ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಹಳತಾಗಲ್ಲ; ಪ್ರೇಮಿಸುತ್ತಲೇ ಇರಲಾಗೊಲ್ಲ

Last Updated 18 ಫೆಬ್ರುವರಿ 2019, 14:49 IST
ಅಕ್ಷರ ಗಾತ್ರ

ಮನುಷ್ಯನ ಭಾವನಾತ್ಮಕ ವಿಷಯಗಳು ಯಾವಾಗಲೂ ಬದಲಾಗುವುದಿಲ್ಲ. ಹಾಗೆಯೇ ಪ್ರೇಮವೂ ಬದಲಾಗಿಲ್ಲ. ಆ ಎಲ್ಲ ಭಾವನೆಗಳಿಗೂ ಅವಸರ ಸೇರಿಕೊಳ್ಳುತ್ತದಷ್ಟೆ. ಅವಸರದ ಪ್ರೇಮ, ಅವಸರದ ವಿರಹ, ಅವಸರದ ಬ್ರೇಕ್‌ಅಪ್‌, ಅವಸರದ ಪ್ಯಾಥೋ ಸಾಂಗ್‌ ಹೀಗೆ...

ಮುಂಚೆ ಒಂದು ಪ್ರೇಮ, ವಿರಹ, ಮರುಸಂಗಮ ನಡೆಯಬೇಕು ಎಂದರೆ ಆರೆಂಟು ವರ್ಷ ತಗೊಳ್ತಿತ್ತು. ಅದೀಗ ಆರೆಂಟು ತಿಂಗಳಿಗೆ ಬಂದು ನಿಂತಿದೆ. ಮೊದಲು ಪ್ರೇಮ ಒಬ್ಬರ ಜತೆಗೆ ಆಗುವುದೇ ದೊಡ್ಡ ವಿಷಯ ಆಗಿತ್ತು. ಆದರೆ ಈಗ ಮೊಬೈಲಿನಲ್ಲಿ ಭೇಟಿಯೇ ಆಗದೇ ಹಲವರ ಜತೆಯಲ್ಲಿ ಪ್ರೇಮ–ಕಾಮ ನಡೆಯುತ್ತಿರುತ್ತದೆ. ಹೀಗೆ ಪ್ರೇಮಕ್ಕೆ ಅವಸರ ಸೇರಿಕೊಂಡಿರುವುದು ಈ ದಶಕದ ಒಂದು ಕುತೂಹಲಕಾರಿ ಬದಲಾವಣೆ.

ಇವೆಲ್ಲ ಸರಿ ಅಥವಾ ತಪ್ಪು ಎಂದು ಖಡಾಖಂಡಿತವಾಗಿ ಹೇಳುವುದು ಸಾಧ್ಯವಿಲ್ಲ. ಯಾಕೆಂದರೆ ಇವೆಲ್ಲವೂ ನಮಗೆ ಬೇಕಂತ ನಾವೇ ಮಾಡಿಕೊಂಡಿದ್ದಲ್ಲವೇ? ಎಲ್ಲವನ್ನೂ ನಮಗೆ ಬೇಕಂತಲೇ ಮಾಡುವುದು, ಅವುಗಳನ್ನು ಬಳಸಿಕೊಂಡು, ಅನುಸರಿಸಿಕೊಂಡು ಮೇಲಿಂದ ಅವಕ್ಕೇ ಬೈಯುವುದು ಮಾನವನ ಸಹಜಗುಣ. ಮೊಬೈಲ್‌ ಮತ್ತು ತಂತ್ರಜ್ಞಾನ ಮುಂದುವರಿದಿರುವುದು ತಪ್ಪು, ಅದರಿಂದ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎನ್ನುವುದನ್ನೂ ನಾವು ಮೊಬೈಲ್‌ನಲ್ಲಿಯೇ ನೋಡಬೇಕಾದ ಕಾಲದಲ್ಲಿದ್ದೇವೆ. ತುಂಬ ಇಂಟರೆಸ್ಟಿಂಗ್ ಅದು. ಮನುಷ್ಯ ಏನೋ ಒಂದು ಕಂಡುಹಿಡ್ಕೋತಾನೆ. ಅದು ಬೇಕಿರಲಿಲ್ಲ ಎನ್ನುವುದು ಕಂಡುಹಿಡಿದ ಮೇಲೆ ಗೊತ್ತಾಗುತ್ತದೆ. ಈ ಎಲ್ಲವೂ ಪ್ರಾಕೃತಿಕ. ಯಾವುದನ್ನೂ ಬೈಯುವುದರಲ್ಲಿ ಅರ್ಥ ಇಲ್ಲ.

ಲವ್‌ ಅಂದಾಕ್ಷಣ ‘ಪ್ಲಟಾನಿಕ್‌ ಲವ್‌’ (ನಿಷ್ಕಾಮ ಪ್ರೇಮ) ಅನ್ನುವ ಪರಿಕಲ್ಪನೆ ಬರುತ್ತದೆ. ಅಂಥ ಪ್ರೇಮ ಯಾವತ್ತೂ ಅಸ್ತಿತ್ವದಲ್ಲಿಯೇ ಇರಲಿಲ್ಲ ಎನ್ನುವವರೂ ಇದ್ದಾರೆ. ಆದರೆ ನನ್ನ ಪ್ರಕಾರ ಪ್ಲಟಾನಿಕ್ ಲವ್‌ ಎನ್ನುವುದು ಎಲ್ಲ ಕಾಲಕ್ಕೂ ಇತ್ತು; ಈಗಲೂ ಇದೆ. ಪ್ಲಟಾನಿಕ್ ಅಂದಾಕ್ಷಣ ಅದರ ಶಾಬ್ದಿಕ ಅರ್ಥವನ್ನು ಹುಡ್ಕೊಂಡು ಸಾಯೋದು ತುಂಬ ಮೂರ್ಖತನ. ಅದು ಗಂಡುಹೆಣ್ಣಿನ ಮಧ್ಯವೇ ಆಗಬೇಕು ಎಂದಿಲ್ಲ.

‘ನನಗೊಬ್ಬ ಅದ್ಭುತ ಸ್ನೇಹಿತೆ ಇದ್ದಾಳೆ’ ಎಂದು ಯಾರಾದರೂ ಹೇಳಿದರೆ ನಮಗೆ ನಗು ಬರುತ್ತದೆ. ‘ಅವನು ನನಗೆ ಬರೀ ಸ್ನೇಹಿತ’ ಎಂದು ಒಬ್ಬಳು ಹುಡುಗಿ ಹೇಳಿದರೂ ನಮಗೆ ನಗು ಬರುತ್ತದೆ. ಆದರೆ ಆ ನಗು ಬರುವುದು ಮೂರನೆಯವರಿಗೆ. ಅವರಿಬ್ಬರಿಗೆ ಬರಲ್ಲ. ಅವರಿಬ್ಬರಲ್ಲಿ ಇರುವುದು ಅವರಿಬ್ಬರಿಗೇ ಗೊತ್ತು. ಪ್ಲಟಾನಿಕ್‌ನ ಅರ್ಥ ಅಷ್ಟೆ. ಹಾಗೆ ಎಲ್ಲರಿಗೂ ಏನೋ ಒಂದು ವಿವರಿಸಲಾಗದಂಥ ಸಂಬಂಧಗಳು ಇರುತ್ತವೆ. ಅದನ್ನು ಪರಿಶುದ್ಧ, ಕಲುಷಿತ ಎಂದೆಲ್ಲ ಟ್ಯಾಗ್‌ಲೈನ್ ಕೊಡಕ್ಕೆ ಆಗಲ್ಲ. ನಿಮಗೆ ಒಂದು ಸಂಸ್ಥೆಯ ಜೊತೆಗೆ, ವಸ್ತುಗಳ ಜೊತೆಗೆ, ಕುರ್ಚಿಯ ಜೊತೆಗೆ ಪ್ಲಟಾನಿಕ್ ಲವ್ ಇರಬಹುದು. ಹಾಗೆಯೇ ಒಂದು ಹೆಣ್ಣಿಗೆ ಗಂಡಿನ ಜೊತೆಗೆ, ಗಂಡಿಗೆ ಹೆಣ್ಣಿನ ಜೊತೆಗೆ ಲವ್ ಇರಬಹುದು. ‘ಅದು’ ಅದೇನಾ ಎಂದರೆ ಹೂ; ‘ಅದಲ್ವಾ’ ಅಂದರೆ ಅಲ್ಲ.

ಪ್ರೇಮ ಅನ್ನುವುದು ಒಂಥರಾ ಅಂತರ್ಗಾಮಿ. ಅದು ಯಾವಾಗಲೂ ಇರುವುದಿಲ್ಲ ನಮಗೆ. ಕಾಮ ದಿನಾ ನಡೆಯಬಹುದು; ಆದರೆ ಪ್ರೇಮ ಪ್ರತಿದಿನ ಪ್ರತಿಕ್ಷಣ ನಡೆಯುತ್ತದೆ ಎನ್ನುವುದು ಸುಳ್ಳು. ಪ್ರೇಮ ಯಾವುದೋ ಘಟನೆಗೆ ಇನ್ಯಾವುದೋ ಭಾವ ತಾಕಿ ಏನೇನೋ ಆಗಿ ಅನಿಸುವುದು. ನಿರ್ದಿಷ್ಟ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಅದನ್ನು. ಕಾಮ ನೋಡಿ, ಕ್ಲೀನ್‌ ಆಗಿ ಹೇಳಿಬಿಡಬಹುದು. ಕಾಮದ ಅವಧಿ, ಅದು ಘಟಿಸುವುದು, ಅದಕ್ಕಿರುವ ತೂಕ ಎಲ್ಲವನ್ನೂ ಅನುಭವಿಸಬಹುದು. ಆದರೆ ಪ್ರೇಮವೆಂಬುದು ಭಾವ. ಅದು ಯಾವಾಗ ಜಾಗೃತವಾಗುತ್ತದೆ ಹೇಳಲಿಕ್ಕಾಗದು. ‘ಹೆಂಡತಿಯನ್ನು ವಾರಪೂರ್ತಿ ಪ್ರೀತಿಸುತ್ತೇನೆ’ ಎಂದರೆ ‘ಕೆಲಸ ಯಾವಾಗ ಮಾಡ್ತೀರಿ’ ಎಂದು ಕೇಳಬೇಕಾಗುತ್ತದೆ. ಅದೇ ‘ಪ್ರತಿದಿನ ಕಾಮ ನಡೆಯುತ್ತದೆ’ ಎನ್ನುವುದನ್ನು ವಿವರಿಸಬಹುದು. ದಿನವೂ ಪ್ರೀತ್ಸಕ್ಕಾಗಲ್ಲ.

ಪ್ರೇಮ ಮತ್ತು ಕಾಮದ ನಡುವೆ ಬಹುದೊಡ್ಡ ಅಂತರ ಇದೆ ಎಂತಲೂ ತುಂಬ ಜನ ಹೇಳ್ತಾರೆ. ಆದರೆ ಅಂಥ ಅಂತರ ಯಾವಾಗಲಾದ್ರೂ ಇತ್ತಾ ಎನ್ನುವುದೇ ಅನುಮಾನ. ಜಕಣಾಚಾರಿ ಅವರಂಥ ಶಿಲ್ಪಿಗಳೇ ದೇವಸ್ಥಾನದ ಗೋಡೆಯ ಮೇಲೆ ಮಿಥುನ ಶಿಲ್ಪಗಳನ್ನು ಕೆತ್ತಿಟ್ಟರು. ಒಳಗಡೆ ದೇವರು; ಹೊರಗೆ ಮಿಥುನ ಶಿಲ್ಪ. ಇದನ್ನು ಹೇಗೆ ಅರ್ಥೈಸುತ್ತೀರಿ? ಮೊದಲೊಂದು ಕಾಲದಲ್ಲಿ ಮನುಕುಲದಲ್ಲಿ ‘ಪಾಲಿ ಅಮರಿ’ ಸಂಸ್ಕೃತಿ ಇತ್ತಂತೆ. ಪಾಲಿಮರಿ ಎಂದರೆ ಬಹುಮನುಷ್ಯರ ಸಂಬಂಧಗಳು. ಅಲ್ಲಿಂದ ‘ಇದು ನಮ್ಮ ದೇಶ’, ‘ನನ್ನ ಹುಡುಗಿ’, ‘ನನ್ನ ಮನೆ’ ಎಂದೆಲ್ಲ ಒಂದೊಂದೇ ನಿಯಮ ಮಾಡಿಕೊಂಡು ಬಂದ್ವಿ. ಎಲ್ಲ ಸೇರಿ ಮಾಡಿಕೊಂಡ ವ್ಯವಸ್ಥೆ ಇದು. ಇನ್ನೊಂದು ಐನೂರು ವರ್ಷ ಕಳೆದ ಮೇಲೆ ಯಾರೋ ಒಬ್ಬ ‘ಪಾಲಿ ಅಮರಿ’ ವ್ಯವಸ್ಥೆಯೇ ಕರೆಕ್ಟು ಎಂದು ಹೇಳಬಹುದು. ಆಗ ನಾವು ಇರುವುದೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT