ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್ಟೇರಲು ಸಿದ್ಧನಾಗಿದ್ದಾನೆ ಯುವ ರಣಧೀರ...

Last Updated 5 ನವೆಂಬರ್ 2020, 17:09 IST
ಅಕ್ಷರ ಗಾತ್ರ

‘ಯುವ ರಣಧೀರ ಕಂಠೀರವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ ಕುಮಾರ್‌‌. ವರನಟ ರಾಜ್‌ಕುಮಾರ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶಿಸುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಮೊದಲ ಚಿತ್ರ ‘ಯುವ ರಣಧೀರ ಕಂಠೀರವ’ಕ್ಕೆ ಅವರು ಭರ್ಜರಿ ಸಿದ್ಧತೆಯನ್ನೂ ಮಾಡಿ ಚಿತ್ರದ ಪರಿಚಯಾತ್ಮಕ ವಿಡಿಯೋವನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಆ ವಿಡಿಯೋ ಭರ್ಜರಿ ಸದ್ದು ಮಾಡಿದೆ.

ಚಿತ್ರರಂಗ ಪ್ರವೇಶಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ಯುವ ರಾಜ್‌ಕುಮಾರ್‌ ಆ ಬಗ್ಗೆ ‘ಪ್ರಜಾಪ್ಲಸ್’‌ನೊಂದಿಗೆ ಮಾತಿಗಿಳಿದರು.

* ಸಿನಿಪಯಣದ ಪೂರ್ವ ಸಿದ್ಧತೆ ಹೇಗಿತ್ತು?

ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ತೊಡಗಿಕೊಳ್ಳಬೇಕು ಎಂಬ ಆಸೆ ಇತ್ತು. ನಮ್ಮ ಕುಟುಂಬವೂ ಸಿನಿಮಾ ಹಿನ್ನೆಲೆಯದ್ದೇ. ಬಾಲ್ಯದಿಂದಲೂ ಶೂಟಿಂಗ್‌, ಸಿನಿಮಾ ನೋಡುತ್ತಲೇ ಬೆಳೆದವನು. ಹಾಗಾಗಿ ಸಿನಿಮಾ ಮಾಡಬೇಕು ಎಂಬ ಗುರಿ ಇತ್ತು.ಯಾವುದೇ ಕೆಲಸ ಮಾಡಬೇಕಾದರೆ ಅದರದ್ದೇ ಆದ ಸಿದ್ಧತೆಗಳು ಇರುತ್ತವೆ. ಅದೇ ರೀತಿ ಸಿನಿಮಾ ರಂಗಕ್ಕೆ ಬರಬೇಕಾದರೂ ಯಾವ ರೀತಿಯ ಸಿದ್ಧತೆ ಬೇಕೋ ಅದನ್ನು ಮಾಡಿದ್ದೇನೆ. ಈ ಸಂಬಂಧಿಸಿ ಸುಮಾರು 5ವರ್ಷಗಳಿಂದ ತಯಾರಿ ನಡೆಸಿದ್ದೇನೆ.

* ಸಿನಿಮಾವೇ ತಮ್ಮ ಗುರಿ ಆಗಿತ್ತೇ ಅಥವಾ ಬೇರೆ ಕ್ಷೇತ್ರಗಳತ್ತಲೂ ಗಮನವಿತ್ತೇ?

ಬೇರೆಡೆ ಗಮನ ಹರಿದಿಲ್ಲ ಅಂತೇನೂ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡುತ್ತಿದ್ದೆ. ನಮ್ಮದೇ ಆದ ರಾಜ್‌ಕುಮಾರ್‌ ಅಕಾಡೆಮಿ ಮೂಲಕ ಐಎಎಸ್‌, ಕೆಎಎಸ್‌ ತರಬೇತಿಯನ್ನು ಅತ್ಯಂತ ಮಿತ ಶುಲ್ಕದಲ್ಲಿ ಒದಗಿಸುತ್ತಿದ್ದೇವೆ. ಅದರಲ್ಲೂ ಸ್ವಲ್ಪ ತೊಡಗಿಕೊಂಡಿದ್ದೆ. ಆದರೆ ಸಿನಿಮಾಕ್ಕೆ ಬರಬೇಕು ಅನ್ನುವ ದೃಢ ಆಲೋಚನೆಯಂತೂ ಯಾವಾಗಲೂ ಇತ್ತು.

* ನಿಮ್ಮ ಕುಟುಂಬದವರ ಮಾರ್ಗದರ್ಶನ ಹೇಗಿದೆ?

ದೊಡ್ಡಪ್ಪ, ಚಿಕ್ಕಪ್ಪ, ಸಹೋದರರು ಸಿನಿಮಾ ರಂಗದಲ್ಲೇ ಇದ್ದಾರೆ. ಅವರೆಲ್ಲರೂ ಪೂರ್ಣ ಬೆಂಬಲ ಕೊಟ್ಟಿದ್ದಾರೆ. ಅವರೆಲ್ಲಾ ಹೇಳುವುದುಒಂದೇ. ಬರೀ ಸಿನಿಮಾ ಮಾತ್ರ ಅಲ್ಲ. ಏನೇ ಕೆಲಸ ಮಾಡಿ. ಅದನ್ನು ಒತ್ತಡ ಇಲ್ಲದೆ, ಮನಸ್ಸಿಂದ ಇಷ್ಟ ಪಟ್ಟುಕೊಂಡು ಮಾಡಿ. ಆ ಕ್ಷೇತ್ರದಲ್ಲಿ ಕಷ್ಟಪಟ್ಟು ದುಡಿ ಅನ್ನುತ್ತಿದ್ದಾರೆ.

* ಯುವ ರಣಧೀರ... ಸಂಬಂಧಿಸಿದಂತೆ ತಮ್ಮ ಸಿದ್ಧತೆ ಹೇಗಿದೆ?

ಸ್ಕ್ರಿಪ್ಟ್‌ಗೆ ತಕ್ಕ ಹಾಗೆ ಸಿದ್ಧತೆ ಮಾಡಿಕೊಂಡಿದ್ದೇನೆ.

* ಹೊಸ ಚಿತ್ರದಲ್ಲಿ ನಿಮ್ಮ ಜೊತೆ ಯಾರಿದ್ದಾರೆ? ನಾಯಕಿ ಯಾರು?

ಹೊಸ ಸಿನಿಮಾ ಯಾವ ರೀತಿ ಇರಬಹುದು ಎನ್ನುವುದನ್ನು ತೋರಿಸಲು ಲಾಂಚ್‌ ವಿಡಿಯೋ ಬಿಡುಗಡೆ ಮಾಡಿದೆವು. ಪೂರ್ತಿ ಸಿನಿಮಾ ಹೇಗಿದೆ ಎನ್ನುವುದನ್ನು ಬಿಡುಗಡೆ ಬಳಿಕವೇ ನೋಡಬೇಕು. ಈಗ ನಿರ್ಮಾಣಪೂರ್ವ ಕೆಲಸಗಳು ನಡೆಯುತ್ತಿವೆ. ಮುಂದೆ ಕೆಲವೇ ತಿಂಗಳುಗಳಲ್ಲಿ ಮುಹೂರ್ತ ಇದ್ದೇ ಇದೆ. ಆಗ ಚಿತ್ರದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗಲಿದೆ.

* ಈ ಸಿನಿಮಾ ನಿರ್ಮಾಣ, ಬಿಡುಗಡೆಗೆ ಕಾಲಮಿತಿ ಹಾಕಿಕೊಂಡಿದ್ದೀರಾ?

ಈಗ ಕೊರೊನಾ ಬಂದಿರುವುದರಿಂದ ಎಲ್ಲ ಕೆಲಸಗಳು ನಿಧಾನವಾಗಿವೆ. ಆದಷ್ಟು ಬೇಗ ಶೂಟಿಂಗ್‌ ಆರಂಭಿಸಬೇಕು ಎಂಬ ಆಸೆ ಇದೆ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ವರ್ಷಕ್ಕೆ ಈ ಸಿನಿಮಾ ನೋಡಬಹುದು ಎನ್ನುವುದು ನಮ್ಮ ನಂಬಿಕೆ.

* ಯುವ ರಾಜ್‌ಕುಮಾರ್‌ ಅವರ ಮುಂದಿನ ಕನಸುಗಳೇನು?

ಜನ ಮೆಚ್ಚುವ ಒಳ್ಳೆಯ ಚಿತ್ರಗಳನ್ನು ಮಾಡಬೇಕು. ನಮ್ಮ ನಾಡಿನ ಜನರಿಗೆ ಏನಾದರೂ ಒಂದು ಒಳ್ಳೆಯದು ಮಾಡಬೇಕು ಅನ್ನುವುದು ನನ್ನ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT