ಸೋಮವಾರ, ನವೆಂಬರ್ 18, 2019
20 °C

ವಿಜಯ್‌ ದೇವರಕೊಂಡ ಜೊತೆಯಾಗಲಿದ್ದಾರೆ ಜಾಹ್ನವಿ

Published:
Updated:
Prajavani

‘ಇಸ್ಮಾರ್ಟ್‌ ಶಂಕರ್‌’ ಭರ್ಜರಿ ಯಶಸ್ಸಿನ ನಂತರ ಪುರಿ ಜಗನ್ನಾಥ್‌ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಚಿತ್ರದ ನಾಯಕ ವಿಜಯ್‌ ದೇವರಕೊಂಡ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬಾಲಿವುಡ್‌ನ ನಟಿ ಜಾಹ್ನವಿ ಕಪೂರ್‌ ಮತ್ತು ವಿಜಯ್‌ ದೇವರಕೊಂಡ ಅವರ ತೆರೆಯ ಮೇಲಿನ ರೊಮ್ಯಾನ್ಸ್‌ ನೋಡುವ ಅವಕಾಶ ಪ್ರೇಕ್ಷಕರದ್ದಾಗಲಿದೆ.

ತಮ್ಮ ಮುಂದಿನ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆ ನಾಯಕಿಯಾಗಿ ಜಾಹ್ನವಿ ಕಪೂರ್‌ ನಟಿಸಬೇಕು ಎಂಬುದು ಪುರಿ ಆಲೋಚನೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಘೋಷಣೆ ಮಾಡಿದ್ದರು. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಾಯಕಿಯಾಗಿ ಯಾರು ನಟಿಸಬಹುದು ಎಂದು ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಅನೇಕ ಯುವನಟಿಯರ ಹೆಸರುಗಳು ಈ ಚಿತ್ರಕ್ಕೆ ಕೇಳಿಬಂದಿತ್ತು. ಆದರೆ ಪುರಿ ಅವರು ಇಲ್ಲಿಯತನಕ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಇತ್ತೀಚಿನ ಸುದ್ದಿ ಪ್ರಕಾರ,  ಜಾಹ್ನವಿ ಕಪೂರ್‌ ಹೆಸರು ಕೇಳಿಬರುತ್ತಿದೆ. ಆದರೆ ಪುರಿ ಅವರ ಆಹ್ವಾನವನ್ನು ಜಾಹ್ನವಿ ಕಪೂರ್‌ ಸ್ವೀಕರಿಸುತ್ತಾರೋ ಇಲ್ಲವೋ ಎಂದು ಕಾದುನೋಡಬೇಕು.

 ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಜಾಹ್ನವಿ ಕಪೂರ್‌, ವಿಜಯ್‌ ದೇವರಕೊಂಡ ಜೊತೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಈಗಿನ ಯಂಗ್ ನಟರಲ್ಲಿ ಯಾರ ಜೊತೆ ನಟಿಸಲು ಇಷ್ಟ ಎಂಬ ಪ್ರಶ್ನೆಗೆ ಅವರು ಟಾಲಿವುಡ್‌ನ ವಿಜಯ್‌ ಹೆಸರನ್ನು ಹೇಳಿದ್ದರು. ವಿಜಯ್‌ ದೇವರಕೊಂಡ  ತುಂಬಾ ಪ್ರತಿಭಾವಂತ ನಟ ಎಂದು ಅದೇ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಹಾಗಾಗಿ ಈ ಸಿನಿಮಾ ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆ ಎಲ್ಲರದ್ದು.

ಪ್ರತಿಕ್ರಿಯಿಸಿ (+)