ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಕ್ಕರ್’ ಆಡಿಯೊ ಬಿಡುಗಡೆ

Last Updated 9 ಸೆಪ್ಟೆಂಬರ್ 2019, 14:06 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳ ಇಂದಿನ ಕಾರ್ಯವೈಖರಿ ಅವಲೋಕಿಸಿದರೆ ನಾವು ಮಲಗುವ ಕೋಣೆಗಳೂ ಸುರಕ್ಷಿತವಾಗಿಲ್ಲ ಎನ್ನುವ ಆತಂಕ ಕಾಡುತ್ತದೆ. ಈ ವಿಷಯ ಇಟ್ಟುಕೊಂಡೇ ‘ಟಕ್ಕರ್’ ಚಿತ್ರದ ಕಥೆ ಹೊಸೆದಿದ್ದಾರೆ ನಿರ್ದೇಶಕ ವಿ. ರಘು ಶಾಸ್ತ್ರಿ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಸಾಮಾಜಿಕ ಜಾಲತಾಣಗಳಿಂದ ಬದುಕು ದುಸ್ತರವಾಗಿದೆ. ಇದರಿಂದ ಜನರ ಜೀವನ ಹೇಗೆ ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ. ಜೊತೆಗೆ, ಅನಾಹುತಗಳನ್ನು ತಡೆಯುವ ಬಗ್ಗೆಯೂ ಹೇಳಿದ್ದೇವೆ’ ಎಂದರು.

‘ಯಾವಾಗಲೂ ಧನಾತ್ಮಕ ಮತ್ತು ನಕಾರಾತ್ಮಕ ಗುಣಗಳ ನಡುವೆ ಘರ್ಷಣೆ ನಡೆಯುತ್ತಿರುತ್ತದೆ. ಇದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಲವ್‌ಸ್ಟೋರಿಯ ಜೊತೆಗೆ ಆ್ಯಕ್ಷನ್‌ ಪ್ರಾಕೇಜ್‌ ಕೂಡ ಇದೆ’ ಎಂದು ವಿವರಿಸಿದರು.

ನಟ ದರ್ಶನ್‌ ಅವರ ಅಕ್ಕನ ಮಗ ಮನೋಜ್‌ ಕುಮಾರ್‌ ಈ ಚಿತ್ರದ ನಾಯಕ. ‘ಸೈಬರ್‌ ಕ್ರೈಮ್‌ ಕಥೆ ಆಧಾರಿತ ಚಿತ್ರ ಇದು. ದರ್ಶನ್‌ ಅವರ ಅಭಿಮಾನಿಗಳಿಗೂ ಇಷ್ಟವಾಗುವಂತೆ ನಿರ್ಮಿಸಲಾಗಿದೆ’ ಎಂದು ಹೇಳಿಕೊಂಡರು.

ಚಿತ್ರದ ಆಡಿಯೊ ಬಿಡುಗಡೆಗೊಳಿಸಿದ ನಟ ದರ್ಶನ್, ‘ಮನೋಜ್‌ ನನ್ನ ಜೊತೆ ಅಂಬರೀಶ ಹಾಗೂ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದ್ದರು. ಬಣ್ಣದ ಲೋಕದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾನೆ. ಈ ಸಿನಿಮಾದ ಕಂಟೆಂಟ್ ಚೆನ್ನಾಗಿದೆ. ಟೀಸರ್‌ನಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತಿದೆ’ ಎಂದು ಶ್ಲಾಘಿಸಿದರು.

‘ಮಲೇಷ್ಯಾದಲ್ಲಿ ಶೂಟ್ ಮಾಡಿರುವ ಡ್ಯೂಯೆಟ್‌ ಸಾಂಗ್‍ ಚೆನ್ನಾಗಿದೆ. ಮನೋಜ್ ಕೂಡ ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುತ್ತಾನೆ’ ಎಂದರು.

‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ರಾಜಹಂಸ’ ಚಿತ್ರದ ಬಳಿಕ ಇದು ಅವರಿಗೆ ಎರಡನೇ ಚಿತ್ರ. ‘ಮುಗ್ಧ ಹುಡುಗಿಯ ಪಾತ್ರ ನನ್ನದು. ಕ್ಯೂಟ್‌ ಆಗಿರುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಖುಷಿಯಿದೆ’ ಎಂದು ಹೇಳಿಕೊಂಡರು ರಂಜನಿ.

ನಟ ‘ಭಜರಂಗಿ’ ಲೋಕಿ, ‘ನನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಚಿತ್ರದ ಮೂರು ಹಾಡುಗಳಿಗೆ ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿಲಿಯಂ ಡೇವಿಡ್‌ ಅವರದು. ಕೆ.ಎನ್‌. ನಾಗೇಶ್ ಕೋಗಿಲು ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT