22ಕ್ಕೆ ‘ಉದ್ಘರ್ಷ’ ಬಿಡುಗಡೆ

ಮಂಗಳವಾರ, ಮಾರ್ಚ್ 26, 2019
29 °C

22ಕ್ಕೆ ‘ಉದ್ಘರ್ಷ’ ಬಿಡುಗಡೆ

Published:
Updated:
Prajavani

‘ಉದ್ಘರ್ಷ’ ಎಂದರೆ ಮನಸ್ಸಿನ ಹೊರಗಿನ ತುಮುಲ. ಪರದೆ ಮೇಲೆ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯ ಟ್ರೇಲರ್‌ ಬಿಡುಗಡೆಗೊಂಡ ಬಳಿಕ ಚಿತ್ರದ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಕೊಂಚ ನಿರುಮ್ಮಳರಾದರು.

ಬಳಿಕ ಮೈಕ್‌ ಕೈಗೆತ್ತಿಕೊಂಡ ಅವರು, ‘ಚಿತ್ರದ ತುಣುಕನ್ನು ಮಾತ್ರ ತೋರಿಸಿದ್ದೇವೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥನ’ ಎಂದರು.

‘ಇಮೇಜ್‌ ಇರುವ ಹೀರೊನನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರೆ ಕಥೆಗೆ ಒಗ್ಗುತ್ತಿರಲಿಲ್ಲ. ಚಿತ್ರಕಥೆಗೆ ಹೊಂದಿಕೊಳ್ಳುವ ಹೀರೊ ಬೇಕಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಆಗ ಠಾಕೂರ್‌ ಅನೂಪ್‌ ಸಿಂಗ್‌ ಸಿಕ್ಕಿದರು. ಅವರೇ ನನ್ನ ಸ್ಕ್ರಿಪ್ಟ್‌ಗೆ ಸೂಕ್ತ ಎನಿಸಿತು. ಅವರ ಮುಂದೆ ಕೋರಿಕೆ ಮುಂದಿಟ್ಟಾಗ ತಕ್ಷಣವೇ ಒ‍ಪ್ಪಿಕೊಂಡು ನನ್ನ ಕೆಲಸವನ್ನು ಮತ್ತಷ್ಟು ಹಗುರಗೊಳಿಸಿದರು’ ಎಂದರು.

ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಖುಷಿ ಠಾಕೂರ್‌ ಅನೂಪ್‌ ಸಿಂಗ್‌ ಅವರ ಮೊಗದಲ್ಲಿತ್ತು. ನೆರೆದಿದ್ದವರಿಗೆ ಅವರು ಕನ್ನಡದಲ್ಲಿಯೇ ಶಿವರಾತ್ರಿಯ ಶುಭಾಶಯ ಕೋರಿದರು. ‘ಚಿತ್ರದ ಕಥೆ ಹೇಳಿದಾಕ್ಷಣ ಒ‍ಪ್ಪಿಕೊಂಡೆ. ನೀನು ವಿಲನ್‌ ಅಲ್ಲ. ಚಿತ್ರದ ನಾಯಕ ಎನ್ನುವುದನ್ನು ದೇಸಾಯಿ ಸರ್‌ ಮನವರಿಕೆ ಮಾಡಿಕೊಟ್ಟರು. ಅವರು ಧೈರ್ಯ ತುಂಬಿದ್ದರಿಂದಲೇ ನಟಿಸಲು ಸಾಧ್ಯವಾಯಿತು’ ಎಂದು ಖುಷಿ ಹಂಚಿಕೊಂಡರು.

ಕಬೀರ್‌ ದುಹಾನ್‌ ಸಿಂಗ್‌ ಖಳನಟನಾಗಿ ಬಣ್ಣಹಚ್ಚಿದ್ದಾರೆ. ಇದು ಅವರ ಮೊದಲ ಥ್ರಿಲ್ಲರ್‌ ಸಿನಿಮಾವಂತೆ. ‘ಈ ಚಿತ್ರದ ಜರ್ನಿ ಆರಂಭವಾಗಿದ್ದು ಎರಡು ವರ್ಷದ ಹಿಂದೆ. ಚಿತ್ರ ಬಿಡುಗಡೆಯ ಹಂತದಲ್ಲಿರುವುದು ಖುಷಿ ಕೊಟ್ಟಿದೆ’ ಎಂದು ಹೇಳಿದರು.

ತಾನ್ಯಾ ಹೋಪ್ ಈ ಚಿತ್ರದ ಎರಡನೇ ನಾಯಕಿ. ‘ದೇಸಾಯಿ ಸರ್‌ ಜೊತೆಗೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ’ ಎಂದಷ್ಟೇ ಹೇಳಿದರು.

ಟ್ರೇಲರ್‌ ಬಿಡುಗಡೆಗೊಳಿಸಿದ ನಟ ದರ್ಶನ್, ‘ಅದು ನಮ್ಮೂರ ಮಂದಾರ ಹೂವೇ ಚಿತ್ರದ ಬಿಡುಗಡೆ ಸಂದರ್ಭ. ನಾನಾಗ ಮತ್ತೊಂದು ಚಿತ್ರದಲ್ಲಿ ಲೈಟ್‌ಬಾಯ್‌ ಆಗಿ ಕೆಲಸ ಮಾಡುತ್ತಿದ್ದೆ. ಮೈಸೂರಿನಲ್ಲಿ ಆ ಚಿತ್ರದ ಪೂರ್ವ ಪ್ರದರ್ಶನವಿತ್ತು. ಎಲ್ಲರಿಗೂ ಟಿಕೆಟ್‌ ಬಂತು. ನನಗೆ ಆ ಪ್ರದರ್ಶನದ ಬಗ್ಗೆ ಗೊತ್ತಿರಲಿಲ್ಲ. ಚಿತ್ರ ನೋಡಿದ ಎಲ್ಲರೂ ಶಿಳ್ಳೆ, ಚಪ್ಪಾಳೆಯ ಸುರಿಮಳೆ ಸುರಿಸಿದರು. ಆಗಲೇ ನಿರ್ದೇಶಕರ ತಾಕತ್ತು ಏನೆಂಬುದು ಗೊತ್ತಾಯಿತು’ ಎಂದು ನೆನಪಿನ ಸುರುಳಿಗೆ ಜಾರಿದರು.

ಚಿತ್ರದ ಟ್ರೇಲರ್‌ಗೆ ನಟ ಕಿಚ್ಚ ಸುದೀಪ್ ಕಂಠದಾನ ಮಾಡಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ‘ಉಧ್ಘರ್ಷ’ ಎಂದು ಹೆಸರಿಸಲಾಗಿದೆ. ತಮಿಳಿನಲ್ಲಿ ‘ಉಚ್ಚಕಟ್ಟಂ’ ಹೆಸರಿನಡಿ ಚಿತ್ರ ತೆರೆಕಾಣುತ್ತಿದೆ.

ಆರ್‌. ದೇವರಾಜ್‌, ಡಿ. ಮಂಜುನಾಥ್, ರಾಜೇಂದ್ರ ಕುಮಾರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂಜೋಯ್‌ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ಪಿ. ರಾಜನ್ ಮತ್ತು ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !