ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ: ಚೇತನ್‌ ಅಹಿಂಸಾ

Published : 10 ಸೆಪ್ಟೆಂಬರ್ 2024, 16:24 IST
Last Updated : 10 ಸೆಪ್ಟೆಂಬರ್ 2024, 16:24 IST
ಫಾಲೋ ಮಾಡಿ
Comments

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ. ಸಾಕಷ್ಟು ನಟಿಯರು ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ (ಫೈರ್) ಬಳಿ ಅಳಲು ತೋಡಿಕೊಂಡಿದ್ದಾರೆ. ಹಂತಹಂತವಾಗಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದು ನಟ ಚೇತನ್‌ ಅಹಿಂಸಾ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಮಂಗಳವಾರ ನಡೆದ ‘ಲೈಟ್ಸ್‌, ಕ್ಯಾಮೆರಾ, ಅಕೌಂಟಬಿಲಿಟಿ! – ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಲಾವಿದೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದಾಗ, ನಮ್ಮಲ್ಲಿ ಅಂಥ ಪ್ರಕರಣಗಳಿವೆಯಾ ಎಂದು ಸ್ವತಃ ಮುಖ್ಯಮಂತ್ರಿಗಳು ಪ್ರಶ್ನಿಸಿದ್ದು ಅಚ್ಚರಿ ಮೂಡಿಸಿತು. ಸೆ.16ಕ್ಕೆ ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿದೆ. ಫೈರ್‌ ಸಂಸ್ಥೆ ಅಧ್ಯಕ್ಷರು ಕೂಡ ಸದ್ಯ ನಗರದಲ್ಲಿಲ್ಲ. ಅವರು ಮರಳಿದ ಬಳಿಕ ನಮ್ಮ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ’ ಎಂದರು.

‘ಸಾರ್ವಜನಿಕರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಬೇಕು. ಯಾವುದೇ ಬಗೆಯ ಅಸಮಾನತೆ ವಿರುದ್ಧ ಸಂಸ್ಥೆಗಳ ಮೂಲಕ ಸಂಘಟಿತ ಹೋರಾಟ ನಡೆಯಬೇಕು. ಯೂನಿಯನ್‌ ಪ್ರಾರಂಭಕ್ಕೂ ಮೊದಲು ಸಿನಿಮಾದಲ್ಲಿನ ಕೆಲಸಗಾರರಿಗೆ ವ್ಯವಸ್ಥಿತ ಸಂಘಟನೆ ಇರಲಿಲ್ಲ. ಬಳಿಕ ಒಂದು ಸಂಘಟನೆಯಾಯಿತು. ಒಂದಷ್ಟು ಕಾನೂನುಗಳು ಜಾರಿಯಾದವು. ಲೈಂಗಿಕ ದೌರ್ಜನ್ಯ ತಡೆಯುವ ವಿಷಯದಲ್ಲಿಯೂ ಇದೇ ರೀತಿ ಆಗಬೇಕು. ಆ ನಿಟ್ಟಿಯಲ್ಲಿ ನಾವೊಂದಷ್ಟು ಜನ ಒಟ್ಟಾಗಿದ್ದೇವೆ’ ಎಂದು ಅವರು ತಿಳಿಸಿದರು.

ರಂಗಕರ್ಮಿ, ಸಾಹಿತಿ ದು.ಸರಸ್ವತಿ ಮಾತನಾಡಿ, ‘ಲೈಂಗಿಕ ದೌರ್ಜನ್ಯ ಎಂಬುದು ಒಂದು ಕಾಯಿಲೆ ಇದ್ದಂತೆ. ಮೊದಲು ಕಾಯಿಲೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ನಂತರ ಕಾಯಿಲೆಯ ಸ್ವರೂಪ, ಚಿಕಿತ್ಸೆ ತಿಳಿಯುತ್ತ ಹೋಗುತ್ತದೆ. ಕೇರಳದಲ್ಲಿ ಹೇಮಾ ಸಮಿತಿ ವರದಿ ಕಾಯಿಲೆ ಇರುವುದನ್ನು ಅಧಿಕೃತಪಡಿಸಿದೆ. ನಮ್ಮಲ್ಲಿಯೂ ಅಂಥ ಕೆಲಸವಾಗಬೇಕು’ ಎಂದರು.

‘ಮಹಿಳೆಯರು ದೇಹದ ಕುರಿತು ಅಸಹ್ಯಪಡುವುದನ್ನು ಬಿಡಬೇಕು. ಅತ್ಯಾಚಾರವಾದರೆ ಅತ್ಯಾಚಾರ ಮಾಡಿದವನು ಭಯಪಡಬೇಕು ಹೊರತು ಮಹಿಳೆ ಬಚ್ಚಿಟ್ಟು ಕುಳಿತುಕೊಳ್ಳಬಾರದು. ಎಲ್ಲಿಂದಲೋ ಒಂದು ಹೋರಾಟ ಪ‍್ರಾರಂಭವಾಗಬೇಕು. ಹೇಮಾ ಸಮಿತಿ ವರದಿಯಿಂದ ಅದು ಪ್ರಾರಂಭವಾಗಿದೆ ಎಂದು ತಿಳಿದುಕೊಳ್ಳೋಣ’ ಎಂದವರು ತಿಳಿಸಿದರು. 

ಅಶ್ವಿನಿ ಒಬುಳೇಶ್‌, ಮುಕ್ತಾ ದೀದಿ, ಕೀರ್ತನಾ ಕುಮಾರ್‌ ಮೊದಲಾದವರು ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದರು. 

ಫೈರ್‌ ವಿರುದ್ಧ ಸಾರಾ ಗೋವಿಂದು ಕಿಡಿ

‘ಯಾವ್ ಫೈರ್ ರೀ?

‘ಏನಿದೆ ಕನ್ನಡ ಇಂಡಸ್ಟ್ರೀಯಲ್ಲಿ. ನಮಗೆ ಯಾವ ಫೈರ್‌ ಸಂಸ್ಥೆಯೂ ಗೊತ್ತಿಲ್ಲ’ ಎಂದು ನಿರ್ಮಾಪಕ ಸಾರಾ ಗೋವಿಂದು ಕಿಡಿಕಾರಿದ್ದಾರೆ.

ನಿರ್ಮಾಪಕ ಸಂಘದ ಕೆಲ ವಿಚಾರಗಳನ್ನು ಚರ್ಚಿಸಲು ಸಾರಾ ಗೋವಿಂದು ನೇತೃತ್ವದ ತಂಡವೊಂದು ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಬಳಿಕ ಮಾತನಾಡಿದ ಸಾರಾ ಗೋವಿಂದು ‘ಫೈರ್‌ ಒಂದು ಅಧಿಕೃತ ಸಂಸ್ಥೆಯಲ್ಲ. ನಮಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದರು.  ‘ನಿರ್ಮಾಪಕರ ಸಂಘದ ವಿಚಾರಕ್ಕಾಗಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದೆವು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೈರ್‌ ಸಂಸ್ಥೆ ಕುರಿತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ವಿಚಾರಿಸಿದ್ದಾರೆ. ನಮಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಅದೊಂದು ಚಿತ್ರರಂಗದ ಅಧಿಕೃತ ಸಂಸ್ಥೆಯಲ್ಲ ಎಂದು ಹೇಳಿದ್ದೇವೆ. ವಾಣಿಜ್ಯ ಮಂಡಳಿಯಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ದೂರು ಬಂದಿಲ್ಲ. ಸೆ.16ಕ್ಕೆ ಈ ಬಗ್ಗೆ ಕಲಾವಿದೆಯರ ಸಭೆ ಕರೆದಿದ್ದೇವೆ. ಮಹಿಳಾ ಆಯೋಗದ ಅಧ್ಯಕ್ಷರೂ ಸಭೆಗೆ ಬರುತ್ತಾರೆ. ಅಲ್ಲಿ ದೂರು ಕೇಳಿ ಬಂದರೆ ಖಂಡಿತ ಮುಂದಿನ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT