ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ಕಂಡಂತೆ ವಿಜಯ್‌ ರೆಡ್ಡಿ..

Last Updated 11 ಅಕ್ಟೋಬರ್ 2020, 6:07 IST
ಅಕ್ಷರ ಗಾತ್ರ

ವಿಜಯ್‌ ರೆಡ್ಡಿ ಅವರ ನಿರ್ದೇಶನದಲ್ಲಿ ನಾನು ನಟಿಸಿದ ಮೊದಲ ಚಿತ್ರ ‘ನಾ ನಿನ್ನ ಬಿಡಲಾರೆ’. ಅವರೊಂದಿಗಿನ ಮೊದಲ ಚಿತ್ರವೇ ಸೂಪರ್‌ ಹಿಟ್‌ ಆಯಿತು. ಅದಕ್ಕೂ ಮೊದಲು ನಾನು‘ದೇವರ ಕಣ್ಣು’ ಮತ್ತು ‘ಬಯಲು ದಾರಿ’ ಸಿನಿಮಾಗಳನ್ನು ಬೇರೆಯವರ ನಿರ್ದೇಶನದಲ್ಲಿ ಮಾಡಿದ್ದೆ. ಆದರೆ,‘ನಾ ನಿನ್ನ ಬಿಡಲಾರೆ’ ಚಿತ್ರ ನೀಡಿದ ಯಶಸ್ಸನ್ನು ಎಂದಿಗೂ ಮರೆಯಲಾಗದು. ಈ ಚಿತ್ರಕ್ಕೆ ಎಂ.ಡಿ. ಸುಂದರ್‌ ಕಥೆ– ಚಿತ್ರಕಥೆಯನ್ನು, ಚಿ. ಉದಯಶಂಕರ್‌ ಸಾಹಿತ್ಯವನ್ನುಅಷ್ಟೇ ಸೊಗಸಾಗಿ ಹೆಣೆದಿದ್ದರು. ರಾಜನ್–‌ ನಾಗೇಂದ್ರ ಅವರ ಅದ್ಭುತಸಂಗೀತ, ಎಸ್. ಜಾನಕಿ, ಪಿ.ಸುಶೀಲ,ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯೂಚಿತ್ರದ ಪ್ರತಿ ಹಾಡುಗಳು ಚಿರಕಾಲ ಉಳಿಯುವಂತೆ ಮಾಡಿಬಿಟ್ಟವು.

‘ನಾ ನಿನ್ನ ಬಿಡಲಾರೆ’ ಚಿತ್ರ ಮಾಡುವಾಗ ನಾನು ಗಮನಿಸಿದಂತೆ ವಿಜಯ್ ಅವರು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಎದ್ದು, ಸ್ಕ್ರಿಪ್ಟ್‌ ಕೆಲಸ ಶುರು ಮಾಡಿಕೊಳ್ಳುತ್ತಿದ್ದರು. ಅವರು ಅದಾಗಲೇ ರಾಜ್‌ಕುಮಾರ್‌ ನಟನೆಯ ಸಿನಿಮಾಗಳು ಸೇರಿದಂತೆ ಹಲವರ ಸಿನಿಮಾಗಳನ್ನು ನಿರ್ದೇಶಿಸಿದ್ದರೂ ಅವರಲ್ಲಿ ಯಾವ ಹಮ್ಮು–ಬಿಮ್ಮು ಇರಲಿಲ್ಲ. ಆಗಿನ್ನು ಚಿತ್ರರಂಗಕ್ಕೆ ಕಾಲಿಟ್ಟ ಹೊಸಬರಂತೆ ತುಂಬಾ ಅತ್ಯುತ್ಸಾಹದಿಂದ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಬದ್ಧತೆ, ಶ್ರದ್ಧೆ ಹಾಗೂ ಕಠಿಣ ಪರಿಶ್ರಮ ಅನುಕರಣೀಯವಾಗಿತ್ತು. ಹಾಡುಗಳ ಚಿತ್ರೀಕರಣ ನಡೆಯುವಾಗ ಡಾನ್ಸ್‌ ಮಾಸ್ಟರ್‌ಗಳಿಗೆ ಮತ್ತು ಫೈಟ್‌ ದೃಶ್ಯಗಳು ಇದ್ದಾಗ ಫೈಟ್‌ ಮಾಸ್ಟರ್‌ಗಳಿಗೆ ಚಿತ್ರೀಕರಣದ ಹೊಣೆಗಾರಿಕೆ ವಹಿಸಿ ವಿಶ್ರಾಂತಿ ಪಡೆಯುವ ನಿರ್ದೇಶಕರ ನಡುವೆ ವಿಜಯ್‌ ಭಿನ್ನವಾಗಿ ನಡೆದುಕೊಳ್ಳುತ್ತಿದ್ದರು. ಪ್ರತಿ ಸನ್ನಿವೇಶದ ಮೇಲೂ ನಿಗಾ ಇಟ್ಟುಕೊಂಡು ಚಿತ್ರೀಕರಣ ಮಾಡುತ್ತಿದ್ದರು.

ಪ್ರತಿ ಸನ್ನಿವೇಶದ ಮೇಲೂ ಅವರ ನಿಗಾ ಹೇಗಿತ್ತೆಂದರೆ, ಚಿತ್ರದಲ್ಲಿನ ಪ್ರತಿ ಸಂಗತಿಯೂ ಪ್ರೇಕ್ಷಕನಿಗೆ ತಲುಪುತ್ತದೆಯೇ, ಜನರಿಗೆ ಖುಷಿ ಕೊಡುತ್ತದೆಯೇ ಎನ್ನುವುದರ ಬಗ್ಗೆ ಚರ್ಚಿಸುತ್ತಿದ್ದರು. ‘ನಾ ನಿನ್ನ ಬಿಡಲಾರೆ’ ಚಿತ್ರದ ಯಶಸ್ಸಿನ ನಂತರ ಮತ್ತೆರಡು ಸಿನಿಮಾಗಳನ್ನು ಅವರ ಜತೆಗೆ ಮಾಡಿದೆ. ಒಂದು; ‘ಮುಳ್ಳಿನ ಗುಲಾಬಿ’, ಇನ್ನೊಂದು; ‘ಚಲಿಸದ ಸಾಗರ’ ಈ ಎರಡು ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಂಡವು. ಇದರ ನಡುವೆ, ‘ನಾ ನಿನ್ನ ಬಿಡಲಾರೆ’ ಚಿತ್ರದ ಯಶಸ್ಸನ್ನು ನೋಡಿ ಬಾಲಿವುಡ್‌ನಲ್ಲೂ ಈ ಚಿತ್ರಕ್ಕೆ ಬೇಡಿಕೆ ಬಂದಿತು. ಈ ಚಿತ್ರವನ್ನು ಆಗಿನ ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿಬಾಲಿವುಡ್‌ ತಾರೆ ರೇಖಾ ಗಮನಿಸಿದರು. ಹಿಂದಿಯಲ್ಲಿ‘ನಾ ನಿನ್ನ ಬಿಡಲಾರೆ’ ಚಿತ್ರ ರಿಮೇಕ್‌ ಮಾಡಲು ಅವರು ಆಸಕ್ತಿ ವಹಿಸಿದರು. ಅವರೇ ನಿರ್ಮಾಪಕರನ್ನೂ ಕರೆತಂದು, ವಿಜಯ್‌ ಅವರಿಂದ ಸಿನಿಮಾ ಮಾಡಿಸಿದರು. ಲಕ್ಷ್ಮಿ ನಿಭಾಯಿಸಿದ್ದ ಪಾತ್ರವನ್ನು ರೇಖಾ ನಿರ್ವಹಿಸಿದರು. ಇನ್ನು ರಾಕ್ಷಸಿ ಪ್ರವೃತ್ತಿಯ ಮುಖವು ಸೇರಿ ದ್ವಿಪಾತ್ರವಾಗಿದ್ದ ನನ್ನ ಪಾತ್ರವನ್ನು ನಿಭಾಯಿಸಲು ಬಾಲಿವುಡ್‌ ಹೀರೋಗಳು ಯಾರೂಮುಂದೆ ಬರಲಿಲ್ಲ, ಕೊನೆಗೆ ಅದೂ ನನಗೆ ಬಂದಿತು. ‘ಮಂಗಲ್‌ ಸೂತ್ರ’ ಹೆಸರಿನಲ್ಲಿ ಆ ಚಿತ್ರ ಬಿಡುಗಡೆಯಾಯಿತು. ಉತ್ತರ ಭಾರತದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಚಿತ್ರ ಭಾರೀ ಯಶಸ್ಸು ಕಂಡಿತು. ಇದರ ಯಶಸ್ಸಿನ ನಂತರ ವಿಜಯ ಅವರಿಗೆ ಬಾಲಿವುಡ್‌ನಲ್ಲೂ ಹಲವು ಚಿತ್ರಗಳನ್ನು ನಿರ್ದೇಶಿಸುವ ಅವಕಾಶ ಸಿಕ್ಕಿತು.

ರಾಜ್‌ಕುಮಾರ್‌ ಅವರ ಜತೆಗೆ ಅವರು ಮಾಡಿದ ಎಲ್ಲ ಸಿನಿಮಾಗಳು ಟೆರಿಫಿಕ್‌ ಮತ್ತು ಸಿಗ್ನಿಫಿಕೆಂಟ್ ಆದಂತವು. ‘ಹುಲಿ ಹಾಲಿನ ಮೇವು‘, ‘ಸನಾದಿ ಅಪ್ಪಣ್ಣ’, ‘ಗಂಧದಗುಡಿ, ‘ಮಯೂರ’ ಹೀಗೆ ಒಂದಕ್ಕಿಂತ ಒಂದು ಅಮೋಘವಾದಂತವು.

ವಿಜಯ್‌ ಅವರಿಗೆ ನಮ್ಮ ಮೇಲೆ ವಿಶೇಷ ಪ್ರೀತಿ ಇತ್ತು. ನಮಗೂ ಅಷ್ಟೇ ಅವರ ಮೇಲೆ ಅಪಾರ ಗೌರವ. ‘ನಾ ನಿನ್ನ ಬಿಡಲಾರೆ ಸಿನಿಮಾ ಸಿಲ್ವರ್‌ ಜ್ಯುಬಿಲಿ ಕಂಡಿತ್ತು. ಹಾಗೆಯೇ ನನ್ನ ತಮ್ಮ ಶಂಕರ್‌ ನಾಗ್‌ ಮತ್ತು ಗಾಯತ್ರಿ ನಟಿಸಿ, ವಿಜಯ್ ನಿರ್ದೇಶಿಸಿದ್ದ ‘ಆಟೋ ರಾಜ’ ಕೂಡ ಸಿಲ್ವರ್‌ ಜ್ಯುಬಿಲಿ ಕಂಡಿತ್ತು. ಹಾಗಾಗಿ ಶಂಕರ್‌ ಕಂಡರೂ ಅವರಿಗೆ ಅಪಾರ ಪ್ರೀತಿ. ಶಂಕರ್‌ ಅಪಘಾತದಲ್ಲಿ ತೀರಿಕೊಂಡಾಗ ಚೆನ್ನೈನಿಂದ ಧಾವಿಸಿ ಬಂದು ನಮ್ಮ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಅವರ ಮಗಳ ಮದುವೆಗೆ ಆಹ್ವಾನಿಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ರಿಷೆಪ್ಶನ್‌ ಇತ್ತು. ನಾನು ಸಹ ಹೋಗಿದ್ದೆ, ರೆಡ್ಡಿಯವರ ಪಕ್ಕದಲ್ಲೇ ಕುಳಿತ್ತಿದ್ದೆ. ನನ್ನ ಹೆಗಲ ಮೇಲೆ ಕೈ ಇಟ್ಟು, ‘ನನಗೆ ಕಾಲಿಲ್ಲ,ಮಧುಮೇಹದಿಂದಾಗಿ ಮೊಣಕಾಲಿನವರೆಗೆ ಕಾಲು ಕತ್ತರಿಸಿದ್ದಾರೆ’ ಎಂದು ತುಂಬಾ ಬೇಸರದಿಂದ ಹೇಳಿಕೊಂಡಿದ್ದರು. ಮತ್ತೆ ಅವರ ಮತ್ತು ನನ್ನ ಭೇಟಿ ಆಗಿರಲಿಲ್ಲ. ಅವರ ಸಾವಿನ ಸುದ್ದಿ ಕೇಳಿ ತುಂಬಾ ನೋವಾಯಿತು.

(ನಿರೂಪಣೆ: ಕೆ.ಎಂ. ಸಂತೋಷ್‌ಕುಮಾರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT