ ಜೀವನಚರಿತ್ರೆಯ ಸರಣಿಯಲ್ಲಿ ಚಾಣಕ್ಯ, ರವೀಂದ್ರನಾಥ ಟ್ಯಾಗೋರ್ ಹಾಗೂ ಅಬ್ದುಲ್ ಕಲಾಂ ಸೇರಿದಂತೆ 12 ಮಂದಿ ನಿಜ ಜೀವನದ ಸಾಧಕರಿಗೆ ಸಂಬಂಧಿಸಿದ ಚಿತ್ರದಲ್ಲೂ ಸುಶಾಂತ್ ನಟಿಸಲು ಸಿದ್ಧರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT