ಭಾನುವಾರ, ಜುಲೈ 3, 2022
27 °C

ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ: ಯೋಗರಾಜ್ ಭಟ್ ಸ್ಪಷ್ಟನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂಬ ಅಜಯ್ ದೇವಗನ್ ಹೇಳಿಕೆ ಕುರಿತಂತೆ ಗುರುವಾರ ‘ಗರಡಿ’ಚಿತ್ರದ ಸುದ್ದಿಗೋಷ್ಠಿ ವೇಳೆ ತಾವು ನೀಡಿದ್ದ ಹೇಳಿಕೆಗೆ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ಸಂಬಂಧಿಸಿದ ವಿಷಯವನ್ನೇ ನೆಟ್ಟಗೆ ಮಾತನಾಡಲು ಬರುವುದಿಲ್ಲ. ಇನ್ನು, ರಾಷ್ಟ್ರದ ಸಮಸ್ಯೆ ತಂದು ನನ್ನ ಕೇಳಿದರೆ ಹೇಗೆ? ನಾನು ಕನ್ನಡ ಪಂಡಿತನೂ ಹೌದು. ಹಿಂದಿ ಪಂಡಿತನೂ ಹೌದು’ಎಂದು ಯೋಗರಾಜ್ ಭಟ್ ಹೇಳಿಕೆ ನೀಡಿದ್ದರು. ಯೋಗರಾಜ್ ಭಟ್ ನೀಡಿದ್ದ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ.. ಅನುವಾದದ ಸಮಯದಲ್ಲಿ ತಪ್ಪಾಗಿರಬಹುದು; ವಿವಾದಕ್ಕೆ ತಾವೇ ತೆರೆ ಎಳೆದ ಅಜಯ್ ದೇವಗನ್

ಯೋಗರಾಜ್ ಭಟ್ ಸ್ಪಷ್ಟನೆ..

ನಮಸ್ತೆ,

ರಾಷ್ಟ್ರೀಯ ಭಾಷೆ ವಿವಾದದ ವಿಚಾರವಾಗಿ ಮಾಧ್ಯಮ ಮಿತ್ರರು ಪ್ರಶ್ನಿಸಿದಾಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೇ ಹೊರತು ಹಿಂದಿಯೇ ರಾಷ್ಟ್ರ ಭಾಷೆ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನದ ಪ್ರಕಾರವಾಗಿ ರಾಷ್ಟ್ರಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತ ಚರ್ಚೆ ಎಲ್ಲಿಗೂ ಹೋಗಿ ಮುಟ್ಟುವುದಿಲ್ಲ. ಹಾಗಾಗಿ, ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಅಂದಮಾತ್ರಕ್ಕೆ ಅದು ರಾಷ್ಟ್ರ ಭಾಷೆ ಆಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಗನ್ನಡದಲ್ಲಿ ಅಂತ್ಯಹಾಡಲೆತ್ನಿಸಿದ್ದೇನೇ ಹೊರತುಬೇರೇನು ಇಲ್ಲ. ನನ್ನ ಕನ್ನಡ, ನನ್ನ ಕನ್ನಡ ಭಾಷಾಭಿಮಾನ, ಕನ್ನಡ ಸೇವೆ, ಕನ್ನಡತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ಹಾಗಾಗಿ, ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರವಾಗಿ ಎಂದು ತಮಗೆಲ್ಲ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ–ಸಿರಿಗನ್ನಡಂ ಗೆಲ್ಗೆ ಎಂದು ಪೋಸ್ಟ್ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು