ಭಾನುವಾರ, ಆಗಸ್ಟ್ 25, 2019
28 °C

ರಿವಾಲ್ವರ್‌ ದೀದಿಗಳಮನೆಯಲ್ಲಿ ತಾಪ್ಸಿ

Published:
Updated:
Prajavani

ನಟಿ ತಾಪ್ಸಿ ಪನ್ನು ಮನೋಜ್ಞ ಅಭಿನಯದಿಂದ ಗಮನ ಸೆಳೆದವರು. ಈಗ ಉತ್ತರಪ್ರದೇಶದ ರಿವಾಲ್ವರ್‌ ದೀದಿಗಳು ಎಂದೇ ಖ್ಯಾತರಾಗಿರುವ ವಿಶ್ವದ ಅತಿ ಹಿರಿಯ ಶಾರ್ಪ್‌ ಶೂಟರ್‌ಗಳಾದ ಚಂದ್ರು ತೋಮರ್‌ ಹಾಗೂ ಪ್ರಕಾಶಿ ತೋಮರ್‌ ಜೀವನಕತೆಯನ್ನೊಳಗೊಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಸಿದ್ಧತೆಯಲ್ಲಿ ತಾಪ್ಸಿ ತೊಡಗಿಸಿಕೊಂಡಿದ್ದು, ಇಬ್ಬರು ಅಜ್ಜಿಯರ ಜೊತೆ ಬಹಳ ಸಮಯ ಕಳೆದಿದ್ದಾರೆ. ಈ ಹೊಸ ಚಿತ್ರದ ಹೆಸರು ‘ಸಾಂಡ್‌ ಕಿ ಆಂಖ್‌’. ರಿಲಾಯನ್ಸ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ಈ ಚಿತ್ರಕ್ಕೆ ತುಷಾರ್‌ ಹೀರಾನಂದಾನಿ ನಿರ್ದೇಶಕ. 

ಮೀರಠ್‌ನಲ್ಲಿ ಒಂದು ತಿಂಗಳು ಈ ಚಿತ್ರದ ಶೂಟಿಂಗ್‌ ನಡೆದಿತ್ತು. ಆ ಸಂದರ್ಭದಲ್ಲಿ ಈ ನಟಿ ರಿವಾಲ್ವರ್‌ ದೀದಿಗಳ ಮನೆಯಲ್ಲಿ ಉಳಿದುಕೊಂಡಿದ್ದರು. ಈ ನಟಿ ಚಂದ್ರು ಹಾಗೂ ಪ್ರಕಾಶಿ ಇಬ್ಬರ ಜೊತೆಯೂ ಆಪ್ತ ಒಡನಾಟ ಇಟ್ಟುಕೊಂಡಿದ್ದರಂತೆ. ಪ್ರಕಾಶಿ ಅವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರೆ, ಚಂದ್ರು ಅವರ ಮನೆಯಲ್ಲಿ ರಾತ್ರಿಯೂಟ ಮಾಡುತ್ತಿದ್ದರಂತೆ. 

ಇಷ್ಟೇ ಅಲ್ಲ, ಈ ಸಿನಿಮಾದಲ್ಲಿ ಅವರಿಬ್ಬರ ಕತೆ ಒಳಗೊಂಡಿದ್ದರಿಂದ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ತರಪ್ರದೇಶದ ಗ್ರಾಮೀಣ ಭಾಗದ ಜೊಹ್ರಿ ಊರಿನ ಅವರ ಮನೆಯಲ್ಲಿ ತಾಪ್ಸಿ ಉಳಿದುಕೊಂಡಿದ್ದರು. ಅವರಿಬ್ಬರು ಮನೆಯಲ್ಲಿ ಹೇಗಿರುತ್ತಾರೆ? ಅವರ ಸ್ವಭಾವ ಹೇಗೆ ಎಂದು ಹತ್ತಿರದಿಂದ ವಿಷಯ ಸಂಗ್ರಹಿಸುತ್ತಿದ್ದರು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 

ಹಳ್ಳಿ ಜೀವನ ಅರಿಯಬೇಕು ಎಂಬುದು ತಾಪ್ಸಿ ಅವರ ಮೊದಲ ಅಪೇಕ್ಷೆಯಾಗಿತ್ತು. ಅದರ ಜೊತೆ ರಿವಾಲ್ವರ್‌ ದೀದಿ ಹಾಗೂ ಅವರ ಕತೆಯನ್ನು ತಿಳಿಯುವುದಾಗಿತ್ತು. ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನ ವಾರಗಳ ಕಾಲ ಅವರ ಮನೆಯಲ್ಲಿ ಅವರು ಉಳಿದುಕೊಂಡಿದ್ದರು. ಈ ಸಿನಿಮಾದಲ್ಲಿ ತಾಪ್ಸಿ ಹೆಚ್ಚು ಆಭರಣಗಳನ್ನು ತೊಟ್ಟು ಕಾಣಿಸಿಕೊಂಡಿದ್ದಾರೆ, ಅವೆಲ್ಲವೂ ದೀದಿ ಅವರ ಮನೆಯಿಂದ ಪಡೆದುಕೊಂಡಿದ್ದು ಎಂದು ಮೂಲಗಳು ತಿಳಿಸಿವೆ. 

ಈ ಅನುಭವದ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ತಾಪ್ಸಿ, ‘ಇದೊಂದು ಅದ್ಭುತ ಅನುಭವ. ಜೊಹ್ರಿಯಲ್ಲಿ ಈ ಇಬ್ಬರು ಅಜ್ಜಿಯರ ಜೊತೆ ಕಳೆದ ಸಮಯ, ಅವರ ಜೀವನಪ್ರೀತಿ, ಶಕ್ತಿ ಎಲ್ಲವೂ ಸ್ಫೂರ್ತಿದಾಯಕ. ಅವರಿಂದ ಅನೇಕ ಕತೆಗಳನ್ನು ಕೇಳಿ ತಿಳಿದುಕೊಂಡೆ, ಕಲಿತುಕೊಂಡೆ’ ಎಂದು ಹೇಳಿದ್ದಾರೆ. ಚಿತ್ರ ಇದೇ ದೀಪಾವಳಿಗೆ ತೆರೆ ಕಾಣಲಿದೆ.

Post Comments (+)