ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸುಗ್ಗಿಯ ಹಿಗ್ಗಿನಲ್ಲಿ ವಿನಯ್ ರಾಜ್‌ ಕುಮಾರ್‌

Published 11 ಮೇ 2023, 19:04 IST
Last Updated 11 ಮೇ 2023, 19:04 IST
ಅಕ್ಷರ ಗಾತ್ರ

ಪೆಪೆ’ ಎಂದರೇನು? ಶೀರ್ಷಿಕೆಗೆ ಏನಾದರೂ ಕಾರಣವಿದೆಯಾ?

ಬಲವಾದ ಕಾರಣದೊಂದಿಗೆ, ಯಾವುದೇ ಹಿನ್ನೆಲೆಯಿಂದ ಇಟ್ಟ ಶೀರ್ಷಿಕೆಯಲ್ಲ. ‘ಪೆಪೆ’ ಇಲ್ಲಿ ಪಾತ್ರದ ಹೆಸರು. ‘ಪ್ರದೀಪ್‌’ ಎಂಬ ಪಾತ್ರ ಮಾಡಿರುವೆ. ಅದರಿಂದಾಗಿ ಈ ಶೀರ್ಷಿಕೆ ಹುಟ್ಟಿದ್ದು. ಮಲೆನಾಡಿನೊಂದಿಗೆ ಸಂಬಂಧ ಹೊಂದಿದ ಪಾತ್ರವಿದು. ಒಂದು ಕಾಲ್ಪನಿಕ ಊರು, ಪ್ರದೇಶದಲ್ಲಿ ನಡೆಯುವ ಕಥೆ. 

ಪ್ರ

ಚಿತ್ರದ ಟ್ರೇಲರ್‌ನಲ್ಲಿ ರಕ್ತದ ಹೊಳೆ ಹರಿದಿದ್ದು, ತಾವು ಕೂಡ ಮಾಸ್‌ ಸಿನಿಮಾ ಎದುರು ನೋಡುತ್ತಿರುವಿರಾ?

ಪಾತ್ರ ಮಾಸ್‌ ಆಗಿದೆ. ಹಾಗಂತ ಇದು ಸಿದ್ಧ ಸೂತ್ರಗಳನ್ನು ಹೊಂದಿರುವ ಮಾಸ್‌ ಚಿತ್ರವಲ್ಲ. ಸಾಕಷ್ಟು ಡ್ರಾಮಾ ಇದೆ. ಒಂದೊಳ್ಳೆ ಕಥೆ ಇದೆ. ಮನರಂಜನೆ ಇದೆ. ಇಡೀ ಚಿತ್ರದ ಸೌಂಡ್‌ ಡಿಸೈನ್‌ ಬೇರೆ ರೀತಿ ಇದೆ. ಒಂದು ರೀತಿ ಪರಿಪೂರ್ಣ ಮಿಶ್ರಣದ ಸಿನಿಮಾ. ಸಂಕಲನಕ್ಕೆ ತುಂಬ ಜಾಗವಿದೆ. ಬಿಜಿಎಂ ನೆನಪಿನಲ್ಲಿ ಉಳಿಯುತ್ತೆ. ಮಾಮೂಲಿ ಮಾಸ್‌ ಚಿತ್ರ ಅಲ್ಲ.

ಪ್ರ

‘ಪೆಪೆ’ ಚಿತ್ರದಲ್ಲಿ ಮಲೆಯಾಳಂ ಸಿನಿಮಾಗಳ ಛಾಯೆ ದಟ್ಟವಾಗಿರುವಂತಿದೆ ಅಲ್ಲವೆ?

ನಿರ್ದೇಶಕ ಶ್ರೀಲೇಶ್ ಎಸ್. ನಾಯರ್ ಹುಟ್ಟಿ ಬೆಳೆದಿದ್ದು ಕೊಡಗಿನಲ್ಲಿ. ಅಪ್ಪಟ್ಟ ಕನ್ನಡಿಗ. ಆದರೆ ಮೂಲತಃ ಮಲೆಯಾಳಂನವರು. ಅವರ ಮಾತೃಭಾಷೆ ಮಲೆಯಾಳಂ. ಅವರದ್ದೇ ಕಥೆ, ಸಂಭಾಷಣೆ. ಹೀಗಾಗಿ ಚಿತ್ರದಲ್ಲಿ ಅಲ್ಲಿನ ಛಾಯೆ ಸ್ವಲ್ಪ ಕಂಡಿರಬಹುದು. ಚಿತ್ರದಲ್ಲಿ ಸಾಕಷ್ಟು ಕಡೆ ಮೌನವಿದೆ. ಹೊಸ ಅನುಭವ ನೀಡುವ ಸಿನಿಮಾ.

ಪ್ರ

ನೀವು ಪ್ರತಿ ಸಲ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರಲು ಕಾರಣವೇನು?

ಸಿದ್ಧಸೂತ್ರದ ಚೌಕಟ್ಟಿನಲ್ಲಿ ಇರಲು ಇಷ್ಟವಿಲ್ಲ. ಅದಕ್ಕೆ ಕಟ್ಟುಬಿದ್ದರೆ ನಾವು ಅಂತಹ ಕಥೆಗಳನ್ನೇ ಹುಡುಕುತ್ತ ಇರುತ್ತೇವೆ. ಮನಸ್ಸು ಮುಕ್ತವಾಗಿದ್ದರೆ ಬೇರೆ ರೀತಿಯ ಕಥೆಗಳು, ಪಾತ್ರಗಳು ಸಿಗುತ್ತವೆ. ಅಂತಿಮವಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡುವ ಸಿನಿಮಾ ಮಾಡಬೇಕಷ್ಟೆ. 

ಪ್ರ

ನಿಮ್ಮ ಹಿಂದಿನ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಚಿತ್ರಮಂದಿರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ ಅಲ್ಲವೆ?

ಇಡೀ ಪಯಣದಲ್ಲಿ ಎಲ್ಲೋ ಒಂದು ಕಡೆ ಎಡವಿರುತ್ತೀವಿ. ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿರುತ್ತೇವೆ. ಇಲ್ಲವಾದರೆ ಬಿಡುಗಡೆ ಸಮಯ ತಪ್ಪಾಗಿರುತ್ತೆ. ಕೆಲವೊಮ್ಮೆ ಚಿತ್ರದಲ್ಲಿ ಯಾವುದೋ ಅಂಶ ಕಡಿಮೆಯಾಗಿ ಜನರ ನಿರೀಕ್ಷೆ ತಲುಪಿರುವುದಿಲ್ಲ. ಗೆಲುವಿಗೆ ಎಲ್ಲವೂ ಕೂಡಿ ಬರಬೇಕು. 100 ವರ್ಷದಿಂದ ಚಿತ್ರಮಂದಿರಗಳಿವೆ. ಜನ ಬರುವುದು, ಹೋಗುವುದು ಇದಿದೆ. ಕೆಲವು ಸಿನಿಮಾಗಳು ಗೆಲ್ಲುತ್ತವೆ, ಕೆಲವು ಸೋಲುತ್ತವೆ. ಈ ಪ್ರಕ್ರಿಯೆ ನಿರಂತರ. ಆದರೆ ತುಂಬ ಒಳ್ಳೆಯ ಸಿನಿಮಾ ಚಿತ್ರಮಂದಿರದಲ್ಲಿ ಸೋತ ಉದಾಹರಣೆ ಇಲ್ಲ. ಜನರೆದುರು ಸೋತಿದ್ದೇವೆ ಎಂದರೆ ನಾವೇ ಎಲ್ಲೋ ಎಡವಿದ್ದೇವೆ ಎಂದರ್ಥ.

ಪ್ರ

ನಿಮ್ಮ ಯಾವ್ಯಾವ ಸಿನಿಮಾ ಬಿಡುಗಡೆಗೆ ಸಜ್ಜಾಗಿವೆ?

ಕೀರ್ತಿ ಅವರು ನಿರ್ದೇಶಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ಧವಿದೆ. ‘ಪೆಪೆ’ ಒಂದೆರಡು ತಿಂಗಳಲ್ಲಿ ತೆರೆಗೆ ಬರುತ್ತದೆ. ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ರಾಜಸ್ಥಾನ, ಮುಂಬೈನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೇವೆ. ಇನ್ನೊಂದು ವಾರ ಚಿತ್ರೀಕರಣ ಬಾಕಿ ಇದೆ.

ಪ್ರ

ಈವರೆಗಿನ ಸಿನಿಮಾ ಪಯಣದ ಅನುಭವ ಹೇಗಿತ್ತು?

ಈಗಾಗಲೇ ನಾಲ್ಕು ಚಿತ್ರಗಳು ಬಿಡುಗಡೆಗೊಂಡಿವೆ. ಇನ್ನೂ ಮೂರು ಬಿಡುಗಡೆಯಾಗಬೇಕಷ್ಟೆ. ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ಕೆಲಸ ಮಾಡಿರುವೆ. ಬೇರೆ ಬೇರೆ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಹೀಗಾಗಿ ಸಾಕಷ್ಟು ವೈವಿಧ್ಯ ಕಂಡಿರುವೆ. ಒಳ್ಳೊಳ್ಳೆ ಕಥೆಗಳು ಸಿಕ್ಕಿವೆ. ಖುಷಿಯಿದೆ.

ಪ್ರ

ಸಾಕಷ್ಟು ಹೊಸ ತಂಡದ ಜೊತೆಯೇ ಕೆಲಸ ಮಾಡುತ್ತೀರಿ?

ಎರಡೇ ಸಿನಿಮಾ ಅನುಭವಿ ನಿರ್ದೇಶಕರ ಜತೆ ಕೆಲಸ ಮಾಡಿದ್ದು. ಸುನಿಯಂತಹ ನಿರ್ದೇಶಕರ ಜತೆ ಕೆಲಸ ಮಾಡುವುದು ಒಂದು ಭಿನ್ನ ಅನುಭವ. ಚಿತ್ರೀಕರಣ ಬಹಳ ಯೋಜಿತವಾಗಿರುತ್ತದೆ. ಅಂದುಕೊಂಡಂತೆ ಮುಗಿಯುತ್ತದೆ. ಹೊಸಬರಲ್ಲಿ ಉತ್ತಮ ಕಥೆ ಇರುತ್ತೆ. ಉತ್ಸಾಹ ಇರುತ್ತೆ. ಬೇರೆ ರೀತಿಯ ಆಯಾಮಗಳಿರುತ್ತೆ. ಒಟ್ಟಿನಲ್ಲಿ ಯಾವ ಕಥೆ ಚೆನ್ನಾಗಿರುತ್ತದೆಯೋ, ಯಾವುದೂ ಸೂಕ್ತ ಎನ್ನಿಸುತ್ತದೆಯೋ ಅದನ್ನು ಮಾಡಿಕೊಂಡು ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT