ಪ್ರೇಮಿಗಳ ದಿನದಂದು ‘ಯುವರತ್ನ’ ಶೂಟಿಂಗ್‌ ಆರಂಭ

7

ಪ್ರೇಮಿಗಳ ದಿನದಂದು ‘ಯುವರತ್ನ’ ಶೂಟಿಂಗ್‌ ಆರಂಭ

Published:
Updated:
Prajavani

ಎರಡು ವರ್ಷದ ಹಿಂದೆ ತೆರೆಕಂಡ ‘ರಾಜಕುಮಾರ’ ಚಂದನವನದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ ಸಿನಿಮಾ. ಹಲವು ವರ್ಷದ ಬಳಿಕ ಕೌಟುಂಬಿಕ ಪ್ರೇಕ್ಷಕವರ್ಗವನ್ನು ಚಿತ್ರಮಂದಿರದತ್ತ ಸೆಳೆದ ಹಿರಿಮೆ ಈ ಚಿತ್ರದ್ದು. ‘ಪವರ್‌ಸ್ಟಾರ್’ ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.

‘ರಾಜಕುಮಾರ’ನ ನಂತರ ಅಪ್ಪು ಮತ್ತು ಸಂತೋಷ್ ಆನಂದ್‌ರಾಮ್ ಅವರನ್ನು ಮತ್ತೆ ಒಂದಾಗಿಸಿರುವ ಸಿನಿಮಾ ‘ಯುವರತ್ನ’. ಫೆ. 14ರ ಪ್ರೇಮಿಗಳ ದಿನದಂದು ಈ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ ಎಂಬ ಸುದ್ದಿಹೊರಬಿದ್ದಿದೆ. 

ಸಂತೋಷ್ ಆನಂದ್‌‌ರಾಮ್ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಸಿನಿಮಾ ಮೂಲಕ ಭರವಸೆಯ ನಿರ್ದೇಶಕ ಎನಿಸಿಕೊಂಡವರು. ನಂತರ ಅವರು ನಿರ್ದೇಶಿಸಿದ ‘ರಾಜಕುಮಾರ’ ಕೂಡ ಸೂಪರ್ ಹಿಟ್ ಆಗಿ ದಾಖಲೆ ಬರೆಯಿತು. ಈ ಇಬ್ಬರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಯುವರತ್ನ’ನ ಮೇಲೂ ಅಪ್ಪು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಫೆಬ್ರುವರಿ 7ರಂದು ಪುನೀತ್ ನಟನೆಯ ‘ನಟಸಾರ್ವಭೌಮ’ ತೆರೆಕಾಣಲಿದೆ. ‘ಯುವರತ್ನ’ ಪಕ್ಕಾ ಆ್ಯಕ್ಷನ್‌ ಸಿನಿಮಾ. ಸಾಹಸ ದೃಶ್ಯಗಳಿಂದಲೇ ಚಿತ್ರದ ಶೂಟಿಂಗ್ ಆರಂಭಿಸಲು ತೀರ್ಮಾನಿಸಲಾಗಿದೆ. ಚಿತ್ರದಲ್ಲಿ ಪುನೀತ್‌ ಅವರದ್ದು ಕಾಲೇಜು ವಿದ್ಯಾರ್ಥಿಯ ಪಾತ್ರವಂತೆ. ಮತ್ತೆ ‘ಅಪ್ಪು’, ‘ಅಭಿ’ ಸಿನಿಮಾದ ಸೊಗಡನ್ನು ನೆನಪಿಸಲು ನಿರ್ದೇಶಕರು ಮುಂದಾಗಿದ್ದಾರೆ. ನಾಯಕಿಯಾಗಿ ಕೀರ್ತಿ ಸುರೇಶ್ ಅಥವಾ ತಮನ್ನಾ ಭಾಟಿಯಾ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. 

‘ಇದೀಗ ತಾನೆ ಅಪ್ಪು ಸರ್‌ ಜೊತೆಗೆ ಮೀಟಿಂಗ್‌ ಮುಗಿಸಿದೆ. ಯುವರತ್ನದಲ್ಲಿ ಅವರು ಪಕ್ಕಾ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಸಂತೋಷ್‌ ಆನಂದ್‌ರಾಮ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !