ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ‘ಬೊಂಬೆ ಹೇಳುತೈತೆ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಯತಿರಾಜ್ ಮಾತು ಹೀಗಿದೆ. ‘ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದು ಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು. ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಫೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್ ಮುಂದೆ ಹೇಳಿದಾಗ, ಅವನು ‘ಬೊಂಬೆ ಹೇಳುತೈತೆ’ ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದೇ’ ಎಂದರು.
‘ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು. ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳೂ ಬಂದಿಲ್ಲ ಎಂದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರ ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆಯಿದೆ’ ಎಂದರು ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.