ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರಿಲ್ಲರ್ ದಾರಿಯಲ್ಲಿ ಕಲ್ಲು-ಮುಳ್ಳು

Last Updated 19 ಅಕ್ಟೋಬರ್ 2018, 19:42 IST
ಅಕ್ಷರ ಗಾತ್ರ

*ನಿರ್ಮಾಣ: ಅಲಂಕಾರ್ ಸಂತಾನ

* ನಿರ್ದೇಶನ: ಪಿ.ಸಿ. ಶೇಖರ್

* ತಾರಾಗಣ: ರಾಗಿಣಿ ದ್ವಿವೇದಿ, ಗಿರೀಶ್ ಶಿವಣ್ಣ,ಕೀರ್ತಿ ಭಾನು, ರವಿ ಭಟ್,ಮನು ಹೆಗಡೆ.

**

ಕನ್ನಡದ ಮಟ್ಟಿಗೆ ಥ್ರಿಲ್ಲರ್‌ಗಳು ವಿರಳವೇ ಹೌದು. ಅವುಗಳಲ್ಲಿ ಬಂಧ ಬಿಗಿಯಾಗಿಸಿ, ಗಟ್ಟಿಕಾಳಾಗಿ ಉಳಿದವಂತೂ ಬೆರಳೆಣಿಕೆಯಷ್ಟು ಮಾತ್ರ. ‘ದಿ ಟೆರರೆಸ್ಟ್’ ಅಂಥ ಪಟ್ಟಿ ಸೇರಿಕೊಳ್ಳಲು ನಿಂತಲ್ಲೇ ಜಿಗಿಯುತ್ತದೆ. ಕೈಯನ್ನು ಇನ್ನೂ ಒಂಚೂರು ಮೇಲಕ್ಕೆತ್ತಬೇಕಿತ್ತು. ಆಗ ಅದು ಪೂರ್ಣಪ್ರಮಾಣದಲ್ಲಿ ಗುರಿ ತಲುಪಿರುತ್ತಿತ್ತು.

‘ದಿ ಟೆರರಿಸ್ಟ್’ ತುಂಬಾ ಸರಳವಾಗಿ ಶುರುವಾಗುತ್ತದೆ. ಅಕ್ಕ-ತಂಗಿಯ ಕಕ್ಕುಲತೆ, ಅದೀಗ ತಾನೇ ಪ್ರೇಮ ಕಳೆದುಕೊಂಡ ಅಕ್ಕನ ಸಂಕಟ ಎಲ್ಲವನ್ನೂ ಸರಳತೆಗೇ ಒಗ್ಗಿಸಲಾಗಿದೆ. ಬಲು ಬೇಗ ಸಿನಿಮಾ ಥ್ರಿಲ್ಲರ್ ಹಳಿಗೆ ಮರಳುತ್ತದೆ; ಆ ತಂಗಿಯ ಅಪಹರಣವಾಗುವ ಮೂಲಕ. ಟೆರರಿಸ್ಟ್‌ಗಳ ಚಕ್ರವ್ಯೂಹದಲ್ಲಿ ಸಿಲುಕುವ ಅಕ್ಕ, ಅದರಿಂದ ಹೊರಬರಲು ಏನೆಲ್ಲ ಮಾಡುತ್ತಾಳೆ ಎನ್ನುವುದು ಕಥನ ಕುತೂಹಲ.

ಆಟದಂತೆ ಸಾಗುವ ಚಿತ್ರಕಥೆಯಲ್ಲಿ ಅನಿರೀಕ್ಷಿತ ತಿರುವುಗಳಿಗೇನೂ ಕೊರತೆಯಿಲ್ಲ. ಅನಗತ್ಯವಾದ ಕೆಲವು ಅಂಶಗಳನ್ನು ನಿರ್ದೇಶಕರು ಅಳಿಸಿಹಾಕಿರುವುದರಲ್ಲೂ ಜಾಣ್ಮೆ ಇದೆ. ಚಕ್ರವ್ಯೂಹಕ್ಕೆ ಸಿಲುಕಿರುವ ನಾಯಕಿಯ ಮನೋವ್ಯಾಪಾರವಾಗಿ ಪ್ರಕಟಗೊಳ್ಳುವ ಫ್ಲ್ಯಾಷ್‌ಬ್ಯಾಕ್ ಕಥನದಲ್ಲಿ ಇನ್ನಷ್ಟು ಕಸುವು ಇರಬೇಕಿತ್ತು. ಅದು ತೀರಾ ನಾಟಕೀಯವೂ ಕಪ್ಪು-ಬಿಳಿಪು ಧೋರಣೆಯುಳ್ಳದ್ದೂ ಆಗಿರುವುದು ಎದ್ದುಕಾಣುವ ಲೋಪ.

ನಿರ್ದೇಶಕ ಪಿ.ಸಿ. ಶೇಖರ್ ಹಲವು ಥ್ರಿಲ್ಲರ್‌ಗಳ ಪ್ರಭಾವಕ್ಕೆ ಒಳಗಾಗಿದ್ದರೂ ಇದಮಿತ್ಥಂ ಎಂದು ಒಂದರ ಕಡೆಗೇ ಬೆಟ್ಟು ತೋರಲಾಗದು. ಪ್ರಭಾವದ ಸುಳಿವನ್ನು ಉಳಿಸಿಯೂ ತಮ್ಮದೇ ವಸ್ತುವನ್ನು ಕಟ್ಟುವ ಕ್ರಮಕ್ಕಿದು ಸಾಕ್ಷಿ. ಅವರು ಸಿನಿಮಾದ ನಾಯಕಿ, ಖಳ, ಟೆರರಿಸ್ಟ್ ಎಲ್ಲ ಪಾತ್ರಗಳನ್ನೂ ಒಂದೇ ಧರ್ಮದ ವ್ಯಾಪ್ತಿಗೆ ತಂದಿರುವುದು ಅನುಕೂಲಸಿಂಧುತ್ವ.

ಸಿನಿಮಾ ಕುರ್ಚಿ ತುದಿಗೆ ಆಗೀಗ ತಂದು ಕೂರಿಸುವುದು ಎರಡನೇ ಅರ್ಧದ ನಂತರ. ಚಕಚಕನೆ ಸಾಗುತ್ತಲೇ ಮುಂದೇನಾದೀತು ಎಂಬ ಪ್ರಶ್ನೆಯನ್ನು ಎಸೆದು ಮಜಾ ಕೊಡುತ್ತದೆ. ತಾಂತ್ರಿಕವಾಗಿಯೂ ಅಚ್ಚುಕಟ್ಟಾಗಿ ರೂಪಿಸಬೇಕೆಂಬ ಉಮೇದಿಗೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಆದರೆ, ಎರಡು ಸಾವಿರ ರೂಪಾಯಿ ನೋಟಿನಲ್ಲಿ ಚಿಪ್ ಇಡುವುದು, ದೇಶಪ್ರೇಮಿ ಯುವಕ ಮನೆಯಲ್ಲೇ ಬಾಂಬ್ ಇಟ್ಟುಕೊಳ್ಳುವುದು... ದುರ್ಬಲ ಪರಿಕಲ್ಪನೆಗಳು.

ರಾಗಿಣಿ ದ್ವಿವೇದಿ ನಟಿಯಾಗಿ ಪ್ರಕಟಗೊಳ್ಳಲು ಸಿಕ್ಕಿರುವ ಅನನ್ಯ ಅವಕಾಶವಿದು. ಚಕ್ರವ್ಯೂಹ ಹೊಕ್ಕಿಯೂ ಅಭಿಮನ್ಯುವಿನಂತಾಗದೆ ಹೊರಬರಬೇಕಾದ ಜಾಣಹೆಣ್ಣುಮಗಳ ಪಾತ್ರವನ್ನು ಪೂರ್ತಿ ಜೀವಿಸಲು ಅವರಿಗೆ ಸಾಧ್ಯವಾಗಿಲ್ಲ. ಭಾವುಕ ಸನ್ನಿವೇಶಗಳಲ್ಲಿ ಅವರ ಹೆಣಗಾಟ ಕಂಡರೆ, ಹೂಂಕರಿಸುವಾಗ ಅವರ ಫಾರ್ಮ್ ಸೆಳೆಯುತ್ತದೆ. ಗ್ಲ್ಯಾಮರ್‌ಗೆ ಹೊರತಾದ ಈ ಪಾತ್ರ ಅವರಿಗೂ ಹೆಚ್ಚು ಕಾಲ ನೆನಪಿನಲ್ಲಿ ಉಳಿದೀತು. ಕಮಿಷನರ್ ಪಾತ್ರದಲ್ಲಿ ಕೀರ್ತಿ ಭಾನು ಅಭಿನಯ ಹೆಚ್ಚು ಸಹಜವಾಗಿದೆ. ಗಿರೀಶ್ ಶಿವಣ್ಣ ಅಭಿನಯಕ್ಕೂ ಹೆಚ್ಚು ಅಂಕ ಸಲ್ಲಬೇಕು. ಸಂಗೀತ ಅಲ್ಲಲ್ಲಿ ಅತಿಯಾಯಿತು ಎನ್ನಿಸುತ್ತದೆ.

ಕೊನೆಗೆ ಸ್ಫೋಟಿಸಲೆಂದು ಸತ್ಯ ಉಳಿಸಿಕೊಳ್ಳುವ ದಾರಿಯಲ್ಲಿ ನಿರ್ದೇಶಕರು ಅಲ್ಲಲ್ಲಿ ಕಲ್ಲು-ಮುಳ್ಳನ್ನು ಕೂಡ ಉಳಿಸಿದ್ದಾರೆ. ಅದರ ಮೇಲೂ ನಡೆಯುತ್ತಾ ರೋಚಕತೆಯ ಪಯಣ ಎಂದುಕೊಳ್ಳಲಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT