ಸುಷ್ಮಿತಾಗೆ 11ನೇ ಬಾರಿ ಲವ್

7

ಸುಷ್ಮಿತಾಗೆ 11ನೇ ಬಾರಿ ಲವ್

Published:
Updated:
Deccan Herald

ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ಗೆ ಮತ್ತೆ ಲವ್ವಾಗಿದೆ. ಈಗಾಗಲೇ ಹತ್ತು ಬಾರಿ ಲವ್ವಾಗಿ, ಬ್ರೇಕಾಗಿ, ಬ್ರೇಕಾದಾಗ ಮಂಕಾಗಿ ಸುದ್ದಿಯಾಗಿರುವ ಸುಷ್ಮಿತಾ, ತನ್ನ ಹೊಸ ಸಂಗಾತಿಯ ಬಗ್ಗೆ ರಹಸ್ಯ ಕಾಪಾಡುತ್ತಿಲ್ಲ. ಪ್ರತಿ ಬಾರಿ ಹೊಸ ಸಂಗಾತಿಯನ್ನು ಕಂಡುಕೊಂಡಾಗಲೂ ಈಕೆ ಬಿಂದಾಸ್‌ ಆಗಿ ಫೋಟೊ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು ವಿಶೇಷ.

ಸುಷ್ಮಿತಾ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ರೊಹ್ಮನ್‌ ಶಾವುಲ್‌ ಎಂಬ ರೂಪದರ್ಶಿಯನ್ನು. ವಿಶೇಷ ಏನಪ್ಪಾ ಅಂದರೆ, ಸುಷ್ಮಿತಾ ಮತ್ತು ರೊಹ್ಮನ್‌ ವಯಸ್ಸಿನ ಅಂತರ 16 ವರ್ಷ! ಇದೇ 19ರಂದು ಸುಷ್ಮಿತಾ 44ಕ್ಕೆ ಕಾಲಿಡುತ್ತಾರೆ (ನವೆಂಬರ್‌ 19, 1975). ರೊಹ್ಮನ್‌ಗೆ ಈಗ 27. ಸುಷ್ಮಿತಾ ಅವರ ಮೊದಲ ದತ್ತು ಮಗಳು ರೆನೆ ಸೇನ್‌ಗೆ ಈಗ 18ರ ಹರೆಯ! 

11ನೇ ಸಂಗಾತಿ ಎನ್ನುವುದಕ್ಕಿಂತಲೂ ಆತನ ವಯಸ್ಸಿನ ಕಾರಣಕ್ಕೆ ಸುಷ್ಮಿತಾ ಈಗ ಚರ್ಚೆಯ ಕೇಂದ್ರವಾಗಿದ್ದಾರೆ. ತಮಗಿಂತ ಹತ್ತಿಪ್ಪತ್ತು ವರ್ಷ ಚಿಕ್ಕವರನ್ನು ಸಂಗಾತಿಯಾಗಿ ಆರಿಸಿಕೊಳ್ಳುವುದು, ಮದುವೆಯಾಗುವುದು ಹಿಂದಿ ಚಿತ್ರರಂಗದಲ್ಲಿ ಹೊಸದೇನಲ್ಲ. ಮಿಲಿಂದ್‌ ಸೋಮನ್‌ ಕಳೆದ ವರ್ಷ ಮದುವೆಯಾಗಿದ್ದು ತಮಗಿಂತ 18 ವರ್ಷ ಸಣ್ಣ ವಯಸ್ಸಿನ ಅಂಕಿತಾ ಕನ್ವರ್‌ ಅವರನ್ನು. ವಯಸ್ಸಿಗೂ ಪ್ರೀತಿಗೂ, ವಯಸ್ಸಿಗೂ ಸಾಂಗತ್ಯಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಲೇ ಬಂದಿದ್ದ ಮಿಲಿಂದ್‌ ಕೊನೆಗೂ ಅಂಕಿತಾ ಸಂತೋಷಕ್ಕಾಗಿ ಅಧಿಕೃತವಾಗಿ ಮದುವೆಯಾಗಿದ್ದರು.

ಸುಷ್ಮಿತಾ ಸೇನ್‌ ಅವಿವಾಹಿತೆ. ಅವರು ಬದುಕಲ್ಲಿ ಒಂಟಿಯಾಗಿದ್ದುದು ಕಡಿಮೆ. ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಣ್ಮೆ ತೋರುವ ಈಕೆ ಸಂಬಂಧ ಸ್ವಲ್ಪ ಹಳಸುತ್ತಿದ್ದಂತೆ ದೂರವಾಗಿಬಿಡುತ್ತಾರೆ. ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಈ ನೀಳಕಾಯದ ಸುಂದರಿ, ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆಯುವ ಮೂಲಕ ಇಡೀ ಚಿತ್ರರಂಗ ಹುಬ್ಬೇರಿಸುವಂತೆ ಮಾಡಿದವರು. 2000ನೇ ಇಸವಿಯಲ್ಲಿ ರೆನೆ ಸೇನ್‌ಳನ್ನು ದತ್ತು ಪಡೆಯುವಾಗ ಸುಷ್ಮಿತಾಗೆ ಇನ್ನೂ 25ರ ಹರೆಯ. ಮದುವೆಯಾಗುವ ವಯಸ್ಸಿನಲ್ಲಿ ಹೆಣ್ಣು ಮಗಳನ್ನು ದತ್ತು ಪಡೆದ ತೀರ್ಮಾನವನ್ನು ಟೀಕಿಸಿದವರೇ ಹೆಚ್ಚು. ಆದರೆ ‘ನನ್ನ ಬದುಕು ನನ್ನ ನಿರ್ಧಾರ. ಒಂಟಿ ತಾಯಂದಿರ ಪರ ದನಿಯಾಗಲು ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಖಡಕ್‌ ಉತ್ತರ ನೀಡಿ ಟೀಕಾಕಾರ ಬಾಯಿ ಬಂದ್‌ ಮಾಡಿದ್ದರು. ಅದಾಗಿ 10 ವರ್ಷಗಳ ನಂತರ ಎರಡನೇ ಮಗಳನ್ನು (ಅಲಿಶಾ ಸೇನ್) ದತ್ತು ಪಡೆದರು.

ಸದಾ ಬಿಂದಾಸ್ ವ್ಯಕ್ತಿತ್ವದಿಂದಲೇ ಗಮನ ಸೆಳೆಯುವ ಈಕೆ ತಮ್ಮ ಸಂಗಾತಿಗಳ ಬಗ್ಗೆ ಮಕ್ಕಳಿಗೆ ಮುಚ್ಚುಮರೆ ಮಾಡುವುದಿಲ್ಲ. ರೊಹ್ಮನ್‌ ಶಾವುಲ್‌ ಮತ್ತು ಸುಷ್ಮಿತಾ ಮಕ್ಕಳ ಮುಂದೆಯೇ ರೊಮ್ಯಾಂಟಿಕ್‌ ಆಗಿ ಇರುತ್ತಾರಂತೆ. ಈ ಬಾರಿಯ ದೀಪಾವಳಿಯ ಮೊದಲ ದಿನವನ್ನು ಸಂಗಾತಿ ಮತ್ತು ಮಕ್ಕಳೊಂದಿಗೇ ಅವರು ಕಳೆದಿದ್ದರು. ಮಕ್ಕಳ ಮುಂದೆ ಗಂಭೀರವಾಗಿ ಇರುವುದಕ್ಕಿಂತ ಸಹಜವಾಗಿ ಲವಲವಿಕೆಯಿಂದ ಇರುವುದೇ ಸರಿ ಎಂಬುದು ಸುಷ್ಮಿತಾ ಸಮರ್ಥನೆ. ರೊಹ್ಮನ್‌ ಶಾವುಲ್‌, ಹೆಸರಾಂತ ವಸ್ತ್ರವಿನ್ಯಾಸಕರ ಅಚ್ಚುಮೆಚ್ಚಿನ ರೂಪದರ್ಶಿ. ಹಾಗಾಗಿ ಈ ಕ್ಷೇತ್ರದಲ್ಲಿ ಮುಂಚೂಣಿಯ ಹೆಸರುಗಳಲ್ಲೊಂದು. ಕಟ್ಟುಮಸ್ತು ಕಾಯ, ಎತ್ತರ ಮತ್ತು ಸುಂದರ ನೋಟದಿಂದ ಗಮನ ಸೆಳೆಯುತ್ತಾರೆ. ಸುಷ್ಮಿತಾ ಜೊತೆಗಿನ ನಂಟು ಎಷ್ಟು ಕಾಲ ಮುಂದುವರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !