‘ಪಂಚ್’ ಸಂಭಾಷಣೆಗಳಿಂದ ಒಂದು ವರ್ಗದ ಗಮನ ಸೆಳೆಯುತ್ತಿರುವ ‘ನೀರ್ ದೋಸೆ’ ಸಿನಿಮಾ, ಇನ್ನೊಂದು ವರ್ಗವನ್ನು ಹಾಡೊಂದರ ಮೂಲಕ ಹಿಡಿದಿಡುತ್ತಿದೆ. ಮೂರು ನಿಮಿಷ 55 ಸೆಕೆಂಡ್‌ಗಳಷ್ಟು ಅವಧಿಯ ‘ಹೋಗಿ ಬಾ ಬೆಳಕೇ...’ ಎನ್ನುವ ಸಣ್ಣ ಹಾಡಿನಲ್ಲಿ 40 ಸೆಕೆಂಡ್‌ಗಳಷ್ಟು ಹಿಂದೂಸ್ತಾನಿ ಆಲಾಪವಿದೆ. ಆ ಆಲಾಪ ಗಂಗೂಬಾಯಿ ಹಾನಗಲ್ ಅವರದ್ದೆನ್ನುವುದು ವಿಶೇಷ.

ಈ ಸಿನಿಮಾಗೂ ಹಾನಗಲ್ ಕಂಠಕ್ಕೂ ಏನಾದರೂ ಸಂಬಂಧವಿದೆಯೇ? ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಡಿಗೆ ಸ್ವರ ಸಂಯೋಜನೆ ಮಾಡಿದವರು. ಈ ಕುತೂಹಲಕ್ಕೆ ಅವರು ಕೊಟ್ಟ ಪ್ರತಿಕ್ರಿಯೆ ಇದು: ‘ನನಗೆ ನಿರ್ದೇಶಕ ವಿಜಯ್ ಪ್ರಸಾದ್ ಅವರು ಸ್ಕ್ರಿಪ್ಟ್ ಕೊಟ್ಟಾಗಲೇ ಅದರಲ್ಲಿ ಈ ಹಾಡಿನ ಸಾಹಿತ್ಯವಿತ್ತು. ಸಿನಿಮಾದಲ್ಲಿ ಜಗ್ಗೇಶ್ ತಂದೆಯ ಪಾತ್ರ ಗಂಗೂಬಾಯಿ ಹಾನಗಲ್ ಅವರ ಅಭಿಮಾನಿ. ಅದಕ್ಕೇ ಅವರದ್ದೇ ಆಲಾಪ ಬೇಕಿತ್ತು’.

‘ನೀರ್ ದೋಸೆ’ ಹಾಡುಗಳ ಪೈಕಿ ಅನೂಪ್ ಮೊದಲು ಸ್ವರ ಸಂಯೋಜನೆ ಮಾಡಿದ್ದೇ ಈ ‘ಹೋಗಿ ಬಾ ಬೆಳಕೇ’ ಗೀತೆಯನ್ನು. ಗಂಗೂಬಾಯಿ ಅವರ ಸಾವಿರಾರು ಹಾಡುಗಳನ್ನು ಕೇಳಿದ್ದ ಅವರಿಗೆ ಇಲ್ಲಿನ ಭಾವಕ್ಕೆ ಹೊಂದುವಂಥ ಆಲಾಪ ಬೇಕಿತ್ತು. ಅದಕ್ಕೇ ಪೂರಿಯ ಧನಶ್ರೀ ರಾಗವನ್ನು ಆರಿಸಿಕೊಂಡರು. ಅದು ಸಿಕ್ಕಮೇಲೆ, ಸಾಹಿತ್ಯವನ್ನು ಅದೇ ರಾಗಕ್ಕೆ ಒಗ್ಗಿಸಿ ಸ್ವರ ಸಂಯೋಜನೆ ಮುಂದುವರಿಸುವ ಸವಾಲು ಎದುರಲ್ಲಿತ್ತು.

ಮೊದಲು ಉಳಿದ ಸಿನಿಮಾ ಗೀತೆಗಳಿಗೆ ಮಟ್ಟುಹಾಕುವಂತೆಯೇ ‘ಹೋಗಿ ಬಾ ಬೆಳಕೇ’ಗೂ ಬೇರೆ ರೂಪ ಕೊಟ್ಟಿದ್ದರು. ನಿರ್ದೇಶಕರು ಬೇರೆ ಏನನ್ನಾದರೂ ಪ್ರಯತ್ನಿಸಲು ಹೇಳಿದರು. ಅದರ ಫಲವೇ ರಾಗಗಳ ಹುಡುಕಾಟ. ‘ಪೂರಿಯ ಧನಶ್ರೀ ರಾಗದ ಭಕ್ತಿಭಾವಕ್ಕೆ ಎಲ್ಲೂ ಚ್ಯುತಿ ಬರದ ಹಾಗೆ ಇಡೀ ಹಾಡನ್ನು ಮಾಡಿದೆ.

ನಲವತ್ತು ಸೆಕೆಂಡ್‌ಗಳಷ್ಟು ಆಲಾಪ ಉಳಿಸಿಕೊಳ್ಳಲು ನಿರ್ದೇಶಕರೇ ಸಮ್ಮತಿ ಸೂಚಿಸಿದ್ದು. ಸ್ವರ ಸಂಯೋಜನೆ ಮಾಡುವವರು ಹಾಡಿಕೊಂಡು ಸ್ಪರ್ಶವನ್ನು ಸಹಜವಾಗಿಯೇ ನೀಡುತ್ತಾರೆ. ನನ್ನ ಕಂಠ ಕೇಳಿದ ವಿಜಯಪ್ರಸಾದ್ ಅದನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದರು. ಗಂಗೂಬಾಯಿ ಅವರ ಆಲಾಪ, ನನ್ನ ಕಂಠದ ಹಾಡು ಸಾಧ್ಯವಾಯಿತು’ ಎನ್ನುವಾಗ ಅನೂಪ್ ಅವರಲ್ಲಿ ಹೆಮ್ಮೆ.

ಗಂಗೂಬಾಯಿ ಅವರ ಮೊಮ್ಮಗ ಮನೋಜ್ ಹಾನಗಲ್ ಅವರ ಅನುಮತಿ ಪಡೆದದ್ದು ಇನ್ನೊಂದು ಕಥೆ. ಮನವಿ ಪತ್ರವೊಂದನ್ನು ಕಳುಹಿಸಿಕೊಡುವಂತೆ ಮನೋಜ್ ಕೇಳಿದರು. ಮೊದಲು ಸಿನಿಮಾ ಗೀತೆಯಲ್ಲಿ ಹೇಗೇಹೇಗೋ ಆಲಾಪ ಬಳಸಿಕೊಂಡರೆ ತಮ್ಮ ಅಜ್ಜಿಯ ಹೆಸರು ಹಾಳಾಗುತ್ತದೆ ಎಂಬ ಆತಂಕ ಅವರಿಗಿತ್ತು. ಈ ಸಿನಿಮಾ ಹಾಡಿನ ಔಚಿತ್ಯವನ್ನು ಓದಿ ತಿಳಿದ ಮೇಲೆ, ಅನೂಪ್ ಮಾಡಿದ ಸ್ವರ ಸಂಯೋಜನೆ ಕೇಳಿದ ಮೇಲೆ ಅವರು ಖುಷಿಯಿಂದ ಅನುಮತಿ ಕೊಟ್ಟರು.

ವಿವಿಧ ಪ್ರಕಾರದ ಸಂಗೀತ ಬಳಸಿ ಸಿನಿಮಾ ಹಾಡುಗಳನ್ನು ರೂಪಿಸುವ ಅನೂಪ್ ಮೂಲತಃ ಕರ್ನಾಟಕ ಸಂಗೀತ ಕಲಿತವರು. ಅವರ ತಂದೆ ಜಯಪ್ರಸಾದ್ ಕರ್ನಾಟಕ ಸಂಗೀತದ ವಯಲಿನ್ ವಾದಕರಾಗಿದ್ದರು. ಅವರೇ ಅನೂಪ್ ಪಾಲಿನ ಮೊದಲ ಗುರು. ಆಮೇಲೆ ಬಳ್ಳಾರಿ ಬ್ರದರ್ಸ್, ಆರ್.ಕೆ. ಶ್ರೀಕಂಠನ್ ಮಗನ ಬಳಿಯೂ ಕಲಿತರು. ಅವರದ್ದೇ ತಂಡದಲ್ಲಿ ಇರುವ ಗಿಟಾರ್ ಶ್ರೀನಿವಾಸ್ ಹಿಂದೂಸ್ತಾನಿ ಸಂಗೀತವನ್ನು ಚೆನ್ನಾಗಿ ಕಲಿತಿದ್ದಾರೆ. ನಿತ್ಯವೂ ಸಂಗೀತ ಸಂಶೋಧನೆ ಮಾಡುವಾಗ, ರಾಗಗಳ ಜೊತೆ ಒಡನಾಡುವಾಗ ಹಿಂದೂಸ್ತಾನಿ ಹದವನ್ನು ಅರಿಯುತ್ತಾ ಬಂದವರು ಅನೂಪ್.

‘ಟ್ರೆಂಡ್ ಅಲ್ಲದ ಇಂಥದ್ದೊಂದು ಹಾಡನ್ನು ಸಿನಿಮಾಗೆ ಮಾಡುವಾಗಲೇ ನನಗೊಂದು ಆತಂಕವಿತ್ತು; ಜನ ಇದನ್ನು ಸ್ವೀಕರಿಸುವರೋ ಇಲ್ಲವೋ ಎಂಬ ಆತಂಕ. ಈಗ ಅದನ್ನು ಮೆಚ್ಚಿ ಅನೇಕರು ಪ್ರತಿಕ್ರಿಯಿಸುತ್ತಿರುವುದು ಸಮಾಧಾನ ತಂದಿದೆ’ ಎನ್ನುವ ಅನೂಪ್ ತಿಂಗಳಾಂತ್ಯಕ್ಕೆ ಸಿನಿಮಾ ಬಿಡುಗಡೆ ಆದಮೇಲೆ ಹೇಗೆ ಓಡೀತು ಎಂದು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ತಂದೆಯ ನೆನಪಿನಲ್ಲಿ
ಗಂಗೂಬಾಯಿ ಹಾನಗಲ್ ಆಲಾಪಗಳನ್ನು ಮೊದಲಿನಿಂದಲೂ ಇಷ್ಟಪಟ್ಟವರು ನಿರ್ದೇಶಕ ವಿಜಯ ಪ್ರಸಾದ್. ಮೈಸೂರಿನಲ್ಲಿ ದಸರಾ ಸಂಗೀತೋತ್ಸವ ನಡೆದಾಗ ಅವರ ತಂದೆ, ಸ್ನೇಹಿತರು, ಬಂಧು-ಮಿತ್ರರು ಎಲ್ಲರೂ ಸಂಗೀತ ಕಾರ್ಯಕ್ರಮಗಳನ್ನು ನೋಡುವ-ಕೇಳುವ ಹವ್ಯಾಸ ಇಟ್ಟುಕೊಂಡಿದ್ದರು. ಆಗ ಒಬ್ಬೊಬ್ಬರಿಗೆ ಒಬ್ಬೊಬ್ಬ ಸಂಗೀತಗಾರರು ಇಷ್ಟ. ವಿಜಯ ಪ್ರಸಾದ್ ತಂದೆಗೆ ಗಂಗೂಬಾಯಿ ಹಾನಗಲ್ ಹಾಡುಗಳು ಮೆಚ್ಚಾಗುತ್ತಿದ್ದವು. ಆ ವಿಷಯದಲ್ಲಿ ವಿಜಯ್ ಪ್ರಸಾದ್ ಕೂಡ ತಂದೆಯ ಮಗ.

ಬಾಲ್ಯದಿಂದ ಕಾಡುತ್ತಿದ್ದ ಗಂಗೂಬಾಯಿ ಅವರನ್ನು ‘ನೀರ್ ದೋಸೆ’ ಸಿನಿಮಾದಲ್ಲಿ ಜಗ್ಗೇಶ್ ತಂದೆಯ ಪಾತ್ರದ ತಲೆಗೆ ತಂದುಹಾಕಿದರು. ತಮ್ಮ ತಂದೆಯನ್ನು ಅದರಲ್ಲಿ ನೋಡುವ ಪ್ರಯತ್ನ ಇದು ಎಂದರೂ ತಪ್ಪಾಗಲಿಕ್ಕಿಲ್ಲ. ಜಗ್ಗೇಶ್ ತಂದೆಯ ಪಾತ್ರಧಾರಿ ಗಂಗೂಬಾಯಿ ಅವರ ಅಭಿಮಾನಿ. ಅದಕ್ಕೇ ‘ಹೋಗಿ ಬಾ ಬೆಳಕೇ...’ ಹಾಡು ಹುಟ್ಟಿದ್ದು.

ಚಿತ್ರಕಥೆ ಬರೆಯುವಾಗಲೇ ವಿಜಯ್ ಪ್ರಸಾದ್ ಈ ಹಾಡನ್ನೂ ಬರೆದರು. ಅದರ ಹಿಂದೆ ಅಪರೂಪದ ಭಾವುಕತೆಯೊಂದು ಅಡಗಿದೆ. ವಿಜಯ್ ತಂದೆಯನ್ನು ಕಳೆದುಕೊಂಡು ಇಪ್ಪತ್ಮೂರು ವರ್ಷಗಳಾಗಿವೆ. ಈಗಲೂ ಆ ಸಾವನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿಲ್ಲ.

‘ಅಪ್ಪ ನನ್ನ ಪಾಲಿನ ಬೆಳಕಾಗಿದ್ದರು. ಅವರು ಸತ್ತರು ಎಂದು ಹೇಳಲಾರೆ. ಅದಕ್ಕೇ ಹೋಗಿ ಬಾ... ಕಳಿಸಿಕೊಟ್ಟೆ... ಎಂದೇ ನಾನು ಹೇಳುವುದು. ಹೋಗಿ ಬಾ ಬೆಳಕೇ ಹೋಗಿ ಬಾ ಕೂಡ ಅಪ್ಪನ ಧ್ಯಾನದಲ್ಲೇ ಹುಟ್ಟಿದ್ದು. ಎದೆಹಾಲು ಉಣಿಸದೆ ತಾಯಾದ ಬೆಳಕೆ, ಎದೆನೋವ ಉಗುಳದೆ ಮಗುವಾದ ಬೆಳಕೇ ಎಂಬ ಸಾಲುಗಳನ್ನು ಬರೆದ ಮೇಲೆ ನಾನೂ ಕೊಂಚ ಹಗುರಾದೆ. ಅದಕ್ಕೆ ಅನೂಪ್ ಒಳ್ಳೆಯ ಟ್ಯೂನ್ ಕೊಟ್ಟರು’ ಎಂದು ವಿಜಯ್ ಪ್ರಸಾದ್ ದೊಡ್ಡದೊಂದು ನಿಟ್ಟುಸಿರಿಟ್ಟರು.

‘ನೀರ್ ದೋಸೆ’ ಸಿನಿಮಾದ ಸಂಭಾಷಣೆಯಲ್ಲಿ ಕೇಳುವ ತುಂಟತನ, ಪೋಲಿತನವನ್ನು ಅವರು ಚೇಷ್ಟೆ ಎಂದು ಹೇಳಿಕೊಳ್ಳುತ್ತಾರೆ. ‘ಗಂಭೀರ ವಸ್ತುವನ್ನು ಇಟ್ಟು, ಅದನ್ನು ಜನ ನೋಡುವಂತೆ ಮಾಡುವ ಮಾರ್ಕೆಟಿಂಗ್ ತಂತ್ರವನ್ನೂ ಬೆರೆಸುವುದು ಉದ್ದೇಶ. ಅದಕ್ಕೇ ಈ ಸಿನಿಮಾದಲ್ಲಿ ಅಂಥ ಮಾತುಗಳಿವೆ.

ಇಂಥ ಹಾಡೂ ಇದೆ. ಕೆಲವರು ಸಂಭಾಷಣೆಯನ್ನು ದ್ವಂದ್ವಾರ್ಥ ಎನ್ನುತ್ತಾರೆ. ನನ್ನ ಪ್ರಕಾರ ಅದಕ್ಕಿರುವುದು ಒಂದೇ ಅರ್ಥ. ಅದು ನನ್ನ ಚೇಷ್ಟೆ. ಆದರೆ, ಎಲ್ಲೂ ನಾನು ಕಥೆಯ ಗಾಂಭೀರ್ಯಕ್ಕೆ ಚ್ಯುತಿ ತಂದಿಲ್ಲ ಎಂದು ಭಾವಿಸಿದ್ದೇನೆ’ ಎನ್ನುವ ವಿಜಯ್ ಪ್ರಸಾದ್ ಅವರಿಗೆ ಸಿನಿಮಾ ಕುರಿತು ಆತ್ಮವಿಶ್ವಾಸವಂತೂ ಹೆಚ್ಚಾಗಿಯೇ ಇದೆ. ಹಾಡಿನ ಗುಂಗೂ ಅವರನ್ನು ಬಹುವಾಗಿ ಆವರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.