ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:‌ ‘ಸಮಾನ ಪ್ರಾಮುಖ್ಯ, ಸಂಭಾವನೆ ಸಿಗಲಿ’

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಸಿನಿಮಾದಲ್ಲಿ ಮಹಿಳೆಯರು’ ಗೋಷ್ಠಿಯಲ್ಲಿ ನಟಿ ಸುಮನ್‌ ನಗರಕರ್‌ ಅಭಿಮತ
Last Updated 8 ಮಾರ್ಚ್ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿನಿಮಾ ಕ್ಷೇತ್ರದಲ್ಲಿ ಮಧ್ಯವಯಸ್ಸಿನ ಮಹಿಳೆಯರು ಒಂದು ಬಿಡುವು ತೆಗೆದುಕೊಂಡು ಮತ್ತೆ ನಟನೆಗೆ ಮರಳಿದಾಗ, ‘ಆಕೆ ತಾಯಿಯ ಪಾತ್ರಕ್ಕೇ ಸೀಮಿತ’ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಆದರೆ ನಾಯಕನಿಗೆ 60–70 ವರ್ಷವಾಗುವವರೆಗೂ ನಾಯಕನ ಪಾತ್ರವೇ ಸಿಗುತ್ತದೆ. ಇದು ಬದಲಾಗಬೇಕು. ಮಹಿಳೆಗೂ, ಆಕೆಯ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇರಬೇಕು. ಜೊತೆಗೆ ಸಮಾನ ವೇತನವೂ ಸಿಗಬೇಕು..’

ಹೀಗೊಂದು ಕೂಗು ಕೇಳಿಬಂದಿದ್ದು 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ. ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ‘ಸಿನಿಮಾದಲ್ಲಿ ಮಹಿಳೆಯರು’ ಎನ್ನುವ ಚರ್ಚಾಗೋಷ್ಠಿ ಏರ್ಪಡಿಸಲಾಗಿತ್ತು.

ಚರ್ಚೆಯಲ್ಲಿ ಮಾತನಾಡಿದ ನಟಿ ಸುಮನ್‌ ನಗರಕರ್, ‘ಮಹಿಳೆಯರು ಐಟಂ ಸಾಂಗ್‌ಗೆ ಸೀಮಿತ ಎನ್ನುವ ಕಾಲ ಬಂದಿದೆ. ಮಹಿಳೆಯರು ವಸ್ತುವಲ್ಲ, ಅವರೂ ಮನುಷ್ಯರು. ಮಹಿಳೆಯರು ಇಂಥ ಕೆಲಸವನ್ನು ಮಾಡಲಾರರು ಎನ್ನುವ ಹಲವರು ಇನ್ನೂ ಚಿತ್ರರಂಗದಲ್ಲಿದ್ದಾರೆ. ಚಂದನವನದಲ್ಲಿ ಮೇಕ್‌ಅಪ್‌ ಸಂಘದ ಗುರುತಿನ ಚೀಟಿಯೂ ಮಹಿಳೆಯರಿಗೆ ಸಿಗುತ್ತಿಲ್ಲ ಎನ್ನುವುದನ್ನೂ ಕೇಳಿದ್ದೇನೆ’ ಎಂದರು.

ಛಾಯಾಗ್ರಾಹಕಿ ಪ್ರೀತಾ ಮಾತನಾಡಿ, ‘ಪ್ರತಿಭೆ ವಿಚಾರದಲ್ಲಿ ಲಿಂಗ ತಾರತಮ್ಯ ಬರಬಾರದು. ನಿರ್ದೇಶಕರಾಗಲಿ ಅಥವಾ ನಿರ್ಮಾಪಕರು ಒಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಪ್ರತಿಭೆಯನ್ನಷ್ಟೇ ನೋಡಬೇಕು. ಹೀಗಾಗದೇ ಇರುವುದು ಚಿತ್ರರಂಗದ ಹಲವು ವಿಭಾಗಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣ. ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರು ಇನ್ನಷ್ಟು ಮುಂದುವರಿಯಲು ಪುರುಷರ ಯೋಚನಾ ಕ್ರಮ ಬದಲಾಗಬೇಕು’ ಎಂದು ಹೇಳಿದರು.

ಸೌಂಡ್‌ ಎಂಜಿನಿಯರ್‌ ಗೀತಾ ಮಾತನಾಡಿ, ‘ಇಂಥ ಚಿತ್ರೋತ್ಸವಗಳು ನಡೆದಾಗ ಚಿತ್ರರಂಗದಲ್ಲಿರುವ ಮಹಿಳೆಯರು ಒಂದೆಡೆ ಸೇರುತ್ತೇವೆ. ನಾವೇ ಜೊತೆಗೂಡಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಪುರುಷರು ಈ ಕೆಲಸವನ್ನು ಮಾಡುತ್ತಾರೆ. ಕಳೆದ 15 ವರ್ಷದಿಂದ ಸಿನಿಮಾ ಕ್ಷೇತ್ರದ ಎಲ್ಲ ವಿಭಾಗಗಳಿಗೂ ಹೆಣ್ಣುಮಕ್ಕಳು ಬರುತ್ತಿದ್ದಾರೆ. ಆದರೆ ಮದುವೆಯಾದ ಮೇಲೆ ಈ ಕೆಲಸವನ್ನು ತೊರೆಯುತ್ತಿರುವುದು ಸರಿಯಲ್ಲ. ಈಗಿನ ಯುವಜನತೆಗೆ ತಾಳ್ಮೆ ಎಂಬುವುದೇ ಇಲ್ಲ’ ಎಂದರು.

ಸಮಾನ ವೇತನದ ಕೂಗೂ ಚರ್ಚೆಯ ವೇಳೆ ಕೇಳಿಬಂತು. ‘ಸಮಾನ ವೇತನಕ್ಕಾಗಿ ಏಕೆ ಹೋರಾಟ ಮಾಡಬೇಕು? ಸಮಾನ ಕೆಲಸ ಮಾಡಿ, ಮಹಿಳೆ ಎನ್ನುವ ಕಾರಣಕ್ಕಷ್ಟೇ ಕಡಿಮೆ ವೇತನ ಏಕೆ ಪಡೆಯಬೇಕು’ ಎಂದು ಗೀತಾ ಪ್ರಶ್ನಿಸಿದರು. ಕೆಲವು ಪದಗಳ ಬಗ್ಗೆಯೂ ಗೋಷ್ಠಿಯಲ್ಲಿ ಚರ್ಚೆಯಾಯಿತು. ‘ವುಮೆನ್‌ ಫಿಲ್ಮ್‌ಮೇಕರ್‌’, ‘ಕ್ಯಾಮೆರಾ ಮ್ಯಾನ್‌ ಮೇಡಂ’, ‘ಆ್ಯಕ್ಟ್ರೆಸ್‌’, ‘ಸಂಕಲನಕಾರ್ತಿ’ ಹೀಗೇಕೆ ಕರೆಯಬೇಕು ಎನ್ನುವ ಪ್ರಶ್ನೆಗಳು ಎದ್ದವು.

ಸಂಕಲನಕಾರ್ತಿ ಪ್ರೀತಿ ಮೋಹನ್‌, ನಿರ್ದೇಶಕಿ ರೋಶಿನಿ ದಿನಕರ್‌, ನಟಿಯರಾದ ಋತುಪರ್ಣಾ ಸೇನ್‌ ಗುಪ್ತಾ ಹಾಗೂ ಏಮಿ ಬರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT