ಮಂಗಳವಾರ, ಮೇ 26, 2020
27 °C

ತೆಲುಗು, ತಮಿಳಿನಲ್ಲಿ ಕಾಲೇಜ್ ಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2017ರಲ್ಲಿ ತೆರೆಕಂಡ ‘ಕಾಲೇಜ್ ಕುಮಾರ’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು. ನಿರ್ಮಾಪಕರು ಮತ್ತು ನಾಯಕಿ ಸಂಯುಕ್ತಾ ಹೆಗಡೆ ನಡುವಿನ ಕಿರಿಕ್‌ ವಾಣಿಜ್ಯ ಮಂಡಳಿಯ ಮೆಟ್ಟಿಲನ್ನೂ ಏರಿತ್ತು. ಹರಿ ಸಂತೋಷ್ ನಿರ್ದೇಶನದ ಈ ಚಿತ್ರ ಈಗ ಕನ್ನಡದ ಗಡಿ ದಾಟಿ ತೆಲುಗು ಮತ್ತು ತಮಿಳಿನಲ್ಲಿ ಸುದ್ದಿ ಮಾಡುತ್ತಿದೆ. ಹಾಗೆಂದು ಆ ಭಾಷೆಗೆ ಡಬ್ ಏನೂ ಆಗಿಲ್ಲ.

ಬದಲಿಗೆ ಆ ಎರಡೂ ಭಾಷೆಗಳಲ್ಲಿ ಮರುನಿರ್ಮಾಣ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ನಿರ್ಮಾಪಕ ಎಲ್. ಪದ್ಮನಾಭ. ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದ ಹರಿ ಸಂತೋಷ್ ಅವರೇ ತೆಲುಗು, ತಮಿಳಿನಲ್ಲಿಯೂ ಆ್ಯಕ್ಷನ್ – ಕಟ್ ಹೇಳಿದ್ದಾರೆ. ಮಾರ್ಚ್‌ 6ರಂದು ಕುಮಾರನ ಅದೃಷ್ಟ ಪರೀಕ್ಷೆ ಶುರುವಾಗಲಿದೆ.

‘ಕಾಲೇಜ್ ಕುಮಾರ’ ಸಿನಿಮಾಗೆ ಸಂತೋಷಮ್ ಪ್ರಶಸ್ತಿ ಬಂದಿತ್ತು. ಅದನ್ನು ಸ್ವೀಕರಿಸಲು ನಿರ್ಮಾಪಕ ಪದ್ಮನಾಭ ಮತ್ತು ನಿರ್ದೇಶಕ ಹರಿ ಸಂತೋಷ್ ಹೈದರಾಬಾದ್‌ಗೆ ಹೋಗಿದ್ದರು. ಅಲ್ಲಿ ಭೇಟಿಯಾದ ಕೆಲವು ತೆಲುಗು ಚಿತ್ರರಂಗದವರ ಜೊತೆ ಕಾಲೇಜ್ ಕುಮಾರದ ಕಥೆಯನ್ನು ವಿನಿಮಯ ಮಾಡಿಕೊಂಡರು. ಆಗ ಅವರೆಲ್ಲರೂ ‘ಇದು ತೆಲುಗು ಭಾಷೆಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುವ ಕಥೆ. ತುಂಬ ಭಿನ್ನವಾಗಿದೆ. ತೆಲುಗಿನಲ್ಲಿಯೂ ಮಾಡಿ’ ಎಂದು ಸಲಹೆ ನೀಡಿದರು. ನಿರ್ಮಾಪಕರು ತೆಲುಗು ಅವತರಣಿಕೆಯಲ್ಲಿಯೂ ‘ಕಾಲೇಜ್ ಕುಮಾರ’ನನ್ನು ತರಲು ನಿರ್ಧರಿಸಿ ನಿರ್ದೇಶನದ ಹೊಣೆಯನ್ನು ಹರಿ ಸಂತೋಷ್ ಅವರಿಗೇ ನೀಡಿದರು. ಅದರ ಪ್ರಕ್ರಿಯೆಯಲ್ಲಿ ತೊಡಗಿದ್ದಾಗಲೇ ತಮಿಳಿನಲ್ಲಿಯೂ ಚಿತ್ರ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ಪರಿಣಾಮವಾಗಿ ದ್ವಿಭಾಷೆಯಲ್ಲಿ ಏಕಕಾಲದಲ್ಲಿ ‘ಕಾಲೇಜ್ ಕುಮಾರ’ ಸಿದ್ಧಗೊಂಡಿದ್ದಾನೆ.

‘ನಮಗೆ ತೆಲುಗು ಮತ್ತು ತಮಿಳು ಎರಡೂ ಪ್ರೇಕ್ಷಕರಿಗೆ ಇಷ್ಟವಾಗುವಂಥ, ಆದರೆ ಸ್ಟಾರ್ ಇಮೇಜ್ ಇಲ್ಲದ ಒಬ್ಬ ನಟ ಬೇಕಾಗಿತ್ತು. ಆ ಹುಡುಕಾಟದಲ್ಲಿದ್ದಾಗ ಕಾಣಿಸಿದ್ದೇ ತಮಿಳಿನ ಸಾಹಸ ನಿರ್ದೇಶನ ವಿಜಯ್ ಅವರ ಮಗ ರಾಹುಲ್. ಅವರನ್ನೇ ಎರಡೂ ಭಾಷೆಯಲ್ಲಿ ನಾಯಕನನ್ನಾಗಿಸಿಕೊಂಡೆವು. ತೆಲುಗು ಭಾಷೆಯ ಪ್ರಿಯಾ ವಡ್ಲುಮನೆ ಈ ಚಿತ್ರದ ನಾಯಕಿ. ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿರುವ ಮಧುಬಾಲ ಕೂಡ ತೆಲುಗು ಮತ್ತು ತಮಿಳು ಎರಡೂ ಭಾಷೆಯ ಪ್ರೇಕ್ಷಕರಿಗೆ ಪರಿಚಿತ ನಟಿ. ಉಳಿದ ಪಾತ್ರವರ್ಗವನ್ನೂ ಹಾಗೆಯೇ ಆಯ್ಕೆ ಮಾಡಿದೆವು’ ಎಂದು ಹರಿ ಸಂತೋಷ್ ವಿವರಣೆ ನೀಡುತ್ತಾರೆ.

ಆದರೆ ತಂದೆಯ ಪಾತ್ರಕ್ಕೆ ಎರಡೂ ಭಾಷೆಗೆ ಒಬ್ಬರನ್ನೇ ಆಯ್ಕೆ ಮಾಡುವುದು ಸಾಧ್ಯವಿರಲಿಲ್ಲ. ‘ತಂದೆಯ ಪಾತ್ರ ಈ ಚಿತ್ರದಲ್ಲಿ ತುಂಬ ಮುಖ್ಯವಾದದ್ದು. ಹಾಗಾಗಿ ತೆಲುಗಿನಲ್ಲಿ ರಾಜೇಂದ್ರ ಪ್ರಸಾದ್ ಮತ್ತು ತಮಿಳಿನಲ್ಲಿ ಶಿವಾಜಿ ಪ್ರಭು ಅವರನ್ನು ಆಯ್ದುಕೊಂಡೆವು. ಎರಡೂ ಭಾಷೆಯಲ್ಲಿ ನಟರು ತುಂಬ ಚೆನ್ನಾಗಿ ನಟಿಸಿದ್ದಾರೆ’ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಾರೆ.

‘ತಮಿಳಿನಲ್ಲಿ ಸಿನಿಮಾ ಮಾಡುವುದೇ ನನಗೆ ದೊಡ್ಡ ಸವಾಲಾಗಿ ಕಂಡಿತ್ತು. ನಂತರ ಎರಡೂ ಭಾಷೆಯಲ್ಲಿ ಮಾಡುವುದು ಇನ್ನಷ್ಟು ಕಷ್ಟದ ಸಂಗತಿಯಾಗಿತ್ತು. ಆದರೆ ಕಲಾವಿದರ ಸಹಕಾರದಿಂದ ಸಿನಿಮಾ ತುಂಬ ಸುಲಭವಾಗಿಯೂ ಚೆನ್ನಾಗಿಯೂ ಮಾಡಿ ಮುಗಿಸಲು ಸಾಧ್ಯವಾಯ್ತು’ ಎಂದು ಅವರು ಸ್ಮರಿಸುತ್ತಾರೆ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ ಅವರು ಸ್ಥಾಪಿಸಿದ ‘ಕುತುಬ್ ಎ ಕೃಪಾ’ದಲ್ಲಿ ಅಭ್ಯಾಸ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದೂ ಕೂಡ ಈ ಚಿತ್ರದ ಪ್ಲಸ್ ಪಾಯಿಂಟ್.

ಕನ್ನಡದಲ್ಲಿ ನಿರ್ಮಾಪಕರ ಜೇಬಿಗೆ ಒಂದಿಷ್ಟು ಹಣ ತಂದಿದ್ದ ‘ಕಾಲೇಜ್ ಕುಮಾರ’ ತೆಲುಗು ಮತ್ತು ತಮಿಳಿನ ಪ್ರೇಕ್ಷಕರಿಗೂ ಇಷ್ಟವಾಗುತ್ತಾನೆ ಎಂಬ ನಂಬಿಕೆಯಲ್ಲಿ ಹರಿ ಸಂತೋಷ್ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.