ಶನಿವಾರ, ಮಾರ್ಚ್ 6, 2021
18 °C

ನೆಮ್ಮದಿ ಅರಸಿದ ಸಿಂಹ!

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

‘ನನಗೆ ನಾನು ಹುಡುಕುವುದು, ಅರಸುವುದು ‘ನೆಮ್ಮದಿ’ಯೊಂದೇ’ ಹೀಗೆಂದು ಒಂದೇ ಸಾಲಿನಲ್ಲಿ ಬದುಕಿನ ತತ್ವ ಹೇಳಿದರು ನಟ ವಸಿಷ್ಠ ಸಿಂಹ.  

‘ವೃತ್ತಿಬದುಕಿನಲ್ಲಿ ತೃಪ್ತಿಯೊಂದೇ ಮುಖ್ಯ. ಶೂಟಿಂಗ್‌ ಮುಗಿದಾಗ ಅಂದು ನಾನು ಒಳ್ಳೆಯದನ್ನು ಮಾಡಿದ್ದೇನೆ ಅನಿಸಬೇಕು. ನನ್ನ ಪ್ರತಿನಿತ್ಯದ ಪಾಡು ಅದೇ’ ಎಂದರು. 

‘ಕೆಟ್ಟ ಕಥೆ ಕೇಳಿದರೆ ನನಗೆ ಮೂರು ದಿವಸ ನಿದ್ದೆ ಬರಲ್ಲ. ಒಳ್ಳೆಯ ಕಥೆ ಕೇಳಿದರೆ ಒಂದು ವಾರ ನಿದ್ದೆ ಬರುವುದಿಲ್ಲ. ಆ ಕಥನದ ಮೇಲೆಯೇ ಕುತೂಹಲ ಹೆಚ್ಚುತ್ತದೆ. ನಾನು ಯಾವಾಗ ಅದರ ಭಾಗವಾಗುತ್ತೇನೆ ಎಂದು ಮನಸ್ಸು ಚಡಪಡಿಸುತ್ತಲೇ ಇರುತ್ತದೆ’ ಎಂದು ಮಾತು ವಿಸ್ತರಿಸಿದರು.

ಮಾಡೆಲ್‌ ಆಗಿದ್ದ ವಸಿಷ್ಠ ಸಿಂಹ ಬೆಳ್ಳಿತೆರೆಗೆ ಜಿಗಿದಿದ್ದು ‘ರಾಜಾಹುಲಿ’ ಚಿತ್ರದ ಮೂಲಕ. ಈಗ ಅವರು ವೃತ್ತಿಬದುಕಿನ ತಿರುವಿನಲ್ಲಿದ್ದಾರೆ. ‘ರಾಜಾಹುಲಿಯ ಯಶಸ್ಸಿನಿಂದಲೇ ನಾನು ವಕ್ರವಕ್ರವಾಗಿದ್ದು’ ಎಂದು ಮುಗುಳು ನಕ್ಕರು. 

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್‌’ ಚಿತ್ರದಿಂದ ಆರಂಭವಾದ ಅವರೊಂದಿಗಿನ ಮಾತುಕತೆ ಲಂಡನ್‌ ಬೀದಿಗಳಲ್ಲೂ ಸುತ್ತಿತು. ನೆರೆಯ ಟಾಲಿವುಡ್‌ನ ಗಡಿ ದಾಟಿತು. ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳುವ ಆಶಯದೊಂದಿಗೆ ಮುಕ್ತಾಯವಾಯಿತು.

* ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರ ಯಾವ ಹಂತದಲ್ಲಿದೆ? 

ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ನಾಯಕ ನಟನಾಗುತ್ತಿರುವ ಖುಷಿಯಿದೆ. ಇನ್ನೆರಡು ವಾರದಲ್ಲಿ ಎಲ್ಲಾ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೂ ಸಿನಿಮಾ ಸಜ್ಜಾಗಲಿದೆ. ಅದಾದ ಒಂದು ತಿಂಗಳ ಬಳಿಕ ಜನರ ಮುಂದೆ ಸಿನಿಮಾ ಬರಲಿದೆ. ಇಲ್ಲಿಯವರೆಗೂ ಖಳನಟನಾಗಿ ನಟಿಸುತ್ತಿದ್ದ ನನಗೆ ಇದರಲ್ಲಿ ನಾಯಕನಾಗಿ ಹೊಸ ಅನುಭವ. ಬೇರೆ ಅವತಾರದಲ್ಲಿ ನನ್ನನ್ನು ನೋಡಬಹುದು. ಇದರ ಸಂಪೂರ್ಣ ಕ್ರೆಡಿಟ್‌ ನಾಗತಿಹಳ್ಳಿ ಮೇಷ್ಟ್ರುಗೆ ಸಲ್ಲಬೇಕು. 

* ಈ ಸಿನಿಮಾದ ಕಥೆಯ ಎಳೆ ಎಂತಹದ್ದು?

ತರ್ಕ ಮಾಡುವ ವಿಷಯಗಳು ಸಿನಿಮಾದಲ್ಲಿವೆ. ನಾವು ಬ್ರಿಟಿಷರ ವಸಾಹತುಶಾಹಿ ಕಥೆಗಳನ್ನು ಕೇಳಿದ್ದೇವೆ. ಬ್ರಿಟಿಷ್‌ ಶಿಕ್ಷಣ, ಅಲ್ಲಿನ ಮಕ್ಕಳ ಕಲಿಕೆ ಮತ್ತು ಭಾರತೀಯ ಶಿಕ್ಷಣದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅವರು ನಮ್ಮಿಂದ ತೆಗೆದುಕೊಂಡು ಹೋಗಿದ್ದು, ಇಲ್ಲಿ ಬಿಟ್ಟು ಹೋಗಿರುವ ಎಲ್ಲಾ ವಿಷಯಗಳೂ ಸಿನಿಮಾದಲ್ಲಿ ಬರುತ್ತವೆ.

ಕಥೆ ಇತಿಹಾಸದ ಸುತ್ತ ಗಿರಕಿ ಹೊಡೆಯುವುದಿಲ್ಲ. ಪ್ರೇಮಕಥೆ, ಥ್ರಿಲ್ಲರ್ ಎಲಿಮೆಂಟ್‌ಗಳೂ ಇವೆ. ನಾನು ಬ್ರಿಟಿಷ್‌ ಬಾರ್ನ್‌ ದೇಸಿ ಬಾಯ್ ಆಗಿ ಕಾಣಿಸಿಕೊಂಡಿರುವೆ. ನಾನು ಇಲ್ಲಿಯವರೆಗೂ ಕಿರುಚಾಡಿ, ಹೊಡೆದಾಡಿಕೊಳ್ಳುವಂತಹ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ಇಂದಿಗೂ ನಾನು ಈ ಮಾದರಿಯ ಸಿನಿಮಾ ನೋಡಿಲ್ಲ. ಇದು ಪಿರಿಯಾಡಿಕ್‌ ಚಿತ್ರವಲ್ಲ. ಕಥೆಯ ತರ್ಕ ಪಾತ್ರಗಳ ರೂಪದಲ್ಲಿ ಚರ್ಚೆಯಾಗುತ್ತದೆ.

* ಈ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?

ಈ ಸಿನಿಮಾದ ಶೂಟಿಂಗ್‌ ಆರಂಭಗೊಂಡಿದ್ದೇ ಒಂದು ವಿಶಿಷ್ಟ ಅನುಭವ. ನಾನಾಗ ಆರೇಳು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಸಿದ್ಧತೆ ನಡೆಸಿದ್ದೆ. ‘ಕವಚ’ ಸಿನಿಮಾಕ್ಕೆ ಕುಂಬಳಕಾಯಿ ಒಡೆದ ಎರಡು ದಿನಕ್ಕೆ ಲಂಡನ್‌ಗೆ ಹೊರಟೆ. ಅದಾಗಲೇ ಅವರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು. ನನ್ನ ಹೇರ್‌ಸ್ಟೈಲ್‌, ವೇಷಭೂಷಣದಲ್ಲಿ ಸಾಕಷ್ಟು ಬದಲಾಗಿದೆ. ನಾನು ಚೆನ್ನಾಗಿ ಕಾಣಿಸಿಕೊಂಡಿರುವ ಪ್ರಥಮ ಸಿನಿಮಾ ಇದು. 

ತೆರೆಯ ಮೇಲೆ ಸಂಪೂರ್ಣ ಉಲ್ಟಾ ಪಾತ್ರ ನನ್ನದು. ಹಾವಭಾವ, ರೂಪಲಕ್ಷಣ, ಮಾತುಕತೆ ಎಲ್ಲದರಲ್ಲೂ ಬದಲಾವಣೆ ಕಾಣಬಹುದು. ಇಂಗ್ಲೆಂಡ್‌ನ ಇಂಗ್ಲಿಷ್‌ ಶೈಲಿಗೆ ಕನ್ನಡ ಬೆರೆತರೆ ಹೇಗಿರುತ್ತದೆಯೋ ಹಾಗೆ ಸಂಭಾಷಣೆ ನಡೆಸುತ್ತೇನೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಯಿತು.

* ವಿಲನ್‌ನಿಂದ ನಾಯಕ ನಟನಾಗುವಾಗ ನಿಮ್ಮಲ್ಲಿ ಆದ ಬದಲಾವಣೆ ಏನು?

ನಟನಾಗಿ ನಾನು ಎಲ್ಲವನ್ನೂ ಒಂದೇ ಸಮನಾಗಿ ನೋಡುತ್ತೇನೆ.  ಕಲಿಕೆಗಷ್ಟೇ ಒತ್ತು ನೀಡುತ್ತೇನೆ. ನಾನು ಕಲಿತಿರುವುದನ್ನು ಪ್ರದರ್ಶಿಸಲು ಅವಕಾಶ ಇರಬೇಕು. ಅಂತಹ ಪಾತ್ರಗಳು ಮನಸ್ಸಿಗೆ ಮುದ ಕೊಡುತ್ತವೆ. ನಾನು ಒಪ್ಪಿಕೊಳ್ಳುವುದು ಅಂತಹ ಪಾತ್ರಗಳನ್ನು ಮಾತ್ರ.

* ‘ಕಾಲಚಕ್ರ’ ಸಿನಿಮಾ ಯಾವ ಹಂತದಲ್ಲಿದೆ?

ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಎಡಿಟಿಂಗ್‌ ಸಂಪೂರ್ಣ ಮುಗಿದಿದೆ. ಸಿಜಿ ಕೆಲಸ ನಡೆಯುತ್ತದೆ. ಅದರಲ್ಲಿ ನನ್ನದು ಎರಡು ಶೇಡ್‌ ಇರುವ ಪಾತ್ರ. 60 ವರ್ಷದ ವೃದ್ಧನಾಗಿ, 30 ವರ್ಷದ ಯುವಕನಾಗಿಯೂ ನಟಿಸಿದ್ದೇನೆ. ಅದು ನನ್ನ ವೃತ್ತಿಬದುಕಿನ ವಿಶಿಷ್ಟವಾದ ಸಿನಿಮಾ. ಕಠಿಣ ಪ್ರಯೋಗಕ್ಕೆ ಒಗ್ಗಿಕೊಂಡು ಚಿತ್ರ ಎನ್ನಬಹುದು.

ಘಟನೆಯೊಂದರ ಸುತ್ತ ನಡೆಯುವ ಕಥೆ ಅದು. ಇಲ್ಲಿಯವರೆಗೂ ಅಂತಹ ಸನ್ನಿವೇಶಗಳಲ್ಲಿ ನಾನು ನಟಿಸಿಲ್ಲ. ಅದರಲ್ಲಿ ಭಾವನೆಗಳ ಮಿಳಿತವಿದೆ. ನನ್ನ ಸಮಯದ ಹೊಂದಾಣಿಕೆಯಿಂದಾಗಿ ತಡವಾಗಿದೆ. ಇನ್ನು ಹದಿನೈದು ದಿನದೊಳಗೆ ಮೊದಲ ಪ್ರತಿ ಸಿದ್ಧವಾಗಲಿದೆ.

* ನೀವು ನಾಯಕ ನಟನಾಗಿ ಅಭಿನಯಿಸಿರುವ ಮೊದಲ ತೆಲುಗು ಸಿನಿಮಾದ ಬಗ್ಗೆ ಹೇಳಿ.

ಗ್ಯಾಂಗ್‌ಸ್ಟರ್‌ನೊಬ್ಬನ ಬಯೋಪಿಕ್‌ ಚಿತ್ರ ಅದು. ತೆಲುಗು ಮತ್ತು ಕನ್ನಡದಲ್ಲಿ ಬರುತ್ತಿದೆ. ಕನ್ನಡಕ್ಕೆ ಡಬ್‌ ಮಾಡುತ್ತಿಲ್ಲ. ಪ್ರತ್ಯೇಕವಾಗಿಯೇ ಶೂಟಿಂಗ್‌ ಮಾಡಿದ್ದೇವೆ. ಸದ್ಯದಲ್ಲಿಯೇ ಇದರ ಬಗ್ಗೆ ಮತ್ತಷ್ಟು ವಿವರಣೆ ನೀಡುತ್ತೇನೆ. 

* ‘ಕೆಜಿಎಫ್‌’ ಚಿತ್ರ ನಿಮ್ಮ ವೃತ್ತಿಬದುಕಿನಲ್ಲಿ ತಂದ ಬದಲಾವಣೆ ಏನು?

‘ಕೆಜಿಎಫ್‌’ ಚಿತ್ರ ಕನ್ನಡ ಚಿತ್ರರಂಗದ ಹೆಮ್ಮೆಯ ಸಂಕೇತ. ಚಿತ್ರರಂಗಕ್ಕೊಂದು ದಿಕ್ಕು ಇತ್ತು. ಅದಕ್ಕೊಂದು ಹೊಸ ಆಯಾಮ ನೀಡಿದ್ದು ಇದರ ಹೆಗ್ಗಳಿಕೆ. ಸಂಜಯ್‌ ದತ್‌ ಅವರಂತಹ ಬಾಲಿವುಡ್‌ ನಟ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಮೂಲಕ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆ ಎನ್ನುವುದೇ ದೊಡ್ಡ ವಿಷಯ. ನನಗಷ್ಟೇ ಅಲ್ಲದೇ ಆ ಚಿತ್ರಕ್ಕೆ ದುಡಿದ ಎಲ್ಲರ ಬದುಕಿಗೂ ‘ಕೆಜಿಎಫ್’ ಹೊಳಪು ಮೆತ್ತಿಕೊಂಡಿದೆ. ಎರಡನೇ ಅಧ್ಯಾಯದಲ್ಲಿ ನನ್ನ ಪಾತ್ರದ ಬಗ್ಗೆ ಹೇಳಲು ಇನ್ನೂ ಟೈಮ್‌ ಇದೆ.

* ಎಂತಹ ಪಾತ್ರಗಳಲ್ಲಿ ನಟಿಸಲು ನಿಮಗಿಷ್ಟ?

ನಾನು ಇಲ್ಲಿಯವರೆಗೂ ನಟಿಸುವಂತಹ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಅತೀಂದ್ರಿಯ ವಿಷಯಗಳು ನನಗಿಷ್ಟವಾಗುವುದಿಲ್ಲ. ಅಂತಹ ಸಿನಿಮಾಗಳನ್ನೂ ನೋಡುವುದಿಲ್ಲ. ಕಥಾವಸ್ತು ಮಾನವನ ಭಾವನೆಗಳಿಗೆ ಹತ್ತಿರವಿರಬೇಕು. ನಾನು ಕಂಡಿದ್ದು, ಕಂಡದ್ದನ್ನು ನಿರ್ಲಕ್ಷ್ಯ ಮಾಡಿರುವ ಪಾತ್ರಗಳು ಸಮಾಜದಲ್ಲಿವೆ ಎನ್ನುವುದು ಸಿನಿಮಾ ಮೂಲಕ ಜನರಿಗೆ ಗೊತ್ತಾಗಬೇಕು.

ಕಸ ಬಾಚುವವನ ಬವಣೆ ನಮಗೆ ಗೊತ್ತಿರುವುದಿಲ್ಲ. ಸಿನಿಮಾ ವಿಸ್ತಾರವಾದ ಮಾಧ್ಯಮ. ಅಂತಹವರನ್ನು ನೋಡಲು ಈ ಮಾಧ್ಯಮ ಸದ್ಬಳಕೆಯಾಗಬೇಕು. ಯಾರೊಬ್ಬರೂ ಗುರುತಿಸದಂತಹ ವಿಷಯಗಳನ್ನು ಜನರಿಗೆ ತೋರಿಸುವಂತಹ ಸಿನಿಮಾಗಳಲ್ಲಿ ನಟಿಸಲು ನನಗಿಷ್ಟ. 

* ಹೊಸ ಯೋಜನೆಗಳ ಬಗ್ಗೆ ಹೇಳಿ...

ಐದು ಸಿನಿಮಾಗಳ ಶೂಟಿಂಗ್‌ ಪೂರ್ಣಗೊಂಡಿದೆ. ಐದಾರು ಸಿನಿಮಾಗಳು ಕೈಯಲ್ಲಿವೆ. ಎಲ್ಲ ಚಿತ್ರಗಳಲ್ಲೂ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರ. ‘ಪಿಆರ್‌ಕೆ’ ಪ್ರೊಡಕ್ಷನ್‌ನ ‘ಮಾಯಾಬಜಾರ್‌’ ಚಿತ್ರ ಕೂಡ ಮುಗಿಯುತ್ತಾ ಬಂದಿದೆ. ಹೊಸ ಪಾತ್ರಗಳಿಗಾಗಿ ನಾನು ಸದಾ ತವಕಿಸುತ್ತಿರುವೆ. ಇದರಲ್ಲಿ ಮೊದಲ ಬಾರಿಗೆ ಕಾಮಿಡಿ ಪಾತ್ರದಲ್ಲಿ ನಟಿಸಿದ್ದೇನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು