ಶನಿವಾರ, ಜುಲೈ 31, 2021
21 °C

ಮಣಿರತ್ನಂ ವೆಬ್‌ ಸರಣಿಯಲ್ಲಿ ನಟಿಸಲ್ಲ ಎಂದ ನಾನಿ, ನಾಗಚೈತನ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಣಿರತ್ನಂ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕ. ವಿಭಿನ್ನ ನೆಲೆಯ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ರಂಜನೆ ಉಣಬಡಿಸಿದ್ದು ಅವರ ಹೆಗ್ಗಳಿಕೆ. ಒಂದು ಕಾಲದಲ್ಲಿ ಅವರ ಸಿನಿಮಾಗಳಲ್ಲಿ ತಾವೂ ನಟಿಸಬೇಕು ಎಂಬುದು ಹಲವು ನಟ, ನಟಿಯರ ಕನಸಾಗಿತ್ತು. ಇದು ದಶಕದ ಹಿಂದಿನ ಮಾತು. ಈಗಿನ ಚಿತ್ರರಂಗದ ಚಿತ್ರಣ ಸಂಪೂರ್ಣ ಬದಲಾಗಿದೆ. ಮಣಿರತ್ನಂ ನಿರ್ದೇಶನದ ವೆಬ್‌ ಸರಣಿಯಲ್ಲಿ ನಟಿಸಲು ಖ್ಯಾತ ನಟರೇ ಹಿಂದಡಿ ಇಟ್ಟಿರುವ ಸುದ್ದಿ ಹೊರಬಿದ್ದಿದೆ.

ಪ್ರಸ್ತುತ ಮಣಿರತ್ನಂ ತಮಿಳಿನ ‘ಪೊನ್ನಿಯನ್ ಸೆಲ್ವನ್’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ. ಲೈಕಾ ಪ್ರೊಡಕ್ಷನ್‌ ಮತ್ತು ಮದ್ರಾಸ್‌ ಟಾಕೀಸ್‌ ಇದಕ್ಕೆ ಬಂಡವಾಳ ಹೂಡಿವೆ. ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಚಿತ್ರ ಇದು. ಈ ಕೃತಿ ಚೋಳ ಸಾಮ್ರಾಜ್ಯದ ಚರಿತ್ರೆ ಕುರಿತು ಬೆಳಕು ಚೆಲ್ಲುತ್ತದೆ. ಸಿನಿಮಾಕ್ಕೂ ಕಾದಂಬರಿಯ ಹೆಸರನ್ನೇ ಟೈಟಲ್‌ ಆಗಿ ಇಡಲಾಗಿದೆ.

ವಿಕ್ರಮ್‌, ಕಾರ್ತಿ, ಜಯಂ ರವಿ, ಐಶ್ವರ್ಯ ರೈ ಬಚ್ಚನ್‌, ತ್ರಿಷಾ ಸೇರಿದಂತೆ ಖ್ಯಾತ ನಟ, ನಟಿಯರ ದೊಡ್ಡ ದಂಡೇ ಇದರಲ್ಲಿ ನಟಿಸುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿಯರನ್ನು ಈ ಚಿತ್ರದ ಮೂಲಕ ಒಂದೇ ವೇದಿಕೆಗೆ ತರುವುದು ಮಣಿರತ್ನಂ ಅವರ ಆಸೆಯಂತೆ. ಇದು ‘ಪೊನ್ನಿಯನ್ ಸೆಲ್ವನ್’ ಚಿತ್ರದ ಕಥೆಯಾಯಿತು.

ಮಣಿರತ್ನಂ ‘ನವರಸಂ’ ಹೆಸರಿನ ವೆಬ್‌ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗಲಿರುವ ಈ ಸರಣಿಯನ್ನು ಒಂಬತ್ತು ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಇದರಲ್ಲಿ ಸೂರ್ಯ, ಸಿದ್ಧಾರ್ಥ, ಅರವಿಂದ್ ಸ್ವಾಮಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವೇ ಬಂಡವಾಳ ಹೂಡಿ ನಿರ್ದೇಶಿಸಲಿರುವ ‘ನವರಸಂ’ ವೆಬ್‌ ಸರಣಿಯ ಎಪಿಸೋಡ್‌ನಲ್ಲಿ‌ ತೆಲುಗು ನಟರಾದ ನಾನಿ ಮತ್ತು ನಾಗಚೈತನ್ಯ ಅವರನ್ನು ಭಾಗವಾಗಿಸಲು ಮಣಿರತ್ನಂ ಇಚ್ಛಿಸಿದ್ದರಂತೆ. ಆದರೆ, ಈ ಇಬ್ಬರು ನಟಿಸಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಈ ಇಬ್ಬರೂ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಲಾಕ್‌ಡೌನ್‌ನಿಂದಾಗಿ ಇವುಗಳ ಶೂಟಿಂಗ್ ಅರ್ಧಕ್ಕೆ‌ ಸ್ಥಗಿತಗೊಂಡಿದೆ. ಮತ್ತೆ ಚಿತ್ರೋದ್ಯಮ ಸಹಜಸ್ಥಿತಿಗೆ ಮರಳಿದಾಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಹಿಡಿಯಲಿದೆ. ಹಾಗಾಗಿ, ವೆಬ್‌ ಸರಣಿಯಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ ಎನ್ನುತ್ತವೆ ಮೂಲಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು