ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇರ್ ಅಂಡ್ ಲವ್ಲಿ ಚೆಲುವೆಯ ಅಂತರಂಗ

Last Updated 10 ಏಪ್ರಿಲ್ 2019, 9:18 IST
ಅಕ್ಷರ ಗಾತ್ರ

ಆ ಕೋಣೆಗೆ ಕಾಲಿಟ್ಟಾಗ ಹಸಿರು ಗೌನ್ ತೊಟ್ಟಿದ್ದ ನಟಿ ಯಾಮಿ ಗೌತಮ್ ಮುಗುಳುನಗೆ ಚೆಲ್ಲಿ ಸ್ವಾಗತಿಸಿದರು. ಮೇಕಪ್ ರಹಿತವಾಗಿದ್ದ ಅವರ ಗುಳಿಕೆನ್ನೆಗಳ ಮೇಲೆ ಸಂಜೆಯ ರಾಗರತಿಯ ರಂಗು ಚೆಲ್ಲಿತ್ತು. ತುಟಿಗೆ ಆಗಷ್ಟೆ ಹಚ್ಚಿದ್ದ ತೆಳುಗುಲಾಬಿಯ ರಂಗು ಬೆರಳತುದಿಯಲ್ಲೂ ಗೋಚರಿಸುತ್ತಿತ್ತು. ಸರಳತೆಯಲ್ಲೂ ಸೌಂದರ್ಯ ಸೂಸುತ್ತಿದ್ದ ಯಾಮಿ, ಬ್ಲೆಂಡರ್ಸ್ ಪ್ರೈಡ್ ಮ್ಯಾಜಿಕಲ್ ನೈಟ್‌ನ ಷೋ ಸ್ಟಾಪರ್ ಆಗಿ ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಫೇರ್ ಅಂಡ್ ಲವ್ಲಿ ಚೆಲುವೆ ಜೊತೆ ‘ಮೆಟ್ರೊ’ ನಡೆಸಿದ ಮಾತುಕತೆ ಇಲ್ಲಿದೆ.

* ನಿಮ್ಮ ಸಿನಿಪಯಣಕ್ಕೆ ಹೆಚ್ಚುಕಮ್ಮಿ ದಶಕವಾಗಿದೆ. ಈ ಬಗ್ಗೆ ಏನನ್ನಿಸುತ್ತೆ?
ಹೋ ಒಂದು ದಶಕವಾಯಿತೇ? ನಂಬಲಾಗುತ್ತಿಲ್ಲ... ಇರಲಿ. ನನ್ನ ಸಿನಿಪಯಣ ಇಂದಿಗೂ ಮುಂದುವರಿಯುತ್ತಿದೆ. ನಿಜ ಹೇಳಬೇಕೆಂದರೆ ಟೆಲಿವಿಷನ್‌, ಆ್ಯಡ್‌ ಪೋಟೊಶೂಟ್‌ನಿಂದ ನನ್ನ ವೃತ್ತಿ ಆರಂಭವಾಯಿತು. ‘ಉಲ್ಲಾಸ ಉತ್ಸಾಹ’ ಕನ್ನಡ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟೆ. ಈ ನಡುವೆ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಈ ಏಣಿಯಾಟದಲ್ಲಿ ಕೊನೆಗೂ 2012ರಲ್ಲಿ ‘ವಿಕಿ ಡೋನರ್’ಗೆ ನಾಯಕಿಯಾದೆ. ಅಲ್ಲಿಂದ ‘ಉರಿ’ ತನಕ ಭಿನ್ನ ರೀತಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಹೆಮ್ಮೆ ಮತ್ತು ಖುಷಿ ನನಗಿದೆ.

* ದಕ್ಷಿಣ ಭಾರತದ ಸಿನಿರಂಗದಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೀರಿ...
ಜಾಹೀರಾತು, ಟೆಲಿವಿಷನ್ ಕಮರ್ಷಿಯಲ್ ಷೋಗಳ ನಡುವೆ ಮೊದಲ ಸಿನಿಮಾ ಒಪ್ಪಿಕೊಂಡದ್ದು ದಕ್ಷಿಣದಲ್ಲೇ. ಇಲ್ಲಿನ ಅನುಭವ ಅದ್ಭುತವಾಗಿತ್ತು. ಹಾಗಂತ ನಟಿಸುವುದು ಸುಲಭವಾಗಿತ್ತು ಅಂತಲ್ಲ. ನಟಿಯಾಗಿ ನನ್ನ ಅಭಿಯನಯವನ್ನು ರೂಪಿಸಿಕೊಳ್ಳುತ್ತಲೇ ನನ್ನದಲ್ಲದ ಭಾಷೆಯ ಕಡೆಗೂ ಗಮನ ಕೊಡಬೇಕಿತ್ತು. ದಕ್ಷಿಣದ ಸಹನಟರು ನನಗೆ ಡೈಲಾಗ್ ಅರ್ಥಮಾಡಿಸಿ ಸಹಕಾರ ನೀಡುತ್ತಿದ್ದನ್ನು ಮರೆಯಲಾರೆ. ತೆಲುಗಿನ ‘ಉಲ್ಲಾಸಂಗ ಉತ್ಸಾಹಂಗ’ ಸಿನಿಮಾ ನೋಡಿ ಕನ್ನಡದ ‘ಉಲ್ಲಾಸ ಉತ್ಸಾಹ’ ಒಪ್ಪಿಕೊಂಡೆ. ಅದೊಂದು ಸ್ವೀಟ್ ಲವ್ ಸ್ಟೋರಿ. ಇದು ದಕ್ಷಿಣದ ಇತರ ಭಾಷೆಗಳಲ್ಲಿ ಅವಕಾಶ ಪಡೆಯಲು ಚಿಮ್ಮುಹಲಗೆಯಾಯಿತು.

* ಮೊದಲ ಸಿನಿಮಾದ ಅನುಭವ ಹೇಗಿತ್ತು? ಕನ್ನಡ ಬರುತ್ತಾ?
ಕನ್ನಡದ ‘ಉಲ್ಲಾಸ ಉತ್ಸಾಹ’ದ ಮೂಲಕವೇ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು ಮರೆಯಲಾಗದ ಅನುಭವ. ಸಿನಿಮಾ ಬಿಡುಗಡೆಯಾದ ಮೇಲೆ ಫಸ್ಟ್ ಡೇ ಫಸ್ಟ್ ಷೋ ಅನ್ನು ಅಮ್ಮನ ಜತೆ ನೋಡಿದ್ದೆ. ವಿಶಾಲವಾದ ತೆರೆಯ ಮೇಲೆ ನನ್ನನ್ನು ನಾನೇ ನೋಡಿದ ಅನುಭೂತಿ ಅನನ್ಯವಾಗಿತ್ತು. ಅಂದೇ ನಿರ್ಧರಿಸಿದೆ ನಾನು ನಟಿಯೇ ಆಗಬೇಕೆಂದು. ನನ್ನಲ್ಲಿನ ಗೊಂದಲ ನಿವಾರಿಸಿ, ಸಿನಿಮಾ ನಟಿಯಾಗಬೇಕೆಂಬ ಸ್ಪಷ್ಟತೆ ನೀಡಿದ್ದೇ ಈ ಸಿನಿಮಾ. ಬೇಕಿರುವಷ್ಟು ಕನ್ನಡ ಕಲಿತಿದ್ದೆ. ‘ಶುಂಠಿ ಟೀ’ ಅಂದ್ರೆ ಇಷ್ಟ.

* ಆಫ್‌ ಬೀಟ್ ಸಿನಿಮಾಗಳನ್ನೇ ಹೆಚ್ಚು ಒಪ್ಪಿಕೊಂಡಿದ್ದೀರಿ ಅನಿಸುವುದಿಲ್ಲವೇ?
ನಿಮ್ಮ ಪ್ರಕಾರ ಆಫ್‌ಬೀಟ್ ಎಂದರೆ ಏನರ್ಥ? ಹಣ ಗಳಿಕೆಗಾಗಿ ಕಮರ್ಷಿಯಲ್ ಸಿನಿಮಾ ಮಾಡಬಹುದು ನಿಜ. ಆದರೆ, ನಟಿಯಾಗಿ ಭಿನ್ನ ಸಿನಿಮಾ, ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ನನ್ನದು. ಇಂದಿನ ಪ್ರೇಕ್ಷಕ ಭಿನ್ನತೆಯನ್ನು ಬಯಸುತ್ತಿದ್ದಾನೆ. ಆ ಭಿನ್ನತೆ ಆಫ್‌ಬೀಟ್ ಸಿನಿಮಾಗಳಲ್ಲಿ ಸಿಗುತ್ತಿದೆ. ಒಳ್ಳೆಯ ಕಥೆ–ತಂಡವಿದ್ದರೆ ನೀವು ವಿಶಾಲ ನೆಲೆಯಲ್ಲಿ ಪ್ರೇಕ್ಷಕರನ್ನು ತಲುಪಬಹುದು. 2012ರಲ್ಲಿ ‘ವಿಕಿ ಡೋನರ್’ ಮಾಡಿದಾಗ ಅಂಥ ಕಥೆ ಬಾಲಿವುಡ್‌ನಲ್ಲೇ ಅಪರೂಪದ್ದಾಗಿತ್ತು. ಪ್ರೇಕ್ಷಕ ಅದನ್ನು ಮೆಚ್ಚಿಕೊಂಡ. ನಟಿಯಾಗಿ ನನಗೆ ಆತ್ಮವಿಶ್ವಾಸ ಹೆಚ್ಚಿಸಿದ ಸಿನಿಮಾವದು.

ಅಂತೆಯೇ ಆ ಸಿನಿಮಾ ತಂಡಕ್ಕೂ ಅದು ಹುರುಪು ತುಂಬಿತು. ಅಂತೆಯೇ ‘ಉರಿ’ ಸಿನಿಮಾ ಈಗ ₹ 238 ಕೋಟಿ ದಾಟಿ ಮುನ್ನುಗ್ಗುತ್ತಿದೆ. ಅದರಲ್ಲಿ ರೊಮ್ಯಾಂಟಿಕ್ ಅಂಶಗಳೇ ಇಲ್ಲ. ಆದರೆ, ಮನೋರಂಜನೆಗೆ ಮೋಸವಿಲ್ಲ. ಪ್ರೇಕ್ಷಕ ದುಡ್ಡುಕೊಟ್ಟು ಸಿನಿಮಾ ನೋಡಲು ಬರುತ್ತಾನೆ. ಅವನಿಗೆ ಕನಿಷ್ಠ ಮನರಂಜನೆ ಸಿಗಬೇಕಲ್ಲವೇ? ಇಂಥ ಸಿನಿಮಾಗಳು ಸ್ನೇಹಿತರ ವಲಯದಲ್ಲಿ, ಮನೆಯ ಡೈನಿಂಗ್ ಟೇಬಲ್‌ಗಳಲ್ಲಿ ಚರ್ಚೆಯಾಗುತ್ತವೆ. ಇಂಥ ಚರ್ಚೆಯ ಭಾಗವಾಗಿರಬೇಕೆಂಬುದು ನನ್ನಾಸೆ.

* ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ವೈಯಕ್ತಿಕವಾಗಿ ನಾನು ತುಂಬಾ ಕ್ಯಾಷುವೆಲ್ ಆಗಿರ್ತೀನಿ. ಫ್ಯಾಷನ್ ಮತ್ತು ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ನನ್ನ ತಂಗಿಯೇ ನನ್ನನ್ನು ಅಪ್‌ಡೇಟ್ ಮಾಡುತ್ತಾಳೆ. ನನ್ನ ವಾರ್ಡ್‌ ರೋಬ್‌ನಲ್ಲಿರುವುದೆಲ್ಲವೂ ಅವಳೇ ತಂದಿಟ್ಟುರುವಂಥದ್ದು. ನಾನು ಹೊರಗೆ ಹೋದಾಗ ಧರಿಸುವ ಉಡುಪುಗಳೆಲ್ಲಾ ಬಹುತೇಕವು ಅವಳದ್ದೇ ಆಗಿರುತ್ತವೆ. ಆಗವಳು ‘ನೀನು ನನ್ನ ಡ್ರೆಸ್ ಹಾಕಿಕೊಂಡಿದ್ದೀಯಾ’ ಅಂತ ಕಾಲೆಳೆಯುತ್ತಾಳೆ. ನನಗೆ ಆರಾಮದಾಯಕ ಉಡುಪುಗಳು ಇಷ್ಟ.

* ಬೆಂಗಳೂರು ಬಗ್ಗೆ ಏನನಿಸುತ್ತೆ?
ಅಯ್ಯೋ ಬೆಂಗಳೂರಿಗೆ ಬರೋದೇ ಒಂದು ದಿನದ ಮಟ್ಟಿಗೆ. ಎಷ್ಟೋ ಬಾರಿ ಹೊರಗೆ ಊಟಕ್ಕೂ ಹೋಗಲಾಗದೇ ಕಾರಿನಲ್ಲೇ ಊಟ ಮಾಡಿರುವುದುಂಟು. ಏರ್‌ಫೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಇಲ್ಲಿನ ಹವಾಗುಣ ಹಿತವೆನಿಸುತ್ತದೆ. ಇಲ್ಲಿನ ಹಸಿರು ಕಣ್ಣನ್ನು ತಂಪು ಮಾಡುತ್ತದೆ.ಇದೊಂದು ಸುಂದರ ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT